ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಪ್ಪಿಕೋ...' ಎಂಬ ಮೂರು ದಶಕಗಳ ರೂಪಕ

Last Updated 4 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

`ಅಪ್ಪಿಕೋ' ಚಳವಳಿಗೆ ಮೂವತ್ತಾಯಿತು. ಶಿರಸಿಯ ಸಾಲ್ಕಣಿ ಹಳ್ಳಿಯ ಬೆರಳೆಣಿಕೆ ಯುವಕರು ಅಲ್ಲಿನ ಕುದುರೆಗೋಡು ಕಾಡಿನ ಮರಗಳನ್ನು ಉಳಿಸಲು ಆ ಮರಗಳನ್ನೇ ತಬ್ಬಿ ನಿಂತ ಕ್ಷಣ ಮೂವತ್ತು ಮಳೆಗಾಲಗಳನ್ನು ಕಂಡಿದೆ.

ಮರಗಳನ್ನು ಉಳಿಸಬೇಕಾಗಿದ್ದ ಅರಣ್ಯ ಇಲಾಖೆ, ಮರ ಕಡಿಯುವ ಕಾಯಕದಲ್ಲಿ ತೊಡಗಿದ್ದ ವೈರುಧ್ಯ ಕಣ್ಣಿಗೆ ಜಾಹೀರಾದ ಗಳಿಗೆ ಅದು. ನಮ್ಮ ಪರಿಸರ ಪ್ರಜ್ಞೆ ಸ್ಥೂಲವಾಗಿ ಇಷ್ಟೇ: ಉಳಿಸಬೇಕಾದವರೇ ನಾಶಮಾಡುವ ಅವಜ್ಞೆಯ ಬಗ್ಗೆ ಅರಿವು ಮೂಡಿಸುವುದು. ಶಿರಸಿಯಲ್ಲಿ `ನಾವು' ಮತ್ತು `ಅವರು' ಎಂಬ ಸರಳ ಸಮೀಕರಣದಲ್ಲಿ ಅದು ಅನಾವರಣಗೊಂಡಿತ್ತು. ಈ ಮೂವತ್ತು ವರ್ಷಗಳಲ್ಲಿ ಮರ ಕಡಿಯುವುದನ್ನು ನಿಲ್ಲಿಸುವ ಸರಳ ಕ್ರಿಯೆಯಿಂದ, ನಾವು ಹೆಚ್ಚು ಸಂಕೀರ್ಣವಾದ ಪರಿಸರದ ಅರಿವಿನ ಕಡೆ ಬಂದಿದ್ದೇವೆ. 

ಕಲಿಕೆಯ ರೀತಿಯೇ ಹೀಗೆ; ಸರಳದಿಂದ ಸಂಕೀರ್ಣಕ್ಕೆ ಹೋಗುವುದು. ಒಂದರ್ಥದಲ್ಲಿ ಎಲ್ಲ ಅರಿವೂ ಮಾಡುವ ಕೆಲಸ ಇದೇ. ಅದು ಸ್ಫೋಟಗೊಂಡಾಗ ನಮ್ಮ ಕ್ರಿಯೆಗಳ ವೈರುಧ್ಯವನ್ನು ತೋರಿಸಿಕೊಡುತ್ತದೆ. ಒಂದು ಆಘಾತವನ್ನು ಕೊಡುತ್ತದೆ.

ಅಪ್ಪಿಕೋ ಚಳವಳಿ ನೀಡಿದ್ದು ಇಂಥ ಬೌದ್ಧಿಕ ಆಘಾತ. ನಮ್ಮ ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲೇ ಅಪ್ಪಿಕೋ ಕೂಡಾ ಹುಟ್ಟಿದ್ದು. ಎಲ್ಲೋ ಯಾರೋ ಮಾಡಿದ ಹೋರಾಟದ ಮಾದರಿಯ ಮೂಲಕ ನಮ್ಮ ಸಮಸ್ಯೆಯ ಸಾರ್ವತ್ರಿಕತೆಯನ್ನು ಅರ್ಥ ಮಾಡಿಕೊಂಡು, ಹೋರಾಟದ ಸಾಗರದ ಸಾವಿರಾರು ನದಿಗಳನ್ನು ಸೃಷ್ಟಿಸುವ ಕೆಲಸ ಅದು. ರಾಜಸ್ತಾನದ ನೆನಪನ್ನು ಮರುಸೃಷ್ಟಿಸಿ ಚಂಡೀಪ್ರಸಾದ್ ಭಟ್ ಮತ್ತು ಸುಂದರಲಾಲ್ ಬಹುಗುಣ ಹಿಮಾಲಯದ ತಪ್ಪಲಲ್ಲಿ ಉದ್ಘಾಟಿಸಿದ ಪ್ರತಿರೋಧ ನಮ್ಮಲ್ಲೂ ತನ್ನ ನೆಲದ ಮಾದರಿಯ ಮೂಲಕ ನೆಲೆಗೊಂಡಿತು.

ಎಂಬತ್ತರ ದಶಕ ಹಲವು ಜನಪರ ಚಳವಳಿಗಳನ್ನು ಸೃಷ್ಟಿಸಿ ನಮ್ಮ ಅರಿವನ್ನು ಸಾಂದ್ರಗೊಳಿಸಿದ ಕಾಲ. ಅಪ್ಪಿಕೋ ಚಳವಳಿಯನ್ನೂ ಇದರ ಭಾಗವಾಗಿಯೇ ನೋಡಬೇಕು. 1983ರ ಬಳಿಕದ ಮೈಲಿಗಲ್ಲುಗಳನ್ನು ಗಮನಿಸಿ:  88-89ರ ಪಶ್ಚಿಮ ಘಟ್ಟ ಉಳಿಸಿ ಅಭಿಯಾನ ದೊಡ್ಡಮಟ್ಟದಲ್ಲಿ ನಮ್ಮ ಕಾಡುಗಳ ಬಗ್ಗೆ ಸ್ವ ಅರಿವನ್ನು ಹುಟ್ಟಿಸಿತು. 89ರಲ್ಲಿ ಸರ್ಕಾರ ಸಹಜ ಅರಣ್ಯ ಪ್ರದೇಶದಲ್ಲಿ ಮರಕಡಿಯುವಿಕೆಯನ್ನು ನಿಲ್ಲಿಸಿತು. ಬಳಿಕ, ಬಯಲುಸೀಮೆಯ ತುಂಗಾ ತಟದಲ್ಲಿ ಅರಳಿದ ಹೋರಾಟದಿಂದ ಬಿರ್ಲಾ ಕಂಪೆನಿ ಮುಚ್ಚಿತು. ಕಡಲ ತಡಿಯ ಕೊಜೆಂಟ್ರಿಕ್ಸ್ ಕಾಲೂರಲಾರದೇ ಎದ್ದು ನಡೆಯಿತು.

ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಆದಂತೆ, ದೇಶದ ಯಾವುದೋ ಭಾಗದಲ್ಲಿ ನಡೆದ ಪರಿಸರ ನಾಶ ನಮ್ಮನ್ನೂ ತಟ್ಟಿತು. ನರ್ಮದಾ ಬಚಾವೋದಂತಹ ಜನಾಂದೋಲನದ ಮೂಲಕ ನಮಗೆ ನೆಲ-ಜಲದ ಸಂಕಟ ಸ್ಥಿತಿ ಮಾತ್ರವಲ್ಲ, ಅಸಹಾಯಕರ ಸಂಕಷ್ಟವೂ ಗೊತ್ತಾಯಿತು. ಪಿ.ಸಾಯಿನಾಥ್ ಅಂಥವರು ನಮ್ಮ ರೈತರ ದುಗುಡಗಳಿಗೆ ದನಿಯಾದರು. ಕಾಡಿನ ಮರಗಳ ರಕ್ಷಣೆ ಒಟ್ಟು ಪರಿಸರದ ಒಂದು ಭಾಗ ಮಾತ್ರ. ಹದಗೆಟ್ಟ ನೆಲ, ಕೊಳಚೆಯಾದ ಜಲನದಿಗಳು, ಸಂಪನ್ಮೂಲದ ವಿಕೃತ ಹಂಚಿಕೆ, ಪರಿಸರ ಪ್ರಜ್ಞೆಯ ಮುಖ್ಯ ಭೂಮಿಕೆಯಾಯಿತು. ಹಿಟ್ಟು ಬೇಯಿಸಲು ಸೌದೆಗೆ ಪರದಾಡುವ ಬಡ ಮಹಿಳೆಯ ಸಮಸ್ಯೆಗೆ, ಬಿರ್ಲಾಗೆ ಮೂರು ಕಾಸಿಗೆ ಕಾಡು ದೇಣಿಗೆ ನೀಡಿದ್ದೂ ಕಾರಣ ಎಂದು ಗೊತ್ತಾಗಿದ್ದು ಈ ಕಾಲದ ಫಲಶ್ರುತಿ. ಮಾಧ್ಯಮ ಅತ್ಯಂತ ಕ್ರಿಯಾಶೀಲವಾಗಿ, ಸತತವಾಗಿ ಸ್ಪಂದಿಸಿದ್ದು ಪ್ರಾಯಶಃ ಪರಿಸರ ವಿವಾದಗಳಿಗೆ ಮಾತ್ರ.

ಒಂದು ಕ್ಷಣ ಉಸಿರೆಳೆದುಕೊಂಡು ಕಳೆದ ಇಪ್ಪತ್ತು ವರ್ಷಗಳಲ್ಲಿ ಏನಾಯಿತು ಎಂದು ನೋಡಿದರೆ, ಪರಿಸರ ಪ್ರಜ್ಞೆ  ಮನೆ ಮಾತಾ ಯಿತು. ಪಠ್ಯದೊಳಕ್ಕೂ ಕಾಲಿಟ್ಟು ಮಕ್ಕಳ ಅರಿವು ಹೆಚ್ಚಿಸಿತು. ಪರಿಸರ ನಾಶದ ಯಾವುದೇ ಸಂದರ್ಭ ಮೊಳಕೆ ಒಡೆದಾಗೆಲ್ಲ ಒಂದು ಪ್ರತಿರೋಧ ಹುಟ್ಟಿಕೊಂಡಿತು. ನಿಜ.

ಆದರೆ  ಜಾಗತೀಕರಣದ ಚಮಕ್ಕಿನ ಸೆರಗು ಬೀಸಿದ ಪರಿಗೆ ನಮ್ಮ ಎಲ್ಲಾ ಜನಪರ ನೆಲೆಗಳೂ ಮೂಲೆಗುಂಪಾಗಿ ಹೋದವು ನೋಡಿ... ನಮ್ಮಳಗೇ ಸುಪ್ತವಾಗಿದ್ದ ಬಯಕೆಗಳೆಲ್ಲಾ ಹೇಗೆ ಸ್ಫೋಟಗೊಂಡವು? ನಮ್ಮದೇ ಸರ್ಕಾರಗಳು ಅಭಿವೃದ್ಧಿ ಮತ್ತು ಪರಿಸರ ರಕ್ಷಣೆ ನಡುವೆ  ದ್ವಂದ್ವವನ್ನು ಸೃಷ್ಟಿಸಿ ಗೋಜಲುಗೊಳಿಸಿದವು.

ಕೈಗಾ ನಿಲ್ಲಲಿಲ್ಲ. ನಾಗಾರ್ಜುನ ತಲೆಯೆತ್ತಿತು. ತದಡಿ ಉಳಿಯಿತು. ಆದರೆ, ಹೊಸ ಬಾಧೆ ಮತ್ತೆ ದಕ್ಷಿಣ ಕನ್ನಡದಲ್ಲಿ ತಲೆಯೆತ್ತಿದೆ. ಅದೆಲ್ಲಕ್ಕಿಂತ ದಾರುಣವಾಗಿ ಬಳ್ಳಾರಿಯ ಸೂರೆಯಾಯಿತು. ಸಮೃದ್ಧಿಯ ಹೆದ್ದಾರಿಗೆ ಸಾವಿರಾರು ಮರಗಳು ರಾಜ್ಯದಾದ್ಯಂತ ನಾಶವಾದವು. ಆದಿವಾಸಿ ಸಮುದಾಯಗಳ ಸಮಸ್ತ ನೆಲಜಲವನ್ನು ಸೂರೆಗೈಯ್ಯಲು ಸರ್ಕಾರ ತಾನೇ ಮುಂದೆ ನಿಂತು ಸಹಾಯ ಮಾಡಿದೆ.

ಕಳೆದ ಎರಡು ದಶಕದ ನಮ್ಮ ಎಲ್ಲಾ ಪ್ರಭುತ್ವಗಳು (ಪಕ್ಷಾತೀತವಾಗಿ) ಜಾಗತೀಕರಣವನ್ನು ಪೈಪೋಟಿಯಲ್ಲಿ ಓಲೈಸಿವೆ. 
ಎಂಬತ್ತರ ದಶಕದಲ್ಲಿ ನಾವೆಲ್ಲಾ ಬಿಸಿ ರಕ್ತದ ತರುಣರು, ಬದಲಾವಣೆ ಮತ್ತು ಹೊಸತನ್ನು ಆಶಿಸಿದ ಹಲವು ಪ್ರಕರಣಗಳನ್ನು ಎದೆಗಪ್ಪಿಕೊಂಡಿದ್ದೆವು. ರೈತ ಚಳವಳಿ, ದಲಿತ ಚಳವಳಿ, ಮಹಿಳಾ ಚಳವಳಿ ಹಾಗೂ ಪರಿಸರ ಚಳವಳಿ ತಕ್ಷಣಕ್ಕೆ ನೆನಪಾಗುವ ತೊರೆಗಳು. ಇವುಗಳಲ್ಲಿ ಎಲ್ಲವನ್ನೂ ಒಳಗೊಳ್ಳುವ ಶಕ್ತಿ ಇದ್ದದ್ದು ಪರಿಸರ ಚಳವಳಿಗೆ. ಅದು ಏಕಕಾಲಕ್ಕೆ, ಸಂಪನ್ಮೂಲದ ಸಮಾನ ಬಳಕೆಯನ್ನೂ, ಭವಿಷ್ಯದ ಬಿಕ್ಕಟ್ಟನ್ನೂ ಸಾದರಪಡಿಸಿತು. ಎಲ್ಲರ ಬದುಕಿನ ಮೇಲೂ ಪರಿಣಾಮ ಬೀರಬಲ್ಲ ಅಪಾಯದ ಬಗ್ಗೆ ಮುನ್ನೆಚ್ಚರಿಕೆ ನೀಡುತ್ತಾ, ನಮ್ಮ ಬದುಕಿನ ಶೈಲಿ ಮತ್ತು ಬಳಕೆಯ ವಿಧಾನವನ್ನು ತಿದ್ದಿಕೊಳ್ಳಬೇಕಾದ ಅನಿವಾರ್ಯದ ಬಗ್ಗೆ ಹೇಳಿತು.

ಆದರೆ ಪ್ರಾಯಶಃ ಜಾಗತೀಕರಣದ ಶಕ್ತಿಯನ್ನು ಕೀಳಂದಾಜು ಮಾಡಿದ್ದೆವು ಅನ್ನಿಸುತ್ತೆ. ಜಾಗತೀಕರಣ ಸಶಕ್ತವಾಗಿ ಸೆಳೆದದ್ದು ಬಲಪಂಥೀಯ ಮತ್ತು ಧಾರ್ಮಿಕ ನೆಲೆಗಳನ್ನು ಮತ್ತು ಕೊಂಚ ಮುಜುಗರ ಉಂಟುಮಾಡಿದರೂ- ದಲಿತ ಆಶಯಗಳನ್ನು.
ಆರಂಭದಲ್ಲಿ ಬಲಪಂಥೀಯ ಅದರಲ್ಲೂ ಧಾರ್ಮಿಕ ನೆಲೆಗಳು ಪ್ರತಿರೋಧ ಒಡ್ಡಿದಂತೆ ಕಂಡರೂ, ಕಳೆದೊಂದು ದಶಕದಲ್ಲಿ ಈ ನೆಲೆಗಳು ಸತತವಾಗಿ ಜಾಗತೀಕರಣದ ಫಲವಾದ ಸಂಪತ್ತು, ವಸ್ತು ವಿಶೇಷಗಳು ಮತ್ತು ಅಧಿಕಾರದ ಸಾನ್ನಿಧ್ಯದ ಸುಖವನ್ನು ಪಡೆದು ಜಡವಾಗಿವೆ. ಈ ಒಪ್ಪಂದ ದುಗುಡ ಹುಟ್ಟಿಸುವಂಥಾದ್ದು. ಇನ್ನೊಂದೆಡೆ, ದಲಿತ ಆಶಯಗಳನ್ನು ನಮ್ಮ ಪರಂಪರಾಗತ ಸಾಮಾಜಿಕ ನಾಯಕತ್ವ ಎಂದೂ ಪರಿಗಣಿಸಲೇ ಇಲ್ಲ. ಕಾಯವೇ ಕೈಲಾಸವಾಗಿರುವ ದಲಿತನಿಗೆ ಜಾಗತೀಕರಣ ಕೊಡುವ ಅನಾಮಿಕತೆ ಬಲುದೊಡ್ಡ ಬಿಡುಗಡೆಯ ದಾರಿ. ನಮ್ಮ ಗ್ರಾಮೀಣ ಬದುಕಿನ ಆಧಾರವಾದ ಕೃಷಿ ಕುಸಿಯುತ್ತಿರುವುದಕ್ಕೂ ದಲಿತರ ಮೇಲ್ಮುಖ ಚಲನೆಗೂ ಸಂಬಂಧವಿದೆ. `ಕೊನೆಯ ಎತ್ತುಗಳು ಸತ್ತಾಗ ನಮಗೆ ಬಿಡುಗಡೆ' ಎಂದು ದಲಿತ ನಾಯಕ ಒಬ್ಬ ಹೇಳುವ ಸ್ಥಿತಿ, ನಾವು ಅವರ ಬಗ್ಗೆ ತೋರಿದ ಅವಜ್ಞೆಯ ಫಲ.

ಯಾಕೆ ಹೀಗಾಯಿತು?: ಜಾಗತೀಕರಣ ಕೇವಲ ಲಾಭಬಡುಕತನ, ಆಮಿಷ, ವಶೀಕರಣದ ಮೂಲಕ ಯಶಸ್ವಿಯಾಯಿತು ಎಂಬ ಸರಳೀಕರಣವನ್ನು ನಾವು ಬಿಡಬೇಕು. ಒಂದು ಮಟ್ಟದ ಸಾಮುದಾಯಿಕ ಒಪ್ಪಿಗೆ ಇದೆ ಅನ್ನುವುದನ್ನು ನಾವೆಲ್ಲ ಬೇಕಂತಲೇ ಒಪ್ಪಿಕೊಳ್ಳದೇ ಆತ್ಮವಂಚನೆ ಮಾಡಿಕೊಂಡಿದ್ದೆವು ಅನ್ನಿಸುತ್ತೆ. ಮಹಿಳೆಯರಿಗೆ ಮತ್ತು ದಲಿತರಿಗೆ ಇದು ನೀಡಿದ ಬಿಡುಗಡೆಯನ್ನು ಗಮನಿಸಿದ್ದರೆ, ನಮ್ಮ ಹೋರಾಟದ ದಿಕ್ಕು ದೆಸೆ, ತಂತ್ರೋಪಾಯಗಳು ಬೇರೆಯೇ ಆಗುತ್ತಿದ್ದವೇನೋ.

ಎಲ್ಲಾ ಚಳವಳಿಗಳಿಗೂ ಒಂದು ದಣಿವು ಆವರಿಸುತ್ತೆ. ಹೊಸತು ಕಂಡಾಗ ಇರುವ ಬೆರಗು, ಉತ್ಸಾಹ ಅದಕ್ಕೊಂದು ಸಾತತ್ಯ ನೀಡುವಾಗ ಇರುವುದಿಲ್ಲ. ಪರಿಚಿತವಾದಷ್ಟೂ ಉದಾಸೀನ, ನಿಷ್ಕ್ರಿಯತೆ ಆವರಿಸುತ್ತದೆ. ಮುಖ್ಯವಾಗಿ ಎಲ್ಲಾ ಚಳವಳಿಗಳಲ್ಲಾಗುವ ಸಮಸ್ಯೆ ಎಂದರೆ, ಇದೊಂದು ವಿಶಿಷ್ಟ ಗುಂಪಿನ ಪ್ರಣಾಳಿಕೆ ಎಂಬಂತೆ ಸಮಾಜಕ್ಕೆ ತೋರುವುದು. ಒಂದು ಸಮಗ್ರ ಸವಾಲನ್ನು ತಾನು ಧಾರಣ ಮಾಡಿದ್ದೇನೆ ಎಂದು ತೋರಿಸಿಕೊಡುವುದಕ್ಕೆ ವಿಫಲಗೊಂಡ ಎಲ್ಲಾ ಚಳವಳಿಗಳು, ಹಿತಾಸಕ್ತ ಗುಂಪುಗಳ ಹರಿವಾಣದ ಹೂವುಗಳಾಗಿ ಬಿಡುತ್ತವೆ.
ಇದು ಢಾಳಾಗಿ ಕಾಣಿಸಿದ್ದು, ಕಳೆದ ವರ್ಷ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಪಶ್ಚಿಮ ಘಟ್ಟ ಸಾದರಗೊಂಡಾಗ. ಪರಿಸರ ಪ್ರೇಮಿಗಳೆಲ್ಲಾ ಅದನ್ನು ಸ್ವಾಗತಿಸಿದ್ದರು. ಆದರೆ ಒಬ್ಬನೇ ಒಬ್ಬ ಜನಪ್ರತಿನಿಧಿ ಅದನ್ನು ಒಪ್ಪಲಿಲ್ಲ. ಅಷ್ಟೇಕೆ, ಈ ಭಾಗದ ಸಕಲ ಪ್ರತಿನಿಧಿಗಳು ಅದರ ವಿರುದ್ಧ ಒಂದಾಗಿದ್ದರು. `ಹೆರಿಟೇಜ್ ತಾಣ' ಎಂದರೆ ಏನೆಂಬುದನ್ನೇ ವಿವರಿಸಲು ನಮಗೆ ಸಾಧ್ಯವಾಗಲಿಲ್ಲ. ಒಂದು ದೊಡ್ಡ ಆತಂಕದ ಪೆಡಂಭೂತವನ್ನು ಜನಪ್ರತಿನಿಧಿಗಳು ಸಮುದಾಯದ ಎದುರು ನಿಲ್ಲಿಸಿ ಪ್ರತಿರೋಧಕ್ಕೆ ಸಮುದಾಯದ ಒಪ್ಪಿಗೆ ಪಡೆದರು ಎಂದೇ ಅನ್ನಿಸುತ್ತದೆ.

ಇತ್ತೀಚೆಗೆ ಬಂದ ಕಸ್ತೂರಿ ರಂಗನ್ ವರದಿ ಇದರ ಮುಂದುವರಿಕೆ ಅಷ್ಟೇ. ಗಾಡ್ಗಿಳ್ ವರದಿಗೆ ಪ್ರತಿಯಾಗಿ ಕಸ್ತೂರಿ ರಂಗನ್, ಅಲ್ಲಿಷ್ಟು, ಇಲ್ಲಿಷ್ಟು ಉಳಿಸಿ ಉಳಿದೆಡೆ `ಅಭಿವೃದ್ಧಿ ಕಾಮಗಾರಿ ನಡೆಸಬಹುದು' ಎಂದು ಸಾರಿದ ಬಗೆ ಗಮನಿಸಬೇಕು. ಪ್ರಭುತ್ವ ಜಾಗತೀಕರಣದ ಬಂಡವಾಳ ಹೂಡಿಕೆದಾರರಿಗೆ ಮಂಚ ಹಾಸುವ ಕೆಲಸ ಮಾಡುತ್ತಿದೆ. ಇದಕ್ಕೆ ಔಪಚಾರಿಕ ವರದಿ ಬೇಕು. ಅದು ವೈಜ್ಞಾನಿಕವಾಗಿರಬೇಕು! ಇದನ್ನು ಕಸ್ತೂರಿ ರಂಗನ್ ಮಾಡಿದ್ದಾರೆ ಅಷ್ಟೇ.

ಸಂಪನ್ಮೂಲದ ನ್ಯಾಯಯುತ ಸಮಾನ ಹಂಚಿಕೆಯನ್ನು ಜಾಗತೀಕರಣ ಒಪ್ಪುವುದೇ ಇಲ್ಲ. ಸಂಪನ್ಮೂಲದ ಸೂರೆಯ ಮೂಲಕ ಅದನ್ನು ಮಾರುವ ಗ್ರಾಹಕ ವರ್ಗದ ವಿಸ್ತರಣೆ ಮಾತ್ರ ಅದರ ಧ್ಯಾನ. ಈ ವಿಸ್ತರಣೆಯನ್ನು ಆಮಿಷಗಳ ಮೂಲಕ, ಜಾಹೀರಾತಿನ ಸುಳ್ಳುಗಳ ಮೂಲಕ ಮಾಡುತ್ತದೆ. ನಮ್ಮ ಪ್ರಭುತ್ವಗಳೂ ಕಳೆದ ಎರಡು ದಶಕಗಳಲ್ಲಿ, ಜನಪರ ಯೋಜನೆಗಳ ಬಗ್ಗೆ ಮಾಡಿದ್ದೂ ಈ  ನಂಬಿಸುವ ಕೆಲಸ ಅಷ್ಟೇ. ಇದನ್ನು ಸಮರ್ಥವಾಗಿ ಬಯಲಿಗೆಳೆಯಲು ಸಾಧ್ಯವಾಗಲಿಲ್ಲ ಎಂಬುದನ್ನು ಪ್ರಾಂಜಲವಾಗಿ ಒಪ್ಪಿಕೊಳ್ಳಬೇಕು.

ಇದೇ ವೇಳೆ, ನಮ್ಮ ಪರಿಸರ ಪ್ರಜ್ಞೆ, ಕಾಡು ಮತ್ತು ಪ್ರಾಣಿಗಳನ್ನು ಉಳಿಸುವ ಉತ್ಸಾಹಿಗಳ ಪಾಲಾಗಿದ್ದನ್ನು ಮರೆಯಬಾರದು. ಪರಿಸರ ವಿಚಾರದ ಮಾಹಿತಿ ಮಹಾಪೂರ ಹೇಗೆ ನಮ್ಮ ಹೊಸ ತಲೆಮಾರಿನ ಹುಡುಗರನ್ನು ಮುಟ್ಟಿದೆಯೆಂದರೆ, ನೂರಾರು ಕೋರ್ಸ್‌ಗಳು, ಸ್ವಯಂ ಸೇವಾ ಸಂಸ್ಥೆಗಳು ಹುಟ್ಟಿಕೊಂಡಿವೆ. ಆದರೆ, ಬಹುತೇಕ ಇದು ವಿಶೇಷಜ್ಞತೆ ಮತ್ತು ಕಿರುದಾರಿಗಳ ಪಯಣವಾಗಿದೆಯೇ ಹೊರತು, ಸಾಮುದಾಯಿಕ ಸಮಗ್ರ ಕ್ರಿಯಾಶೀಲ ಪಡೆಯಾಗಿ ಬೆಳೆಯಲೇ ಇಲ್ಲ ಅನ್ನಿಸುತ್ತೆ. ಪ್ರಳಯವಾದೀ ಪರಿಸರ ಮಾಹಿತಿದಾರರ ರೀತಿ ನಮ್ಮ ಪರಿಸರ ಪ್ರಜ್ಞೆಯ ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಒಂದು ಕ್ಷಣ ನಿಂತು, ಅಪ್ಪಿಕೋ ಚಳವಳಿ ಯಾಕೆ ಮುಖ್ಯವೆಂದು ನೋಡಲು ಅದು ಬಳಸಿದ ಪದಗಳ ಕಾಮನ್‌ಸೆನ್ಸ್‌ನ್ನು ನೋಡಬೇಕು. `ಉಳಿಸು, ಬೆಳೆಸು, ಬಳಸು' ಎಂಬ ಪದಗಳು ಸುಮಾರಾಗಿ ಈ ಪ್ರಜ್ಞೆಯ ಸಮಗ್ರತೆಯ ಸಂಕೇತವಾಗಿದ್ದವು. ಅಪ್ಪಿಕೋ ಚಳವಳಿ ಹುಟ್ಟುಹಾಕಿದ ಕಾಣ್ಕೆಯನ್ನು ವಿಸ್ತರಿಸುವ ಕೆಲಸ ಆಗಲೇ ಇಲ್ಲ. ಈ ನೆಲದಲ್ಲಿ, ಇಲ್ಲಿನ ಎಲ್ಲರನ್ನೂ ಒಳಗೊಂಡು ಮಾಡಬೇಕಾದ ಕೆಲಸ ಇದು.
ಅಪ್ಪಿಕೋ ಚಳವಳಿ ತನ್ನ ಚಾರಿತ್ರಿಕ ಜವಾಬ್ದಾರಿಯನ್ನು ನಿರ್ವಹಿಸಿದೆ. ನಾನೀಗ ಜಾಗತೀಕರಣದ ಚೌಕಟ್ಟಿನ ಕನ್ನಡಿಯೊಂದನ್ನು ದಿಟ್ಟಿಸುತ್ತಿದ್ದೇನೆ. ಅದರಲ್ಲಿ ನನಗೆ ಬಹುಗುಣ, ದೇವನೂರ ಮತ್ತು ಪ್ರೊ.ನಂಜುಂಡಸ್ವಾಮಿ ಕಾಣಿಸುತ್ತಿದ್ದಾರೆ. ಈ ಮೂವರೂ ಒಂದಾದ ಚಳವಳಿ ರೂಪುಗೊಳ್ಳಬೇಕು. ಬಹುಗುಣ ಶಿರಸಿಗೆ ಬಂದಾಗ ಅವರಿಗೆ ಎಷ್ಟು ವಯಸ್ಸಾಗಿತ್ತೋ ಅಷ್ಟು ವಯಸ್ಸು ಈಗ ಪಾಂಡುರಂಗ ಹೆಗಡೆ ಅವರಿಗೂ ಅವರ ಸಮಕಾಲೀನ ಪರಿಸರ ಹೋರಾಟಗಾರರಿಗೂ ಆಗಿದೆ. ಆದರೆ ಅಪ್ಪಿಕೋ ಎಂಬ ರೂಪಕಕ್ಕೆ ಮುಪ್ಪಿಲ್ಲ.

  ಈಗ ಹೊಸ ತಲೆಮಾರು ಇವರಿಂದ ಸ್ಫೂರ್ತಿ ಪಡೆದು ಇಲ್ಲೇ ಅಥವಾ ಇನ್ನೆಲ್ಲೋ ಈ ಆಶಯಗಳನ್ನು ಮುಂದುವರಿಸುತ್ತಾರೆ ಎಂಬ ನಂಬಿಕೆ ನನ್ನದು. ನಂಬಿಕೆ ಇಲ್ಲದ ಬಾಳು ಬಾಳೇ ಅಲ್ಲ, ಅಲ್ಲವೇ. ಆಶಾವಾದ ತೊರೆದು ಬಾಳುವುದು, ಈ ದೇಶಕ್ಕೆ ಸಲ್ಲದು.
      (ಲೇಖಕರು ಅಭಿವೃದ್ಧಿ ಚಿಂತಕ) ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT