ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬರಿಸಿದ ರಾಬಿನ್ ಉತ್ತಪ್ಪ

ಶಫಿ ದಾರಾಷ ಕ್ರಿಕೆಟ್: ಸವಾಲಿನ ಮೊತ್ತದತ್ತ ಕೆಎಸ್‌ಸಿಎ ಇಲೆವೆನ್
Last Updated 17 ಜುಲೈ 2013, 19:45 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ ಅನುಭವ ಹೊಂದಿರುವ ರಾಬಿನ್ ಉತ್ತಪ್ಪ ತೋರಿದ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕೆಎಸ್‌ಸಿಎ ಇಲೆವೆನ್ ತಂಡ ಶಫಿ ದಾರಾಷ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲಿ ಸವಾಲಿನ ಮೊತ್ತದತ್ತ ಹೆಜ್ಜೆ ಹಾಕಿದೆ.

ಆಲೂರಿನಲ್ಲಿರುವ ಒಂದನೇ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಎದುರಿನ ಪಂದ್ಯದಲ್ಲಿ ಬಲಗೈ ಬ್ಯಾಟ್ಸ್‌ಮನ್ ಉತ್ತಪ್ಪ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟ್ ಬೀಸಿದರು. ಇದರಿಂದ ಕೆಎಸ್‌ಸಿಎ ಇಲೆವೆನ್ ಮೊದಲ ದಿನದಾಟದ ಅಂತ್ಯಕ್ಕೆ 94 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 393 ರನ್ ಗಳಿಸಿದೆ.

ಆರಂಭಿಕ ಬ್ಯಾಟ್ಸ್‌ಮನ್ ಉತ್ತಪ್ಪ 276 ಎಸೆತಗಳನ್ನು ಎದುರಿಸಿ 223 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಇದರಲ್ಲಿ 25 ಬೌಂಡರಿ ಹಾಗೂ ಅರು ಸಿಕ್ಸರ್‌ಗಳು ಸೇರಿವೆ. ಉತ್ತಪ್ಪ ಜೊತೆ ಸೇರಿದ ಕೆ.ಎಲ್. ರಾಹುಲ್ (68, 153ಎಸೆತ, 8 ಬೌಂಡರಿ) ಕೂಡಾ ಅರ್ಧಶತಕ ಗಳಿಸಿದರು.

ಐಪಿಎಲ್‌ನಲ್ಲಿ ವೇಗದ ಶತಕ ಗಳಿಸಿದ ದಾಖಲೆ ಹೊಂದಿರುವ ಮನೀಷ್ ಪಾಂಡೆ (ಬ್ಯಾಟಿಂಗ್ 51, 67ಎಸೆತ, 6ಬೌಂಡರಿ, 1 ಸಿಕ್ಸರ್) ಜಾರ್ಖಂಡ್ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಮೂಲತಃ ಉತ್ತರಾಂಚಲದವರಾದ ಮನೀಷ್ ಕರ್ನಾಟಕವನ್ನು ಪ್ರತಿನಿಧಿಸುತ್ತಾರೆ.

ಅಲ್ಪ ಮೊತ್ತಕ್ಕೆ ಕುಸಿದ ಕೆಎಸ್‌ಸಿಎ ಕೋಲ್ಟ್ಸ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಬ್ರಾರ್ ಖಾಜಿ ಸಾರಥ್ಯದ ಕೆಎಸ್‌ಸಿಎ ಕೋಲ್ಟ್ಸ್ ತಂಡ ಒಡಿಶಾ ಎದುರಿನ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿತ ಕಂಡಿತು. ಈ ತಂಡ 91.1 ಓವರ್‌ಗಳಲ್ಲಿ 204 ರನ್ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿತು.

ಪಂದ್ಯದ ಆರಂಭದಿಂದಲೇ ಚುರುಕಿನ ದಾಳಿ ನಡೆಸಿದ ಒಡಿಶಾ ಬೌಲರ್‌ಗಳು ಕೆಎಸ್‌ಸಿಎ ಕೋಲ್ಟ್ಸ್ ಬ್ಯಾಟ್ಸ್‌ಮನ್‌ಗಳ ಮೇಲೆ ಬಹುಬೇಗ ಹಿಡಿತ ಸಾಧಿಸಿದರು. ಕೋಲ್ಟ್ಸ್ ಒಂದು ಹಂತದಲ್ಲಿ 44 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡು 100 ರನ್ ಒಳಗೆ ಆಲ್‌ಔಟ್ ಆಗುವ ಭೀತಿಯಲ್ಲಿತ್ತು. ಆದರೆ, ಕೆ.ವಿ. ಸಿದ್ಧಾರ್ಥ್ (77, 176ಎಸೆತ, 13ಬೌಂಡರಿ) ಹಾಗೂ ನಾಯಕ ಖಾಜಿ (52, 153ಎಸೆತ, 7ಬೌಂಡರಿ) ಆಸರೆಯಾದರು. ಈ ಜೋಡಿ 122 ರನ್ ಜೊತೆಯಾಟವಾಡಿತು.

ಎರಡು ಮೂರು ದಿನಗಳಿಂದ ನಗರದಲ್ಲಿ ಆಗಾಗ್ಗೆ ಮಳೆ ಸುರಿಯುತ್ತಿರುವ ಕಾರಣ ಚೆಂಡು ತಳಮಟ್ಟದಲ್ಲಿ ನುಗ್ಗಿ ಬರುತ್ತಿತ್ತು. ಚೆಂಡನ್ನು ಅಂದಾಜಿಸಲು ಆರಂಭದಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಸಾಧ್ಯವಾಗಲಿಲ್ಲ. ಪರಿಸ್ಥಿತಿಯ ಲಾಭ ಪಡೆದ ಒಡಿಶಾ ಕೆಎಸ್‌ಸಿಎ   ಕೋಲ್ಟ್ಸ್ ತಂಡವನ್ನು ಅಲ್ಪ  ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಆದರೆ, ಆರಂಭಿಕ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದು ಕೋಲ್ಟ್ಸ್ ತಂಡದ ಹಿನ್ನಡೆಗೆ ಕಾರಣವಾಯಿತು.

ಒಡಿಶಾ ತಂಡ ಕ್ಷೇತ್ರರಕ್ಷಣೆಯಲ್ಲಿ ಹಲವು ತಪ್ಪುಗಳನ್ನು ಮಾಡಿತು. ನಾಲ್ಕು ಕ್ಯಾಚ್ ಕೈಚೆಲ್ಲಿದ್ದರಿಂದ ಕೋಲ್ಟ್ಸ್ ತಂಡಕ್ಕೆ 200ರ ಗಡಿ ದಾಟಲು ಸಾಧ್ಯವಾಯಿತು. ಸಿದ್ಧಾರ್ಥ್ ಒಂದು ಸಲ ರನ್ ಔಟ್ ಆಗುವ ಅಪಾಯದಿಂದ ಪಾರಾದರಾದರೂ, ಈ `ಜೀವದಾನ' ಸಿಕ್ಕ ನಂತರ ಅವರು ತುಂಬಾ ಹೊತ್ತು ಕ್ರೀಸ್‌ನಲ್ಲಿರಲಿಲ್ಲ.

ಮಳೆ ಅಡ್ಡಿ: ಆದಿತ್ಯ ಗ್ಲೋಬಲ್ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದ್ದ ಗೋವಾ ಕ್ರಿಕೆಟ್ ಸಂಸ್ಥೆ ಮತ್ತು ರಾಜಸ್ತಾನ ತಂಡಗಳ ನಡುವಿನ ಪಂದ್ಯದ ಮೊದಲ ದಿನದಾಟಕ್ಕೆ ಮಳೆ ಅಡ್ಡಿಯಾಯಿತು.

ಸಂಕ್ಷಿಪ್ತ ಸ್ಕೋರು:
ಬೆಂಗಳೂರಿನಲ್ಲಿ ನಡೆದ ಪಂದ್ಯಗಳು
: ಕೆಎಸ್‌ಸಿಇ ಇಲೆವೆನ್: 94 ಓವರ್‌ಗಳಲ್ಲಿ 2 ವಿಕೆಟ್‌ಗೆ 393. (ರಾಬಿನ್ ಉತ್ತಪ್ಪ ಬ್ಯಾಟಿಂಗ್ 223, ಕೆ.ಎಲ್. ರಾಹುಲ್ 68, ಗಣೇಶ್ ಸತೀಶ್ 38, ಮನೀಷ್ ಪಾಂಡೆ ಬ್ಯಾಟಿಂಗ್ 51; ರಾಹುಲ್ ಶುಕ್ಲಾ 82ಕ್ಕೆ1, ಸಮರ್ ಖಾದ್ರಿ 19ಕ್ಕೆ1). ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಎದುರಿನ ಪಂದ್ಯ.

ಕೆಎಸ್‌ಸಿಎ ಕೋಲ್ಟ್ಸ್: 91.1 ಓವರ್‌ಗಳಲ್ಲಿ 204 (ಕೆ.ವಿ. ಸಿದ್ಧಾರ್ಥ್ 77, ಅಬ್ರಾರ್ ಖಾಜಿ 52; ಬಸಂತ್ ಮೊಹಾಂತಿ 46ಕ್ಕೆ3, ಸೂರ್ಯಕಾಂತ್ ಪ್ರಧಾನ್ 50ಕ್ಕೆ4, ಜಯಂತ್ ಬೆಹೆರಾ 39ಕ್ಕೆ2.) ಒಡಿಶಾ ಕ್ರಿಕೆಟ್ ಸಂಸ್ಥೆ 3.5 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 61. (ಗಿರಿಜಾ ರಾವತ್ ಬ್ಯಾಟಿಂಗ್ 16; ಎಂ. ಡೇವಿಡ್ 5ಕ್ಕೆ1).

ಬಂಗಾಳ ಕ್ರಿಕೆಟ್ ಸಂಸ್ಥೆ: 79.4 ಓವರ್‌ಗಳಲ್ಲಿ 262 (ರೋಹನ್ ಬ್ಯಾನರ್ಜಿ 47, ವೃದ್ಧಿಮಾನ್ ಸಹಾ 34, ಸಂದೀಪನ್ ದಾಸ್ 40, ವೀರ್ ಪ್ರತಾಪ್ 31; ರೋನಿತ್ ಮೋರೆ 57ಕ್ಕೆ3, ಸ್ಟಾಲಿನ್ ಹೂವರ್ 57ಕ್ಕೆ3, ಎಸ್.ಕೆ. ಮೊಯಿನುದ್ದೀನ್ 54ಕ್ಕೆ2). ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್ 13 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 55. (ಆರ್. ಸಮರ್ಥ್ ಬ್ಯಾಟಿಂಗ್ 30).

ಹರಿಯಾಣ ಕ್ರಿಕೆಟ್ ಸಂಸ್ಥೆ: 100.5 ಓವರ್‌ಗಳಲ್ಲಿ 5 ವಿಕೆಟ್‌ಗೆ 358. (ಕೆ. ಅಭಿಮನ್ಯು 80, ಸುನಯ್ ಸಿಂಗ್ 74, ಪ್ರತೀಕ್ ಪನ್ವಾರ್ ಬ್ಯಾಟಿಂಗ್ 61, ಜಯಂತ್ ಯಾದವ್ 50; ಚಿರಾಗ್ ಜೈನ್ 64ಕ್ಕೆ2, ಡಿ. ಜಡೇಜ 114ಕ್ಕೆ20. ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಎದುರಿನ ಪಂದ್ಯ.

ತ್ರಿಪುರಾ ಕ್ರಿಕೆಟ್ ಸಂಸ್ಥೆ: 96.1 ಓವರ್‌ಗಳಲ್ಲಿ 190. (ಕೆ.ಬಿ. ಪವನ್ 23, ಸಮರ್ಥ್ ಸಿಂಗ್ 56, ಸೈಯ್ಯದ್ ಅಬ್ಬಾಸ್ ಅಲಿ 36, ನಿರುಪಮ್ ಸೇನ್ 40; ಎನ್. ನಿಯಾಸ್ 41ಕ್ಕೆ3, ಪಿ. ಪ್ರಶಾಂತ್ 12ಕ್ಕೆ3). ಕೇರಳ ಕ್ರಿಕೆಟ್ ಸಂಸ್ಥೆ ವಿರುದ್ಧದ ಪಂದ್ಯ.
ಮೈಸೂರು (ಎಸ್‌ಜೆಸಿಇ ಎಂಜಿನಿಯರಿಂಗ್ ಕಾಲೇಜು ಕ್ರೀಡಾಂಗಣ).

ಅಸ್ಸಾಂ ಕ್ರಿಕೆಟ್ ಸಂಸ್ಥೆ: 75 ಓವರ್‌ಗಳಲ್ಲಿ 2 ವಿಕೆಟ್‌ಗೆ 182. (ಪರ್ವಿಜ್ ಅಜೀಜ್ 58, ರಿಷವ್ ದಾಸ್ ಬ್ಯಾಟಿಂಗ್ 89, ಅವಿಜಿತ್ ಸಿಂಗ್ ರಾಯ್ ಬ್ಯಾಟಿಂಗ್ 21; ಡಿ. ಶಿವಕುಮಾರ್ 17ಕ್ಕೆ1). ಆಂಧ್ರಪ್ರದೇಶ ಕ್ರಿಕೆಟ್ ಸಂಸ್ಥೆ ಎದುರಿನ ಪಂದ್ಯ.

ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣ: ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್ 68 ಓವರ್‌ಗಳಲ್ಲಿ 6 ವಿಕೆಟ್‌ಗೆ 135. (ಗರುಲ್ ಗೋಯೆಲ್ ಬ್ಯಾಟಿಂಗ್ 51, ಜೆ. ಸುಚಿತ್ ಬ್ಯಾಟಿಂಗ್ 27; ಸೋನಿತ್ ಸಿಂಗ್ 16ಕ್ಕೆ2, ಬಾಬಾಖಾನ್ ಪಠಾಣ್ 28ಕ್ಕೆ1, ಹರ್ಡಿಕ್ ಪಾಂಡೆ 32ಕ್ಕೆ10. ಬರೋಡ ಕ್ರಿಕೆಟ್ ಸಂಸ್ಥೆ ವಿರುದ್ಧದ ಪಂದ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT