ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬಬ್ಬಾ ...ಮಡಿಕೆ

Last Updated 21 ಮೇ 2012, 19:30 IST
ಅಕ್ಷರ ಗಾತ್ರ

`ಹರಪ್ಪ, ಮೊಹೆಂಜೊದಾರೊ ಕಾಲದಲ್ಲಿ ನಿರ್ಮಾಣವಾದ ಟೆರಕೋಟಾ ಮಡಕೆ ಕುಡಿಕೆಗಳು ಈಗಲೂ ನಮ್ಮಲ್ಲಿವೆ ಎಂದರೆ ಅದು ಆ ಕಾಲದ ತಂತ್ರಗಾರಿಕೆಯನ್ನು ಎತ್ತಿತೋರುತ್ತದೆ.

ವಿಶ್ವ ನಾಶವಾದರೂ ಶಾಶ್ವತವಾಗಿ ಉಳಿಯುವುದೆಂದರೆ ಭೂತಾಯಿಯಿಂದಲೇ ಜನಿತವಾದ ಟೆರಕೋಟಾ ವಸ್ತುಗಳು. ಈ ರೀತಿಯ ಶಾಶ್ವತವಾದ `ಮೆಲ್ಟಿಂಗ್ ಪಾಟ್~ನ್ನು ರಚಿಸಹೊರಟಿರುವೆವು. ಇದು ಸುಮಾರು ಐದು ಸಾವಿರ ವರ್ಷಗಳವರೆಗೂ ತನ್ನ ಹೊಳಪನ್ನು ಕಾಪಿಟ್ಟುಕೊಂಡಿರುತ್ತದೆ.

ನಮ್ಮೆಲ್ಲರಿಂದ ಭೂತಾಯಿಗೆ ಇದನ್ನು ಉಡುಗೊರೆಯಾಗಿ ನೀಡಬಹುದಲ್ಲವೇ~ ಎನ್ನುತ್ತಾ ಆತ್ವವಿಶ್ವಾಸದಿಂದ ಕಣ್ಣುಮಿಟುಕಿಸಿದರು ದೊಡ್ಡ ಕನಸನ್ನು ಹೊತ್ತು ಸಾಕಾರದತ್ತ ಹೆಜ್ಜೆ ಇಡುತ್ತಿರುವ ಕಲಾನಿರ್ದೇಶಕ ಜಾನ್ ದೇವರಾಜ್.

`ದಿ ಮೆಲ್ಟಿಂಗ್ ಪಾಟ್ ಆಫ್ ಕಲ್ಚರ್~ ಎಂಬ ಹೆಸರಿನಡಿಯಲ್ಲಿ ಲಾಲ್‌ಬಾಗ್‌ನಲ್ಲಿ ಸೃಷ್ಟಿಸಲಾಗುತ್ತಿರುವ ಮಡಕೆಯಿದು. ಮಣ್ಣಿನಿಂದ ತಯಾರಾದ ವಿಶ್ವದ ಅತಿ ಎತ್ತರದ ಮಡಕೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ. ಸುಮಾರು 25 ಅಡಿ ಎತ್ತರ ಮತ್ತು 20 ಟನ್ ತೂಕದ ಮಡಕೆಯನ್ನು ನಿರ್ಮಿಸುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ ಜಾನ್ ದೇವರಾಜ್.

`ಅಷ್ಟು ಎತ್ತರದ ಮಡಕೆಯನ್ನು ನಿರ್ಮಿಸುವುದೊಂದೇ ನಮ್ಮ ಉದ್ದೇಶವಲ್ಲ. ಎಲ್ಲಾ ಜಾತಿ ಮತಗಳೂ ಒಂದರಲ್ಲೇ ವಿಲೀನಗೊಳ್ಳಬೇಕು. ಎಲ್ಲರೂ ಒಂದೇ ಎನ್ನುವ ಭಾವ ಮೂಡಬೇಕು. ಎಲ್ಲಾ ಜನಾಂಗದವರೂ ಒಂದುಗೂಡಿ ಒಂದೊಂದು ಹಿಡಿ ಮಣ್ಣನ್ನು ಪೇರಿಸಿದರೆ ಸುಂದರ ಮಡಕೆ ತಯಾರಾಗುತ್ತದೆ.

ಈ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಬೇಕು. ಇದು ಜನರಿಂದಲೇ ಬೆಳೆದುಬಂದ ಕಲೆಯಾಗಬೇಕು. ಅವರ ಕನಸುಗಳು ಇಲ್ಲಿ ಮೊಳೆಯಬೇಕು ಎಂಬುದು ನನ್ನ ಆಸೆ~ ಎನ್ನತ್ತಾ ದೇವರಾಜ್ ತಮ್ಮ ಕನಸಿನ ಮಾತುಗಳನ್ನು ಬಿಚ್ಚಿಟ್ಟರು.

ನಮ್ಮ ಮುಂದಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿರುವ ಮಕ್ಕಳು ಇದರಲ್ಲಿ ಪ್ರಮುಖವಾಗಿ ಪಾಲ್ಗೊಳ್ಳಬೇಕೆನ್ನುವ ಆಶಯ ಸಂಘಟಕರದ್ದು. ಮಕ್ಕಳಿಗಾಗಿ ಕಾರ್ಯಾಗಾರವನ್ನೂ ಇಲ್ಲಿ ಸಂಯೋಜಿಸಲಾಗಿದೆ.
 
ಮಡಕೆ ತಯಾರಿಕೆ ಜೊತೆಗೆ ಮಣ್ಣಿನಲ್ಲಿ ಹೇಗೆ ಕೆಲಸ ಮಾಡಬೇಕು, ಕಲಾಕೃತಿಗಳನ್ನು ಯಾವ ರೀತಿ ತಯಾರಿಸಬೇಕು ಎಂಬುದನ್ನೂ ಹೇಳಿಕೊಡಲಾಗುತ್ತದೆ. ಬಾರ್ನ್‌ಫ್ರೀ ಕಲಾ ಶಾಲೆಯ 20 ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

`ದಿ ಮೈಸೂರು ಸ್ಟೋನ್‌ವೇರ್ ಪೈಪ್ಸ್ ಅಂಡ್ ಪಾಟರೀಸ್~ ಕಂಪೆನಿ ಮತ್ತು ಕುರ್ಜಾ ಪಾಟರಿ ಸೆಂಟರ್‌ನ ತಜ್ಞರು ಮಡಕೆಯ ನಿರ್ಮಾಣ ತಂತ್ರಗಾರಿಕೆಯಲ್ಲಿ ಕೈಜೋಡಿಸಲಿದ್ದಾರೆ.

`ನಾನು 40 ದೇಶಗಳ ಉದ್ಯಾನವನಗಳನ್ನು ನೋಡಿದ್ದೇನೆ. ಆದರೆ ನಮ್ಮ ಲಾಲ್‌ಬಾಗ್ ಜಗತ್ತಿನ ಅತಿ ಸುಂದರವಾದ ಉದ್ಯಾನವನ. ದೇಶದ ಸುಮಾರು ಎರಡು ಸಾವಿರ ಮರಗಳು ಇಲ್ಲಿ ಜೀವತಳೆದಿವೆ.

ಆ ಎಲ್ಲ ಮರಗಳಿಂದ ಒಂದೊಂದು ಎಲೆಗಳನ್ನು ಸಂಗ್ರಹಿಸಿ ಮಡಕೆಗೆ ಅಂಟಿಸುತ್ತೇವೆ ಸೌತ್ ಕೊರಿಯಾದಲ್ಲಿ 15 ಅಡಿ ಎತ್ತರವುಳ್ಳ ಮೂರ್ತಿಯನ್ನು ಈ ರೀತಿಯ ತಂತ್ರಗಾರಿಕೆಯಲ್ಲಿ ನಿರ್ಮಿಸಲಾಗಿದೆ. ದೇಶದಲ್ಲೆಲ್ಲೂ ಈ ರೀತಿಯ ಕಲೆ ನಿರ್ಮಿತವಾಗಿಲ್ಲ. ಇದು ವಿಶ್ವ ದಾಖಲೆ ನಿರ್ಮಿಸಲಿದೆ~ ಎನ್ನುತ್ತಾರವರು.

ಮೆಲ್ಟಿಂಗ್ ಪಾಟ್ ತಯಾರಿಕೆ ಹೀಗೆ...
ಜೇಡಿಮಣ್ಣು (ಕೆರೆಮಣ್ಣು), ಕಬ್ಬಿಣದ ಅಂಶಗಳು (Faldsphar)ಕ್ವಾಡ್ಜ್, ಸೆರಾಮಿಕ್ ಪೌಡರ್ ಮೊದಲಾದವನ್ನು ಬಳಸಿ ಈ ಮಡಕೆಯನ್ನು ತಯಾರಿಸಲಾಗುತ್ತದೆ. ಹೆಚ್ಚು ಸುಟ್ಟಷ್ಟೂ ಹೆಚ್ಚು ಗಟ್ಟಿಗೊಳ್ಳುತ್ತಾ ಹೋಗುತ್ತದೆ. ಅದಕ್ಕಾಗಿ ಇದರ ಅಡಿಯಲ್ಲೇ ಬಟ್ಟಿಯನ್ನು (ಒಲೆ) ಮಾಡಲಾಗುತ್ತದೆ.

`ಅಡಿಯಲ್ಲಿ ನೂರು ಡಿಗ್ರಿ ತಾಪ ಇದ್ದರೆ ಮುಡಿಯಲ್ಲೂ ಅಷ್ಟೇ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕು. ಮಣ್ಣನ್ನು 560 ಡಿಗ್ರಿಯಲ್ಲಿ ಸುಟ್ಟಾಗ ಅದು ಶಾಶ್ವತವಾಗುತ್ತದೆ. ಟೆರಕೋಟಾ ಮಡಕೆಯಾಗಿ ಪರಿವರ್ತಿತವಾಗುತ್ತದೆ. ಹೀಗೆ ತಯಾರಾದ ಮಡಕೆ ಸುಮಾರು ಐದು ಸಾವಿರ ವರ್ಷಗಳವರೆಗೂ ಚಿರಂಜೀವಿ.

ಕೇಳಲಿಕ್ಕೆ, ನೋಡಲಿಕ್ಕೆ ಮಾತ್ರ ಇದು ಸುಲಭವೆನ್ನಿಸುತ್ತದೆ. ಆದರೆ ತಂತ್ರಗಾರಿಕೆಯನ್ನು ಅಷ್ಟೇ ಜಾಗರೂಕತೆಯಿಂದ ನಿಭಾಯಿಸಬೇಕು~ ಎಂಬುದು ದೇವರಾಜ್ ಮಾತು.
ಈ ಮಡಕೆ ತಯಾರಾದ ಮೇಲೆ ಎರಡು ಸಾವಿರ ಮರಗಳ ಎಲೆಗಳನ್ನು ಅದರ ಮೇಲೆ ಅಂಟಿಸಲಾಗುತ್ತದೆ. ಅಂದರೆ `ಬಹು ಎಲೆಗಳು ಒಂದೇ ಮರ~ ಎನ್ನುವಂತ`ಬಹು ಸಂಸ್ಕೃತಿ ಒಂದೇ ಜೀವ~ ಎನ್ನುವುದನ್ನು ಸಂಕೇತಿಸುವ ಉದ್ದೇಶ ಇದರದ್ದು.

ಭಾನುವಾರದಿಂದ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಜೂನ್ 20ರವರೆಗೆ ಹಂತ ಹಂತವಾಗಿ ಇದನ್ನು ತಯಾರಿಸಲಾಗುತ್ತದೆ. ಪ್ರತಿದಿನವೂ ಮಡಕೆಯ ಎತ್ತರವನ್ನು 2 ಅಡಿಯಷ್ಟು ಏರಿಸಲಾಗುತ್ತದೆ. ಆಗಸ್ಟ್ 15ರಂದು ಇದು ಉದ್ಘಾಟನೆಯಾಗಲಿದೆ.

ಹೀಗೆ ಕೈಜೋಡಿಸಿ...
ನೀವೂ ಈ ಮಡಕೆ ತಯಾರಿಕೆಯಲ್ಲಿ ಪಾಲ್ಗೊಳ್ಳಬೇಕೆ? ಹಾಗಾದರೆ ಲಾಲ್‌ಬಾಗ್‌ನ ಬೊಟಾನಿಕಲ್ ಗಾರ್ಡನ್ ಕಡೆ ಪಾದ ಬೆಳೆಸಿ. ಅಲ್ಲಿರುವ ಬೋನ್ಸಾಯ್ ಪಾರ್ಕ್‌ನಲ್ಲಿ ಬೆಳಿಗ್ಗೆ 9ರಿಂದ ಸಂಜೆ 5ರ ಒಳಗೆ ಬಂದು ನಿಮ್ಮ ಹೆಸರು ನೋಂದಾಯಿಸಿಕೊಂಡು ಹಿಡಿ ಮಣ್ಣನ್ನು ಹಾಕಿದರೆ ಸಾಕು. ನೋಂದಾವಣಿಗೆ 100 ರೂಪಾಯಿ.
 
ಮಡಕೆ ತಯಾರಿಕೆ ಕಾರ್ಯಗಾರದಲ್ಲಿ  ಪಾಲ್ಗೊಳ್ಳಲು ಆಸಕ್ತಿ ಉಳ್ಳವರು 1000 ರೂಪಾಯಿ ಪಾವತಿಸಬೇಕು. ನೋಂದಾವಣಿ ಮಾಡಿಕೊಂಡವರಿಗೆ ಸರ್ಟಿಫಿಕೇಟ್ ಕೂಡ ಕೊಡಲಾಗುತ್ತದೆ. ಸಮಯವಿಲ್ಲದವರು `Bornfree art school’ ಈ ವೆಬ್‌ಸೈಟ್‌ಗೆ ಲಾಗಿನ್ ಆಗಿ ರಿಜಿಸ್ಟರ್ ಮಾಡಿಕೊಳ್ಳಬಹುದು.

`ಮೆಲ್ಟಿಂಗ್ ಪಾಟ್~ ತಯಾರಿಕೆಗೆ ಅಂದಾಜು ಎಂಟು ಲಕ್ಷ ರೂಪಾಯಿ ಖರ್ಚಾಗುತ್ತದೆ. ಇದಕ್ಕೆ ಬೆಂಗಳೂರು ಜನತೆಯೂ ಸಹಾಯ ಹಸ್ತ ಚಾಚಿದರೆ ಸಂಘಟಕರ ಭಾರವನ್ನು ಒಂದಿಷ್ಟು ಇಳಿಸಬಹುದು.

ಕೈಜೋಡಿಸಿದವರು ಹೀಗಂತಾರೆ...
`ಐದು ವರ್ಷಗಳ ಹಿಂದೆ ಕಬ್ಬನ್ ಪಾರ್ಕ್‌ನಲ್ಲಿ ಇದೇ ರೀತಿಯ ಯೋಜನೆ ರೂಪಿಸಿದ್ದೆವು. ಆದರೆ ಅದು ವಿಫಲವಾಗಿತ್ತು. ಆ ಅನುಭವದ ಮೇಲೆ ಮತ್ತೆ ಈ ಸಾಹಸಕ್ಕೆ ಕೈ ಜೋಡಿಸಿದ್ದೇನೆ.  ಬಡ ಮಕ್ಕಳ ಕೈಯಲ್ಲಿ ಈ ಕಾರ್ಯಕ್ಕೆ ಮಣ್ಣು ಹಾಕಿಸುವುದರಿಂದ ಅದು ಇನ್ನೂ ಸದೃಢವಾಗುತ್ತದೆ ಎನ್ನುವ ಭರವಸೆ ನಮ್ಮಲ್ಲಿ.
 
ಇದು ಗಿನ್ನೆಸ್ ದಾಖಲೆ ನಿರ್ಮಿಸುತ್ತದೆ ಎನ್ನುವುದಕ್ಕಿಂತ ಎಲ್ಲರೂ ಒಟ್ಟುಗೂಡಿ ಮಾಡುತ್ತಿರುವ ಹೆಮ್ಮೆ ಇದೆ~ ಎಂಬುದು ಬಾರ್ನ್‌ಫ್ರೀ ಕಲಾ ಶಾಲೆಯ ಹಿರೋಶಿಮಾ ಮೂಲದ ವಿದ್ಯಾರ್ಥಿನಿ ಮಿಓಯಿ ಮಾತು.

`ಇದು ಪರಿಸರ ಸ್ನೇಹಿ ಕಾರ್ಯ. ಎಲ್ಲರೂ ಈ ಕಾರ್ಯದಲ್ಲಿ ಪಾಲ್ಗೊಂಡಾಗಲೇ ಅದು ಸಾರ್ಥಕ್ಯ ಪಡೆದುಕೊಳ್ಳುತ್ತದೆ. ಪರಿಸರವನ್ನು ಹೇಗೆ ಸಂರಕ್ಷಿಸಬೇಕು ಎಂಬುದನ್ನು ಜನರಲ್ಲಿ ಅರಿಕೆ ಮಾಡಿಕೊಳ್ಳಬೇಕು. ಕುಂಬಾರನಿಗೆ ವರುಷ; ದೊಣ್ಣೆಗೆ ನಿಮಿಷ ಎನ್ನುವ ಮಾತಿದೆ.

ಆದರೆ ಈ ಕುಂಬ ಸಾವಿರ ವರ್ಷಗಳ ಇತಿಹಾಸ ಸೃಷ್ಟಿಸುತ್ತದೆ~ ಎಂದು ಆತ್ಮವಿಶ್ವಾಸ ತುಂಬಿದ ನಗು ಬೀರಿದರು ದಿ ಮೈಸೂರು ಸ್ಟೋನ್‌ವೇರ್ ಪೈಪ್ಸ್ ಅಂಡ್ ಪಾಟರೀಸ್ ಕಂಪೆನಿಯ ಯೋಜನಾಧಿಕಾರಿ ಮಧುಸೂದನ್. ನಗರದ ಕಲಾಮಂದಿರ ಸ್ಕೂಲ್ ಆಫ್ ಆರ್ಟ್‌ನ ವಿದ್ಯಾರ್ಥಿನಿಯರಾದ ಶ್ವೇತಾ ಕಾಶಿಕರ ಮತ್ತು ಇಂದು ವರ್ಷಾ ಸಹ ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT