ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೌಷ್ಟಿಕತೆ ಎಂಬ ಪೆಡಂಭೂತ

Last Updated 4 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

1986ರ ಸಮಯ. ಒಡಿಶಾದ ಕಾಳಹಂಡಿ ಜಿಲ್ಲೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಸತತ ಬರದಿಂದ ಕಂಗೆಟ್ಟ ಕೃಷಿ ಪ್ರಧಾನ ಜಿಲ್ಲೆಯಲ್ಲಿ ಹಸಿರು ಮಾಯವಾಗಿತ್ತು. ತೀವ್ರ ಅಪೌಷ್ಟಿಕತೆಯಿಂದ ಎಳೆಗೂಸುಗಳು ಅಮ್ಮನ ಮಡಿಲಲ್ಲೇ ಕೊನೆಯುಸಿರೆಳೆಯತೊಡಗಿದ್ದವು. ಜನರ ಜತೆ ಜಾನುವಾರು ಹೊಟ್ಟೆಗಿಲ್ಲದೇ ಸಾಯತೊಡಗಿದ್ದವು. ಕೈ ತುಂಬ ಕೆಲಸ, ಹೊಟ್ಟೆ ತುಂಬ ಊಟ ಎರಡೂ ಕಾಣದ ಜನ ಹೆತ್ತ ಮಕ್ಕಳನ್ನೇ ಮಾರತೊಡಗಿದ್ದರು.

ಆಗ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಈ ವರದಿಗಳಿಗೆ ಸ್ಪಂದಿಸಿದರು. ಖುದ್ದು ಅಲ್ಲಿಗೆ ಧಾವಿಸಿದರು. ಪರಿಹಾರದ ಪ್ಯಾಕೇಜ್ ಘೋಷಿಸಿದರು. ಬಡತನ, ನಿರುದ್ಯೋಗ, ಅಪೌಷ್ಟಿಕತೆ, ಶಿಶು ಮರಣದಂತಹ ಘಟನೆಗಳು ಎಲ್ಲೇ ವರದಿಯಾದರೂ ಅದಕ್ಕೆ `ಕಾಳಹಂಡಿ ಸಿಂಡ್ರೋಮ್~ ಎಂದೇ ಕರೆಯುವುದು ರೂಢಿಯಾಯ್ತು.

ಕಾಳಹಂಡಿ ಘಟನೆ ನಡೆದು ಈಗ ಕಾಲು ಶತಮಾನ ಉರುಳಿದೆ. ಈ 25 ವರ್ಷಗಳಲ್ಲಿ ಭಾರತ ಭೌತಿಕ ಪ್ರಗತಿ, ಆರ್ಥಿಕ ಅಭಿವೃದ್ಧಿಯ ಹಾದಿಯಲ್ಲಿ ಸಾಕಷ್ಟು ಮುನ್ನಡೆದಿದೆ. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ಏಷ್ಯಾದ ಮುಂದಿನ ಸೂಪರ್ ಪವರ್ ಆಗಲಿದೆ.

22ನೇ ಶತಮಾನದಲ್ಲಿ ಜಗತ್ತಿನ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂಬೆಲ್ಲ ಗುಣಗಾನ ಕೇಳಿಬರುತ್ತಿದೆ. ಅದಕ್ಕೆ ತಕ್ಕಂತೆ ಆಸ್ಪತ್ರೆ, ಅಂಗನವಾಡಿ ಇಲ್ಲದ ಕುಗ್ರಾಮಗಳಲ್ಲೂ ಮೊಬೈಲ್ ರಿಂಗಣಿಸುತ್ತದೆ. ಪುಟ್ಟ ಗೂಡಂಗಡಿಗಳಲ್ಲೂ ನೂಡಲ್ಸ್, ಸೂಪ್, ಪಾಸ್ತಾ ಪ್ಯಾಕೆಟ್‌ಗಳು ನೇತಾಡುತ್ತಿರುತ್ತವೆ. ದಿನಕ್ಕೆ ಹತ್ತಾರು ಪೆಪ್ಸಿ, ಕೋಕ್ ಬಾಟಲ್‌ಗಳು ಮಾರಾಟವಾಗುತ್ತವೆ.

ಆದರೆ, ವಿಶ್ವ ಆರೋಗ್ಯ ಸಂಸ್ಥೆ, ವಿಶ್ವ ಆಹಾರ ಸಂಸ್ಥೆ, ಯುನಿಸೆಫ್ ಹಾಗೂ ನಮ್ಮದೇ ಸರ್ಕಾರೇತರ ಸಂಸ್ಥೆಗಳು ಆಗಾಗ್ಗೆ ಬಿಡುಗಡೆ ಮಾಡುವ ವರದಿಗಳನ್ನು ನೋಡಿದರೆ ಮಾತ್ರ ಎದೆ ಝಲ್ಲೆನ್ನುತ್ತದೆ. ಬಾಣಂತಿ ಮತ್ತು ಶಿಶು ಮರಣ ಪ್ರಮಾಣ, ಅಪೌಷ್ಟಿಕತೆ, ಮಕ್ಕಳ ಜೀವ ಹಿಂಡುವ ಸಾಂಕ್ರಾಮಿಕ ರೋಗಗಳ ಅಂಕಿ, ಅಂಶಗಳ ಪಟ್ಟಿಯತ್ತ ಕಣ್ಣಾಡಿಸಿದಾಗ ಭಾರತದ ಸ್ಥಾನ ಆಫ್ರಿಕಾದ ಬಡ ರಾಷ್ಟ್ರಗಳ ಆಸುಪಾಸು ಕಾಣಿಸುತ್ತದೆ.

ದೀರ್ಘಕಾಲದ ಅಪೌಷ್ಟಿಕತೆ, ರಕ್ತಹೀನತೆಯಿಂದ ಹೆರಿಗೆಯಲ್ಲಿ ಪ್ರಾಣ ಬಿಡುವ ಹೆಣ್ಣುಮಕ್ಕಳು, ವರ್ಷ ಕಳೆಯುವುದರೊಳಗೆ ಕಣ್ಣುಮುಚ್ಚುವ ಕೂಸುಗಳು, 5ನೆ ಹುಟ್ಟುಹಬ್ಬ ಕಾಣದೇ ಇಹಲೋಕ ತ್ಯಜಿಸುವ ಕಂದಮ್ಮಗಳು, ಬುದ್ಧಿಮಾಂದ್ಯತೆ, ಅಂಧತ್ವ, ಕುಬ್ಜತೆ, ಅಂಗವೈಕಲ್ಯದಿಂದ ನರಳುವ ಮಕ್ಕಳನ್ನು ನೋಡಿದಾಗ ಸ್ವತಃ ಪ್ರಧಾನಿ ಮನಮೋಹನ್ ಸಿಂಗ್ ನಾಚಿಕೆಯಿಂದ ತಲೆತಗ್ಗಿಸುತ್ತಾರೆ.

ಅಪೌಷ್ಟಿಕತೆ ಭಾರತಕ್ಕೆ ಅಂಟಿದ ಶಾಪ. ಇದು ದೇಶವೇ ತಲೆತಗ್ಗಿಸುವಂತಹ ನಾಚಿಕೆಗೇಡಿನ ಸಂಗತಿ ಎಂದು ಪ್ರಧಾನಿ ಕಳೆದ ತಿಂಗಳಷ್ಟೇ ಕಳವಳ ವ್ಯಕ್ತಪಡಿಸಿದ್ದರು. ಸ್ವತಃ ಅರ್ಥಶಾಸ್ತ್ರಜ್ಞರು ಆಗಿರುವ ಪ್ರಧಾನಿಗೆ ಬಡವರನ್ನು ಕಾಡುತ್ತಿರುವ ಅಪೌಷ್ಟಿಕತೆ ಸಮಸ್ಯೆ ಅರ್ಥವಾಗಲು ಇಷ್ಟು ವರ್ಷ ಬೇಕಾಯಿತೇ ಎಂದು ವಿರೋಧ ಪಕ್ಷದ ಕೆಲವರು ಟೀಕಿಸಿದ್ದರು.

ವಿರೋಧಿಗಳು ಹೇಳಿದ್ದರಲ್ಲೂ ಅರ್ಥವಿದೆ. 1986ರ ಕಾಳಹಂಡಿ ಘಟನೆಯಿಂದ 2012ರತನಕ ದೇಶದಲ್ಲಿ ಹಲವು ಹೊಸ ಕಾಳಹಂಡಿಗಳು ಹುಟ್ಟಿಕೊಂಡಿವೆ. ನಮ್ಮದೇ ರಾಜ್ಯದ ರಾಯಚೂರು, ಕೊಪ್ಪಳ ಜಿಲ್ಲೆಗಳ ಗ್ರಾಮಗಳು, ಪಾವಗಡ, ಶಿರಾ, ಮಧುಗಿರಿ ತಾಲ್ಲೂಕುಗಳ ಬಯಲು ಸೀಮೆಯ ಹಳ್ಳಿಗಳಿಗೆ ಭೇಟಿ ನೀಡಿದಲ್ಲಿ ಸೊಮಾಲಿಯಾ, ಇಥಿಯೋಪಿಯಾ ನೆನಪಿಸುವ ದೃಶ್ಯಗಳು ಕಣ್ಣಿಗೆ ಬೀಳುತ್ತವೆ. ಮೈಸೂರು, ಬೆಂಗಳೂರು, ಹುಬ್ಬಳ್ಳಿಯ ಕೊಳೇಗೇರಿಗಳಲ್ಲಿ ಇಣಕಿದರೂ ಇಂತಹ ಹತ್ತಾರು ಪ್ರಕರಣಗಳು ಕಾಣಿಸಿಯಾವು. ಇತ್ತೀಚೆಗೆ ಬಿಡುಗಡೆಯಾದ ರಾಷ್ಟ್ರೀಯ ಸಮೀಕ್ಷೆಯ ವರದಿಯೊಂದರ ಪ್ರಕಾರ ದೇಶದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಶೇ 42 ಜನ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ವಿಷಚಕ್ರ: ಡಬ್ಲುಎಚ್‌ಒ, ಡಬ್ಲುಎಫ್‌ಒ ವರದಿಗಳ ಪ್ರಕಾರ ಭಾರತ ದೀರ್ಘಕಾಲೀನ ಅಪೌಷ್ಟಿಕತೆಯಿಂದ (chronic malnutrition) ನರಳುತ್ತಿರುವ ದೇಶಗಳಲ್ಲಿ ಒಂದು. ದಶಕಗಳಿಂದ ಕಾಡುತ್ತಿರುವ ಈ ಅಪೌಷ್ಟಿಕತೆಯ ಮೂಲ ಹುಡುಕಹೊರಟರೆ ಕಾಣುವುದು ಬಡತನ, ನಿರುದ್ಯೋಗ, ನೈಸರ್ಗಿಕ ಸಂಪನ್ಮೂಲಗಳ ಅಭಾವ, ಸಾಮಾಜಿಕ ಅನಿಷ್ಟಗಳ ವಿಷಚಕ್ರ. ಅತಿ ಬಡ ಕುಟುಂಬಗಳಲ್ಲೇ ಅತಿ ಅಪೌಷ್ಟಿಕತೆ ಕಾಣಿಸುತ್ತದೆ. ಕಾಡಿಸುತ್ತದೆ. 

ಮಕ್ಕಳಲ್ಲಿ ಕಾಣುವ ಅಪೌಷ್ಟಿಕತೆಯ ಮೊದಲ ಕಾರಣ ತಾಯಿ. ತಾಯಿಯೇ ದೀರ್ಘಕಾಲದ ಅಪೌಷ್ಟಿಕತೆಗೆ ತುತ್ತಾಗಿದ್ದರೆ ಆಕೆಯ ಮಗು ಹುಟ್ಟುವಾಗಲೇ ಅಪೌಷ್ಟಿಕತೆಯನ್ನು ಬಳವಳಿಯಾಗಿ ಪಡೆದಿರುತ್ತದೆ. ಈ ತಾಯಿಯಲ್ಲಿನ ಅಪೌಷ್ಟಿಕತೆಯ ಕಾರಣ ಹುಡುಕಿದರೆ ಹೆಣ್ಣು ಸಂತಾನದೆಡೆ ಭಾರತೀಯ ಸಮಾಜ ತೋರುತ್ತಿರುವ ಅನಾದರ ಕಣ್ಣುಕುಕ್ಕುತ್ತದೆ.

ಹೆಣ್ಣುಮಗು ಹೇಗೋ ಬೆಳೆದು ಹದಿಹರೆಯಕ್ಕೆ ಕಾಲಿಡುವಾಗಲೇ ಕೊರಳಿಗೆ ಮೂರುಗಂಟು ಬಿದ್ದಿರುತ್ತದೆ. ಪೌಷ್ಟಿಕಾಂಶ ಭರಿತ ಆಹಾರ, ಸಮರ್ಪಕ ವಿಶ್ರಾಂತಿ, ಆರೈಕೆ ಯಾವುದೂ ಇಲ್ಲದೇ ಆಕೆ ಒಂದರ ಹಿಂದೆ ಒಂದು ಮಗು ಹೆರುತ್ತಾಳೆ. ನೈರ್ಮಲ್ಯ, ಆರೈಕೆ, ಸಮೃದ್ಧ ಆಹಾರದ ಕೊರತೆಯಿಂದ ಆ ಮಕ್ಕಳು ಪದೇ ಪದೇ ಕಾಯಿಲೆ ಬೀಳುತ್ತವೆ. ಕೆಲ ಮಕ್ಕಳು ಜನಿಸುವಾಗಲೇ ಅಂಗವೈಕಲ್ಯ, ಬುದ್ಧಿಮಾಂದ್ಯತೆ, ಅಂಧತ್ವಕ್ಕೆ ತುತ್ತಾಗಿರುತ್ತವೆ.

ಈ ಸಮಸ್ಯೆಯನ್ನು ಮತ್ತಷ್ಟು ಕೆದಕಿದರೆ ಬಡತನ, ಸಾಕ್ಷರತೆಯ ಕೊರತೆಯೂ ಢಾಳಾಗಿ ಕಾಣುತ್ತದೆ. ಎರಡು ಹೊತ್ತಿನ ಊಟ ಮಾಡಲು ಪರದಾಡುವ ಬಡ ಅನಕ್ಷರಸ್ಥ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಅವರ ಕೈಕಾಲಿನಲ್ಲಿ ಸ್ವಲ್ಪ ಶಕ್ತಿ ಬಂದರೂ ಕೆಲಸಕ್ಕೆ ಹಚ್ಚುತ್ತಾರೆ. ಅಂತಹ ಮನೆಯ ಹಿರಿಯ ಹೆಣ್ಣು ಮಕ್ಕಳಿಗೆ ಅಮ್ಮನಿಗೆ ಮನೆಗೆಲಸದಲ್ಲಿ ನೆರವಾಗುವ, ಬೆನ್ನ ಹಿಂದೆ ಸಾಲಾಗಿ ಹುಟ್ಟಿದ ತಮ್ಮ, ತಂಗಿಯರನ್ನು ನೋಡಿಕೊಳ್ಳುವ ಜವಾಬ್ದಾರಿ. ಮಕ್ಕಳ ಹೊರೆ ತಗ್ಗಿಸಿಕೊಳ್ಳಲೆಂದೇ ಆ ಹೆಣ್ಣುಮಗುವನ್ನು ಮದುವೆ ಮಂಟಪದಲ್ಲಿ ಅವಸರವಸರವಾಗಿ ಕೂಡ್ರಿಸಲಾಗುತ್ತದೆ. ಅಪೌಷ್ಟಿಕತೆ-ಮದುವೆ-ಮಗು-ಅಪೌಷ್ಟಿಕತೆಯ ಮತ್ತೊಂದು ಹೊಸ ಸರಣಿ ಅಲ್ಲಿ ಆರಂಭವಾಗುತ್ತದೆ. 

ಆದರೆ, ಸಾಕ್ಷರ ಪಾಲಕರು ತಮ್ಮ ಕುಟುಂಬದ ಗಾತ್ರವನ್ನೂ ಎಂದೂ ಅನಗತ್ಯವಾಗಿ ಬೆಳೆಸುವುದಿಲ್ಲ. ಹೆಚ್ಚೆಂದರೆ ಮೂರು ಮಕ್ಕಳಿಗೆ ಕುಟುಂಬ ಸೀಮಿತಗೊಳಿಸುತ್ತಾರೆ. ಅವರಿಗೆ ಶಿಕ್ಷಣ ಕೊಡಿಸುತ್ತಾರೆ. 18 ದಾಟುವರೆಗಾದರೂ ಹೆಣ್ಣು ಮಕ್ಕಳನ್ನು ಮದುವೆಯ ಕೂಪಕ್ಕೆ ದೂಡುವುದಿಲ್ಲ.

ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಇಲ್ಲದಿರುವುದು ಸಹ ಅಪೌಷ್ಟಿಕತೆಗೆ ಮತ್ತೊಂದು ಕಾರಣ. ಮಹಿಳೆ ತಾನು ದುಡಿದ ಅಥವಾ ಗಂಡ ದುಡಿದ ಹಣದ ಮೇಲೆ ಅಧಿಕಾರ ಹೊಂದಿದಲ್ಲಿ ಅದನ್ನು ಮಕ್ಕಳಿಗಾಗಿ ಬಳಸುತ್ತಾಳೆ. ಅದೇ ಗಂಡಸು ದುಡಿದದ್ದರಲ್ಲಿ ಕಾಲು ಭಾಗದಷ್ಟಾದರೂ ಕುಡಿತಕ್ಕೊ, ಮತ್ಯಾವುದೋ ಚಟಕ್ಕೋ ಹಾಕುತ್ತಾನೆ.

ಸುಲಭ ಸಮೀಕರಣ: ಬಡತನ, ಅನಕ್ಷರತೆ, ಸಾಮಾಜಿಕ ಅನಿಷ್ಟಗಳ ಮೊತ್ತವೇ ಅಪೌಷ್ಟಿಕತೆ ಎಂಬ ಸುಲಭ ಸಮೀಕರಣ ಯಾರಿಗಾದರೂ ಅರ್ಥವಾಗುತ್ತದೆ. ಆದರೆ, ಐದು ವರ್ಷಕ್ಕೊಮ್ಮೆ ಅಭಿವೃದ್ಧಿಯ ವಚನ ನೀಡಿ ಅಧಿಕಾರಕ್ಕೆ ಬರುವ ಸರ್ಕಾರಗಳು ಮಾತ್ರ ಈ ವಿಚಾರದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಂತೆ ವರ್ತಿಸುತ್ತವೆ.

ಅಪೌಷ್ಟಿಕತೆ ದೇಶವೇ ತಲೆತಗ್ಗಿಸುವ ವಿಚಾರ ಎಂದು ಪ್ರಧಾನಿ ಹೇಳುವುದಕ್ಕಿಂತ ಮುನ್ನವೇ ಯುಪಿಎ ಸರ್ಕಾರ, ಬಡವರಿಗೆ ಅತಿ ಕಡಿಮೆ ದರದಲ್ಲಿ ಉಚಿತ ಆಹಾರ ಒದಗಿಸುವ `ಆಹಾರ ಭದ್ರತಾ ಮಸೂದೆ~ಯನ್ನು ಲೋಕಸಭೆಯಲ್ಲಿ ಮಂಡಿಸಿತ್ತು. ದೇಶದ ಯಾವ ಮಗುವೂ ಹಸಿದ ಹೊಟ್ಟೆಯಲ್ಲಿ ಮಲಗಬಾರದು ಎಂಬ ಕಾಳಜಿ ಹೊಂದಿರುವ ಈ ಆಹಾರ ಭದ್ರತಾ ಮಸೂದೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕನಸು.

ಈ ಮಸೂದೆ ಅನ್ವಯ ಗರ್ಭಿಣಿ ಮಹಿಳೆ ಹಾಗೂ ಹಾಲುಣಿಸುತ್ತಿರುವ ತಾಯಿಗೆ  ಆರು ತಿಂಗಳವರೆಗೆ ಉಚಿತ ಆಹಾರ ನೀಡಲಾಗುತ್ತದೆ. ಆಕೆಯ ಆರೈಕೆಗಾಗಿ ಮಾಸಿಕ 1000 ರೂಪಾಯಿ ಭತ್ಯೆ ನೀಡಲಾಗುತ್ತದೆ. ಆದರೆ, ಈ ಮಸೂದೆಗೆ ಈಗಾಗಲೇ ವಿರೋಧ ಕೇಳಿಬಂದಿದೆ. ಆಹಾರ ತಜ್ಞರು, ಆರ್ಥಿಕ ತಜ್ಞರು ಮಸೂದೆ ಕಾಯ್ದೆ ಆದಲ್ಲಿ ಅನುಷ್ಠಾನ ಕಷ್ಟ ಅನ್ನುತ್ತಿದ್ದಾರೆ. ಮಸೂದೆಗೆ ತಿದ್ದುಪಡಿಯಾಗಬೇಕು ಅಂದಿದ್ದಾರೆ. ಈ ಕಾಯ್ದೆ ದೇಶದ ಆರ್ಥಿಕತೆಗೆ ಭಾರಿ ಹೊಡೆತ ನೀಡಲಿದೆ ಎಂದೂ ತಜ್ಞರು ಎಚ್ಚರಿಸಿದ್ದಾರೆ.

ಕೋಟ್ಯಂತರ ಜನರಿಗೆ ಸಬ್ಸಿಡಿ ದರದಲ್ಲಿ ಆಹಾರ ಒದಗಿಸಲು ಮತ್ತೊಂದು ಹಸಿರು ಕ್ರಾಂತಿ ಆಗಬೇಕು ಎಂದು ಪ್ರಧಾನಿ ಹೇಳಿದ್ದಾರೆ. ಸರ್ವರಿಗೂ ಆಹಾರ ಒದಗಿಸುವ ಮಹತ್ವಾಕಾಂಕ್ಷೆಯ ಈ ಕಾರ್ಯಕ್ರಮ ಜಾರಿಗೊಳಿಸಲು ರಾಜ್ಯ ಸರ್ಕಾರಗಳು ಸಿದ್ಧವಾಗಬೇಕು.
 
ಆಹಾರ ದಾಸ್ತಾನಿಗೆ ಉಗ್ರಾಣ ನಿರ್ಮಾಣ, ವಿತರಣೆಗಾಗಿ ಪಡಿತರ ವ್ಯವಸ್ಥೆ ಬಲಗೊಳಿಸಬೇಕು ಅಂದಿದ್ದಾರೆ. ಮಾಯಾವತಿ, ಜಯಲಲಿತಾ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅದು ಕಾರ್ಯಸಾಧುವಲ್ಲ. ಉಗ್ರಾಣ ನಿರ್ಮಾಣಕ್ಕೆ, ಆಹಾರ ಧಾನ್ಯಗಳ ಸಂರಕ್ಷಣೆಗೆ ಎಲ್ಲಿಂದ ಹಣ ತರಬೇಕು ಎಂದು ಪ್ರಶ್ನಿಸಿದ್ದಾರೆ.

ಈಗಿರುವ ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲೇ ಹಲವು ಲೋಪದೋಷಗಳಿವೆ. ಉಗ್ರಾಣಗಳಲ್ಲಿ ಕೊಳೆಯುವ ಆಹಾರ ಧಾನ್ಯ, ಧಾನ್ಯಗಳ ಸಾಗಣೆಯ ಸಂದರ್ಭದಲ್ಲಿ ಆಗುವ ಸೋರಿಕೆ, ವಿತರಣಾ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರ ಹೋಗಲಾಡಿಸದೇ `ಆಹಾರ ಭದ್ರತಾ ಕಾಯ್ದೆ~ ಜಾರಿಯಲ್ಲಿ ತಂದಲ್ಲಿ ಪ್ರಯೋಜನವಿಲ್ಲ ಎಂದು ಅಧಿಕಾರಿಗಳೂ ಹೇಳುತ್ತಾರೆ.

ಪಡಿತರ ವ್ಯವಸ್ಥೆಯಲ್ಲಿನ ಅವ್ಯವಸ್ಥೆಗಳ ಬಗ್ಗೆ ದೂರು ಕೇಳಿಬರುತ್ತಿರುವುದು ಇದೇ ಮೊದಲಲ್ಲ.  ಸಾವಿರಾರು ಜನ ಹೊಟ್ಟೆಗಿಲ್ಲದೇ ಸಾಯುವಾಗ ಭಾರತ ಆಹಾರ ನಿಗಮದ ಗೋದಾಮುಗಳಲ್ಲಿ ಆಹಾರ ಧಾನ್ಯಗಳು ಕೊಳೆಯುತ್ತಿರುವುದರ ಔಚಿತ್ಯ ಏನು ಎಂದು ಸುಪ್ರೀಂಕೋರ್ಟ್ ಒಂದೂವರೆ ವರ್ಷದ ಹಿಂದೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ವಿತರಣಾ ವ್ಯವಸ್ಥೆಯಲ್ಲಿನ ಸೋರಿಕೆ ಸರಿಪಡಿಸಿ ಎಂದೂ ಸೂಚಿಸಿತ್ತು. ಆದರೆ, ಕೋರ್ಟ್ ಸಲಹೆಗೆ ಸರ್ಕಾರ ಆಗ ಜಾಣ ಕಿವುಡು ಪ್ರದರ್ಶಿಸಿತ್ತು.

ಜಾಗತಿಕ ಮಟ್ಟದಲ್ಲಿ ಭಾರತ ತಲೆ ಎತ್ತಿ ನಿಲ್ಲಬೇಕಾದರೆ ಕೇವಲ ಆರ್ಥಿಕ ಹಾಗೂ ಔದ್ಯೋಗಿಕ ಪ್ರಗತಿ ಸಾಧಿಸಿದರಷ್ಟೇ ಸಾಲದು. ಸಾಮಾಜಿಕ ಅಭಿವೃದ್ಧಿಯೂ ಅಷ್ಟೇ ಮಹತ್ವದ್ದು ಎಂಬ ಅಂಶ ಪ್ರಧಾನಿ ಸಿಂಗ್ ಅವರಿಗೆ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮನದಟ್ಟಾಗಿದೆ.
 
ಆ ಸಂದೇಶವನ್ನು ಅವರು ತಮ್ಮ ಸಚಿವ ಸಂಪುಟಕ್ಕೆ, ಅಧಿಕಾರಿ ವರ್ಗಕ್ಕೆ ಹೇಗೆ ಮುಟ್ಟಿಸುತ್ತಾರೆ. ಪಡಿತರ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ನಿರ್ಮೂಲನೆಗೆ ಯಾವ ಕ್ರಮ ಕೈಗೊಳ್ಳುತ್ತಾರೆ. ಕೋಟ್ಯಂತರ ಜನರಿಗೆ ಸಾಂಕೇತಿಕ ದರದಲ್ಲಿ ಆಹಾರ ಒದಗಿಸಲು ಸಂಪನ್ಮೂಲ ಹೇಗೆ ಹೊಂದಿಸುತ್ತಾರೆ ಎಂಬುದರ ಮೇಲೆ ಆಹಾರ ಭದ್ರತಾ ಕಾಯ್ದೆಯ ಮತ್ತು ದೇಶದ ಯಶಸ್ಸು ಅವಲಂಬಿಸಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT