ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪಟ ದೇಸಿ ಕ್ರೀಡೆಯಲ್ಲಿ ಸಾಹಸಿಗರ ದಂಡು!

ಕೃಷ್ಣಾನದಿಯಲ್ಲಿ ರೋಚಕ ತೆಪ್ಪ ಸ್ಪರ್ಧೆ
Last Updated 7 ಸೆಪ್ಟೆಂಬರ್ 2013, 5:47 IST
ಅಕ್ಷರ ಗಾತ್ರ

ಆಲಮಟ್ಟಿ: ಈಗ ಎಲ್ಲೆಡೆ ಕ್ರಿಕೆಟ್, ಫುಟ್‌ಬಾಲ್, ವಾಲಿಬಾಲ್ ಮುಂತಾದ ವಿದೇಶಿ ಆಟಗಳ ಭರಾಟೆಯಲ್ಲಿ ದೇಸಿ ಕ್ರೀಡೆಗಳು ನಶಿಸುತ್ತಿರುವ ಈ ಸಂದರ್ಭ ದಲ್ಲಿ ಅರಳದಿನ್ನಿ ಗ್ರಾಮಸ್ಥರು ಶ್ರಾವಣ ಮಾಸದ ನಿಮಿತ್ತ ಸಾಹಸಿ ಯುವಕರಿ ಗಾಗಿ ಅಪ್ಪಟ ಗ್ರಾಮೀಣ ಭಾಗದ ಕ್ರೀಡೆ ಯಾದ ತೆಪ್ಪ ನಡೆಸುವ ಸ್ಪರ್ಧೆಯನ್ನು ಈಚೆಗೆ ಏರ್ಪಡಿಸಲಾಗಿತ್ತು.

ಕೃಷ್ಣಾ ನದಿಯ ಬಾಗಲಕೋಟೆ ತಾಲ್ಲೂಕಿನ ನಾಗಸಂಪಿಗೆ ಗ್ರಾಮದಿಂದ ಆಲಮಟ್ಟಿ ಮುಂಭಾಗದ ಅರಳದಿನ್ನಿ ಗ್ರಾಮದವರೆಗೆ 1.5 ಕಿ.ಮೀ ಉದ್ದದ ಸ್ಪರ್ಧೆ ಏರ್ಪಟ್ಟಿತ್ತು. ವಿವಿಧ ಗ್ರಾಮಗಳ ಸುಮಾರು 20ಕ್ಕೂ ಹೆಚ್ಚು ತೆಪ್ಪಗಳ ವಿವಿಧ ಊರುಗಳಿಂದ ಬಂದಿದ್ದ ಸಾಹಸಿ ಯುವ ಮೀನುಗಾರರು, ನಾ..ಮುಂದೆ, ತಾ. ಮುಂದೆ ಎಂದು ಜಯಘೋಷ ಹಾಕುತ್ತಾ ತೆಪ್ಪಗಳನ್ನು ಮುನ್ನಡೆಸಿದರು.

ಇತ್ತ ದೊಡ್ಡ ಸೇತುವೆಯ ಮೇಲೆ ನಿಂತ ಸಾವಿರಾರು ರೈತರು, ಯುವಕರು, ಮಹಿಳೆಯರು ಸಾಹಸಿ ಹುಡುಗರನ್ನು ಚಪ್ಪಾಳೆ ತಟ್ಟುತ್ತಾ, ಸಿಳ್ಳೆ ಹೊಡೆ ಯುತ್ತಾ ಹುರುಪು ತುಂಬುತ್ತಿದ್ದ ದೃಶ್ಯ ಮನಮೋಹಕವಾಗಿತ್ತು.

ಸುಮಾರು 1.5 ಕಿ.ಮೀ.ಅಗಲವಿರುವ ತೆರೆದೆದೆಯ ಕೃಷ್ಣಾ ನದಿ ತುಂಬಿ ಭೋರ್ಗರೆಯುತ್ತಿದೆ. ನೋಡಿದವರ ಎದೆ ಝಲ್ಲೆನ್ನಿಸುವಂತಿರುವ, ಸಾಗರವನ್ನೇ ನೆನಪಿಗೆ ತರುವ ಮಹಾನದಿ ಕೃಷ್ಣೆಯ ಅಲೆಗಳು ಜೋರಾದ ಗಾಳಿಗೆ ಮೇಲೇರಿ ಬಂದರೂ ಅಂಜದ ಯುವಕರು ಅದಾವುದನ್ನು ಲೆಕ್ಕಿ ಸದೇ ದೋಣಿಯ ಎರಡು ಬದಿಯಲ್ಲಿ     ಕುಳಿತು ಒಂದೇ ಸಮನೇ ಹುಟ್ಟು ಹಾಕುತ್ತಾ ಎದುರಾಳಿಗಳನ್ನು ಹಿಂದೆ ಹಾಕಲು ಪ್ರಯತ್ನಿಸುತ್ತಿದ್ದರು.

ಕೃಷ್ಣಾ ನದಿಯಲ್ಲಿ ತೆಪ್ಪ ನಡೆಸುವುದು ಅಂದುಕೊಂಡಷ್ಟು ಸುಲಭವಲ್ಲ.

ಆದರೆ ಗ್ರಾಮೀಣ ಭಾಗದ ಈ ಸಾಹಸಿ ಹುಡುಗರಿಗೆ ಈ ಜಲಯಾನ ತಮ್ಮ ಎಂಟೆದೆ ಧೈರ್ಯವನ್ನು ಪ್ರದರ್ಶಿಸಲು ಒದಗಿಸಿದ ಉತ್ತಮ  ಅವಕಾಶವಾಗಿತ್ತು.

ಕೊನೆಯಲ್ಲಿ ಅರಳದಿನ್ನಿ ಗ್ರಾಮದ ಚಂದ್ರು ಮಾದರ ಮತ್ತು ಕಮದಪ್ಪ ಕಟಬರ ಪ್ರಥಮ ಸ್ಥಾನ,
ಇದೇ ಗ್ರಾಮದ ಮಂಜು ಹಾಗೂ ರುದ್ರಪ್ಪ ದ್ವಿತೀಯ, ಚಿಮ್ಮಲಗಿಯ ಹನುಮಂತ ಕಟಬರ ಮತ್ತು ಯಮನೂರಿ ತೃತೀಯ ಸ್ಥಾನವನ್ನು ಪಡೆದರು.

ಪ್ರಥಮ ಸ್ಥಾನ ಪಡೆದವರಿಗೆ 5000, ದ್ವಿತೀಯ 4000 ರೂ, ತೃತೀಯ 3000 ರೂಪಾಯಿ ಬಹುಮಾನ ನೀಡ ಲಾಯಿತು.
ತೆಪ್ಪ ಸ್ಪರ್ಧೆಗೆ ಚಂದ್ರಶೇಖರ ಧರ್ಮ ರಮಠ, ಮೀನುಗಾರರ ಸಂಘದ    ಅಧ್ಯಕ್ಷ ರಾಮನಗೌಡ ಬೂದಿಹಾಳ, ಗ್ರಾಪಂ ಅಧ್ಯಕ್ಷ ಬಸಪ್ಪ ಮಾದರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅನಿಲ ವಾಲೀಕಾರ, ಮಹೇಶ ಮಾದರ, ನಿಜಪ್ಪ ಬಡಿಗೇರ, ಪರಶುರಾಮ ಚವ್ಹಾಣ, ಬಸವರಾಜ ಹೆರಕಲ್, ಹನುಮಂತ ಕೊಳ್ಳಾರ, ರವಿ ವಾಲೀಕಾರ ಮೊದಲಾ ದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT