ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೌಷ್ಟಿಕತೆ ನಿವಾರಣೆಗೆ `ಕ್ಷೀರಭಾಗ್ಯ' ಪೂರಕ

Last Updated 2 ಆಗಸ್ಟ್ 2013, 7:15 IST
ಅಕ್ಷರ ಗಾತ್ರ

ಹೂವಿನಹಡಗಲಿ: ಮಕ್ಕಳಲ್ಲಿನ ಅಪೌಷ್ಟಿಕತೆ  ನಿವಾರಿಸುವಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ `ಕ್ಷೀರಭಾಗ್ಯ' ಯೋಜನೆ ಪೂರಕವಾಗಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.

ಪಟ್ಟಣದ ಸೊಪ್ಪಿನ ಕಾಳಮ್ಮ ಬಾಲಕಿಯರ ಸ.ಪ.ಪೂ. ಕಾಲೇಜಿನಲ್ಲಿ ಗುರುವಾರ ಮಕ್ಕಳಿಗೆ ಹಾಲು ವಿತರಿಸುವ ಮೂಲಕ `ಕ್ಷೀರಭಾಗ್ಯ' ಮತ್ತು `ಸುವರ್ಣ ಆರೋಗ್ಯ ಚೈತನ್ಯ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಾಲು ಉತ್ಪಾದಕರಿಗೆ ರೂ. 4  ಪ್ರೋತ್ಸಾಹ ಧನ ಘೋಷಣೆಯಿಂದಾಗಿ ರಾಜ್ಯದಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗುತ್ತಿರುವ ಹಾಲು  ನಷ್ಟವಾಗದಿರಲಿ ಎಂಬ ಕಾಳಜಿಯಿಂದ ವಾರದಲ್ಲಿ ಮೂರು ದಿನ ಮಕ್ಕಳಿಗೆ  ಕೆನೆಭರಿತ ಹಾಲು ವಿತರಣೆಗೆ ಸರ್ಕಾರ ಯೋಜನೆ ರೂಪಿಸಿದೆ. ಬಳ್ಳಾರಿ ಜಿಲ್ಲೆಯಲ್ಲಿ 1671 ಶಾಲೆಯ 1ರಿಂದ 10ನೇ ತರಗತಿಯ 3,42110 ವಿದ್ಯಾರ್ಥಿಗಳು ಮತ್ತು ಅಂಗನವಾಡಿಯ 2.09 ಲಕ್ಷ ಮಕ್ಕಳು ಯೋಜನೆಯ ಉಪಯೋಗ ಪಡೆಯಲಿದ್ದಾರೆ ಎಂದರು.

ರೈತರ ಹೈನೋದ್ಯಮಕ್ಕೆ ಉತ್ತೇಜನ ನೀಡುವ ಮತ್ತು ಮಕ್ಕಳ ಅಪೌಷ್ಟಿಕತೆ ದೂರ ಮಾಡುವ `ಕ್ಷೀರಭಾಗ್ಯ' ಬಹು ಉಪಯೋಗಿ ಯೋಜನೆಯಾಗಿದೆ. ಅಧಿಕಾರಿಗಳು ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಯಾವುದೇ ಲೋಪದೋಷ ಕಂಡುಬಂದರೆ ಸಂಬಂಧಿಸಿದ ಅಧಿಕಾರಿಯನ್ನು ಹೊಣೆ ಮಾಡಿ, ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಚುನಾವಣಾಪೂರ್ವದಲ್ಲಿ  ನೀಡಿದ ಭರವಸೆಯಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ  ಎಲ್ಲ ಯೋಜನೆಗಳನ್ನು ಸಾಕಾರಗೊಳಿಸುವತ್ತ ಸಾಗಿದೆ. ಹಸಿದ ಒಡಲು ತುಂಬಿಸುವಂತಹ `ಅನ್ನಭಾಗ್ಯ' ಯೋಜನೆ ಬಡವರ ಪಾಲಿನ ಮಹತ್ವದ ಕಾರ್ಯಕ್ರಮವಾಗಿದೆ. ರೈತರ ಸಂಕಷ್ಟ ನಿವಾರಿಸುವ ಯೋಜನೆ, ಬಾಲಕಿಯರ ಶಿಕ್ಷಣಕ್ಕಾಗಿ ರೂಪಿಸಿರುವ ವಿಶೇಷ ಕಾರ್ಯಕ್ರಮಗಳು ಸಧ್ಯದಲ್ಲಿಯೇ ಅನುಷ್ಠಾನಕ್ಕೆ ಬರಲಿವೆ ಎಂದರು.

ಕಾರ್ಯಕ್ರಮದಲ್ಲಿ ಜಿ.ಪಂ. ಉಪಾಧ್ಯಕ್ಷೆ ಮಮತಾ ಸುರೇಶ್, ತಾ.ಪಂ. ಅಧ್ಯಕ್ಷೆ ದುರುಗಮ್ಮ, ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಐಗೋಳ ಚಿದಾನಂದ, ಎಂ.ಪರಮೇಶ್ವರಪ್ಪ, ಜಿ.ಪಂ. ಸದಸ್ಯರಾದ ನಳಿನಾ ವೀರಭದ್ರಪ್ಪ, ಶೋಭಾ ಬೆಂಡಿಗೇರಿ, ಜಿ.ವಸಂತ, ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ,  ಡಿಡಿಪಿಐ ಟಿ.ನಾರಾಯಣಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಮಾಧವರಾವ್  ಪಾಟೀಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಿ.ಎಸ್.ಕಾಲಾದಗಿ, ಕೆ.ಎಂ.ಎಫ್. ವ್ಯವಸ್ಥಾಪಕ ಡಾ. ಸುನಿಲ್, ಮಲ್ಲಿಕಾರ್ಜುನಸ್ವಾಮಿ, ಅಟವಾಳಗಿ ಕೊಟ್ರೇಶ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT