ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪನೆಂಬ ಅನುಭೂತಿ...

Last Updated 15 ಜೂನ್ 2012, 19:30 IST
ಅಕ್ಷರ ಗಾತ್ರ

ಅಪ್ಪನಿಗೆ ಸಾಕು ಅಪ್ಪುಗೆ

`ನನಗೆ ನನ್ನಪ್ಪ ಗದರಿಸಿದ್ದೇ ನೆನಪಿಲ್ಲ. ತೆರೆ ಮೇಲೆ ಖಳನಾಯಕ. ಆದರೆ ಮನೆಯಲ್ಲಿ ಮಾತ್ರ ಅಷ್ಟೇ ಮೃದು ಮನಸ್ಸಿನ ವ್ಯಕ್ತಿ. ಮಕ್ಕಳೆಂದರೆ ಜೀವ ಅವರಿಗೆ. ಶೂಟಿಂಗ್ ಮುಗಿಸಿಕೊಂಡು ಬರುವಾಗ ಹೋಟೆಲ್‌ನಿಂದ ಊಟ ಕಟ್ಟಿಸಿಕೊಂಡು ಬರುತ್ತಿದ್ದರು. ನಾನು ಮಲಗಿದ್ದರೂ ಎಬ್ಬಿಸಿ ತುತ್ತು ಉಣಿಸುತ್ತಿದ್ದರು.

ನಾನೊಬ್ಬ ಕ್ರಿಕೆಟ್ ಆಟಗಾರನಾಗಬೇಕೆಂಬ ಆಸೆ ಅವರಿಗಿತ್ತು. ಆದರೆ ನನಗೆ ಚಿತ್ರರಂಗದಲ್ಲಿ ಅವರ ಹೆಸರು ಉಳಿಸಬೇಕೆಂಬ ಆಸೆಯಿಂದ ನಾನು ಸಿನಿಮಾಗೆ ಬಂದೆ. ನನ್ನಪ್ಪ ನನಗೆ ಒಳಿತು, ಕೆಡುಕು ಎರಡನ್ನೂ ತೋರಿಸಿಕೊಟ್ಟರು. ತೆರೆಯ ಮೇಲೆ ಮನುಷ್ಯನ ಕೆಟ್ಟತನದ ಬಗ್ಗೆ ತಿಳಿಸಿದರು. ಆದರೆ ಮನೆಯಲ್ಲಿ ಒಬ್ಬ ಶಾಂತ ಸ್ವಭಾವದ ವ್ಯಕ್ತಿಯಾಗಿ ಮನುಷ್ಯರನ್ನು ಪ್ರೀತಿಸುವುದನ್ನು, ಗೌರವಿಸುವುದನ್ನು ಹೇಳಿಕೊಟ್ಟರು. ಎಲ್ಲ ದಿನವೂ ತಂದೆತಾಯಿಯನ್ನು ನೆನಪಿಸಿಕೊಳ್ಳಬೇಕು. ಅಪ್ಪಂದಿರ ದಿನದಂದು ಬೆಲೆಬಾಳುವ ಉಡುಗೊರೆ ಕೊಡಬೇಕೆಂದೇನಿಲ್ಲ. ಅಪ್ಪನನ್ನು ಅಪ್ಪಿಕೊಂಡು `ನಾನು ನಿನ್ನ ಜತೆಗಿದ್ದೇನೆ~ ಎಂಬ ಭರವಸೆ ನೀಡಬೇಕು. ಆ ಜೀವ ಬೇಡುವುದೂ ಅಷ್ಟನ್ನೇ.

-ತರುಣ್ ಸುಧೀರ್
ಚಿತ್ರನಟ ದಿ. ಸುಧೀರ್ ಪುತ್ರ

ಕನಸು ಕಟ್ಟಿಕೊಟ್ಟ ಅಪ್ಪ

`ನನ್ನಪ್ಪನೇ ನನಗೆ ಮಾದರಿ. ಅವರು ಸೀಗೆಪುಡಿ ಬ್ಯುಸಿನೆಸ್ ಮಾಡಿ ನಮಗೆ ಬದುಕು ನೀಡಿದರು. ಇವತ್ತು ನಾನು ಏನೇ ಸಾಧನೆ ಮಾಡಿದರೂ ಅದು ನನ್ನಪ್ಪನ ಆಶೀರ್ವಾದದಿಂದ, ಅವರು ಪಟ್ಟ ಶ್ರಮದಿಂದ.

ನೀನು ಡಾಕ್ಟರ್ ಆಗು ಎಂಜಿನಿಯರ್ ಆಗು ಎಂದು ಯಾವತ್ತೂ ನನ್ನಪ್ಪ ನನಗೆ ಒತ್ತಾಯ ಮಾಡಲಿಲ್ಲ. ನಾನು ಕ್ರಿಕೆಟ್‌ನಲ್ಲಿಯೇ ಬೆಳೆದೆ. ಅಪ್ಪ ಅದನ್ನು ನೋಡಿಯೇ ಸಂತಸಪಟ್ಟರು.
 
ಅಮ್ಮನಿಗಿಂತ ಅಪ್ಪನೊಂದಿಗೆ ನನಗೆ ಸಲುಗೆ ಜಾಸ್ತಿ. ನನ್ನ ಜತೆ ಕ್ರಿಕೆಟ್ ಆಟ ಆಡುತ್ತಿದ್ದರು. ನಾನೂ ಅವರನ್ನು ಕೀಟಲೆ ಮಾಡುತ್ತಿದ್ದೆ. ಅವರ ಜತೆ ಎಷ್ಟೇ ಕಾಲ ಕಳೆದರು ಕಡಿಮೆ ಅನಿಸುತ್ತದೆ ನನಗೆ. ಕನಸು ಕಾಣುವುದನ್ನು ಹೇಳಿಕೊಟ್ಟ ನನ್ನಪ್ಪ ನಿಜಕ್ಕೂ ಗ್ರೇಟ್. ಅಪ್ಪನನ್ನು ನನ್ನ ಜೀವನದ ಪ್ರತಿ ಕ್ಷಣದಲ್ಲೂ ನೆನೆಯುತ್ತೇನೆ. ಅಮ್ಮ ಜೀವ ಕೊಡುತ್ತಾಳೆ ಆದರೆ ಅಪ್ಪ ಬದುಕುವ ದಾರಿ ಹೇಳಿಕೊಡುತ್ತಾನೆ~.
-ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್

ಏರೋಪ್ಲೇನ್ ಕೇಕ್ ನೆನಪಿನಲ್ಲಿ

`ಅಪ್ಪ ನನ್ನ ಮೊದಲ ಹೀರೊ. ತಮ್ಮ ಕಲಾಪ್ರತಿಭೆಯನ್ನ್ಲ್ಲೆಲ ನನಗೆ ಧಾರೆ ಎರೆದರು. ಬಾಲ್ಯದಲ್ಲೇ ಮಾತಿನೊಂದಿಗೆ ನಟನೆ, ಹಾಡು ಕಲಿಸಿಕೊಟ್ಟರು. ಇಂದಿಗೂ ಚಿತ್ರೋದ್ಯಮ ನನ್ನನ್ನು `ಶ್ರೀನಿವಾಸಮೂರ್ತಿಗಳ ಮಗ~ ಎಂದೇ ಗುರುತಿಸುತ್ತದೆ. ಹಾಗೆ ಕರೆಯಿಸಿಕೊಳ್ಳುವುದಕ್ಕೆ ಹೆಮ್ಮೆಯೂ ಇದೆ.

ಅಪ್ಪ ಎಂದಾಕ್ಷಣ ನೆನಪಾಗುವುದು ಚಾಕೊಲೇಟ್. ಆಫ್ರಿಕಾದಲ್ಲಿ ಚಿತ್ರೀಕರಣ ಮುಗಿಸಿ ಬರುವಾಗ ದೊಡ್ಡ ಸೂಟ್‌ಕೇಸ್ ಹೊತ್ತು ತಂದಿದ್ದರು. ಸಾಕಷ್ಟು ಬಟ್ಟೆಬರೆ ತಂದಿರಬೇಕು ಎಂದು ಕಾದು ಕುಳಿತಿದ್ದ ನಮಗೆ ಅಚ್ಚರಿ ಮೂಡಿಸಿದ್ದು ಅದರ ತುಂಬ ಇದ್ದ ಚಾಕೊಲೇಟ್‌ಗಳು. ಅಪ್ಪನ ಕಬೋರ್ಡ್‌ನಲ್ಲಿ ಚಾಕೊಲೇೀಟ್ ಇಲ್ಲದ ದಿನವಿಲ್ಲ. ನನ್ನ ಏಳನೇ ವರ್ಷದ ಹುಟ್ಟುಹಬ್ಬಕ್ಕೆ ಏರೋಪ್ಲೇನ್ ಕೇಕ್ ತರಿಸಿದ್ದರು. ಅಂತಹ ಡಿಸೈನ್‌ನ, ರುಚಿಯ ಕೇಕ್ ನಾನು ಈವರೆಗೆ ತಿಂದಿದ್ದಿಲ್ಲ. ಈಗ ನನ್ನ ಮಗನಿಗೂ ಏಳು ವರ್ಷ.

ಅವನಿಗೂ ಅಂತಹುದೇ ಕೇಕ್ ತರಿಸಬೇಕೆಂಬ ಆಸೆ ಪೂರೈಸಲಾಗಲಿಲ್ಲ ನನಗೆ.
ಆಗಿನ ಕಾಲದಲ್ಲಿ ಮಕ್ಕಳೊಂದಿಗೆ ಕಲೆಯಲು ಸಮಯ ನಿಗದಿಪಡಿಸಿಕೊಳ್ಳುವ ಪರಿಪಾಠವಿರಲಿಲ್ಲ. ಹಾಗಾಗಿ ನಾನು ಅಮ್ಮನಿಗೆ ಅಂಟಿ ಬೆಳೆದಿದ್ದೇ ಹೆಚ್ಚು. ಈಗಿನ ತಂದೆಯರು ಮಕ್ಕಳೊಂದಿಗೆ ಕಳೆಯುವ ಸಮಯಕ್ಕೆಂದೇ ಪ್ರತ್ಯೇಕ ವೇಳಾಪಟ್ಟಿ ತಯಾರಿಸಿ ಅದರಂತೆ ನಡೆದುಕೊಳ್ಳುತ್ತಾರೆ. ಪ್ರತಿದಿನವೂ ಹೆತ್ತವರ ದಿನವೇ. ಕೆಲಸಕ್ಕೆ ಹೊರಗೆ ಹೋಗುವ ಮೊದಲು ತಂದೆ ತಾಯಿಯರ ಆಶೀರ್ವಾದ ಪಡೆದು ಹೋದರೆ ಅದಕ್ಕಿಂತ ದೊಡ್ಡ ಅದೃಷ್ಟ  ಬೇರಿಲ್ಲ.
ನಟ ನವೀನ್‌ಕೃಷ್ಣ
ಹಿರಿಯ ನಟ ಶ್ರೀನಿವಾಸಮೂರ್ತಿ ಮಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT