ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೌಷ್ಟಿಕತೆ ನಿವಾರಣೆಗೆ `ಕ್ಷೀರಭಾಗ್ಯ'

ಶಿವಮೊಗ್ಗ ಜಿಲ್ಲೆಯಾದ್ಯಂತ ಮಕ್ಕಳಿಗೆ ಹಾಲು ನೀಡುವ ಮೂಲಕ ಚಾಲನೆ
Last Updated 2 ಆಗಸ್ಟ್ 2013, 10:39 IST
ಅಕ್ಷರ ಗಾತ್ರ

ಶಿವಮೊಗ್ಗ: ಅಂಗನವಾಡಿ ಮತ್ತು ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಿಸಲು, ಅವರ ಆರೋಗ್ಯ ವೃದ್ಧಿಸಲು ಕ್ಷೀರಭಾಗ್ಯ ಯೋಜನೆ ಉಪಯುಕ್ತ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ  ಗೀತಾ ಮಲ್ಲಿಕಾರ್ಜುನ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಹಾಲು ಮಹಾಮಂಡಳ ಹಾಗೂ ಶಿವಮೊಗ್ಗ ಸಹಕಾರ ಹಾಲು ಒಕ್ಕೂಟ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ಹಾಲು ವಿತರಿಸುವ `ಕ್ಷೀರಭಾಗ್ಯ' ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು.

ಈ ಯೋಜನೆ ಶಾಲಾ ಮಕ್ಕಳಿಗೆ ಮಾತ್ರವಲ್ಲ ಹೈನು ಉದ್ಯಮಿಗಳ ಅಭಿವೃದ್ಧಿಗೂ ಸಹಕಾರಿಯಾಗಿದೆ. ಹಿಂದಿನ ಸರ್ಕಾರಗಳು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಎಲ್ಲಾ ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ವಿಕಾಸಕ್ಕೆ ಅನೇಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿವೆ ಎಂದರು.

ಇದೊಂದು ಸ್ಪರ್ಧಾ ಯುಗವಾಗಿದ್ದು, ಎಲ್ಲಾ ಪೋಷಕರು ತಮ್ಮ ಮಕ್ಕಳು ಉತ್ತಮ ಅಂಕ ಗಳಿಸುವುದನ್ನೇ ಗುರಿ ಮಾಡಿಕೊಂಡಿರುತ್ತಾರೆ. ಅದಕ್ಕೆ ಪೂರಕವಾಗಿ ಸರ್ಕಾರಗಳು ಕೂಡ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಅನುಕೂಲ ಆಗುವಂತಹ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.

ಮಕ್ಕಳು ಓದಿನೊಂದಿಗೆ ಇತರೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಸಹಕಾರಿ ಆಗಿರುವ ಯೋಜನೆಯ ಲಾಭವನ್ನು ಸಮಾಜದ ಎಲ್ಲಾ ಮಕ್ಕಳು ಪಡೆದುಕೊಳ್ಳಬೇಕು. ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದರು.
ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಎಲ್.ಜಗದೀಶ್ವರ್ ಮಾತನಾಡಿ, ರಾಜ್ಯ ಹಾಲು ಉತ್ಪಾದನಾ ಕೇಂದ್ರಗಳಲ್ಲಿ ಈಗಿರುವ ವ್ಯವಸ್ಥೆಯನ್ನು ಬಳಸಿಕೊಂಡು, ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಪೌಷ್ಟಿಕಾಂಶಯುಕ್ತ ಹಾಲಿನ ಪುಡಿಯನ್ನು ವಿತರಿಸಲು ಮುಂದಾಗಿರುವುದು ಹರ್ಷದ ಸಂಗತಿ ಎಂದು ಹೇಳಿದರು.

ಜಿಲ್ಲಾಧಿಕಾರಿ ವಿಫುಲ್ ಬನ್ಸಲ್ ಮಾತನಾಡಿ, ಶಾಲಾ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಹಾಲು ವಿತರಿಸಲು ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದ ಪ್ರಥಮ ರಾಜ್ಯ ಕರ್ನಾಟಕ ಎಂದು ಹೆಮ್ಮೆ ಪಟ್ಟರು.

ಎಲ್ಲಾ ಮಕ್ಕಳಿಗೂ ಹಾಲು ಕುಡಿಯುವ ಅಭ್ಯಾಸ ಇರುವುದಿಲ್ಲ. ಆದ್ದರಿಂದ ಮಕ್ಕಳು ಪೌಷ್ಟಿಕಾಂಶಯುಕ್ತ ಹಾಲನ್ನು ಸೇವಿಸಲು ಪ್ರೇರಣೆ ನೀಡಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಗಾಯತ್ರಿ ಷಣ್ಮುಖಪ್ಪ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಯಲ್ಲಪ್ಪ, ತಾ.ಪಂ. ಅಧ್ಯಕ್ಷೆ ದೇವಿಬಾಯಿ ಧರ್ಮಾನಾಯ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್, ಪಶುವೈದ್ಯ ಇಲಾಖೆ ಉಪನಿರ್ದೇಶಕ ಡಾ.ರವೀಂದ್ರ, ಶಿವಮೊಗ್ಗ ಸಹಕಾರ ಹಾಲು ಒಕ್ಕೂಟದ ನಿರ್ವಾಹಕ ನಿರ್ದೇಶಕ ವಿ.ಎಸ್.ಅಕ್ಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಲಕ್ಷ್ಮೀಕಾಂತಮ್ಮ ಉಪಸ್ಥಿತರಿದ್ದರು.

ಯೋಜನೆ ಸಾಫಲ್ಯ ಮಾಡಿ
ಭದ್ರಾವತಿ:
ಸರ್ಕಾರ ಶಾಲಾ ಮಕ್ಕಳಿಗೆ ತಂದಿರುವ ಎಲ್ಲಾ ರೀತಿಯ ಯೋಜನೆಗಳನ್ನು ಯಶಸ್ವಿ ಮಾಡುವ ನಿಟ್ಟಿನಲ್ಲಿ ಶಿಕ್ಷಕರು ಮುಂದಾಗಬೇಕು ಎಂದು ಜಿ.ಪಂ ಸದಸ್ಯ ಎಸ್. ಕುಮಾರ್ ಹೇಳಿದರು.

ಇಲ್ಲಿನ ಸಂಚಿಹೊನ್ನಮ್ಮ ಶಾಲೆಯಲ್ಲಿ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸಿಡಿಪಿಒ ಕಚೇರಿ ಹಾಗೂ ತಾ.ಪಂ. ಆಶ್ರಯದಲ್ಲಿ ಏರ್ಪಡಿಸಿದ್ದ ಶಾಲಾ ಮಕ್ಕಳಿಗೆ ಹಾಲು ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಕ್ಕಳ ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ಮಟ್ಟ ವೃದ್ಧಿಗಾಗಿ ಹಲವು ಯೋಜನೆ ರೂಪಿಸುವ ಮೂಲಕ ಅವರನ್ನು ಸಬಲಗೊಳಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ತಕ್ಕಂತೆ ಶಿಕ್ಷಕರು ತಮ್ಮ ಸೇವೆ ಮಾಡುವ ಅಗತ್ಯವಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಸೋಮಶೇಖರಯ್ಯ ಪ್ರಾಸ್ತಾವಿಕ ಮಾತನಾಡಿ ಯೋಜನೆಯನ್ನು ಇಂದಿನಿಂದ ತಾಲ್ಲೂಕಿನಾದ್ಯಂತ ಜಾರಿ ಮಾಡಲಾಗಿದೆ. ಇದಕ್ಕಾಗಿ ಅಕ್ಷರ ದಾಸೋಹ ಸಿಬ್ಬಂದಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಿಡಿಪಿಒ ಚಂದ್ರಪ್ಪ, ತಾ.ಪಂ ಅಧಿಕಾರಿ ಮಲ್ಲೇಶಪ್ಪ, ತಾ.ಪಂ ಅಧ್ಯಕ್ಷೆ ಜಮರುದ್‌ಬಾನು, ಉಪಾಧ್ಯಕ್ಷೆ ಗೌರಮ್ಮ, ನಗರಸಭಾ ಸದಸ್ಯೆ ಕೆ.ಎನ್. ವಿದ್ಯಾಶ್ರೀ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಅಂಗನವಾಡಿ ಸಹಾಯಕಿಯರು, ಶಿಕ್ಷಕರು ಹಾಜರಿದ್ದರು.

`ಲೋಪ ಎಸಗಿದರೆ ಕ್ರಮ'
ಹೊಸನಗರ:
ಮಕ್ಕಳಿಗೆ ಪೌಷ್ಟಿಕಾಂಶ ನೀಡಬಲ್ಲ `ಕ್ಷೀರ ಭಾಗ್ಯ' ಯೋಜನೆಯನ್ನು ಜಾರಿಗೊಳಿಸುವಲ್ಲಿ ಲೋಪವೆಸಗಿದ ಶಿಕ್ಷಕರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ ಹೇಳಿದರು.

ಪಟ್ಟಣದ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ `ಕ್ಷೀರ ಭಾಗ್ಯ' ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಅಶ್ವಿನ್‌ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ತಾಲ್ಲೂಕು ದೈಹಿಕ ಪರಿವೀಕ್ಷಕ ಈಶ್ವರಪ್ಪ, ಸಮನ್ವಯಾಧಿಕಾರಿ ಹಾಲಸಿದ್ಧಪ್ಪ, ಮುಖ್ಯ ಶಿಕ್ಷಕ ಗುರುಮೂರ್ತಿ ಹಾಜರಿದ್ದರು.

ಶಿಕ್ಷಕಿ ಅಹಲ್ಯಾ ಸ್ವಾಗತಿಸಿದರು. ಅನಿತಾ ಬಾಂಜ್ ಕಾರ್ಯಕ್ರಮ ನಿರೂಪಿಸಿದರು. ದಾಕ್ಷಾಯಿಣಿ ವಂದಿಸಿದರು.

`ಸ್ವಯಂ ಸೇವಾ ಸಂಸ್ಥೆಗೆ ನೀಡಿ'
ಶಿರಾಳಕೊಪ್ಪ:
ಶಾಲೆಯಲ್ಲಿ ಮಕ್ಕಳಿಗೆ ನೀಡುವ ಹಾಲು ಹಾಗೂ ಬಿಸಿಯೂಟದ ಉಸ್ತುವಾರಿಯನ್ನು ಶಿಕ್ಷಕರ ಬದಲಾಗಿ ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡಬೇಕು ಎಂದು ಜಿಲ್ಲಾ ಪಂಚಾಯ್ತಿ ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ದಾನಿ ರುದ್ರಪ್ಪ ಆಗ್ರಹಿಸಿದರು.

ಪಟ್ಟಣದ ಸೇವಾ ವಿಕಾಸ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಗುರುವಾರ `ಕ್ಷೀರ ಭಾಗ್ಯ' ಯೊಜನೆಯನ್ನು ಮಕ್ಕಳಿಗೆ ಹಾಲು ಕುಡಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಕರ ಮೇಲೆ ಹೆಚ್ಚು ಜವಾಬ್ದಾರಿ ವಹಿಸುತ್ತಿರುವುದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಹಾಲು ವಿತರಣೆಯ ಜವಾಬ್ದಾರಿಯನ್ನು ಇತರರಿಗೆ ನೀಡಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಸಮಿತಿಯ ನಾಗರಾಜ್, ಮುಖ್ಯೋಪಾಧ್ಯಯರಾದ ವೀರಪ್ಪ, ಶಿಕ್ಷಕರಾದ ರಮೇಶ್, ಗಜೇಂದ್ರ, ರುದ್ರೇಶ್, ಕು.ಮೇಘಾ , ಶ್ರೀನಿವಾಸ, ರುದ್ರಗೌಡ ಇದ್ದರು.

`ಮಹತ್ವದ ಯೋಜನೆ'
ಸೊರಬ:
ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣದ ಜತೆಗೆ ದೈಹಿಕ ಬೆಳವಣಿಗೆಗೆ ಆದ್ಯತೆ ಕೊಟ್ಟು, ಸಮಾಜದಲ್ಲಿ ಅವರನ್ನು ಸದೃಢ ವ್ಯಕ್ತಿಗಳನ್ನಾಗಿ ನಿರ್ಮಿಸಲು ಸರ್ಕಾರ ರೂಪಿಸಿರುವ ಕ್ಷೀರಭಾಗ್ಯ ಯೋಜನೆ ಮಹತ್ವದ್ದಾಗಿದೆ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸದಾನಂದಗೌಡ ಹೇಳಿದರು.

ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರ ರೂಪಿಸಿರುವ ಕಾರ್ಯಕ್ರಮ ಯಾವುದೇ ಆಗಲಿ ಸಮರ್ಪಕವಾಗಿ ಬಳಕೆಯಾಗಬೇಕು. `ಕ್ಷೀರಭಾಗ್ಯ' ಯೋಜನೆಯಿಂದ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚುವುದಲ್ಲದೇ ಆರೋಗ್ಯ ವೃದ್ಧಿಸುತ್ತದೆ.

ಇಂಥ ಯೋಜನೆಗಳು ಸಾಕಾರಗೊಳ್ಳಬೇಕಾದರೆ ಎಸ್‌ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕಿದೆ ಎಂದ ಅವರು, ಮಕ್ಕಳ ಹಾಜರಾತಿ ದೃಷ್ಟಿಯಿಂದ ಸರ್ಕಾರ ಸವಲತ್ತು ನೀಡಿ ಶಿಕ್ಷಣದಿಂದ ವಂಚಿತರಾಗಲು ಯಾವುದೇ ಮಕ್ಕಳನ್ನು ಬಿಡದಿರುವುದು ಶ್ಲಾಘನೀಯ ಎಂದರು.

ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ನೀಲಮ್ಮ ಸುರೇಶ್, ಪಟ್ಟಣ ಪಂಚಾಯ್ತಿ ಸದಸ್ಯ ಮಹೇಶಗೌಳಿ, ಎಸ್‌ಡಿಎಂಸಿ ಅಧ್ಯಕ್ಷ ರೇವಣಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಹಾಲಾನಾಯ್ಕ, ರಾಮಪ್ಪ, ಇಓ ಮಂಜುಳಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಜೋಯಪ್ಪ, ಬಿ,ವಿ.ಜಾವೂರ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT