ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬಾಟ್ ಹೊಸ ಪ್ರಧಾನಿ

ಆಸ್ಟ್ರೇಲಿಯಾ ಚುನಾವಣೆ: ಕೆವಿನ್ ರುಡ್‌ಗೆ ಮುಖಭಂಗ
Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ): ಆಸ್ಟ್ರೇಲಿಯಾದ ಸಾರ್ವತ್ರಿಕ ಚುನಾವಣೆಯಲ್ಲಿ ಟೋನಿ ಅಬ್ಬಾಟ್ ನೇತೃತ್ವದ ಕನ್ಸರ್ವೇಟಿವ್ ಪಕ್ಷವು ಭಾರಿ ಅಂತರದಿಂದ ಜಯಶಾಲಿಯಾಗಿದೆ. ಪ್ರಧಾನಿ ಕೆವಿನ್ ರುಡ್ ನೇತೃತ್ವದ ಲೇಬರ್ ಪಕ್ಷವು ಹೀನಾಯವಾಗಿ ಸೋಲನುಭವಿಸಿದೆ.

ಕನ್ಸರ್ವೇಟಿವ್ ಪಕ್ಷದ ಮೈತ್ರಿಕೂಟವು 85 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಗಳಿಸಿದೆ. ಲೇಬರ್ ಪಕ್ಷವು 54 ಸ್ಥಾನಗಳನ್ನು ಗಳಿಸಿದೆ. ಇದರಿಂದ ಆರು ವರ್ಷಗಳಿಂದ ಅಧಿಕಾರದಲ್ಲಿದ್ದ ಲೇಬರ್ ಪಕ್ಷವು ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಬೇಕಾಗಿದೆ.

ತಿಂಗಳ ಹಿಂದೆ ಕೆವಿನ್ ರುಡ್ ಅವರು ಪ್ರಧಾನಿ ಸ್ಥಾನದಲ್ಲಿದ್ದ ಜೂಲಿಯಾ ಗಿಲ್ಲಾರ್ಡ್ ಅವರನ್ನು ಪದಚ್ಯುತಗೊಳಿಸಿ ಅಧಿಕಾರದ ಗದ್ದುಗೆ ಏರಿದ್ದರು. ಆದರೆ ಜನರು ಈಗ ಅವರನ್ನು ಹಾಗೂ ಅವರ ಲೇಬರ್ ಪಕ್ಷವನ್ನು ತಿರಸ್ಕರಿಸಿ ಕನ್ಸರ್ವೇಟಿವ್ ಪಕ್ಷಕ್ಕೆ ಮನ್ನಣೆ ನೀಡಿರುವುದರಿಂದ ಟೋನಿ ಅಬ್ಬಾಟ್ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.

ಚುನಾವಣೆಯಲ್ಲಿ ಹಿನ್ನಡೆಯಾದ ನಂತರ ಮಾತನಾಡಿದ ಕೆವಿನ್ ರುಡ್, ಲೇಬರ್ ಪಕ್ಷದ ನೇತೃತ್ವವನ್ನು ಮತ್ತೆ ವಹಿಸುವುದಿಲ್ಲ, ಇದು ಬದಲಾವಣೆಗೆ ಸಕಾಲ ಎಂದು ಹೇಳಿದ್ದಾರೆ.

ಗೆಲುವಿನ ನಂತರ ಮಾತನಾಡಿದ ಟೋನಿ ಅಬ್ಬಾಟ್, `ಚುನಾವಣಾ ಪ್ರಚಾರದಲ್ಲಿ ವಚನ ನೀಡಿದಂತೆ ಕಾರ್ಬನ್ ತೆರಿಗೆಯನ್ನು ರದ್ದುಪಡಿಸಲಾಗುತ್ತದೆ' ಎಂದು ತಿಳಿಸಿದ್ದಾರೆ.

ಹದಗೆಟ್ಟ ಆರ್ಥಿಕತೆಯನ್ನು ಸರಿಪಡಿಸಿ ವ್ಯಾಪಾರ ವಹಿವಾಟಿಗೆ ಮುಕ್ತ ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದೂ ಅವರು ಹೇಳಿದ್ದಾರೆ.
 

ಗಿಲ್ಲಾರ್ಡ್ ನಿವೃತ್ತಿ

ಆಸ್ಟ್ರೇಲಿಯಾದ ಪ್ರಥಮ ಮಹಿಳಾ ಪ್ರಧಾನಿ ಆಗಿದ್ದ ಲೇಬರ್ ಪಕ್ಷದ ನಾಯಕಿ ಜೂಲಿಯಾ ಗಿಲ್ಲಾರ್ಡ್ ಅವರು ಶನಿವಾರ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ರಾಜಕೀಯ ನಿವೃತ್ತಿಯನ್ನು ಘೋಷಿಸಿದರು.

ತಮ್ಮ ಪಕ್ಷದವರೇ ಬಂಡೆದ್ದಿದ್ದರಿಂದ ಪ್ರಧಾನಿ ಹುದ್ದೆ ಕಳೆದುಕೊಂಡಿದ್ದ ಅವರು ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದರು. ಮೆಲ್ಬರ್ನ್ ಕ್ಷೇತ್ರದಲ್ಲಿ ತಮ್ಮ ಬದಲು ಸ್ಪರ್ಧಿಸಿ ಗೆದ್ದ ಜೊನ್ ರೈನ್ ಅವರನ್ನು ಅಭಿನಂದಿಸಿದ ನಂತರ ತಮ್ಮ ದೀರ್ಘ ಮೌನ ಮುರಿದು ರಾಜಕೀಯ ನಿವೃತ್ತಿ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT