ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬಕಾರಿ ತೆರಿಗೆ ಯಥಾಸ್ಥಿತಿ: ಸ್ವಾಗತ

Last Updated 28 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಆರ್ಥಿಕ ಉತ್ತೇಜನಾ ಕೊಡುಗೆಗಳನ್ನು ಕೈಬಿಟ್ಟು, ಅಬಕಾರಿ ತೆರಿಗೆ  ಹೆಚ್ಚಿಸಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಗ್ರಾಹಕ ಸರಕುಗಳಿಗೆ ಸಂಬಂಧಿಸಿದಂತೆ ಅಬಕಾರಿ ತೆರಿಗೆ ದರವನ್ನು ಈ ಮೊದಲಿದ್ದ ಶೇ 10ರಷ್ಟನ್ನೇ ಉಳಿಸಿಕೊಳ್ಳಲಾಗಿದೆ. ಅಬಕಾರಿ ತೆರಿಗೆ ಹೆಚ್ಚಬಹುದು ಎನ್ನುವ ಭೀತಿಯಲ್ಲಿದ್ದ ಉದ್ಯಮ ವಲಯ ಇದರಿಂದ ನಿಟ್ಟುಸಿರು ಬಿಟ್ಟಿದೆ.
 
ಆದರೆ, 130 ಸರಕುಗಳನ್ನು ಹೊಸದಾಗಿ ತೆರಿಗೆ ವ್ಯಾಪ್ತಿಗೆ ತರಲಾಗಿದ್ದು,  ಕಳೆದ ಬಜೆಟ್‌ನಲ್ಲಿ ಇವುಗಳಿಗೆ ಘೋಷಿಸಿದ್ದ ತೆರಿಗೆ ವಿನಾಯಿತಿ  ತೆಗೆದುಹಾಕಲಾಗಿದೆ. ಇವುಗಳಲ್ಲಿ ಹೆಚ್ಚಿನವು ಗ್ರಾಹಕ ಬಳಕೆ  ಸರಕುಗಳಾಗಿದ್ದು, ಇದರಿಂದ ಉದ್ಯಮ ವಲಯಕ್ಕೆ ಶೇ 1ರಷ್ಟು ಮಾತ್ರ ಹೆಚ್ಚಿನ ಹೊರೆಬೀಳಲಿದೆ. ಜಾಗತಿಕ ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಸರ್ಕಾರ ಆಯ್ದ ಸರಕುಗಳ ಮೇಲೆ 2008-09ನೇ ಸಾಲಿನಲ್ಲಿ ತೆರಿಗೆ ವಿನಾಯಿತಿ ನೀಡಿತ್ತು. ಪ್ರಸಕ್ತ ಸಾಲಿನಲ್ಲಿ ಹಣದುಬ್ಬರ ದರ ಮುಂದುವರೆದಿರುವುದರಿಂದ ಹೆಚ್ಚಿನ ಆರ್ಥಿಕ ಉತ್ತೇಜನಾ ಕೊಡುಗೆಗಳನ್ನು ನೀಡುವುದಿಲ್ಲ ಎನ್ನುವ ಸೂಚನೆಯನ್ನು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ನೀಡಿದ್ದರು.

ಇದರಿಂದ ಅಬಕಾರಿ ಸುಂಕ ಹೆಚ್ಚಬಹುದು ಎನ್ನುವ ಭೀತಿಯಲ್ಲಿ ಉದ್ಯಮ ವಲಯ ಇತ್ತು. ಸದ್ಯ ತೆರಿಗೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವುದು ಉದ್ಯಮ ವಲಯಕ್ಕೆ ತುಸು ನೆಮ್ಮದಿ ತಂದಿದೆ. ಆದರೆ, ಹೊಸ ಆರ್ಥಿಕ ಉತ್ತೇಜನಾ ಕೊಡುಗೆಗಳನ್ನು ಪ್ರಕಟಿಸದ ಹಿನ್ನೆಲೆಯಲ್ಲಿ ಅಬಕಾರಿ ಸುಂಕ ಹೆಚ್ಚಿಸಿಲ್ಲ ಎನ್ನುವ ವಾದವನ್ನು ತಳ್ಳಿ ಹಾಕಿರುವ ಹಣಕಾಸು ಸಚಿವ ಪ್ರಣಣ್ ಮುಖರ್ಜಿ, ಶೀಘ್ರದಲ್ಲಿಯೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ ) ದೇಶದಲ್ಲಿ ಜಾರಿಗೆ ಬರಲಿದ್ದು, ಇದರಿಂದ ದೇಶದಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೊಳ್ಳಲಿದೆ.

ಕೇಂದ್ರದ ಪರೋಕ್ಷ ತೆರಿಗೆಗಳು ಮತ್ತು ರಾಜ್ಯದ ಕೆಲವು ತೆರಿಗೆಗಳು  ಇದರಿಂದ ರದ್ದಾಗಲಿವೆ. ಈ ಹಿನ್ನೆಲೆಯಲ್ಲಿ ಅಬಕಾರಿ ಸುಂಕ ಹೆಚ್ಚಿಸಿಲ್ಲ ಎಂದಿದ್ದಾರೆ. ಶೇ 10ರಷ್ಟು ಸೇವಾ ತೆರಿಗೆ: 2011-12ನೇ ಸಾಲಿನ ಸೇವಾ ತೆರಿಗೆಯನ್ನೂ ಶೇ 10ರಷ್ಟೇ ಉಳಿಸಿಕೊಳ್ಳಲಾಗಿದೆ. ಇದರ ವ್ಯಾಪ್ತಿಗೆ ಕೆಲವೊಂದನ್ನು ಮಾತ್ರ ಹೊಸದಾಗಿ ಸೇರಿಸಿಕೊಳ್ಳಲಾಗಿದೆ. ಇದರಿಂದ ಹೆಚ್ಚುವರಿ ್ಙ 4,000 ಕೋಟಿ ವರಮಾನವನ್ನು ಸರ್ಕಾರ  ನಿರೀಕ್ಷಿಸಿದೆ.

ದೇಶದಲ್ಲಿ ‘ಜಿಎಸ್‌ಟಿ’ ಜಾರಿಗೆ ಸಿದ್ಧತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗಿರುವ ಕೇಂದ್ರ ಅಬಕಾರಿ ತೆರಿಗೆ ದರ ಶ್ರೇಣಿಯಲ್ಲಿ ಅಗತ್ಯ ಮಾರ್ಪಾಡುಗಳನ್ನು ಪ್ರಣವ್ ಸೂಚಿಸಿದ್ದಾರೆ. ಮೊದಲ ಹಂತವಾಗಿ ಹಲವು ಸರಕುಗಳ ಮೇಲಿನ ತೆರಿಗೆ ವಿನಾಯ್ತಿ ತೆಗೆದುಹಾಕಿದ್ದಾರೆ. ಸದ್ಯ ಸುಮಾರು 100 ಸರಕುಗಳ ಮೇಲೆ ಕೇಂದ್ರ ಅಬಕಾರಿ ತೆರಿಗೆ ಹಾಗೂ ರಾಜ್ಯ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ವಿನಾಯಿತಿ ನೀಡಲಾಗಿದೆ.

340 ಸರಕುಗಳಿಗೆ ಅಬಕಾರಿ ತೆರಿಗೆ ವಿನಾಯಿತಿ ಲಭಿಸಿದ್ದರೂ ಇವುಗಳಿಗೆ ಮೌಲ್ಯವರ್ಧಿತ ತೆರಿಗೆ ಅನ್ವಯಿಸಲಿದೆ. ಕಳೆದ ಬಜೆಟ್‌ನಲ್ಲಿ 130 ಗ್ರಾಹಕ ಸರಕುಗಳಿಗೆ ನೀಡಿದ್ದ ತೆರಿಗೆ ವಿನಾಯಿತಿಯನ್ನು ತೆಗೆದು ಹಾಕಲಾಗಿದ್ದು, ಇವುಗಳಿಗೆ    ಹೆಸರಿಗೆ ಮಾತ್ರ ಶೇ 1ರಷ್ಟು ಕೇಂದ್ರ ಅಬಕಾರಿ ತೆರಿಗೆ ಅನ್ವಯಿಸಲಿದೆ. ಉಳಿದಿರುವ 240 ಸರಕುಗಳನ್ನು ‘ಜಿಎಸ್‌ಟಿ’ ಜಾರಿಯಾಗುತ್ತಿದಂತೆ ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗುವುದು ಎಂದು ಪ್ರಣವ್  ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT