ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ರಾಪ್ತ ವಯಸ್ಕ ಯುವತಿಯ ಮದುವೆಗೆ ಬ್ರೇಕ್

Last Updated 6 ಡಿಸೆಂಬರ್ 2012, 8:31 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: 18 ವರ್ಷ ತುಂಬದ ಯುವತಿಯ ಮದುವೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಕಲ್ಯಾಣ ಮಂಟಪದ ಮೇಲೆ ದಾಳಿ ನಡೆಸಿದ ಮಕ್ಕಳ ರಕ್ಷಣಾ ಅಧಿಕಾರಿ ಹಾಗೂ ಮಕ್ಕಳ ಹಕ್ಕುಗಳ ಸಮಿತಿ ಸದಸ್ಯರು ಮದುವೆ ತಡೆದ ಪ್ರಕರಣ ಬುಧವಾರ ನಡೆಯಿತು.

  ತಾಲ್ಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ಭಾರತಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ತಾಲ್ಲೂಕಿನ ಬಲ್ಲೇನಹಳ್ಳಿಯ ನವ್ಯಶ್ರೀ (17) ಹಾಗೂ ಮದ್ದೂರು ತಾಲ್ಲೂಕು ಚನ್ನೇಗೌಡನದೊಡ್ಡಿ ಗ್ರಾಮದ ಸಿ.ಆರ್.ಪುನೀತ್ (23) ಅವರ ವಿವಾಹಕ್ಕೆ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಡಾ.ದಿವಾಕರ್ ತಡೆ ಒಡ್ಡಿದರು.

ವಧುವಿನ ವಯಸ್ಸಿಗೆ ಸಂಬಂಧಿಸಿದ ದಾಖಲೆ ನೀಡುವಂತೆ ವಧುವಿನ ಪೋಷಕರನ್ನು ಕೇಳಿದರು. 18 ವರ್ಷ ತುಂಬಿರುವ ಬಗ್ಗೆ ನಿಖರ ದಾಖಲೆ ಒದಗಿಸಲು ವಧುವಿನ ಪೋಷಕರು ವಿಫಲರಾದರು. ಹಾಗಾಗಿ ಮಕ್ಕಳ ರಕ್ಷಣಾ ಅಧಿಕಾರಿ ಹಾಗೂ ಮಕ್ಕಳ ಹಕ್ಕುಗಳ ಸಮಿತಿ ಸದಸ್ಯರು ಮದುವೆ ನಿಲ್ಲಿಸುವಂತೆ ಸೂಚಿಸಿದರು.

ಅಧಿಕಾರಿಗಳು ಅತ್ತ ಮಾಹಿತಿ ಪಡೆಯುತ್ತಿದ್ದ ವೇಳೆ, ಇತ್ತ ವಧು ಮತ್ತು ವರ ನಾಪತ್ತೆಯಾಗಿದ್ದರು. ಆದರೂ ಅಧಿಕಾರಿಗಳು ಅಲ್ಲಿಂದ ಕದಲದೆ ಸುಮಾರು ಎರಡು ತಾಸು ಕಾದು ಕುಳಿತರು. ವಧುವಿನ ಕಡೆಯವರು ಮದುವೆ ನಿಲ್ಲಿಸಿದ್ದೇವೆ ಎಂಬ ಮುಚ್ಚಳಿಕೆ ಬರೆದುಕೊಟ್ಟರೂ ಒಪ್ಪದ ಅಧಿಕಾರಿಗಳು ವಧು ಹಾಗೂ ವರ- ಇಬ್ಬರನ್ನೂ ಕರೆಸುವಂತೆ ಪಟ್ಟು ಹಿಡಿದರು. ಎಷ್ಟೇ ಒತ್ತಡ ಹೇರಿದರೂ ಸಾಧ್ಯವಾಗದೇ ಇದ್ದಾಗ ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಮಂಜುನಾಥ್ ಅವರಿಗೆ ಕೈಗೊಳ್ಳಬೇಕಾದ ಕ್ರಮದ ಕುರಿತು ವರದಿ ನೀಡಿ ತೆರಳಿದರು.

ದಾಖಲೆ ಒದಗಿಸಲು ಗಡುವು
`17 ವರ್ಷದ ಹುಡುಗಿಗೆ ಮದುವೆ ಮಾಡುತ್ತಿದ್ದ ಕಾರಣಕ್ಕೆ ವಿವಾಹ ನಿಲ್ಲಿಸಲಾಗಿದೆ. ಇದು ಕಾನೂನಿಗೆ ವಿರುದ್ಧವಾದ ಮದುವೆಯಾಗಿದ್ದು ವಧುವಿನ ಪೋಷಕರಿಗೆ ತಮ್ಮ ಮಗಳ ವಯಸ್ಸಿನ ದಾಖಲೆ ಒದಗಿಸುವಂತೆ 24 ಗಂಟೆಗಳ ಕಾಲಾವಕಾಶ ನೀಡಲಾಗಿದೆ. ದಾಖಲೆ ನೀಡದಿದ್ದರೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ' ಎಂದು ಸಿಡಿಪಿಒ ಮಂಜುನಾಥ್ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT