ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪ ರೆಫರಿ, ಅಣ್ಣ ಕ್ರಿಕೆಟಿಗ, ತಂಗಿ ವಿಶ್ಲೇಷಕಿ

ಇಂಗ್ಲೆಂಡ್ ಯಶಸ್ಸಿನ ಹಿಂದೆ ಬ್ರಾಡ್ ಸಹೋದರಿ ಗೆಮ್ಮಾ ಪಾತ್ರ
Last Updated 15 ಡಿಸೆಂಬರ್ 2012, 19:54 IST
ಅಕ್ಷರ ಗಾತ್ರ

ನಾಗಪುರ: ಈ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಯಶಸ್ಸು ಕಾಣುತ್ತಿರುವ ಇಂಗ್ಲೆಂಡ್ ತಂಡದ ಡ್ರೆಸ್ಸಿಂಗ್ ಕೊಠಡಿಯಲ್ಲೂ ಒಬ್ಬ ಮಹಿಳೆ ಇದ್ದಾಳೆ. ಪುರುಷರ ಕ್ರಿಕೆಟ್     ತಂಡದಲ್ಲಿ ಮಹಿಳೆಗೆ ಅಲ್ಲೇನು ಕೆಲಸ ಅಂತೀರಾ?

ಹೌದು, ಆ ಮಹಿಳೆಯೇ ಇಂಗ್ಲೆಂಡ್ ತಂಡದ ಸಹಾಯಕ ಸಿಬ್ಬಂದಿ. ಕ್ರಿಕೆಟ್ ವಿಶ್ಲೇಷಕಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಹೆಸರು ಗೆಮ್ಮಾ ಬ್ರಾಡ್. ಮಾಜಿ ಆಟಗಾರ ಹಾಗೂ ಐಸಿಸಿ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಅವರ ಪುತ್ರಿ. ಆಕೆಯ ಸಹೋದರ ಸ್ಟುವರ್ಟ್ ಬ್ರಾಡ್ ಆಂಗ್ಲರ ಬಳಗದಲ್ಲಿದ್ದಾರೆ. ಬ್ರಾಡ್ ಟ್ವೆಂಟಿ-20 ತಂಡದ ನಾಯಕ ಕೂಡ.

ಪುರುಷರ ವಿಭಾಗದ ಕ್ರೀಡೆಗಳಲ್ಲಿ ಮಹಿಳೆಯರನ್ನು ಸಹಾಯಕ ಸಿಬ್ಬಂದಿಯಾಗಿ ನೇಮಿಸಿಕೊಳ್ಳುವುದು ಕಡಿಮೆ. ಇಂಥದ್ದರಲ್ಲಿ ತಿಂಗಳುಗಟ್ಟಲೆ ವಿದೇಶಿ ಪ್ರವಾಸದಲ್ಲಿರುವ ಇಂಗ್ಲೆಂಡ್ ಪುರುಷರ ತಂಡವು ಗೆಮ್ಮಾ ಅವರನ್ನು ವಿಶ್ಲೇಷಕಿಯಾಗಿ ನೇಮಿಸಿಕೊಂಡಿರುವುದು ಅಚ್ಚರಿ ಮೂಡಿಸುವಂಥದ್ದು. ಹಾಗೇ, ಈ ತಂಡದ ಮಾಧ್ಯಮ ಮ್ಯಾನೇಜರ್ ರಿಯಾನ್ ಇವಾನ್ಸ್ ಕೂಡ ಮಹಿಳೆ.

ಕ್ರಿಕೆಟ್ ಅಭಿಮಾನವೇ ಕ್ರೀಡಾ ವಿಶ್ಲೇಷಕಿಯಾಗಲು ಅವರಿಗೆ ಪ್ರೇರಣೆಯಂತೆ. `ಕ್ರಿಕೆಟ್ ಎಂದರೆ ನನಗೆ ತುಂಬಾ ಇಷ್ಟ. ಹಿಂದೆ ನಾನು ಮಹಿಳೆಯರ ಕ್ರಿಕೆಟ್ ತಂಡದಲ್ಲೂ ಕೆಲಸ ಮಾಡಿದ್ದೆ. ಆಗ ನನಗೆ ಯಶಸ್ಸು ಲಭಿಸಿತ್ತು. ಅದು ಪುರುಷರ ತಂಡದಲ್ಲಿ ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಿತು' ಎಂದು ಗೆಮ್ಮಾ `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ್ದಾರೆ. ಗೆಮ್ಮಾ ಕೇವಲ ಕಂಪ್ಯೂಟರ್ ಮುಂದೆ ಕುಳಿತು ಸದಾ ಆಟದ ವಿಶ್ಲೇಷಣೆಯಲ್ಲಿ ತೊಡಗಿರುವುದಿಲ್ಲ. ಅವರು ತಂಡದ ಅಭ್ಯಾಸದ ವೇಳೆ ಆಟಗಾರರಿಗೆ ಸಹಾಯ ಕೂಡ ಮಾಡುತ್ತಿರುತ್ತಾರೆ, ಸಲಹೆ ನೀಡುತ್ತಿರುತ್ತಾರೆ. ಪುರುಷ ಕ್ರೀಡಾ ವಿಶ್ಲೇಷಕರನ್ನು ನಾಚಿಸುವಂತೆ ಕ್ರಿಯಾಶೀಲರಾಗಿರುತ್ತಾರೆ.

`ತಂಡದ ಉಳಿದ ಸಹಾಯಕ ಸಿಬ್ಬಂದಿಯಂತೆ ಗೆಮ್ಮಾ ಕೂಡ ಒಬ್ಬರು. ಹಾಗಾಗಿ ಅದರಲ್ಲೇನು ವಿಶೇಷವಿಲ್ಲ. ಅವರ ಸಹೋದರ ಬ್ರಾಡ್ ತಂಡದಲ್ಲಿರುವುದು ಮತ್ತಷ್ಟು ಅನುಕೂಲವಾಗಿದೆ' ಎಂದು ಮಾಧ್ಯಮ ಮ್ಯಾನೇಜರ್ ರಿಯಾನ್ ಇವಾನ್ಸ್ ಹೇಳುತ್ತಾರೆ. ಕ್ರೀಡಾ ವಿಜ್ಞಾನದಲ್ಲಿ ಪದವಿ ಪಡೆದಿರುವ ಗೆಮ್ಮಾ ಕ್ರೀಡಾ ಪ್ರದರ್ಶನ ವಿಶ್ಲೇಷಣೆಯಲ್ಲಿ ಸ್ನಾತಕೋತ್ತರ ಪದವಿಯನ್ನೂ ಹೊಂದಿದ್ದಾರೆ. 2007ರಲ್ಲಿ ಅವರು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯಲ್ಲಿ ಉದ್ಯೋಗ ಗಿಟ್ಟಿಸಿದರು. ಆರಂಭದಲ್ಲಿ ಮಹಿಳಾ ತಂಡದಲ್ಲಿ ಕಾರ್ಯನಿರ್ವಹಿಸಿದ್ದರು.

ಈ ಸಂದರ್ಭದಲ್ಲಿ ಮಹಿಳಾ ತಂಡ ಟ್ವೆಂಟಿ-20 ಹಾಗೂ ಏಕದಿನ ವಿಶ್ವ ಚಾಂಪಿಯನ್ ಕೂಡ ಆಯಿತು. ಇದಕ್ಕಾಗಿ ಅವರಿಗೆ ಬಡ್ತಿ ಲಭಿಸಿತು. ಪುರುಷರ ತಂಡದಲ್ಲಿ ಕೆಲಸ ಮಾಡುವ ಅವಕಾಶ ಗಿಟ್ಟಿಸಿಕೊಟ್ಟಿತು. ಪುರುಷರ ತಂಡದಲ್ಲೂ     ಅವರೀಗ ಯಶಸ್ವಿಯಾಗುತ್ತಿದ್ದಾರೆ. 2010ರಲ್ಲಿ ಇಂಗ್ಲೆಂಡ್ ತಂಡ  ವೆಸ್ಟ್‌ಇಂಡೀಸ್‌ನಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿತ್ತು. ಜೊತೆಗೆ ಆಸ್ಟ್ರೇಲಿಯಾ ನೆಲದಲ್ಲಿ ಆ್ಯಷಸ್ ಸರಣಿ ಗೆದ್ದು ಇತಿಹಾಸ ಬರೆದಿತ್ತು. ಭಾರತದ ನೆಲದಲ್ಲಿ ಐತಿಹಾಸಿಕ ಸರಣಿ ಗೆಲುವಿನ ವಿಶ್ವಾಸದಲ್ಲಿರುವ ಈ ಹೊತ್ತಿನಲ್ಲಿ ಗೆಮ್ಮಾ ಪಾತ್ರವನ್ನು ಈ ತಂಡ ಮರೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT