ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪಿಕೋ ಚಳವಳಿ: ಮರ ಹರಾಜು ರದ್ದು

Last Updated 4 ಏಪ್ರಿಲ್ 2013, 5:42 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಎದುರು, ಗಂಜಾಂ ರಸ್ತೆಯ ಪಕ್ಕದಲ್ಲಿದ್ದ ಬೃಹತ್ ರಸ್ತೆ ಬಾಗೆ (ರೈಟರಿ) ಮರವನ್ನು ಹರಾಜು ಹಾಕುವುದಕ್ಕೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮರ ಹರಾಜು ಪ್ರಕ್ರಿಯೆಯನ್ನೇ ರದ್ದುಪಡಿಸಿದ ಪ್ರಸಂಗ ಬುಧವಾರ ನಡೆಯಿತು.

  ಹರಾಜು ಹಾಕಲು ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಗಂಜಾಂ ನಿವಾಸಿಗಳು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯ ವಿರುದ್ಧ ಘೋಷಣೆ ಕೂಗಿದರು. ಹಸಿರೀಕರಣಕ್ಕಾಗಿ ಸಸಿ ನೆಟ್ಟು ಬೆಳೆಸಬೇಕಾದ ಅರಣ್ಯ ಇಲಾಖೆಯೇ ಮರ ಹನನಕ್ಕೆ ಮುಂದಾಗಿದೆ. ನೂರಾರು ವರ್ಷಗಳಷ್ಟು ಹಳೆಯದಾದ ಮರವು ಜನರು ಹಾಗೂ ಪಶು, ಪಕ್ಷಿಗಳಿಗೆ ನೆರಳು ನೀಡುತ್ತಿದೆ. ಈ ಮರಕ್ಕೂ ಜನರಿಗೂ ಭಾವನಾತ್ಮಕ ಸಂಬಂಧ ಇದೆ. ಮರ ಹರಾಜು ಹಾಕಲು ಅಥವಾ ಕಡಿಯಲು ಅವಕಾಶ ನೀಡುವುದಿಲ್ಲ ಎಂದು ಮರದ ಕಾಂಡವನ್ನು ತಬ್ಬಿ ನಿಂತರು. ಮರದ ಹತ್ತಿರಕ್ಕೆ ಸುಳಿದರೆ ಸುಮ್ಮನಿರುವುದಿಲ್ಲ ಎಂದು ದಸಂಸ ತಾಲ್ಲೂಕು ಸಂಚಾಲಕ ಗಂಜಾಂ ರವಿಚಂದ್ರ ಇತರರು ಎಚ್ಚರಿಸಿದರು.

  ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊಠಡಿಗಳ ಕೊರತೆ ಇರುವುದರಿಂದ ಹೊಸ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಕಾಮಗಾರಿಗೆ ಮರ ಅಡ್ಡಿಯಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ಲಿಖಿತ ಮನವಿ ಮೇರೆಗೆ ಮರವನ್ನು ಹರಾಜು ಹಾಕಲಾಗುತ್ತಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ರಾಮಲಿಂಗೇಗೌಡ ಹೇಳಿದರು. ಇದಕ್ಕೆ ಪ್ರತಿಭಟನಾಕಾರರಿಂದ ತೀವ್ರ ವಿರೋಧ ವ್ಯಕ್ತವಾಯಿತು.

ಆಸ್ಪತ್ರೆ ಕಟ್ಟಡ ಕಟ್ಟಲು ಸ್ಥಳಾವಕಾಶ ಇದ್ದರೂ ರೈಟರಿ ಮರದ ಬಳಿ ಕಟ್ಟಡ ಕಟ್ಟುತ್ತಿರುವುದು ಏಕೆ ಎಂದು ಪುರಸಭೆ ಸದಸ್ಯ ಟಿ.ಕೃಷ್ಣ, ಮಾಜಿ ಸದಸ್ಯ ನಾರಾಯಣಸ್ವಾಮಿ, ಕರವೇ ಮುಖಂಡರಾದ ಬಸವರಾಜು, ಪುಟ್ಟರಾಮು, ರವಿ, ಜಗದೀಶ್, ಯೋಗಣ್ಣ ಇತರರು ಪ್ರಶ್ನಿಸಿದರು.

ಜನರ ಮನವೊಲಿಸಲು ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ ಪ್ರಯತ್ನ ವಿಫಲವಾಯಿತು. `ಸ್ಥಳೀಯರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮರ ಹರಾಜು ಪ್ರಕ್ರಿಯೆಯನ್ನು ರದ್ದುಪಡಿಸಲಾಗಿದೆ' ಎಂದು ಎಸಿಎಫ್ ರಾಮಲಿಂಗೇಗೌಡ ಪ್ರಕಟಿಸಿ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT