ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪಣ್ಣ ನೂರು ವಿಕೆಟ್‌ಗಳ ಸರದಾರ

Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿಯಲ್ಲಿ ಹೋದ ವಾರ ನಡೆದ ರಣಜಿ ಪಂದ್ಯದ ಪಂಜಾಬ್ ಇನಿಂಗ್ಸ್‌ನ 55ನೇ ಓವರ್‌. ಹನ್ನೊಂದನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ವಿ.ಎಂ.ಚೌಧರಿ ಕ್ರೀಸ್‌ನಲ್ಲಿದ್ದರು. ಬೌಲಿಂಗ್‌ ತುದಿಯಲ್ಲಿದ್ದವರು ಕೆ.ಪಿ.ಅಪ್ಪಣ್ಣ. ಇನ್ನೇನು ಚೆಂಡು ಕೈಯಿಂದ ಬಿಡುಗಡೆಯಾಗಬೇಕು ಎನ್ನುವಷ್ಟರಲ್ಲಿ ದಿಢೀರನೇ ನಿಂತರು. ಮತ್ತೆ ಹಿಂದೆ ಬಂದು ವಿಕೆಟ್‌ನ ಬಲ ಅಂಚಿನಿಂದ ಬೌಲ್‌ ಮಾಡಲು ನಿರ್ಧರಿಸಿದರು. ಇದು ಫಲ ಕೊಟ್ಟಿತು. ಚೌಧರಿ ವಿಕೆಟ್‌ ಉರುಳಿತು, ಅಪ್ಪಣ್ಣ ಸಂಭ್ರಮ ಮುಗಿಲು ಮುಟ್ಟಿತು. ಯಾಕೆಂದರೆ ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಇದು ಅವರ ನೂರನೇ ವಿಕೆಟ್‌.

ಪಿಚ್‌ನ ಗುಣ ಮತ್ತು ಬ್ಯಾಟ್ಸ್‌ಮನ್‌ನ ಮನ ಅರಿತು ಬೌಲಿಂಗ್‌ ಮಾಡುವ ಕಲೆಯನ್ನು ಅಪ್ಪಣ್ಣ ಎಷ್ಟರ ಮಟ್ಟಿಗೆ ಕರಗತ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಈ ಪ್ರಸಂಗ ಸಾಕ್ಷಿಯಾಯಿತು. ಸ್ಪಿನ್ನರ್‌ಗಳಿಗೆ ಅನುಕೂಲಕರವಲ್ಲದ ಪಿಚ್‌ನಲ್ಲೂ ವಿಕೆಟ್‌ ಕಬಳಿಸುವ ಅಸ್ತ್ರ ತಮ್ಮ ಬಳಿ ಇದೆ ಎಂಬುದನ್ನು ಕೂಡ ಇದು ಸಾರಿ ಹೇಳಿತು. ಈ ವಿಕೆಟ್‌ ಪಡೆಯುವ ಮುನ್ನ ಅವರು ಇನ್ನೂ ಇಬ್ಬರನ್ನು ಔಟ್‌ ಮಾಡಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಕೇವಲ 8.5 ಓವರ್ ಬೌಲ್‌ ಮಾಡಿ 29 ರನ್‌ ನೀಡಿದ್ದರು.

ಇಎಎಸ್‌ ಪ್ರಸನ್ನ, ಬಿ. ಚಂದ್ರಶೇಖರ್‌, ರಘುರಾಂ ಭಟ್‌ ಮತ್ತು ಅನಿಲ್‌ ಕುಂಬ್ಳೆ ನಂತರ ಕರ್ನಾಟಕ ಕ್ರಿಕೆಟ್‌ನ ಸ್ಪಿನ್‌ ವಿಭಾಗದ ಚುಕ್ಕಾಣಿ ಹಿಡಿದಿದ್ದ ಸುನಿಲ್‌ ಜೋಶಿ ಅವರಿಂದ ತಂಡದ ಪ್ರಮುಖ ಸ್ಪಿನ್ನರ್‌ ಪಟ್ಟವನ್ನು ‘ಎಡಗೈ’ಯಿಂದ ಸ್ವೀಕರಿಸಿದವರು ಕೊಡಗಿನ ಕೆ.ಪಿ.ಅಪ್ಪಣ್ಣ; ಸಹ ಆಟಗಾರರ ಪ್ರೀತಿಯ ‘ಅಪ್ಪಿ’.

ರಣಜಿಗೆ ಪದಾರ್ಪಣೆ ಮಾಡಿ ಏಳು ಋತುಗಳನ್ನು ಪೂರೈಸಿರುವ ಅಪ್ಪಣ್ಣಅನೇಕ ಏಳು–ಬೀಳು ಕಂಡಿದ್ದಾರೆ. ಇದೆಲ್ಲವೂ ಅವರು ‘ಶತಕ’ ಗಳಿಸಲು ಹೆಚ್ಚು ಸಮಯ ತೆಗೆದುಕೊಳ್ಳು ವಂತೆ ಮಾಡಿತು.  ರಣಜಿ ಕ್ರಿಕಟ್‌ನ ತಮ್ಮ ಮೊದಲ ಋತುವಿನಲ್ಲಿ ಒಟ್ಟು 21 ವಿಕೆಟ್‌ ಗಳನ್ನು ಬೀಳಿಸಿ ಮೆರೆದಿದ್ದ ಅವರು ನಾಲ್ಕು ವರ್ಷಗಳ ನಂತರ ಎಸೆತವನ್ನು ‘ಚಕ್‌’ ಮಾಡಿದ ಆರೋಪಕ್ಕೆ ಒಳಗಾದರು. ಬೌಲಿಂಗ್‌ ಶೈಲಿ ಕುರಿತ ವಿವಾದಕ್ಕೆ   ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಉತ್ತರ ಕಂಡುಕೊಂಡ ಅವರು ನಂತರ ಮೊಣಕಾಲು ಗಾಯ ದಿಂದಾಗಿ ಒಂಬತ್ತು ತಿಂಗಳು ಆಟದಿಂದ ದೂರ ಉಳಿದರು. ಸಮಸ್ಯೆಗಳನ್ನು ಎದುರಿಸಿ ಮಾನಸಿಕವಾಗಿ ಗಟ್ಟಿಯಾದ ಅಪ್ಪಣ್ಣ 2011ರಲ್ಲಿ ದೆಹಲಿಯಲ್ಲಿ ರೈಲ್ವೇಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಒಟ್ಟು ಹನ್ನೊಂದು ವಿಕೆಟ್‌ ಉರುಳಿಸಿ ಮತ್ತೆ ಗಮನ ಸೆಳೆದರು.

17ನೇ ವರ್ಷದಲ್ಲಿ ರಣಜಿ ತಂಡಕ್ಕೆ ಪ್ರವೇಶ ಪಡೆದಾಗ ಅಪ್ಪಣ್ಣ ಮುಂದೆ ಸುನಿಲ್‌ ಜೋಶಿ ಬೆಟ್ಟದಂತೆ ಬೆಳೆದು ನಿಂತಿದ್ದರು. ಅಪ್ಪಣ್ಣ ಪ್ರವೇಶದ ನಂತರ ಮೊದಲ ಮೂರು ಋತುಗಳಲ್ಲಿ ಜೋಶಿ ಕ್ರಮವಾಗಿ 29, 34 ಮತ್ತು 33 ವಿಕೆಟ್‌ ಉರುಳಿಸಿ ಮಿಂಚಿದ್ದರು. ಹೀಗಾಗಿ ಸರಿಯಾದ ಅವಕಾಶಕ್ಕಾಗಿ ಕೊಡಗಿನ ಹುಡುಗ ಕಾಯಬೇಕಾಗಿ ಬಂತು. ಆದರೆ ಹಿರಿಯ ಆಟಗಾರನ ಜೊತೆ ಕಳೆದ ದಿನಗಳು ಅವರಿಗೆ ಅನುಭವದ ಪಾಠ ಹೇಳಿದವು. ಹೈದರಾಬಾದ್‌ ತಂಡದ ಕೋಚ್‌ ಆಗಿ ಹೋಗುವ ಸಂದರ್ಭದಲ್ಲಿ ‘ಅಪ್ಪಣ್ಣ ವಿಕೆಟ್‌ ಕಬಳಿಸಬಲ್ಲ ಆಕ್ರಮಣಕಾರಿ ಬೌಲರ್‌’ ಎಂದು ಹೇಳಿದ ಜೋಶಿ ಮಾತನ್ನು ಈ ಆಟಗಾರ ಸುಳ್ಳು ಮಾಡಲಿಲ್ಲ.

ಬಲಗೈ ಬ್ಯಾಟ್ಸ್‌ಮನ್‌ಗಳ ಪಡೆಯನ್ನು ನಿಯಂತ್ರಿಸುವ, ಮಧ್ಯಮ ಮತ್ತು ಕೆಳ ಕ್ರಮಾಂಕದವರನ್ನು ಪೆವಿಲಿಯನ್‌ ಕಡೆಗೆ ಅಟ್ಟುವ ಜವಾಬ್ದಾರಿಯನ್ನು ಅವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.  ನೂರರ ಸಾಧನೆ ಮಾಡಿದ ಖುಷಿಯಲ್ಲಿ,  ‘ಪ್ರಜಾವಾಣಿ’ ಜೊತೆ ಮಾತನಾಡಿದ ಅಪ್ಪಣ್ಣ ‘ಈ ಸಾಧನೆಗಾಗಿ ತುಂಬ ಸಮಯದಿಂದ ಕಾಯುತ್ತಿದ್ದೆ. ನಮ್ಮ ರಾಜ್ಯದ ಮೈದಾನವೊಂದರಲ್ಲೇ ಈ ಮಹತ್ವದ ಮೈಲುಗಲ್ಲು ದಾಟಲು ಸಾಧ್ಯವಾದದ್ದು ಖುಷಿಯನ್ನು ಇಮ್ಮಡಿಗೊಳಿಸಿದೆ’ ಎಂದು ಹೇಳಿದರು.

‘ದೇಶಿ ಕ್ರಿಕೆಟ್‌ಗಾಗಿ ಸಿದ್ಧಗೊಳಿಸುವ ಪಿಚ್‌ಗಳಲ್ಲಿ ತಿರುವು ಸಿಗುವುದು ಕಷ್ಟ. ಆದ್ದರಿಂದ ಸ್ಪಿನ್ನರ್‌ಗಳು ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಆದರೆ ಬಲಗೈ ಬ್ಯಾಟ್ಸ್‌ಮನ್‌ಗಳು ಅಧಿಕ ಸಂಖ್ಯೆಯಲ್ಲಿ ಇರುವ ಭಾರತದಂಥ ದೇಶದಲ್ಲಿ ಎಡಗೈ ಸ್ಪಿನ್ನರ್‌ಗಳಿಗೆ ಅವಕಾಶ ಹೆಚ್ಚು. ಇಂಥ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಾಗಿದೆ ಎಂಬುದು ನನ್ನ ಅನಿಸಿಕೆ’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT