ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪನ ಧ್ಯಾನದಲ್ಲಿ..!

Last Updated 28 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಇಡೀ ವಿಶ್ವವೇ ಬೆರಗಾಗುವಂತಹ ಆಟಗಾರ ಧ್ಯಾನಚಂದ್ ಮನೆತನದಿಂದ ಬರುವ ಹಾಕಿ ಆಟಗಾರರು ಕಡಿಮೆಯಾಗುತ್ತಿದ್ದಾರೆ.

ಇದು ಭಾರತದ ಹಾಕಿ ಕ್ಷೇತ್ರದ ಅವನತಿಯನ್ನು ತೋರುತ್ತಿದೆ. ಆದ್ದರಿಂದ ಆಟಗಾರರು ಮತ್ತು ಅವರ ಕುಟುಂಬಕ್ಕೆ ಆಟದಿಂದ ಜೀವನ ಭದ್ರತೆ ಸಿಗುವಂತಾಗಬೇಕು.


`ರಾಷ್ಟ್ರಕ್ಕೆ ಒಬ್ಬರೇ ಗಾಂಧೀಜಿ. ಅದೇ ರೀತಿ ಭಾರತ ಹಾಕಿ ಕ್ರೀಡೆಗೆ ಮೇಜರ್ ಧ್ಯಾನಚಂದ್ ಕೂಡ ಒಬ್ಬರೇ. ಈ ಇಬ್ಬರೂ ಮಹನೀಯರಂತೆ ಮತ್ತೊಬ್ಬ ಹುಟ್ಟಿ ಬರಲು ಸಾಧ್ಯವಿಲ್ಲ~

ತಂದೆಯ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಿದ್ದ ಅಶೋಕಕುಮಾರ ಸಿಂಗ್ ಧ್ವನಿ ಗದ್ಗದಿತವಾಗಿತ್ತು. ಅಪ್ಪನ ನೆನಪುಗಳು ಉಕ್ಕಿ ಬಂದಿದ್ದವು. ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಮತ್ತು ಜಾನಕಿದೇವಿ ದಂಪತಿಯ ಏಳು ಪುತ್ರರಲ್ಲಿ ನಾಲ್ಕನೆಯವರು ಅಶೋಕಕುಮಾರಸಿಂಗ್.

ಅಪ್ಪನ ಗುಣಗಳನ್ನೆಲ್ಲ ಮೈಗೂಡಿಸಿಕೊಂಡಿದ್ದ ಅಶೋಕಕುಮಾರ ಭಾರತದ ಹಾಕಿ ಕ್ರೀಡೆಗೆ ನೀಡಿದ ಕೊಡುಗೆ ಸಣ್ಣದಲ್ಲ. 1975ರಲ್ಲಿ ಭಾರತ ತಂಡ ವಿಶ್ವಕಪ್ ಗೆಲ್ಲಲು ಕಾರಣ ಅಶೋಕಕುಮಾರ್ ಗಳಿಸಿದ್ದ ಗೋಲು.

ಮ್ಯೂನಿಚ್ ಒಲಿಂಪಿಕ್ಸ್‌ನ ಕಂಚಿನ ಪದಕ ಮತ್ತು 1971 ಮತ್ತು 73ರಲ್ಲಿ ವಿಶ್ವಕಪ್ ಟೂರ್ನಿಗಳಲ್ಲಿ ಕಂಚು ಮತ್ತು ಬೆಳ್ಳಿ ಗೆದ್ದ ಭಾರತ ತಂಡದ ಪ್ರಮುಖ ಆಟಗಾರನಾಗಿದ್ದವರು ಅಶೋಕಸಿಂಗ್.

ಇಂಡಿಯನ್ ಏರ್‌ಲೈನ್ಸ್‌ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಅವರು ಇದೀಗ ಭೋಪಾಲ್‌ನಲ್ಲಿ ಹಾಕಿ ತರಬೇತಿ ಅಕಾಡೆಮಿಯ ಮುಖ್ಯಸ್ಥರಾಗಿದ್ದಾರೆ. ಅವರು ತಮ್ಮ ತಂದೆ, ಕುಟುಂಬದ ಹಾಕಿ ಸಾಧನೆಯ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾರೆ. ಹಾಕಿ ಕ್ಷೇತ್ರದ ಇಂದಿನ ಪರಿಸ್ಥಿಯ ಮೇಲೂ ಬೆಳಕು ಚೆಲ್ಲುತ್ತಾರೆ.   

ಆಗಸ್ಟ್ 29ರಂದು ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅಶೋಕಕುಮಾರಸಿಂಗ್ `ಪ್ರಜಾವಾಣಿ~ಯೊಂದಿಗೆ ಅಪ್ಪನ ಬಗ್ಗೆ ದೀರ್ಘ ಸಂಭಾಷಣೆ ನಡೆಸಿದರು. ಅದರ ಸಾರಾಂಶ ಇಲ್ಲಿದೆ;

ನೂರು ವರ್ಷಗಳ ನಂತರವೂ ಅಪ್ಪನನ್ನು ಮತ್ತು ಅವರ ಆಟವನ್ನು ಸ್ಮರಿಸುತ್ತೇವೆ. ಅವರು ಆಡುತ್ತಿದ್ದ ಆಟ ನಮ್ಮ ರಾಷ್ಟ್ರೀಯ ಕ್ರೀಡೆಯಾಗಿರುವುದು ಹಿರಿಮೆಯ ವಿಷಯ. ಅಪ್ಪ ಎಷ್ಟು ಒಳ್ಳೆಯ ಆಟಗಾರನಾಗಿದ್ದರೋ ಅಷ್ಟೇ ಉತ್ತಮ ವ್ಯಕ್ತಿ ಮತ್ತು ದೇಶಪ್ರೇಮಿಯಾಗಿದ್ದರು.

ಶಾಲೆ, ಕಾಲೇಜು ಮತ್ತು ಮೈದಾನಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಹಾಕಿ ಆಟವನ್ನು ಆಡಲಾಗುತ್ತಿತ್ತು. ಧ್ಯಾನಚಂದ್ ಪ್ರಭಾವ ಆ ರೀತಿ ಇತ್ತು. ಜರ್ಮನಿಯ ಹಿಟ್ಲರ್‌ನೇ ತಲೆಬಾಗುವಂತೆ ಮಾಡಿದ್ದ ಅಪ್ಪ ಬಹಳ ದೊಡ್ಡ ವ್ಯಕ್ತಿ. ಅವರ ಪ್ರೇರಣೆಯಿಂದಲೇ ನಾನೂ ಆಡಿದೆ.

ಯಾವುದೇ ಆಟ ಬೆಳೆಯಬೇಕಾದರೆ ಕೇವಲ ಹಣ ಮತ್ತು ಸಂಘಟನೆಸಾಕಾಗುವುದಿಲ್ಲ. ಆಟಗಾರ ರಿಂದಲೇ  ಬೆಳೆಯುತ್ತದೆ. ಕಪಿಲ್ , ಸಚಿನ್ , ಸೆಹ್ವಾಗ್, ದೋನಿಯಂತವರು ಇಲ್ಲದಿದ್ದರೆ ಕ್ರಿಕೆಟ್‌ನ ಬೆಳವಣಿಗೆಯೂ ಇಲ್ಲ. ಧ್ಯಾನಚಂದ್ ಅವರಿಂದಲೇ ಹಾಕಿ ಬೆಳೆಯಿತು. ಆದರೆ ದೇಶ ಬೆಳೆದಂತೆ ಆಟವನ್ನು ಬೆಳೆಸುವಲ್ಲಿ ವ್ಯವಸ್ಥೆ ವಿಫಲವಾಗಿದೆ.

ಏಕೆಂದರೆ ಎಲ್ಲ ರಿಗೂ ತಮ್ಮ ಕುಟುಂಬದ ಯೋಗಕ್ಷೇಮ ಮುಖ್ಯ ವಾಗಿರುತ್ತದೆ. ಅದಕ್ಕೆ ಆಟಗಾರರೂ ಹೊರತಲ್ಲ. ದೊಡ್ಡ ನಗರಗಳಲ್ಲಿ ಆಸ್ಟ್ರೋ ಟರ್ಫ್ ಹಾಕಿದರೂ ಹೋಗಿ ಆಡುವವರು ಯಾರು. ಆಟಗಾರರು ಇರುವುದು ಸಣ್ಣ ಊರುಗಳಲ್ಲಿ. ಸೌಲಭ್ಯ ವಂಚಿತರಾದವರು ಆಟದಿಂದ ವಿಮುಖರಾದರು.

ನಮ್ಮ ಕುಟುಂಬದ ಎಲ್ಲರ ರಕ್ತದಲ್ಲಿಯೂ ಹಾಕಿ ಆಟ ಇದೆ.  ನಮ್ಮ ಅಜ್ಜ(ಧ್ಯಾನಚಂದರ ಅಪ್ಪ ಸುಬೇದಾರ್ ಸೋಮೇಶ್ವರದತ್ ಸಿಂಗ್ ಬ್ರಿಟಿಷ್ ಸೈನ್ಯದ ಹಾಕಿ ತಂಡದಲ್ಲಿದ್ದರು). ದೊಡ್ಡಪ್ಪ ಹವಾಲ್ದಾರ್ ಮೂಲ್‌ಸಿಂಗ್, ಅಪ್ಪ ಧ್ಯಾನಚಂದ್ ಮತ್ತು ಚಿಕ್ಕಪ್ಪ ರೂಪ್‌ಸಿಂಗ್ ಕೂಡ ಹಾಕಿಯನ್ನು ಕರಗತ ಮಾಡಿಕೊಂಡರು.

ಚಿಕ್ಕಪ್ಪ ಧ್ಯಾನಚಂದ್‌ಗಿಂತಲೂ ಉತ್ತಮ ಹಾಕಿಪಟುವಾಗಿದ್ದರು. ಅಪ್ಪನಿಗಿಂತ ಜಾಸ್ತಿ ಗೋಲು ಗಳಿಸಿದ ದಾಖಲೆ ಅವರದ್ದು. ಆದರೆ ಇದುವರೆಗೂ ಅವರಿಗೆ ಸಿಗಬೇಕಾದ ಮಾನ್ಯತೆ ಸಿಕ್ಕಿಲ್ಲ. ಅವರ ನಾಲ್ವರು ಪುತ್ರರಲ್ಲಿ ಒಬ್ಬ ತೀರಿಕೊಂಡಿದ್ದಾನೆ.

ಉಳಿದವರು ಉದ್ಯೋಗ, ವ್ಯಾಪಾರಗಳಲ್ಲಿ ತೊಡಗಿಕೊಂಡಿದ್ದಾರೆ. ಅದರೂ ಹಾಕಿ ಪ್ರೀತಿಯನ್ನು ಅವರ ಮಕ್ಕಳೂ ಮುಂದುವರೆಸಿದ್ದಾರೆ. ನನ್ನ ಸಹೋದರರೂ ಹಾಕಿ, ಅಥ್ಲೆಟಿಕ್ಸ್‌ನಲ್ಲಿ ಮಿಂಚಿದವರೇ.

ಐದು ಒಲಿಂಪಿಕ್ ಚಿನ್ನ, ಒಂದು ಒಲಿಂಪಿಕ್ ಕಂಚು, ವಿಶ್ವಕಪ್ ಹಾಕಿಯಲ್ಲಿ ಭಾರತಕ್ಕೆ ಒಂದು ಚಿನ್ನ ಮತ್ತೊಂದು ಬಾರಿ ಕಂಚು ಗಳಿಸಿಕೊಟ್ಟ ಹೆಮ್ಮೆ ನಮ್ಮ ಕುಟುಂಬಕ್ಕೆ ಇದೆ. ನನ್ನ ಮಗಳು ಗೌರವ್ ಸಿಂಗ್ ವಿಶ್ವವಿದ್ಯಾಲಯದ ಹಾಕಿಪಟು. ಕಮರ್ಷಿಯಲ್ ಪೈಲೆಟ್ ಕೋರ್ಸ್ ಮಾಡಿದ್ದು ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದಾರೆ.

ಒಂದು ರಾಷ್ಟ್ರೀಯ ಕ್ರೀಡೆ ಮನೆಮನೆಯಲ್ಲಿ ವಿಜೃಂಭಿಸಬೇಕು. ಎಲ್ಲರಿಗೂ ಅದರ ಮಹತ್ವ ಅರಿವಾಗಬೇಕಾದರೆ ಅದು ಸುಲಭವಾಗಿ ಲಭ್ಯವಾಗಬೇಕು. ಜೊತೆಗೆ ಪ್ರೋತ್ಸಾಹವೂ ಸಿಗಬೇಕು. ಕ್ರಿಕೆಟ್‌ನಲ್ಲಿ ಒಂದು ಗೆಲುವು ಬಂದರೂ ಸಾಕು ಕೋಟಿಗಟ್ಟಲೇ ನಗದು ಪ್ರಶಸ್ತಿಗಳ ಹೊಳೆ ಹರಿಯುತ್ತದೆ.

ಎಲ್ಲ ಆಟಗಳಲ್ಲಿಯೂ ಕ್ರೀಡಾ ಪಟುಗಳ ಕುಟುಂಬಗಳಿಗೆ ಜೀವನ ಭದ್ರತೆ ಸಿಗಬೇಕು. ಆಗಲೇ ಕ್ರೀಡೆ ಉದ್ಧಾರವಾಗುತ್ತದೆ. ಧ್ಯಾನಚಂದ್ ಅವರಿಗೆ `ಭಾರತರತ್ನ~ ಸಿಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ.

ಆದರೆ ಸಾಧನೆ ಮಾಡಿದ, ಮಾಡುತ್ತಿರುವ ಎಲ್ಲ ಕ್ರೀಡಾಪಟುಗಳಿಗೂ ಗೌರವ ಸಿಗಲೇಬೇಕು. ಆಗಲೇ ಕ್ರೀಡಾ ದಿನಾಚರಣೆಗೆ ಸಾರ್ಥ ಕತೆ ಬರುತ್ತದೆ ಎನ್ನುವ ಅವರು ಭಾರತ ಮತ್ತೊಮ್ಮೆ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲಬೇಕು ಎನ್ನುವ ಕನಸಿದೆ.   

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT