ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬಬ್ಬಾ... ಸಿಮರೂಬಾ...

Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ತೆಂಗಿಗೆ ಕಲ್ಪವೃಕ್ಷ ಎಂಬ ಅನ್ವರ್ಥ ನಾಮವಿದೆ. ಅದರ ಎಳನೀರು, ಕಾಯಿ, ನಾರು, ಎಲೆ, ಗಿಡ ಹೀಗೆ ಎಲ್ಲವೂ ಬಹಳ ಉಪಯುಕ್ತವಾಗಿದ್ದು, ಅದನ್ನು ಬೆಳೆದವರ ಬಾಳನ್ನು ಬಂಗಾರವಾಗಿಸುತ್ತದೆ. ನಾವೆಲ್ಲಾ ಹೀಗೆ ಕಲ್ಪವೃಕ್ಷವೆಂದು ಕರೆಯಬಹುದಾದ ಇನ್ನೊಂದು ಗಿಡವಿದೆ. ಅದೆಂದರೆ...  ಸಿಮರೂಬಾ (ಶಾಸ್ತ್ರೀಯ ಹೆಸರು: ಸಿಮರೂಬಾ ಗ್ಲೌಕಾ)   
ಹೌದು. ಸಿಮರೂಬಾ ಎಂಬ ಗಿಡದ ಪ್ರತಿಯೊಂದು ಭಾಗವೂ ಬಹಳ ಉಪಯುಕ್ತ. ಸಿಮರೂಬಾ ಗಿಡದ ಬೀಜಗಳಿಂದ ಎಣ್ಣೆಯನ್ನು ಪಡೆಯಬಹುದು. ಈ ಎಣ್ಣೆಯನ್ನು ಖಾದ್ಯವಾಗಿ ಅಲ್ಲದೆ ಮುಖ್ಯವಾಗಿ ಜೈವಿಕ ಇಂಧನವಾಗಿ ಉಪಯೋಗಿಸಬಹುದು.

ಹೊಂಗೆ, ಜತ್ರೋಪಾ, ಬೇವು ಮುಂತಾದ ಗಿಡಗಳಿಂದ ಸಿಗುವ ಎಣ್ಣೆಗಿಂತಲೂ ಹೆಚ್ಚಿನ ಪ್ರಮಾಣದ ಎಣ್ಣೆಯನ್ನು ಸಿಮರೂಬಾದಿಂದ ಪಡೆಯಬಹುದು. ಬೀಜಗಳಿಂದ ಶೇ.60-75ರಷ್ಟು ತೈಲ ದೊರಕುತ್ತದೆ. (ಉಳಿದ ಗಿಡಗಳಿಂದ ಶೇ30-50ರಷ್ಟು ತೈಲವನ್ನು ಪಡೆಯಬಹುದು).

ಈ ಲೆಕ್ಕದಲ್ಲಿ ಒಂದು ಹೆಕ್ಟೇರ್ ಪ್ರದೇಶದಲ್ಲಿ, ಕೃಷಿ ಬೆಳೆಗಳ ಜೊತೆಗೆ ಬೆಳೆಸಿದ 625 ಗಿಡಗಳಿಂದ ಅಂದಾಜು ಒಂದರಿಂದ ಎರಡು ಟನ್ನುಗಳಷ್ಟು ಎಣ್ಣೆ ಸಿಗುತ್ತದೆ. ಒಂದು ಕೆ.ಜಿಗೆ 30 ರೂಪಾಯಿ ಎಂದು ಕೊಂಡರೆ, ಒಂದು ಹೆಕ್ಟೇರಿಗೆ ಸುಮಾರು 30ರಿಂದ 60ಸಾವಿರ ರೂಪಾಯಿಗಳಷ್ಟು ಹೆಚ್ಚುವರಿ ಆದಾಯವನ್ನು ಪಡೆಯಬಹುದಾಗಿದೆ.

ಇದರ ಎಲೆಗಳು, ಬೀಜಗಳ ಸಿಪ್ಪೆ, ಟೊಂಗೆ, ಹಿಂಡಿಗಳನ್ನು ಬಳಸಿ ಒಳ್ಳೆಯ ಗುಣಮಟ್ಟದ ಎರೆಗೊಬ್ಬರವನ್ನು ತಯಾರಿಸಬಹುದು. ಮರಮುಟ್ಟನ್ನು ಪೀಠೋಪಕರಣಗಳು, ದಿನನಿತ್ಯದ ವಸ್ತುಗಳು, ಮೂರ್ತಿಗಳು ಮುಂತಾದವುಗಳನ್ನು ಕೂಡ ತಯಾರಿಸಲು ಬಳಸುತ್ತಾರೆ.


ಮೊದಲ ಸಲ ಗಿಡವನ್ನು ಕಡಿದ ನಂತರ ಮತ್ತೆ ಏಳು ವರ್ಷಗಳಲ್ಲಿ ಒಳ್ಳೆಯ ಮರ ಕೊಯ್ಲಿಗೆ ಸಿದ್ಧವಾಗುತ್ತದೆ. ಬಂಜರು ಭೂಮಿಗಳು, ಸವಳು ಪೀಡಿತ ನೆಲದಲ್ಲಿ, ಕೃಷಿಗೆ ಅಯೋಗ್ಯವಾಗಿರುವ ಮಣ್ಣಿನಲ್ಲಿ ಕೂಡ ಸ್ವಲ್ಪ ಕಾಳಜಿ ವಹಿಸಿ ಬೆಳೆಸಿದರೆ, ಅದು ಬರಡು ನೆಲದಲ್ಲಿ ಹಸಿರನ್ನು ಉಕ್ಕಿಸಿ ಮಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ.

ಕೃಷಿ ಬೆಳೆಗಳ ಜೊತೆ-ಜೊತೆಗೆ ಬದುಗಳ ಮೇಲೆ ಸಿಮರೂಬಾವನ್ನು ಬೆಳಸುವುದು ಒಳ್ಳೆಯದು. ಒಂದು ವೇಳೆ ಸಿಮರೂಬಾವನ್ನೇ ಮುಖ್ಯ ಬೆಳೆಯಾಗಿ ತೆಗೆದುಕೊಂಡರೆ ಅದರ ಸಾಲಗಳ ನಡುವೆ ಅಲಸಂದೆ, ರಾಗಿ, ಮೇವಿನ ಬೆಳೆಗಳನ್ನು ಬೆಳೆಯಬಹುದು. ಮೇವಿನ ಬೆಳೆಗಳನ್ನು ಬೆಳೆದರೆ ಹೈನುಗಾರಿಕೆಯನ್ನು ಕೂಡ ಉಪ ಕಸುಬಾಗಿ ತೆಗೆದುಕೊಳ್ಳಬಹುದು.

ಅದ್ಭುತ ಔಷಧಿ
ಸಿಮರೂಬಾವನ್ನು ಬೆಳೆಯುವುದಕ್ಕೆ ಇನ್ನೊಂದು ಬಹಳ ಮುಖ್ಯವಾದ ಕಾರಣವಿದೆ. ಅದೊಂದು ಅದ್ಭುತ ಔಷಧಿಯಾಗಿದೆ. ಅದರ ಎಲೆ, ದೇಟು, ತೊಗಟೆ (ಎಲ್ಲವೂ ಔಷಧಮಯ. ಇವುಗಳಲ್ಲಿ ಇರುವ ಐಲ್ಯಾಂಥಿನೋನ್, ಗ್ಲೌಕಾರುಬಿನೋನ್, ಹೊಲಾಕ್ಯಾಂಥೇನ್ ಮುಂತಾದ  ಕ್ವ್ಯಾಸ್ಸಿನೋಯಿಡ್‌ಗಳೆಂಬ ರಾಸಾಯನಿಕಗಳಿಂದ ಸಿಮರೂಬಾಕ್ಕೆ ಔಷಧೀಯ ಗುಣಗಳು ಬಂದಿವೆ. ಭೇದಿಯಂತಹ ಸಾಮಾನ್ಯ ರೋಗದ ಸಮಸ್ಯೆಯಿಂದ ಹಿಡಿದು ಕ್ಯಾನ್ಸರ್‌ವರೆಗೆ ಅನೇಕ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ ಎಂದು ದೃಢಪಟ್ಟಿದೆ.

ಪಿತ್ತೋದ್ರೇಕ, ಗ್ಯಾಸ್ ಟ್ರಬಲ್, ಕೆಮ್ಮು, ನೆಗಡಿ, ರಕ್ತ ಹೀನತೆ, ಅಸ್ತಮಾ, ಅನ್ನನಾಳದ ಹುಣ್ಣು, ಗಾಯ, ಸರ್ಪಸುತ್ತು, ಎಚ್1 ಎನ್1, ಚಿಕೂನ್‌ಗುನ್ಯಾ, ಹೆಪೆಟೈಟಿಸ್, ಋತುಚಕ್ರ ಸಮಸ್ಯೆಗಳು, ಬಿಳಿ ಸೆರಗು, ಒಂದು ಹಾಗೂ ಎರಡನೆಯ ಹಂತದ ವಿವಿಧ ಬಗೆಯ ಕ್ಯಾನ್ಸರ್‌ಗಳು,.. ಹೀಗೆ ಈ ಸಿಮರೂಬಾ ಗುಣ ಪಡಿಸಬಹುದಾದ ರೋಗಗಳ ಪಟ್ಟಿ ಬಹಳ ದೊಡ್ಡದು..!  

ಇಂಥ ಒಳ್ಳೆಯ ಗುಣಗಳ ಗಣಿಯಾಗಿರುವ ಸಿಮರೂಬಾದ ಬಹುಮುಖ ಉಪಯುಕ್ತತೆಯನ್ನು ಅನಾವರಣಗೊಳಿಸಿದವರೆಂದರೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ವಿಜ್ಞಾನಿಗಳಾಗಿ ನಿವೃತ್ತರಾಗಿರುವ ಡಾ. ಶ್ಯಾಮಸುಂದರ ಜೋಶಿ ಹಾಗೂ ಡಾ. ಶಾಂತಾ ಜೋಶಿ ದಂಪತಿ. ತಮ್ಮ ಜೀವನದ ಇಪ್ಪತ್ತು ವರ್ಷಗಳಿಗೂ ಅಧಿಕ ಸಮಯವನ್ನು ಸಿಮರೂಬಾದ ಒಳ-ಹೊರಗನ್ನು ಅರಿತು, ತಮ್ಮ ಸಂಶೋಧನೆಯ ತಿರುಳನ್ನು ಜಗತ್ತಿಗೆ ತಿಳಿಸುವ ನಿಟ್ಟಿನಲ್ಲಿ ಸವೆಸಿದ್ದಾರೆ.

ಸಿಮರೂಬಾವನ್ನು ಬೆಳೆದ ರೈತರ ಹೊಲಗಳು ಹಸಿರನ್ನು ಉಕ್ಕಿಸಿದರೆ, ಅದನ್ನು ಔಷಧಿಯಾಗಿ ಸೇವಿಸಿದವರನ್ನು ಚೈತನ್ಯಶೀಲರನ್ನಾಗಿಸಿದೆ. ತಮ್ಮ ಆರೋಗ್ಯದ ಸಮಸ್ಯೆಗಳನ್ನು ತೆಗೆದುಕೊಂಡು ಅವರಲ್ಲಿಗೆ ಬಂದವರಿಗೆ ಅವರು ನೀಡುವುದು, ಒಣಗಿದ ಸಿಮರೂಬಾ ಎಲೆಗಳನ್ನು ಇಲ್ಲವೆ ದೇಟುಗಳನ್ನು. ಅವುಗಳಿಂದ ತಯಾರಿಸಿದ ಕಷಾಯವನ್ನು ಕುಡಿದವರಿಗೆ ರೋಗದಿಂದ ನಿವೃತ್ತಿ...! ಅವರು ನೀಡುವ ಸಿಮರೂಬಾದ ಎಲೆಗಳು ಕ್ಯಾನ್ಸರ್ ಗುಣಪಡಿಸಿವೆ. ರೋಗಿಗಳ ಆನಂದದಲ್ಲಿಯೇ ತಮ್ಮ ಆನಂದವನ್ನು ಕಾಣುತ್ತಿದ್ದಾರೆ ಈ ದಂಪತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT