ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ರಿದಿ ಬದುಕಿಗೆ ತಿರುವು...

Last Updated 21 ಜುಲೈ 2013, 19:59 IST
ಅಕ್ಷರ ಗಾತ್ರ

`ನಿನ್ನ ಅಹಂಕಾರ ಜಾಸ್ತಿ ಆಯಿತು. ಸಾಕಿನ್ನು ನಿನ್ನ ಉಪಟಳ' ಎಂದು ಸೂಚ್ಯವಾಗಿ ಹೇಳುವ ಮೂಲಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಎರಡು ವರ್ಷಗಳ ಹಿಂದೆ ಶಾಹಿದ್ ಅಫ್ರಿದಿ ಅವರನ್ನು ಏಕದಿನ ತಂಡದ ನಾಯಕ ಸ್ಥಾನದಿಂದ ತೆಗೆದು ಹಾಕಿತ್ತು.

ಏಕದಿನ ಮಾದರಿಯಲ್ಲಿ ಉತ್ತಮ ಪ್ರದರ್ಶನ ತೋರಿದರೂ, ಪಿಸಿಬಿ ಉದ್ದೇಶಪೂರ್ವಕವಾಗಿ ಈ ಕ್ರಮ ಕೈಗೊಂಡಿದೆ. `ಸೇಡಿನ ಆಟ' ನಡೆಸಿದೆ ಎಂದು ಆಲ್‌ರೌಂಡರ್ ಅಫ್ರಿದಿ ತನ್ನ ದೇಶದ ಕ್ರಿಕೆಟ್ ಮಂಡಳಿಯ ವಿರುದ್ಧವೇ ಬಹಿರಂಗವಾಗಿ ಸಿಡಿದೆದ್ದು ನಿಂತಿದ್ದರು. ಹೀಗೆ ಸಾಕಷ್ಟು ವಿವಾದಗಳಿದ್ದರೂ 33 ವರ್ಷದ ಅಫ್ರಿದಿ ಅವರ ಸಾಮರ್ಥ್ಯ ಕ್ರೀಡಾಂಗಣದಲ್ಲಿ ಕಿಂಚತ್ತೂ ಕುಂದಿಲ್ಲ.

ಕೇವಲ 16 ವರ್ಷವಿದ್ದಾಗ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅಫ್ರಿದಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚು ಹರಿಸಿದ್ದಾರೆ. ಅವರೊಬ್ಬ ಸಮರ್ಥ ಆಲ್‌ರೌಂಡರ್ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಆದರೆ, ವಿವಾದಗಳ ಕಾರಣದಿಂದ ತಂಡದಿಂದ ಹೊರ ದಬ್ಬಿಸಿಕೊಂಡು ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿ ಮೇಲಿಂದ ಮೇಲೆ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡುತ್ತಲೇ ಇದ್ದಾರೆ. ಕಳೆದ ವಾರ ವೆಸ್ಟ್ ಇಂಡೀಸ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ತೋರಿದ ಅಮೋಘ ಪ್ರದರ್ಶನವೇ ಇದಕ್ಕೆ ಸಾಕ್ಷಿ. 9 ಓವರ್‌ಗಳಲ್ಲಿ ಕೇವಲ 12 ರನ್ ನೀಡಿ ಏಳು ವಿಕೆಟ್‌ಗಳನ್ನು ಕಬಳಿಸಿದ್ದರು.

17 ವರ್ಷಗಳಿಂದ ಪಾಕ್ ತಂಡದಲ್ಲಿ ಆಡುತ್ತಿರುವ ಅಫ್ರಿದಿ ಎಷ್ಟೊಂದು ಸಮರ್ಥ ಬ್ಯಾಟ್ಸ್‌ಮನ್ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆಯಿದೆ. ವಿವಾದದ ಗೂಡಿನಲ್ಲಿ ಬಂದಿಯಾಗಿದ್ದ ಮಹಮ್ಮದ್ ಯೂಸುಫ್ ಅವರನ್ನು ಏಕದಿನ ನಾಯಕ ಸ್ಥಾನದಿಂದ ಕಿತ್ತು ಹಾಕಿ ಪಿಸಿಬಿ ಅಫ್ರಿದಿ ಅವರನ್ನು 2010ರ ಏಷ್ಯಾ ಕಪ್ ಟೂರ್ನಿಗೆ ನಾಯಕರನ್ನಾಗಿ ನೇಮಿಸಿತು.

ಈ ವೇಳೆಗಾಗಲೇ ಅಫ್ರಿದಿ ಏಕದಿನ ಕ್ರಿಕೆಟ್‌ನಲ್ಲಿ ಸಾಕಷ್ಟು ಪರಿಣತಿ ಗಳಿಸಿದ್ದರು. ನಾಯಕರಾದ ನಂತರ ಆಡಿದ ಮೊದಲು ಮೂರು ಪಂದ್ಯಗಳಲ್ಲಿ ಎರಡರಲ್ಲಿ ಶತಕ ಸಿಡಿಸಿದ್ದರು. ಇದು ಅಫ್ರಿದಿ ಬ್ಯಾಟಿಂಗ್ ತಾಕತ್ತಿಗೆ ಸಾಕ್ಷಿ. ಖ್ಯಾತಿ ಉತ್ತುಂಗಕ್ಕೆ ಏರುವ ಹೊತ್ತಿನಲ್ಲೇ ಬೆನ್ನು ಬಿದ್ದಿತು ಮತ್ತೊಂದು ವಿವಾದ.

`ಪಿಸಿಬಿ ನನ್ನನ್ನು ಬೇಕಂತಲೇ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ' ಎಂದು 2011ರ ವಿಶ್ವಕಪ್ ನಂತರ ಅಫ್ರಿದಿ ಮತ್ತೊಮ್ಮೆ ಸಿಡಿದೆದ್ದು ನಿಂತರು. `ತಾತ್ಕಾಲಿಕ ನಿವೃತ್ತಿ'ಯನ್ನೂ ಪ್ರಕಟಿಸಿದ್ದರು. ಪಾಕ್ ಮಂಡಳಿ ಕೂಡಾ ತನ್ನ ಹಠಮಾರಿತನವನ್ನೇ ಮುಂದುವರಿಸಿತು. ಆದರೆ, ಅಫ್ರಿದಿ ಇದ್ಯಾವುದಕ್ಕೂ ಜಗ್ಗಲಿಲ್ಲ. ಈ ವಿವಾದ ಸಾಕಷ್ಟು ತಾರಕಕ್ಕೇರಿತು.

ಆಗ `ಅಫ್ರಿದಿ ಕಾಲ ಮುಗಿಯಿತು. ಆತ ಇನ್ನೆಂದಿಗೂ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳಲಾರ' ಎನ್ನುವ ಕೊಂಕು ನುಡಿಗಳು ಸಾಮಾನ್ಯವಾದವು. ಹೀಗೆ ಪ್ರತಿ ಸಲ ಟೀಕೆಗಳನ್ನು ಕೇಳಿಸಿಕೊಂಡಾಗಲೂ ಅಫ್ರಿದಿ `ರಾಷ್ಟ್ರೀಯ ತಂಡಕ್ಕೆ ಮರಳುತ್ತೇನೆ' ಎಂದು ವಿಶ್ವಾಸದಿಂದ ಹೇಳುತ್ತಿದ್ದರು.

ಏಕದಿನ ಕ್ರಿಕೆಟ್‌ನಲ್ಲಿ ಈ ಆಟಗಾರ ಸಮರ್ಥ ನಾಯಕರಾಗಿಯೂ ಖ್ಯಾತಿ ಗಳಿಸಿದ್ದಾರೆ. 2010ರಲ್ಲಿ ಟೆಸ್ಟ್ ಆಡಲು ಇಂಗ್ಲೆಂಡ್‌ಗೆ ತೆರಳಿದ್ದ ವೇಳೆ ಸ್ಪಾಟ್ ಫಿಕ್ಸಿಂಗ್ ವಿವಾದ ಬಹಿರಂಗವಾಯಿತು. ಇದರಲ್ಲಿ ಪಾಕ್‌ನ ಮೂವರು ಆಟಗಾರರು ಸಿಕ್ಕಿಬಿದ್ದರು. ಐಸಿಸಿ ಏಕದಿನ ವಿಶ್ವಕಪ್ ಶುರುವಾಗಲು ಕೆಲವೇ ತಿಂಗಳು ಬಾಕಿ ಇದ್ದ ಸಮಯದಲ್ಲಿ ಈ ಘಟನೆ ನಡೆದಿತ್ತು ಆಗ, ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಅಫ್ರಿದಿ ಹೆಗಲಿಗೆ ಬಿತ್ತು.

ಅವರು ತಂಡವನ್ನು ಸೆಮಿಫೈನಲ್‌ವರೆಗೆ ಕೊಂಡೊಯ್ದರು. ಆಗ ಎಲ್ಲರಿಂದಲೂ ಭೇಷ್ ಎನಿಸಿಕೊಂಡಿದ್ದರು. ಏಕದಿನ ಕ್ರಿಕೆಟ್‌ನ ನಾಯಕರಾದ ಕೆಲ ತಿಂಗಳುಗಳಲ್ಲಿಯೇ ಟ್ವೆಂಟಿ-20 ಮತ್ತು ಟೆಸ್ಟ್ ಮಾದರಿಗೂ ತಂಡವನ್ನು ಮುನ್ನಡೆಸಿದ್ದರು. ಆದರೆ, ಏಕದಿನ ಮಾದರಿಯಲ್ಲಿ ಕಂಡ ಯಶಸ್ಸನ್ನು ಉಳಿದ ಮಾದರಿಯ ಕ್ರಿಕೆಟ್‌ನಲ್ಲಿ ಕಾಣಲಿಲ್ಲ.

ರಾಷ್ಟ್ರೀಯ ತಂಡಕ್ಕೆ ಮರಳುವ ಅವರ ಕನಸು ಈಗ ನನಸಾಗಿದೆ. ಚಾಂಪಿಯನ್ಸ್ ಟ್ರೋಫಿಗೆ ಅಫ್ರಿದಿಗೆ ತಂಡದಲ್ಲಿ ಸ್ಥಾನ ನೀಡಿರಲಿಲ್ಲ. ಪಾಕ್ ತಂಡ ತೋರಿದ ನೀರಸ ಪ್ರದರ್ಶನ ಅಫ್ರಿದಿಗೆ `ಅದೃಷ್ಟ' ತಂದುಕೊಟ್ಟಿತು. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರಿದ ಕಾರಣಕ್ಕಾಗಿ ಪಾಕ್ ಟೀಕೆಗೆ ಕಾರಣವಾಯಿತು.

ಆದ್ದರಿಂದ ಆಯ್ಕೆದಾರರು ವಿಂಡೀಸ್ ಎದುರಿನ ಏಕದಿನ ಸರಣಿಗೆ ಅಫ್ರಿದಿಗೆ ಅವಕಾಶ ಕೊಟ್ಟರು. ಸಿಕ್ಕ ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ಲೆಗ್ ಸ್ಪಿನ್ನರ್ ತೋರಿಸಿಕೊಟ್ಟಿದ್ದಾರೆ. ಇದು ಪಾಕ್ ತಂಡದಲ್ಲೂ ನವಚೈತನ್ಯ ಮೂಡಿಸಿದೆ. ಅಫ್ರಿದಿ ಭವಿಷ್ಯ ಇನ್ನಷ್ಟು ಉಜ್ವಲವಾಗಲೂ ಇದು ನೆರವಾಗುವುದೇ?
-ಪ್ರಮೋದ್ ಜಿ.ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT