ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪೆಮಿಡಿ ರುಚಿ ನೋಡಿ

Last Updated 9 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

`ಅಪ್ಪೆಮಿಡಿ~ (ಒಂದು ವಿಶಿಷ್ಟ ಜಾತಿ, ರುಚಿ, ಗುಣದ ಮಾವಿನ ಮಿಡಿ) ಕೇವಲ ಉಪ್ಪಿನಕಾಯಿಯ ಸರಕಲ್ಲ, ಇದು ಮಲೆನಾಡಿನ ಸಾಂಸ್ಕೃತಿಕ ರಾಯಭಾರಿ. ಪಟ್ಟಣಿಗರು ಮತ್ತು ಹಳ್ಳಿಗರ ನಡುವೆ ಕೊಂಡಿ ಬೆಸೆಯುವ ಮಾಧ್ಯಮ. ಅಪ್ಪೆಮಿಡಿ ಉತ್ತರ ಕನ್ನಡ ಜಿಲ್ಲೆಯ ನದಿ ಸಂಸ್ಕೃತಿಯ ಪ್ರತೀಕವೂ ಕೂಡ.

ನದಿ ದಡಗಳು, ಹೊಳೆ ಅಂಚುಗಳು ಅಪ್ಪೆಮಾವಿನ ಅಪರೂಪದ ಖಜಾನೆಗಳು. ಹತ್ತಾರು ದಶಕಗಳಿಂದ ನೈಸರ್ಗಿಕವಾಗಿ ಬೆಳೆದು ನಿಂತ ಅಪ್ಪೆ ಮಾವಿನ ಮರಗಳು ನಾಲಿಗೆಗೆ ಮಿಡಿಮಾವಿನ ತಾಕತ್ತು ತೋರಿವೆ.

ಾವಿನ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ಮಲೆನಾಡಿನ ಹಳ್ಳಿಗಳ ಹೆಸರಿನಲ್ಲಿ ಮಾವು ಬೆರೆತುಕೊಂಡಿದೆ. ಹಾಗೆಯೇ ಮಾವಿನ ಜೊತೆಯಲ್ಲಿ ಊರುಗಳು ಸೇರಿಕೊಂಡಿವೆ. ನದಿ ದಂಡೆಯ ಹಳ್ಳಿಗರು ಹಿರಿಯಜ್ಜಿಯ ಕಾಲದಿಂದ ಪಾರಂಪರಿಕವಾಗಿ ಬಳಸುತ್ತ ಬಂದ ಮಿಡಿಮಾವು ಇಂದು ವ್ಯಾಪಾರಸ್ಥರ ಕೈಯಲ್ಲಿ ವಾಣಿಜ್ಯೀಕರಣಗೊಂಡಿದೆ.

ಮನದಲ್ಲಿ ಕಾಸು ಯೋಚಿಸುತ್ತ ಟೊಂಗೆ ಕಡಿದು ಕಾಯಿ ಕೊಯ್ಯುವ ಹೊಡೆತಕ್ಕೆ ಮಿಡಿಮಾವು ನಲುಗಿದೆ. ಮಲೆನಾಡಿನ ಮಿಡಿಮಾವು ವಿನಾಶದ ಅಂಚಿಗೆ ತಲುಪಿದೆ.
ಈ ಹಂಗಾಮಿನಲ್ಲಿ ಮಿಡಿಮಾವಿನ ಬೆಳೆ ತೀರಾ ಕಡಿಮೆ. ಇದೇನು ಆತಂಕದ ಸಂಗತಿಯಲ್ಲ. ವರ್ಷಬಿಟ್ಟು ವರ್ಷ ಫಲ ಕೊಡುವಲ್ಲಿ ಕಂಜೂಸಿತನ ಮಾಡುವುದು ಮಾವಿನ ರೂಢಿ.

ಆದರೆ ಇತ್ತೀಚಿನ ವರ್ಷಗಳಲ್ಲಿ ಮಾವಿನಕಾಯಿ ಉಪ್ಪಿನಕಾಯಿ ಸಿದ್ಧಪಡಿಸುವ ಫ್ಯಾಕ್ಟರಿಗಳಿಗೆ ಮೂಲ ಸರಕು ಒದಗಿಸುವ ಮಧ್ಯವರ್ತಿಗಳ ಪೈಪೋಟಿ ಮತ್ತಿತರ ಕಾರಣದಿಂದ ಮಾವಿನ ಮಿಡಿ ಬೇಡಿಕೆ ಹೆಚ್ಚಿದೆ. ಈ ಅಬ್ಬರದಲ್ಲಿ ಮಿಡಿಮಾವಿನ ಅನೇಕ ತಳಿಗಳು ಈಗ ನೆನಪು ಮಾತ್ರ ಎಂಬಂತಾಗಿವೆ.

ಹಿಂದೆಲ್ಲ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದ ಮಿಡಿಮಾವು ಭಾರೀ ದರಕ್ಕೆ ಪೈಪೋಟಿಯಲ್ಲಿ ಮಾರಾಟವಾಗುತ್ತಿದೆ. ಅಪ್ಪೆಮಿಡಿಯ ಸುಸ್ಥಿರ ಕೊಯ್ಲು, ತಳಿ ಸಂರಕ್ಷಣೆ ತುರ್ತಾಗಿ ಆಗದಿದ್ದಲ್ಲಿ  ಮುಂದೆ ತೊಂದರೆ ಇದೆ.
ಭೌಗೋಳಿಕ ಗುರುತಿಸುವಿಕೆ

ಕೇಂದ್ರ ಸರ್ಕಾರದ ಭೌಗೋಳಿಕ ಗುರುತಿಸುವಿಕೆ (geographical indication) ಪಟ್ಟಿಯಲ್ಲಿ ಮಲೆನಾಡಿನ ಅಪ್ಪೆಮಿಡಿ ಸೇರ್ಪಡೆಗೊಂಡಿದೆ. ಈ ಮಾನ್ಯತೆ ಪಡೆಯಲು ಸಹಕಾರಿಯಾಗಿದ್ದು ಸಾಗರದಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಅಪ್ಪೆಮಿಡಿ ಮೇಳ.

ಎರಡು ದಶಕಗಳಿಂದ ಅಪ್ಪೆಮಿಡಿ ಬಗ್ಗೆ ವಿಶೇಷ ಅಧ್ಯಯನ ನಡೆಸಿರುವ ಪರಿಸರ ಬರಹಗಾರ ಶಿವಾನಂದ ಕಳವೆ ಹೇಳುವ ಪ್ರಕಾರ, ಪಶ್ಚಿಮಘಟ್ಟ ಪ್ರದೇಶದಲ್ಲಿ ಮಾಳಂಜಿ ಅಪ್ಪೆ, ಚೌತಿ ಅಪ್ಪೆ, ಹೊಸಗದ್ದೆ ಅಪ್ಪೆ, ಗೆಣಸಿನಕುಳಿ ಜೀರಿಗೆ, ಕಣಗಲಕೈ ಅಪ್ಪೆ ಸೇರಿ ಸಹಸ್ರಾರು ಮಿಡಿಮಾವಿನ ತಳಿಗಳಿದ್ದು, ಪ್ರತಿ ಜಿಲ್ಲೆಯಲ್ಲಿ 25-30ರಷ್ಟು ಗೊಂಚಲು ಫಲ ನೀಡುವ ಕೃಷಿ ಯೋಗ್ಯ ತಳಿಗಳನ್ನು ಗುರುತಿಸಬಹುದಾಗಿದೆ.

ಸಿದ್ದಾಪುರ ತಾಲ್ಲೂಕು ಮೂಲದ `ಅನಂತ ಭಟ್ಟನ ಅಪ್ಪೆ~ ಮಿಡಿಮಾವಿನ ಜಾತಿಯಲ್ಲೇ ಪ್ರಸಿದ್ಧ. ಅನಂತ ಭಟ್ಟನ ಅಪ್ಪೆ ತಳಿ ವೃದ್ಧಿಸಲು ಲಕ್ಷಾಂತರ ಸಸಿ ಸಿದ್ಧಪಡಿಸಿ ವಿತರಿಸುವ ಕಾರ್ಯ ನಡೆದರೂ ನಿಷ್ಪ್ರಯೋಜಕವಾಗಿದೆ. ಹೀಗಾಗಿ ಅಪ್ಪೆಮಿಡಿ ಸಂರಕ್ಷಣೆಗೆ ಏಕಜಾತಿ ನೆಡುತೋಪು ಸೃಷ್ಟಿಸುವುದಕ್ಕಿಂತ ಆಯಾ ಮಣ್ಣಿನ ಗುಣದಲ್ಲಿ ಬೆಳೆಯುವ ತಳಿ ಗುರುತಿಸಿ ಸಂರಕ್ಷಣೆ ಕಾರ್ಯ ಆಗಬೇಕಾಗಿದೆ ಎನ್ನುತ್ತಾರೆ ಅವರು.

ಮಿಡಿಮಾವಿನ ಕೃಷಿ ಮಾಡಿ ಮೂರು ವರ್ಷಕ್ಕೆ ಫಲ ಪಡೆಯಬಹುದು ಎಂಬುದು 50 ಜಾತಿಯ ಮಿಡಿಮಾವಿನ ಸಸಿ ಬೆಳೆಸಿರುವ ಕಳವೆ ಅನುಭವ. ಮಿಡಿಮಾವು ಸಂರಕ್ಷಣೆಗೆ ಸಂಘಟನೆ ಹುಟ್ಟಿಕೊಂಡಿದೆ. ಅನೇಕ ಕೃಷಿಕರು ಮಿಡಿಮಾವಿನ ಕೃಷಿ ಆರಂಭಿಸಿದ್ದಾರೆ.

ಅಲ್ಲಲ್ಲಿ ಕಾರ್ಯಾಗಾರಗಳು ನಡೆದು ತಳಿ ಸಂರಕ್ಷಕರನ್ನು ಗುರುತಿಸುವ ಕೆಲಸವಾಗಿದೆ. ಆದರೆ ತಳಿ ಅಭಿವೃದ್ಧಿ ಮಾಡಬೇಕಾದ ತೋಟಗಾರಿಕಾ ಇಲಾಖೆಯ ಆಮೆ ನಡಿಗೆಯ ವೇಗ ಹೆಚ್ಚಬೇಕಾಗಿದೆ. ಹೊಳೆ ದಂಡೆಯ ಮಿಡಿಮಾವಿನ ಮೂಲ ಮರಗಳ ಸಂರಕ್ಷಣೆಗೆ ಮುಖ್ಯವಾಗಿ ಸ್ಥಳೀಯ ಜನರು, ಗ್ರಾಮ ಅರಣ್ಯ ಸಮಿತಿ ಜೊತೆಗೆ ಅರಣ್ಯ ಇಲಾಖೆ ದೃಷ್ಟಿ ಹರಿಸಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT