ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪಟ ಕಲಾವಿದೆ ಶಮಾ

Last Updated 3 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ನಗುಮೊಗದ ಈ ಚೆಲುವೆ ಶಮಾ. ಏಳನೇ ವಯಸ್ಸಿಗೆ ಭರತನಾಟ್ಯ ಕಲಿಯಲು ಆರಂಭಿಸಿದ ಅವರು ಇಂದು ‘ಶ್ರದ್ಧಾ ನೃತ್ಯ ಶಾಲೆ’ ಕಟ್ಟಿದ್ದಾರೆ. ಜೊತೆಗೆ ಧಾರಾವಾಹಿ ನಂಟೂ ಉಳಿಸಿಕೊಂಡಿದ್ದಾರೆ.

ಭದ್ರಾವತಿ ಮೂಲದ ಶಮಾ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜು ವಿದ್ಯಾರ್ಥಿನಿ. ಅವರ ನೃತ್ಯ ಸಾಮರ್ಥ್ಯದ ಕಾರಣದಿಂದಲೇ ಕಿರುತೆರೆಯಲ್ಲಿ ನಟನೆಯ ಅವಕಾಶ ದೊರೆತಿದೆ. ಅಭಿನಯಿಸಲು ಒಲ್ಲೆ ಎನ್ನದೇ ಹೋದ ಅವರು ನಟಿಸಿದ ಮೊದಲ ಧಾರಾವಾಹಿ ‘ಮಲ್ಲಿಕಾ ಪರಿಣಯ’.

‘ಕಣ’, ‘ಕಾಮನಬಿಲ್ಲು’, ‘ಆಸರೆ’, ‘ಕುಸುಮಾಂಜಲಿ’, ‘ನಾಕುತಂತಿ’, ‘ನೀ ನಡೆವ ಹಾದಿಯಲ್ಲಿ’, ‘ಲಾಲಿ’, ‘ಅವಲಕ್ಕಿ ಪವಲಕ್ಕಿ’ ಮುಂತಾದ ಧಾರಾವಾಹಿಗಳಿಗೆ ಬಣ್ಣಹಚ್ಚಿರುವ ಶಮಾ- ‘ನೃತ್ಯದ ಮೂಲಕ ನನಗೆ ನಟನೆ ಪಳಗಿತು’ ಎನ್ನುತ್ತಾರೆ. ಅಂದಹಾಗೆ, ಶಮಾಗೆ ಸಿನಿಮಾ ಎಂದರೆ ಅಷ್ಟೇನೂ ಇಷ್ಟವಿಲ್ಲ. ಸಿನಿಮಾದಲ್ಲಿ ಸಿಕ್ಕ ಅವಕಾಶಗಳನ್ನು ನಿರಾಕರಿಸಿದ್ದಾರೆ. ಇದಕ್ಕೆ ನೀಡುವ ಕಾರಣ ಸಿನಿಮಾ ಬಯಸುವ ಅತಿ ಗ್ಲಾಮರ್ ಇಷ್ಟವಾಗದಿರುವುದು ಮತ್ತು ಶೆಡ್ಯೂಲ್ ಹೊಂದಾಣಿಕೆ ಆಗದಿರುವುದು.

ಆರಂಭದಲ್ಲಿ ಹವ್ಯಾಸವಾಗಿದ್ದ ಅಭಿನಯ ಶಮಾ ಅವರಿಗೀಗ ನೃತ್ಯದೊಂದಿಗೆ ವೃತ್ತಿಯಾಗಿದೆ. ಎರಡನ್ನೂ ಒಟ್ಟಿಗೆ ನಿಭಾಯಿಸುತ್ತಿರುವ ಅವರು, ಈ ನಿಟ್ಟಿನಲ್ಲಿ ಧಾರಾವಾಹಿ ನಿರ್ಮಾಪಕ ನಿರ್ದೇಶಕರ ಸಹಕಾರವಿದೆ ನೆನಪಿಸಿಕೊಳ್ಳುತ್ತಾರೆ.

‘ಅತ್ತೆ-ಸೊಸೆ ಜಗಳ, ಕುಟುಂಬ ಕಲಹ ಇರುವ ಧಾರಾವಾಹಿಗಳಲ್ಲಿ ನಟಿಸಲು ಇಷ್ಟವಿಲ್ಲ. ಪ್ರೇಕ್ಷಕರಲ್ಲಿ ಸಕಾರಾತ್ಮಕ ಅಂಶ ಮೂಡಿಸುವಂಥ, ಕೆಟ್ಟ ಸಂದರ್ಭ ಎದುರಿಸಲು ಅವರಿಗೆ ಸಹಾಯಕವಾಗುವಂಥ, ಸಾಮಾಜಿಕವಾಗಿ ಸಂದೇಶ ಬೀರುವಂಥ ಪಾತ್ರಗಳಲ್ಲಿ ನಟಿಸಲು ಇಷ್ಟ’ ಎನ್ನುತ್ತಾರೆ.

‘ಇತ್ತೀಚೆಗೆ ನಟಿಸಿದ ‘ಅವಲಕ್ಕಿ ಪವಲಕ್ಕಿ’ ಧಾರಾವಾಹಿಯ ಒಂಟಿ ತಾಯಿ ಪಾತ್ರ ತುಂಬಾ ಇಷ್ಟವಾಯಿತು. ಸ್ವತಂತ್ರವಾಗಿ ಸಮಸ್ಯೆಯನ್ನು ಎದುರಿಸುವ ಆ ಪಾತ್ರ ಹೆಣ್ಣನ್ನು ಸಬಲವಾಗಿ ತೋರಿಸಿತ್ತು. ಹೆಣ್ಣನ್ನು ಶಕ್ತಿಯುತವಾಗಿ, ಧೈರ್ಯವಂತೆಯಾಗಿ ತೋರಿಸುವ ಪಾತ್ರಗಳೆಂದರೆ ನನಗೆ ಇಷ್ಟ. ಅಳುವ ಪಾತ್ರಗಳೆಂದರೆ ಅಲರ್ಜಿ’ ಎನ್ನುತ್ತಾರೆ ಶಮಾ.

ಇದೀಗ ಕುಚಿಪುಡಿ ನೃತ್ಯ ಕಲಿತು ಕಾರ್ಯಕ್ರಮ ನೀಡುತ್ತಿರುವ ಶಮಾ ಭರತನಾಟ್ಯದಲ್ಲಿ ವಿದ್ವತ್ ಮುಗಿಸಿದ್ದಾರೆ. ಭಾರತದಾದ್ಯಂತ ಮಾತ್ರವಲ್ಲ ವಿದೇಶಗಳಲ್ಲೂ ನೃತ್ಯ ಪ್ರದರ್ಶನ ನೀಡಿ ಬಂದಿರುವ ಅವರು ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದವರು. ಪ್ರಶಸ್ತಿಗಾಗಿ ಅಥವಾ ಹೆಸರು ಮಾಡುವುದಕ್ಕಿಂತಲೂ ತಮ್ಮ ನೃತ್ಯ ಹೆಚ್ಚು ಜನರಿಗೆ ತಲುಪಬೇಕು ಎಂಬ ಆಸೆ ಅವರದು. ನೃತ್ಯದಲ್ಲಿ ಹೆಚ್ಚಿನ ಸಂಶೋಧನೆ ಮಾಡಬೇಕೆಂಬ ಬಯಕೆಯೂ ಇದೆ.

ತಮ್ಮ ಬತ್ತದ ಉತ್ಸಾಹ ಮತ್ತು ಸೌಂದರ್ಯಕ್ಕೆ ಕಲಾವಿದರಿಗೆ ಇರುವ ಜೀವನೋತ್ಸಾಹ ಮತ್ತು ಕ್ರಿಯಾಶೀಲ ಮನೋಭಾವವೇ ಕಾರಣ ಎನ್ನುತ್ತಾರೆ ಶಮಾ.

‘ಆಸಕ್ತಿ ಮತ್ತು ಪ್ರತಿಭೆ ಇರುವ ಬಡ ವಿದ್ಯಾರ್ಥಿಗಳಿಗೆ ನೃತ್ಯ ಕಲಿಯಲು ಸಹಾಯ ಮಾಡುವಂಥ ಸಂಸ್ಥೆ ಆರಂಭಿಸಬೇಕು. ಜನ ನೋಡುವುದನ್ನು ಮಾತ್ರ ಕೊಡಬೇಕೆಂಬ ಉದ್ದೇಶದಿಂದ ಬರುತ್ತಿರುವ ಧಾರಾವಾಹಿಗಳನ್ನು ಹೊರತುಪಡಿಸಿ ಮನಸ್ಸಿಗೆ ಧೈರ್ಯ ಸಂತೋಷ ನೀಡುವಂಥ ಧಾರಾವಾಹಿ ನಿರ್ದೇಶಿಸಬೇಕು’ ಎಂಬ ಕನಸು ಅವರವು.

‘ನಾವೆಲ್ಲಾ ನಟಿಸಲು ಬಂದಾಗ ನಿರ್ದೇಶಕರಿಗೆ ತುಂಬಾ ತಾಳ್ಮೆ ಇರ್ತಿತ್ತು. ಅವರು ತಾಳ್ಮೆಯಿಂದ ನಮಗೆ ಹೇಳಿಕೊಡುತ್ತಿದ್ದರು. ತಪ್ಪು ತಿದ್ದುತ್ತಿದ್ದರು. ಇದೀಗ ನಿರ್ದೇಶಕರು ಇವರಲ್ಲದಿದ್ದರೆ ಇನ್ನೊಬ್ಬರು ಎಂಬ ತಿರ್ಮಾನಕ್ಕೆ ಬಂದಿದ್ದಾರೆ. ಅದರಿಂದ ಕಿರುತೆರೆ ಕಲಾವಿದರಲ್ಲಿ ಸ್ಪರ್ಧೆ ಹೆಚ್ಚಾಗಿದೆ’ ಎನ್ನುವ ಶಮಾ ಈಗಿನ ಮಕ್ಕಳಿಗೆ ನಮ್ಮ ಕಾಲದ ಧಾರಾವಾಹಿ, ಸಿನಿಮಾ ನೋಡುವ ಅವಕಾಶ ಇಲ್ಲವಲ್ಲ ಎಂದು ವಿಷಾದ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT