ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪನ ಹತ್ಯೆಗೆ ರೂ.5 ಕೋಟಿ ಸುಪಾರಿ!

ದೀಪಕ್ ಭಾರದ್ವಾಜ್ ವಿರುದ್ಧ ಸಂಚು: ಮಗ, ವಕೀಲ ಬಂಧನ
Last Updated 9 ಏಪ್ರಿಲ್ 2013, 19:36 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್/ಪಿಟಿಐ): ಎರಡು ವಾರಗಳ ಹಿಂದೆ ದೆಹಲಿಯಲ್ಲಿ ಹಾಡಹಗಲೇ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ, ಬಿಎಸ್‌ಪಿ ನಾಯಕ ಹಾಗೂರೂ.600 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದ ದೀಪಕ್ ಭಾರದ್ವಾಜ್ ಹತ್ಯೆಗೆ ಅವರ ಪುತ್ರನೇ ಐದು ಕೋಟಿ ರೂಪಾಯಿ ಬೃಹತ್ ಮೊತ್ತದ ಸುಪಾರಿ ನೀಡಿದ್ದ ಆಘಾತಕಾರಿ ವಿಷಯ ಪೊಲೀಸರ ವಿಚಾರಣೆಯ ವೇಳೆ ಬಹಿರಂಗವಾಗಿದೆ.

ಹತ್ಯೆಗೆ ಸಂಬಂಧಿಸಿದಂತೆ ಭಾರದ್ವಾಜ್ ಅವರ 30 ವರ್ಷದ ಕಿರಿಯ ಪುತ್ರ ನಿತೇಶ್ ಭಾರದ್ವಾಜ್ ಮತ್ತು ಅವನಿಗೆ ನೆರವು ನೀಡಿದ 51 ವರ್ಷದ ವಕೀಲ ಮಿತ್ರ ಬಲ್ಜೀತ್ ಸಿಂಗ್ ಶೆರಾವತ್ ಎಂಬುವನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಇದರಿಂದಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಒಟ್ಟು ಆರು ಜನರನ್ನು ಬಂಧಿಸಿದಂತಾಗಿದೆ. ದೆಹಲಿಯ ಪ್ರತೀಮಾನಂದ ಎಂಬ ಸ್ವಯಂ ಘೋಷಿತ ಸ್ವಾಮಿಯೊಬ್ಬನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರತೀಕಾರ-ಹೊಸ ತಿರುವು: ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಲು ಭಾನುವಾರ ನಿತೇಶ್‌ನನ್ನು ಪೊಲೀಸರು ಠಾಣೆಗೆ ಕರೆದೊಯ್ದಾಗಲೇ ಪ್ರಕರಣ ಹೊಸ ತಿರುವು ಪಡೆಯಿತು. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ದಕ್ಷಿಣ ದೆಹಲಿಯ 35 ಎಕೆರೆ ತೋಟದ ಮನೆಯನ್ನು ಪ್ರವೇಶಿಸಲು ಅವಕಾಶ ನೀಡದ ಮತ್ತು ಆಸ್ತಿಯಲ್ಲಿ ಸರಿಯಾದ ಪಾಲು ನೀಡದ ಕಾರಣ ತನ್ನ ಅಪ್ಪನ ಹತ್ಯೆಗೆ ತಾನೇ ಐದು ಕೊಟಿ ರೂಪಾಯಿ ಸುಪಾರಿ ನೀಡಿದ್ದಾಗಿ ನಿತೇಶ್ ತಪ್ಪೊಪ್ಪಿಕೊಂಡಿದ್ದಾನೆ.

ಹತ್ಯೆಗೆ ನೆರವು ನೀಡಿದ ಆರೋಪದ ಮೇಲೆ ಬಂಧಿತನಾಗಿರುವ ಬಲ್ಜೀತ್ ಸಿಂಗ್ ವಕೀಲಿ ವೃತ್ತಿಗಿಂತ ಹೆಚ್ಚಾಗಿ ರಿಯಲ್ ಎಸ್ಟೇಟ್ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದ. ಇದೇ ಕಾರಣಕ್ಕಾಗಿ ದೀಪಕ್ ಭಾರದ್ವಾಜ್ ಹಾಗೂ ತಂದೆಯ ರಿಯಲ್ ಎಸ್ಟೇಟ್ ಉದ್ಯಮ ನೋಡಿಕೊಳ್ಳುತ್ತಿದ್ದ ನಿತೇಶ್‌ಗೂ ಪರಿಚಯವಾಗಿದ್ದ. ಇದೇ ಸಲುಗೆಯಿಂದ ನಿತೇಶ್ ತನ್ನ ಅಪ್ಪ ತನಗೆ ಮಾಡಿದ್ದ ಅನ್ಯಾಯವನ್ನು ಬಲ್ಜೀತ್ ಎದುರು ಐದಾರು ತಿಂಗಳ ಹಿಂದೆ ತೋಡಿಕೊಂಡಿದ್ದ. ಅಲ್ಲದೇ ತನ್ನ ಅಪ್ಪನನ್ನೇ ಹತ್ಯೆ ಮಾಡುವ ವಿಚಾರ ಮುಂದಿಟ್ಟಿದ್ದ. 

ಮಹಿಪಾಲಪುರದಿಂದ ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದ ಬಲ್ಜೀತ್ ಸಿಂಗ್ ತನ್ನ ಸಂಪೂರ್ಣ ಚುನಾವಣಾ ವೆಚ್ಚವನ್ನು ಭರಿಸಿದರೆ ದೀಪಕ್ ಭಾರದ್ವಾಜ್ ಹತ್ಯೆ ಮಾಡುವುದಾಗಿ ಒಪ್ಪಿಕೊಂಡಿದ್ದ. ಆದರೆ, ನಂತರ ಮನಸ್ಸು ಬದಲಿಸಿದ ಬಲ್ಜೀತ್ ಐದು ಕೋಟಿ ರೂಪಾಯಿಗೆ ಹತ್ಯೆಯ ಗುತ್ತಿಗೆ ಪಡೆದು, ದೆಹಲಿ ಮೂಲದ ಸ್ವಾಮಿ ಪ್ರತೀಮಾನಂದ ಎಂಬುವನಿಗೆ ಸುಪಾರಿ ನೀಡಿದ್ದ.

ಯಾರು ಈ ಸ್ವಾಮಿ?: ಈ ಮೊದಲು ಅನೇಕ ಆಶ್ರಮಗಳಿಂದ ಹೊರದಬ್ಬಿಸಿಕೊಂಡಿದ್ದ ಸ್ವಾಮಿ ಪ್ರತೀಮಾನಂದ ತಮ್ಮದೇ ಆದ ಸ್ವಂತ ಆಶ್ರಮ ಕಟ್ಟುವ ಉದ್ದೇಶ ಹೊಂದಿದ್ದರು. ಆಶ್ರಮ ನಿರ್ಮಿಸಲು ಅಗತ್ಯವಿದ್ದ ಹಣವನ್ನು ಹೊಂದಿಸಲು ಈ ಹತ್ಯೆಯ ಸುಪಾರಿ ಪಡೆದಿದ್ದ. ಅದಕ್ಕಾಗಿ ಎರಡು ಕೋಟಿ ರೂಪಾಯಿಯನ್ನೂ ಪಡೆದಿದ್ದ. ಕಳೆದ ಐದಾರು ತಿಂಗಳಿನಿಂದ ಭಾರದ್ವಾಜ್ ಹತ್ಯೆಗೆ ಸಂಚು ರೂಪಿಸಲು ಬಾಡಿಗೆ ಹಂತಕರ ಶೋಧಕ್ಕಾಗಿ ಹರಿದ್ವಾರ, ಕರ್ನಾಲ್ ಮತ್ತು ಸೊಲಾನ್ ಎಂಬ ಸ್ಥಳಗಳಿಗೂ ಭೇಟಿ ನೀಡಿದ್ದ ಎನ್ನಲಾಗಿದೆ.

600 ಕೋಟಿ ಒಡೆಯ: ಮಾರ್ಚ್ 26ರಂದು ದಕ್ಷಿಣ ದೆಹಲಿಯ 35 ಎಕೆರೆ ತೋಟದ ಮನೆಯಲ್ಲಿ ದೀಪಕ್ ಭಾರದ್ವಾಜ್ ಅವರನ್ನು ಬಾಡಿಗೆ ಹಂತಕರಿಬ್ಬರು ಗುಂಡಿಕ್ಕಿ ಹತ್ಯೆ ಮಾಡಿದ್ದರು. 2009ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವೇಳೆರೂ. 600 ಕೋಟಿ ಆಸ್ತಿಯನ್ನು ಘೋಷಿಸಿಕೊಂಡಿದ್ದ ಭಾರದ್ವಾಜ್ ಶ್ರೀಮಂತ ಅಭ್ಯರ್ಥಿ ಎಂಬ ಹೆಗ್ಗಳಿಕೆ ಪಡೆದಿದ್ದರು.

ಕೆಲವು ವರ್ಷಗಳ ಹಿಂದೆ ಕುಟುಂಬದಲ್ಲಿ ಕಾಣಿಸಿಕೊಂಡ ಸಮಸ್ಯೆಗಳಿಂದಾಗಿ ಅವರು ತೋಟದ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಈ ತೋಟದ ಮನೆಗೆ ನಿತೇಶ್‌ಗೆ ಪ್ರವೇಶವಿರಲಿಲ್ಲ. ಆಸ್ತಿಯನ್ನು ಪಾಲು ವಿಷಯದಲ್ಲೂ ಮಗನೊಂದಿಗೆ ಮನಸ್ತಾಪವಿತ್ತು. ವಿಪರ್ಯಾಸವೆಂದರೆ ಈ ತೋಟದ ಮನೆಗೆ ನಿತೇಶ್ ಹೆಸರಿಡಲಾಗಿತ್ತು.!

ಆಗರ್ಭ ಶ್ರೀಮಂತರಾಗಿದ್ದ ಭಾರದ್ವಾಜ್ ಕೊಲೆಗೆ ಅವರ ಅಪಾರ ಆಸ್ತಿ ಅಥವಾ ಹಣಕಾಸಿನ ವಹಿವಾಟಿನ ಜೊತೆಗೆ ಮಹಿಳೆಯೊಬ್ಬಳ ಜೊತೆಗೆ ಅವರು ಹೊಂದಿದ್ದ ಸಂಬಂಧವೂ ಕಾರಣ ಎಂದು ಪೊಲೀಸರು ಈ ಮೊದಲು ಶಂಕಿಸಿದ್ದರು. ಆದರೆ, ಆ ಕಾರಣ ದೃಢಪಟ್ಟಿಲ್ಲ.

ದೇಶದ ಗಮನ ಸೆಳೆದಿದ್ದ ಭಾರದ್ವಾಜ್ ಹತ್ಯೆಗೆ ಸಂಬಂಧಿಸಿದಂತೆ ಈ ಮೊದಲೇ ದೆಹಲಿ ಪೊಲೀಸರು ನಾಲ್ವರನ್ನು ಬಂಧಿಸಿ, 30 ಲಕ್ಷ ರೂಪಾಯಿ, ಮೂರು ಕಾರುಗಳನ್ನು ವಶಪಡಿಸಿಕೊಂಡಿದ್ದರು. ಹಂತಕರು ಹತ್ಯೆಗೆ ಬಳಿಸಿದ್ದ ನಾಡ ಪಿಸ್ತೂಲ್‌ಗಳನ್ನು ರೋಹ್ಟಕ್ ಬಳಿಯ ಕಾಲುವೆಯೊಂದರಿಂದ ವಶಪಡಿಸಿಕೊಂಡಿದ್ದರು.

ಬಾಡಿಗೆ ಹಂತಕರಾದ ಸುನೀಲ್ ಮನ್ ಅಲಿಯಾಸ್ ಸೋನು ಹಾಗೂ ಪುರುಷೋತ್ತಮ್ ರಾಣಾ ಅಲಿಯಾಸ್ ಮೋನು, ಹತ್ಯೆಯ ನಂತರ ಹಂತಕರು ಪರಾರಿಯಾಗಲು ಬಳಿಸಿದ ಕಾರಿನ ಮಾಲೀಕ ರಾಕೇಶ್ ಅಲಿಯಾಸ್ ಭೋಲಾ, ಬಾಡಿಗೆ ಹಂತಕರನ್ನು ಕರೆತಂದ ಪೈಲಟ್ ರಾಕೇಶ್ ಮಲಿಕ್ ಬಂಧನದಲ್ಲಿದ್ದಾರೆ.

ಕೇವಲ 15 ದಿನಗಳ ಒಳಗೆ ಪ್ರಕರಣ ಭೇದಿಸಿರುವ ದೆಹಲಿ ಪೊಲೀಸರ ಕ್ರಮವನ್ನು ಡಿಸಿಪಿ ಛಾಯಾ ಶರ್ಮಾ ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT