ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬಾ...ಸವಣೂರು ನಿರಾಳ!

Last Updated 15 ಜನವರಿ 2012, 9:45 IST
ಅಕ್ಷರ ಗಾತ್ರ

ಸವಣೂರ: ಸಂಕ್ರಮಣ ಪರ್ವಕಾಲದ ಆರಂಭದೊಂದಿಗೆ ಸವಣೂರಿನ ಜನತೆಗೆ ಕಳೆದ ಒಂದು ವಾರದಿಂದ ಕಾಡುತ್ತಿದ್ದ ಅನಾರೋಗ್ಯದ ಸಮಸ್ಯೆ ದೂರವಾಗಿದೆ.

ಶನಿವಾರ  ವಾತಿ-ಭೇದಿಯ ಯಾವದೇ  ಪ್ರಕರಣವೂ ಸಹ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿಲ್ಲ. ಈ ಬಗ್ಗೆ ಸಮಾಧಾನ ವ್ಯಕ್ತಪಡಿಸಿರುವ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸುಮಾ, ನಗರದ ಜನತೆಯ ಅಸ್ವಸ್ಥತೆಯ ಸಮಸ್ಯೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ.  ಶನಿವಾರ ಯಾವದೇ ಪ್ರಕರಣ ಪತ್ತೆ ಯಾಗಿಲ್ಲ.
 
ಇದರೊಂದಿಗೆ ಇಂದು ಸಂಪೂರ್ಣ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದ ಎಲ್ಲ ರೋಗಿಗಳೂ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ರೋಗಿಗಳಿಗೆ ಪ್ರಾಣಾಪಾಯದಂತಹ ಯಾವದೇ ಸಮಸ್ಯೆ ಎದುರಾಗದೆ, ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಸವಣೂರಿನ ಮಟ್ಟಿಗೆ ಅತ್ಯಂತ ಸರ್ವೆಸಾಮಾನ್ಯ ಎನ್ನಬಹುದಾದ ವಾಂತಿ ಭೇದಿ ರೋಗ ಲಕ್ಷಣಗಳು ತೀವ್ರ ಸ್ವರೂಪ ಪಡೆಯಲು ಹಾಗೂ ಸುಧೀರ್ಘ ಅವಧಿಯವರೆಗೂ ನಿಯಂತ್ರಣಕ್ಕೆ ಬಾರದೇ ಇರಲು ಔಷಧಗಳೂ ಒಂದು ಕಾರಣ  ಎಂಬ ಸಂದೇಶ ಆರೋಗ್ಯ ಇಲಾಖೆಗೆ ಎದುರಾಗಿದೆ.

ಸವಣೂರಿನ ಸರ್ಕಾರಿ ಆಸ್ಪತ್ರೆಗೆ ಸಾಮಾನ್ಯ ದಿನಗಳಲ್ಲಿ ದಾಖಲಾಗುವುದು ಬಹುತೇಕ ವಾಂತಿ-ಭೇದಿ ಪ್ರಕರಣಗಳೇ ಹಾಗಿವೆ. ಆಸ್ಪತ್ರೆಯ ಸಿಬ್ಬಂದಿಗಳು ರೋಗಿಗಳಿಗೆ ಲಭ್ಯವಿರುವ ಔಷಧೋಪಚಾರ ನೀಡಿ ಗುಣಮುಖಗೊಳಿಸುವುದು ದಿನಚರಿಯ ಸ್ವರೂಪದಲ್ಲಿದೆ. ಈ ಹಂತದಲ್ಲಿ ಸವಣೂರಿನ ವಾಂತಿ-ಭೇದಿ ರೋಗಿಗಳಿಗೆ ನೀಡಲಾಗುವ ಔಷಧಿಗಳು ನಿರೀಕ್ಷಿತವಾದ ಪ್ರಮಾಣ ದಲ್ಲಿ ಪರಿಣಾಮ ಬೀರುತ್ತಿಲ್ಲ. ಹೈಡೋಜ್ ಔಷಧಿಗಳೂ ರೋಗವನ್ನು ನಿಯಂತ್ರಿಸುತ್ತಿಲ್ಲ.

ರೋಗಿಗಳಿಗೆ ನೀಡಲಾಗಿರುವ ಔಷಧಿ  ಪ್ರತಿಬಂಧಕ ಶಕ್ತಿಯನ್ನು ಪಡೆದುಕೊಂಡಿದೆ. ಮೇಲಿಂದ ಮೇಲೆ ಅನಾರೋಗ್ಯಕ್ಕೆ ಒಳಗಾಗು ವುದು, ಅದೇ ಔಷಧೋಪಚಾರಗಳನ್ನು ಪಡೆಯುವುದು ಪುನರಾವರ್ತನೆಯಾದಲ್ಲಿ ರೋಗಾಣುಗಳು ಔಷಧಕ್ಕಿಂತ ಹೆಚ್ಚು ಶಕ್ತಿಶಾಲಿಯಾಗುತ್ತದೆ. ಇದರೊಂದಿಗೆ ವ್ಯಕ್ತಿಯಲ್ಲಿ ಇರುವ ರೋಗ ಪ್ರತಿಬಂಧಕ ಶಕ್ತಿಯೂ ಕುಂಠಿತವಾಗಿರುತ್ತದೆ. ಇದರಿಂದ ರೋಗದ ನಿಯಂತ್ರಣ ಮಾಡುವದು ಕಷ್ಟಸಾಧ್ಯ ಎಂಬ ಜಿಜ್ಞಾಸೆ ಇಲಾಖೆ ಯನ್ನು ಆವರಿಸಿಕೊಂಡಿದೆ.

ಅತ್ಯಂತ ವಿಚಿತ್ರವಾದ ಈ ಸನ್ನಿವೇಶಕ್ಕೆ ಎದುರಾಗಿರುವ ಬಗ್ಗೆ ಸಹಮತ ವ್ಯಕ್ತಪಡಿಸಿರುವ ಇಲಾಖೆಯ ವೈದ್ಯರು, ಸವಣೂರಿನ ವಾಂತಿ-ಭೇದಿ ರೋಗಿಗಳಿಗಾಗಿಯೇ ಇನ್ನಷ್ಟು ತೀಕ್ಷ್ಣ ಹಾಗೂ ಸುಧಾರಿತ ಔಷಧಗಳ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT