ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೌಷ್ಟಿಕತೆ ರಾಷ್ಟ್ರೀಯ ಅವಮಾನ

Last Updated 10 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಪೌಷ್ಟಿಕತೆಯನ್ನು ರಾಷ್ಟ್ರೀಯ ಅವಮಾನ ಎಂದಿರುವ ಪ್ರಧಾನಿ ಮನಮೋಹನ್ ಸಿಂಗ್, ಇದನ್ನು ದೂರಮಾಡಲು ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಒಂದನ್ನೇ ಅವಲಂಬಿಸಲಾಗದು ಎಂದು ಮಂಗಳವಾರ ಹೇಳಿದ್ದಾರೆ.

`ಹಸಿವು ಮತ್ತು ಅಪೌಷ್ಟಿಕತೆ~ ಕುರಿತ ವರದಿಯನ್ನು ತಮ್ಮ ನಿವಾಸದಲ್ಲಿ ಬಿಡುಗಡೆ ಮಾಡಿದ ಅವರು, `ಒಟ್ಟು ರಾಷ್ಟ್ರೀಯ ಉತ್ಪನ್ನ~ (ಜಿಡಿಪಿ) ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುತ್ತಿದ್ದರೂ ಪೌಷ್ಟಿಕತೆಯ ಕೊರತೆ ದೇಶವನ್ನು ತೀವ್ರವಾಗಿ ಕಾಡುತ್ತಿದೆ. ಇದು ನಾಚಿಕೆಗೇಡಿನ ಸಂಗತಿ~ ಎಂದರು.

ಅಪೌಷ್ಟಿಕತೆ ವಿರುದ್ಧದ ನಾಗರಿಕರ ಒಕ್ಕೂಟದ ಪರವಾಗಿ `ಹಸಿವು ಮತ್ತು ಅಪೌಷ್ಟಿಕತೆ~ ಸಮೀಕ್ಷಾ ವರದಿಯನ್ನು `ನಾಂದಿ~ ಪ್ರತಿಷ್ಠಾನ ಸಿದ್ಧಪಡಿಸಿದೆ.

`ಅಪೌಷ್ಟಿಕತೆ ಹೋಗಲಾಡಿಸಲು ಐಸಿಡಿಎಸ್‌ನಂತಹ ಮಹತ್ವಪೂರ್ಣ ಯೋಜನೆ ಜಾರಿಯಲ್ಲಿದ್ದರೂ ಕೊರತೆ ಪ್ರಮಾಣವನ್ನು ಶೀಘ್ರ ತಗ್ಗಿಸುವ ನಿಟ್ಟಿನಲ್ಲಿ ಯಶಸ್ಸು ಸಾಧಿಸಿಲ್ಲ. ಆದ್ದರಿಂದ ಅಪೌಷ್ಟಿಕತೆ ವಿರುದ್ಧ ಹೋರಾಡಲು ನಾವು ಇದೊಂದೇ ಯೋಜನೆಯನ್ನು ನೆಚ್ಚಿಕೊಳ್ಳಲು ಆಗದು~ ಎಂದರು.

`ನೀತಿ ನಿರೂಪಕರು ಮತ್ತು ಕಾರ್ಯಕ್ರಮ ಅನುಷ್ಠಾನ ಮಾಡುವವರು ಆರೋಗ್ಯ, ನೈರ್ಮಲ್ಯ, ಕುಡಿಯುವ ನೀರು ಮತ್ತು ಪೌಷ್ಟಿಕತೆ ಒಂದಕ್ಕೊಂದು ಪೂರಕವಾದ ವಲಯಗಳು ಎಂಬುದನ್ನು ಮನಗಾಣಬೇಕು. ಈ ವಲಯಗಳ ಅಗತ್ಯ ಮತ್ತು ಅಪೇಕ್ಷೆಗೆ ತಕ್ಕಂತೆ ಯೋಜನೆ ರೂಪುಗೊಳ್ಳಬೇಕು ಹಾಗೂ ಅನುಷ್ಠಾನವಾಗಬೇಕು~ ಎಂದರು.

`ದೇಶದಲ್ಲಿ ಅಪೌಷ್ಟಿಕತೆ ತೀವ್ರವಾಗಿ ಇದೆ ಎನ್ನುವುದನ್ನು ಸಮೀಕ್ಷಾ ವರದಿ ಶ್ರುತಪಡಿಸಿದೆ. ಆದರೆ, ಪ್ರತಿ ಐದು ಮಕ್ಕಳಲ್ಲಿ ಒಂದು ಮಗು ಮಾತ್ರ ಆರೋಗ್ಯಪೂರ್ಣ ಬದುಕಿಗೆ ಅವಶ್ಯವಾದಷ್ಟು ತೂಕವನ್ನು ಹೊಂದಿದೆ ಎಂದು ನೂರು ಜಿಲ್ಲೆಗಳಲ್ಲಿ ಏಳು ವರ್ಷಗಳ ಅವಧಿಯಲ್ಲಿ ನಡೆಸಿದ ಅಧ್ಯಯನವು ತಿಳಿಸಿದೆ. ಇಷ್ಟಾದರೂ ಈ ಜಿಲ್ಲೆಗಳಲ್ಲಿ ಮಕ್ಕಳ ಅಭಿವೃದ್ಧಿ ಸ್ಥಿತಿಗತಿ ಶೋಚನಿಯವಾಗಿದೆ. ಶೇ 40ರಷ್ಟು ಮಕ್ಕಳು ನಿಗದಿಗಿಂತ ಕಡಿಮೆ ತೂಕ ಹೊಂದಿದ್ದರೆ, ಶೇ 60ರಷ್ಟು ಮಕ್ಕಳ ಬೆಳವಣಿಗೆ ತೀರಾ ಕುಂಠಿತವಾಗಿದೆ~ ಎಂದೂ ಹೇಳಿದರು.

`ಪೌಷ್ಟಿಕಾಂಶದ ಕೊರತೆಯಿಂದಾಗಿ ದೇಶದಲ್ಲಿ ಇನ್ನೂ ಶೇ 40ರಷ್ಟು ಮಕ್ಕಳು ನಿಗದಿತ ತೂಕಕ್ಕಿಂತ ಕಡಿಮೆ ತೂಕದಿಂದ ಬಳಲುತ್ತಿರುವುದು ತೀವ್ರ ಆತಂಕಕಾರಿ ಸಂಗತಿ~ ಎಂದರು.

`ದೇಶ ಕಟ್ಟುವ ಕಾರ್ಯದಲ್ಲಿ ಅಂಗವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ವಪೂರ್ಣ. ಆರೋಗ್ಯವಂತ ಮಕ್ಕಳೇ ದೇಶದ ಆಸ್ತಿ. ಆದ್ದರಿಂದ ಅವರು ತಮ್ಮ ಕರ್ತವ್ಯವನ್ನು ಹೆಚ್ಚಿನ ಶ್ರದ್ಧೆಯಿಂದ ನಿರ್ವಹಿಸಬೇಕು~ ಎಂದು ಕೋರಿದರು.
`ಮೊಲೆಹಾಲು ಉಣಿಸುವಿಕೆ, ಕುಟುಂಬದಲ್ಲಿ ಮಹಿಳೆಯ ಪಾತ್ರ, ವಿದ್ಯಾವಂತ ತಾಯಿ, ಕುಟುಂಬದ ಆರ್ಥಿಕ ಮಟ್ಟ, ಸ್ವಚ್ಛತೆ, ಪರಿಸರ ನೈರ್ಮಲ್ಯ ಇವೆಲ್ಲವೂ ಮಕ್ಕಳ ಪೌಷ್ಟಿಕತೆಗೆ ಕಾರಣವಾಗುವ ಅಂಶಗಳು~ ಎಂದು  ಸಿಂಗ್ ಹೇಳಿದರು.

ಅಪೌಷ್ಟಿಕತೆ ವಿರುದ್ಧ ನಾಗರಿಕರ ಒಕ್ಕೂಟದಲ್ಲಿ ಯುವ ಸಂಸದರು, ಕಲಾವಿದರು, ನಿರ್ದೇಶಕರು, ಸಾಮಾಜಿಕ ಕಾರ್ಯಕರ್ತರು, ನೀತಿ ನಿರೂಪಕರು ಇದ್ದಾರೆ. ಇವರಲ್ಲಿ ಸಂಸದರೂ ಆದ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್, ನಟ ರಾಹುಲ್ ಬೋಸ್, ಗಾಯಕಿ ಪೆನಾಜ್ ಮಸಾನಿ, ಸಂಸದರಾದ ಜೈ ಪಾಂಡ, ಜ್ಯೋತಿ ಮಿರ್ಧಾ, ಮಧು ಯಾಸ್ಕಿ ಗೌಡ್, ಷಾನವಾಜ್ ಹುಸೇನ್ ಮತ್ತು ಸಚಿವ ಸಚಿನ್ ಪೈಲಟ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

ವರದಿ ಹೇಳುವುದೇನು?...

ದೇಶದ ಆರು ದೊಡ್ಡ ರಾಜ್ಯಗಳಲ್ಲಿ ಐದು ವರ್ಷದೊಳಗಿನ ಮಕ್ಕಳಲ್ಲಿ ಅರ್ಧಷ್ಟು ಮಕ್ಕಳು ಅಪೌಷ್ಟಿಕತೆ ಅಥವಾ ಬೆಳವಣಿಗೆ ಕುಂಠಿತದಿಂದ ಬಳಲುತ್ತಿದ್ದಾರೆ.

ಸಮೀಕ್ಷೆಯಲ್ಲಿ 74,020 ತಾಯಂದಿರು, 1,09,093 ಮಕ್ಕಳು ಮತ್ತು ನೂರಾರು ಅಂಗನವಾಡಿ ಕಾರ್ಯಕರ್ತರನ್ನು ಸಂದರ್ಶಿಸಲಾಗಿದೆ.

ಮಕ್ಕಳಲ್ಲಿ ಪೋಷಕಾಂಶದ ಕೊರತೆಯು ಬಡ ಕುಟುಂಬಗಳಲ್ಲೇ ಹೆಚ್ಚು.

ಮುಸ್ಲಿಮರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಟುಂಬದ ಮಕ್ಕಳ ಆರೋಗ್ಯ ಸ್ಥಿತಿ ಕೂಡ ಶೋಚನೀಯ.

ವಿಶ್ವದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಪ್ರತಿ ಮೂರನೇ ಮಗು ಭಾರತೀಯ.

ದೇಶದಲ್ಲಿ ಶೇ 51ರಷ್ಟು ತಾಯಂದಿರು ಮಗುವಿಗೆ ಮೊದಲ ಆರು ತಿಂಗಳು ಮೊಲೆ ಹಾಲು ಉಣಿಸುತ್ತಿಲ್ಲ. ಇದೂ ಅಪೌಷ್ಟಿಕತೆಗೆ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT