ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬರ ಇಲ್ಲದ ಖಳ

Last Updated 19 ಜುಲೈ 2012, 19:30 IST
ಅಕ್ಷರ ಗಾತ್ರ

ಖಳನಟರ ಯಾವ ಲಕ್ಷಣವೂ ಇಲ್ಲದ `ತಣ್ಣನೆಯ ವಿಲನ್~ ಎಂದೇ ಹೆಸರಾದವರು ನಟ ಅಶೋಕ್ ರಾವ್. ಎತ್ತರದ ದೇಹ, ಸೌಮ್ಯ ಮುಖ, ಕಂಚಿನ ಕಂಠ, ಇರಿಯುವಂತಹ ನೋಟ- ಇವೆಲ್ಲ ಅಶೋಕ್ ರಾವ್ ನಟನೆಗೆ ಮೆರುಗು ತಂದಿವೆ.

ಅಶೋಕ್ ಉಳಿದ ಖಳರಂತೆ ಆರ್ಭಟಿಸುವುದಿಲ್ಲ. ಆದರೆ ಕ್ರೌರ್ಯವನ್ನು ತಮ್ಮ ನಟನೆಯಲ್ಲಿ ಸಮರ್ಥವಾಗಿ ಹೊರಹೊಮ್ಮಿಸಬಲ್ಲರು. ತಮ್ಮ ಸಾಮರ್ಥ್ಯವನ್ನು ಇಂದು ಚಿತ್ರರಂಗ ಮರೆತಂತೆ ವರ್ತಿಸುತ್ತಿದೆ ಎಂಬುದು ಅವರ ನೋವು.

ಅಶೋಕ್ ರಾವ್ ಇಂಗ್ಲಿಷ್ ರಂಗಭೂಮಿಯಿಂದ ಬಂದವರು. ಆ ಕಾರಣಕ್ಕಾಗಿಯೇ ಅವರ ಮಾತುಗಳಲ್ಲಿ ಇಂಗ್ಲಿಷ್ ಧಾರಾಳವಾಗಿ ಸುಳಿಯುತ್ತದೆ. ಊರು ಕಾಸರಗೋಡು. ಕೊಂಕಣಿ ಮಾತೃಭಾಷೆ. ರಂಗಭೂಮಿಯಲ್ಲಿ ನಿರತರಾಗಿದ್ದ ಅವರನ್ನು `ಪರಶುರಾಮ್~ ಚಿತ್ರದ ಖಳನ ಪಾತ್ರ ಹುಡುಕಿ ಬಂತು. ಮೊದಲ ಚಿತ್ರದಲ್ಲಿಯೇ ರಾಜ್‌ಕುಮಾರ್ ಜೊತೆ ನಟಿಸುವ ಅವಕಾಶ.

`ಪರಶುರಾಮ್~ ಚಿತ್ರದಲ್ಲಿ ಸಿಕ್ಕ ಪ್ರಧಾನ ಖಳನ ಪಾತ್ರವನ್ನು ಕಂಡು ಹಲವರು ನೀವು ಅಣ್ಣಾವ್ರ ಕುಟುಂಬಕ್ಕೆ ಹತ್ತಿರದವರಾ? ಎಂದು ಕೇಳ್ದ್ದಿದೂ ಇದೆಯಂತೆ. `ಅದು ನನ್ನ ಪೂರ್ವ ಜನ್ಮದ ಪುಣ್ಯ~ ಎನ್ನುವ ಅಶೋಕ್, ಹಿರಿಯ ನಟ ಸಿ.ಆರ್.ಸಿಂಹ ತಮ್ಮನ್ನು ಆ ಪಾತ್ರಕ್ಕೆ ಶಿಫಾರಸು ಮಾಡಿದ್ದನ್ನು ನೆನಪಿಸಿಕೊಳ್ಳುತ್ತಾರೆ.

`ಪರಶುರಾಮ್~ ನಂತರ ಎಷ್ಟೊಂದು ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವೆಂದರೆ, ರಾಜ್‌ಕುಮಾರರ ಮತ್ತೊಂದು ಚಿತ್ರ `ಆಕಸ್ಮಿಕ~ದಲ್ಲಿ ನಟಿಸಲು ಬಂದ ಕರೆಯನ್ನು ಒಪ್ಪಿಕೊಳ್ಳಲಾಗಲಿಲ್ಲ. ಆ ಅವಕಾಶ ಕೈತಪ್ಪಿದರೂ, ಆ ಬಳಿಕ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಅವರೊಂದಿಗೆ ನಟಿಸಿದ ಖುಷಿ ಅವರಿಗಿದೆ.        
                                                               
`ಖಳನ ಪಾತ್ರ ನನ್ನ ವೈಶಿಷ್ಟ್ಯತೆ~ ಎಂದು ನಗುವ ಅವರು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಿರಂತರವಾಗಿ ವಿಲನ್ ಪಾತ್ರಗಳನ್ನು ಮಾಡಿದರೂ ಅಶೋಕ್ ರಾವ್ ಬೇಸರ ಮಾಡಿಕೊಂಡಿಲ್ಲ. `ನಾನು ವಿಲನ್ ತರ ಕಾಣಲ್ಲ. ಅದೇ ನನಗೊಂದು ಸವಾಲು. ವಿಲನ್ ರೀತಿ ಇಲ್ಲದೆ ಇರುವವನು ವಿಲನ್ ಆಗಿ ನಟಿಸುವುದು ಹೆಚ್ಚು ಪರಿಣಾಮ ಬೀರುತ್ತದೆ.

ನಾನು ಅನಿರೀಕ್ಷಿತ ವಿಲನ್ ಆಗಿಯೇ ಹೆಚ್ಚು ಪರಿಚಿತ. ಜನ ಇಂದಿಗೂ ನನ್ನನ್ನು ಗುರುತಿಸುವುದು, ಇಷ್ಟಪಡುವುದು ಅದಕ್ಕಾಗಿಯೇ. ಖಳನ ಪಾತ್ರಗಳು ಕಲಾವಿದನಾಗಿ ತೃಪ್ತಿ ನೀಡಿದವು. ಅದಕ್ಕೆ ಅವಕಾಶ ಮಾಡಿಕೊಟ್ಟ ಕನ್ನಡ ಚಿತ್ರರಂಗಕ್ಕೆ ನಾನು ಋಣಿ~ ಎನ್ನುತ್ತಾರೆ ಅಶೋಕ್ ರಾವ್.

ಖಳನ ಪಾತ್ರಗಳ ನಡುವೆ `ಬಾ ನಲ್ಲೆ ಮಧುಚಂದ್ರಕೆ~ ಚಿತ್ರದಲ್ಲೊಂದು ಸಕಾರಾತ್ಮಕ ಪಾತ್ರ ಅವರಿಗೆ ಸಿಕ್ಕಿತು. ಆದರೂ ಅವರ ಇಮೇಜ್ ಬದಲಾಗಲಿಲ್ಲ. `ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನೀವೇ ಇದಕ್ಕೆ ಸೂಕ್ತ ವ್ಯಕ್ತಿ ಎಂದು ಹೇಳಿ `ಬಾ ನಲ್ಲೆ ಮಧುಚಂದ್ರಕೆ~ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಕೊಟ್ಟರು. ಅದಾದ ನಂತರವೂ ನಾನು ಖಳನಾಗಿಯೇ ಉಳಿದುಕೊಂಡೆ. ಜನ ನನ್ನನ್ನು ಖಳನಾಗಿಯೇ ಇಷ್ಟಪಟ್ಟರು~ ಎನ್ನುತ್ತಾರೆ ಅವರು.

`ಒಂದೇ ವರ್ಷದಲ್ಲಿ 15 ಸಿನಿಮಾದಲ್ಲಿ ನಟಿಸಿದ್ದೆ. ದಿನಕ್ಕೆ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದೆ. ಅಷ್ಟು ಬಿಜಿಯಾಗಿದ್ದ ದಿನಗಳಿದ್ದವು. ಇದೀಗ ತುಂಬಾ ಜನ ಕಲಾವಿದರು ಬಂದಿದ್ದಾರೆ. ಸ್ಪರ್ಧೆ ಜಾಸ್ತಿಯಾಗಿದೆ~ ಎನ್ನುವ ಅವರಿಗೆ ಇದೀಗ ತಮ್ಮ ಮೂಲ ನೆಲೆ ರಂಗಭೂಮಿಯಲ್ಲಿ ಮತ್ತೆ ಸಕ್ರಿಯರಾಬೇಕೆಂಬ ಹಂಬಲ.

ತಮಿಳು, ತೆಲುಗು, ಹಿಂದಿ, ಇಂಗ್ಲಿಷ್, ಕೊಂಕಣಿ ಚಿತ್ರಗಳಲ್ಲಿಯೂ ನಟಿಸಿರುವ ಅವರು ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಅನಂತನಾಗ್, ಶಂಕರ್‌ನಾಗ್, ಪ್ರಭಾಕರ್, ದೇವರಾಜ್ ಮುಂತಾದ ಪ್ರಮುಖ ನಟರೊಂದಿಗೆ ನಟಿಸಿದ ಅನುಭವ ಹೊಂದಿದ್ದಾರೆ.
 
ಅಷ್ಟೇ ಅಲ್ಲದೇ ತಮಿಳಿನಲ್ಲಿ ಕಮಲ ಹಾಸನ್ ಮತ್ತು ರಜನಿಕಾಂತ್ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

`ಆವೇಶ~, `ಜೋಡಿಹಕ್ಕಿ~, `ಅರಳಿದ ಹೂವುಗಳು~, `ತಮಸ್ಸು~, `ಮತ್ತೆ ಹಾಡಿತು ಕೋಗಿಲೆ~, `ಕಾಲಚಕ್ರ~, `ಅಶ್ವಮೇಧ~, `ಅಶೋಕ ಚಕ್ರ~, `ಟುವ್ವಿ ಟುವ್ವಿ~ ಮುಂತಾದವು ಅವರು ನಟಿಸಿರುವ ಪ್ರಮುಖ ಚಿತ್ರಗಳು.

ಸದ್ಯ ಅವರು `ಏಂಜಲ್~ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಝೀ ವಾಹಿನಿಯ `ಮಡದಿ~ ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ. ಅದರಲ್ಲಿ ಕುಟುಂಬದ ಯಜಮಾನನ ಪಾತ್ರ ಅವರದು. ಈ ಹಿಂದೆ ಅವರು `ಉಯ್ಯಾಲೆ~, `ನಚಿಕೇತ~, `ಮಹಾಯಜ್ಞ~ ಧಾರಾವಾಹಿಗಳಲ್ಲಿ ನಟಿಸಿದ್ದರಂತೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT