ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

Last Updated 2 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಅಬಕಾರಿ ಇಲಾಖೆಯ ಅಧಿಕಾರಿಗಳು ಮದ್ಯದಂಗಡಿಗಳ ಮಾರಾಟ ಸ್ಥಳದ ಅನುಮೋದಿತ ನಕ್ಷೆಯನ್ನು ಅಕ್ರಮವಾಗಿ ತಮ್ಮ ಬಳಿಯೇ ಇರಿಸಿಕೊಂಡಿರುವುದನ್ನು ಲೋಕಾಯುಕ್ತ ಪೊಲೀಸರು ಬಯಲಿಗೆ ಎಳೆದಿದ್ದಾರೆ. ರಾಜ್ಯದ ವಿವಿಧೆಡೆಯ ಅಬಕಾರಿ ಕಚೇರಿಗಳ ಮೇಲೆ ಶುಕ್ರವಾರ ದಾಳಿ ನಡೆಸಿ ನೂರಾರು ನಕ್ಷೆಗಳನ್ನು ವಶಪಡಿಸಿಕೊಂಡಿದ್ದಾರೆ.

ಕರ್ನಾಟಕ ಅಬಕಾರಿ ಕಾಯ್ದೆಯ ಪ್ರಕಾರ ಎಲ್ಲ ಮದ್ಯದಂಗಡಿಗಳ ಮಾಲೀಕರೂ ಪ್ರತಿ ವರ್ಷ ಜುಲೈ 1ರ ಒಳಗಾಗಿ ಮದ್ಯದಂಗಡಿಗಳ ಪರವಾನಗಿಯನ್ನು ನವೀಕರಿಸಿಕೊಳ್ಳಬೇಕು. ಇದರ ಜತೆಗೆ ಅಂಗಡಿಯ ನಕ್ಷೆಯನ್ನೂ ಇಲಾಖೆಗೆ ಸಲ್ಲಿಸಬೇಕು. ಪರವಾನಗಿ ನವೀಕರಣದ ಜೊತೆಯಲ್ಲೇ, ಮಾರಾಟ ಸ್ಥಳದ ನಕ್ಷೆಗೂ ಇಲಾಖೆ ಅನುಮೋದನೆ ನೀಡಬೇಕಾಗುತ್ತದೆ. ಅದನ್ನು ಪರವಾನಗಿ ಜೊತೆಯಲ್ಲೇ ಮದ್ಯದಂಗಡಿ ಮಾಲೀಕರಿಗೆ ಹಸ್ತಾಂತರ ಮಾಡಬೇಕು.

ಆದರೆ, ಈ ಬಾರಿ ಒಂದು ತಿಂಗಳಾದರೂ ಹಲವು ಅಂಗಡಿಗಳ ಮಾಲೀಕರಿಗೆ ಮಾರಾಟ ಸ್ಥಳದ ಅನುಮೋದಿತ ನಕ್ಷೆ ವಿತರಣೆ ಮಾಡಿಲ್ಲ ಎಂಬ ದೂರುಗಳು ಕೇಳಿಬಂದಿದ್ದವು. ಅಬಕಾರಿ ಅಧಿಕಾರಿಗಳು ನೂರಾರು ನಕ್ಷೆಗಳನ್ನು ತಮ್ಮ ಬಳಿಯೇ ಇರಿಸಿಕೊಂಡ ಅಂಗಡಿ ಮಾಲೀಕರಿಂದ ಲಂಚ ಪಡೆದು ಅವುಗಳನ್ನು ವಿತರಿಸುತ್ತಿದ್ದಾರೆ ಎಂಬ ಮಾಹಿತಿ ಲೋಕಾಯುಕ್ತ ಪೊಲೀಸರಿಗೆ ಲಭ್ಯವಾಗಿತ್ತು. ಖಚಿತ ಮಾಹಿತಿ ಆಧರಿಸಿ ರಾಜ್ಯದ ವಿವಿಧ ಲೋಕಾಯುಕ್ತ ಕಚೇರಿಗಳಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿ ಶುಕ್ರವಾರ ಬೆಂಗಳೂರು ನಗರದ ಐದು ಅಬಕಾರಿ ಉಪ ಆಯುಕ್ತರ ಕಚೇರಿಗಳು ಹಾಗೂ ಇತರೆ ಜಿಲ್ಲೆಗಳ ಅಬಕಾರಿ ಉಪ ಆಯುಕ್ತರು ಮತ್ತು ಇತರೆ ಅಧಿಕಾರಿಗಳ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಮದ್ಯದಂಗಡಿಗಳ ಮಾರಾಟ ಸ್ಥಳಗಳ ನೂರಾರು ನಕ್ಷೆಗಳು ಪತ್ತೆಯಾಗಿವೆ. ಅವುಗಳನ್ನು ವಶಕ್ಕೆ ಪಡೆದಿರುವ ತನಿಖಾ ತಂಡ, ಮದ್ಯದಂಗಡಿ ಪರವಾನಗಿ ನವೀಕರಣದ ಗಡುವು ಮುಗಿದು ತಿಂಗಳಾದರೂ ಅನುಮೋದಿತ ನಕ್ಷೆಗಳನ್ನು ವಿತರಿಸದ ಕುರಿತು ಅಬಕಾರಿ ಅಧಿಕಾರಿಗಳ ವಿಚಾರಣೆ ನಡೆಸುತ್ತಿದೆ.

ಒಂದೇ ಕಡೆ 200 ನಕ್ಷೆ: ಮಂಗಳೂರು ಅಬಕಾರಿ ಕಚೇರಿಯಲ್ಲಿ 200 ಮದ್ಯದಂಗಡಿಗಳ ನಕ್ಷೆಗಳು ಪತ್ತೆಯಾಗಿವೆ. ಜಿಲ್ಲೆಯ ಬಹುತೇಕ ಮದ್ಯದಂಗಡಿಗಳ ಮಾಲೀಕರಿಗೆ ಅನುಮೋದಿತ ನಕ್ಷೆಯನ್ನು ಹಸ್ತಾಂತರ ಮಾಡಿಲ್ಲ ಎಂಬುದು ಪರಿಶೀಲನೆ ವೇಳೆ ಖಚಿತವಾಗಿದೆ. ನಕ್ಷೆ ವಿತರಿಸಲು ಅಬಕಾರಿ ಅಧಿಕಾರಿಗಳು ಲಂಚಕ್ಕೆ ಒತ್ತಾಯಿಸುತ್ತಿದ್ದರು ಎಂದು ಕೆಲವು ಮದ್ಯದಂಗಡಿಗಳ ಮಾಲೀಕರು ಲೋಕಾಯುಕ್ತ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

ಬೆಂಗಳೂರಿನ ಪ್ರತಿ ಕಚೇರಿಯಲ್ಲೂ ಸುಮಾರು 50ರಷ್ಟು ನಕ್ಷೆಗಳು ದೊರೆತಿವೆ. ಶಿವಮೊಗ್ಗ, ಹಾಸನ, ಮಂಡ್ಯ, ಮೈಸೂರು ಮತ್ತಿತರ ಜಿಲ್ಲೆಗಳ ಕಚೇರಿಗಳಲ್ಲೂ ಹೆಚ್ಚು ಸಂಖ್ಯೆಯ ನಕ್ಷೆಗಳು ದೊರೆತಿವೆ. ವಶಕ್ಕೆ ಪಡೆದಿರುವ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಹೆಚ್ಚು ಸಂಖ್ಯೆಯ ದಾಖಲೆಗಳು ದೊರೆತಿರುವುದರಿಂದ ಶನಿವಾರದ ವೇಳೆಗೆ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್. ಎನ್.ಸತ್ಯನಾರಾಯಣ ರಾವ್ ಅವರು `ಪ್ರಜಾವಾಣಿ'ಗೆ ತಿಳಿಸಿದರು.

ಮೈಸೂರು ಅಬಕಾರಿ ಕಚೇರಿಯಲ್ಲಿ  40 ಸಾವಿರ ನಗದು ದೊರತಿದೆ. ಹಣಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಉತ್ತರ ನೀಡಲು ವಿಫಲವಾಗಿರುವ ಅಧಿಕಾರಿಯೊಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಬೆಂಗಳೂರಿನ ಜೆ.ಸಿ.ರಸ್ತೆಯಲ್ಲಿರುವ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ಎರಡು ಲಕ್ಷ ರೂಪಾಯಿಗೂ ಹೆಚ್ಚು ಮೊತ್ತದ ಹಣ ಪತ್ತೆಯಾಗಿದೆ. ಅದನ್ನೂ ತನಿಖಾ ತಂಡ ವಶಪಡಿಸಿಕೊಂಡಿದೆ.

ಲೋಕಾಯುಕ್ತ ಡಿಐಜಿ ಪಿ.ಎಚ್.ರಾಣೆ ನೇತೃತ್ವದಲ್ಲಿ ದಾಳಿ ನಡೆದಿದೆ. ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಇಡಾ ಮಾರ್ಟಿನ್ ಮಾರ್ಬೆನಿಯಂಗ್ ನಗರದಲ್ಲಿನ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು. ರಾಜ್ಯದ ವಿವಿಧೆಡೆ ನಡೆದ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT