ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬಿ ಜಲಪಾತ; ಮೂಲಸೌಕರ್ಯ ಕೊರತೆ

ನಗರ ಸಂಚಾರ
Last Updated 20 ಅಕ್ಟೋಬರ್ 2014, 6:45 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಗೆ ಬರುವ ಬಹುತೇಕ ಎಲ್ಲ ಪ್ರವಾಸಿಗರು ಅಬ್ಬಿ ಜಲಪಾತಕ್ಕೆ ಭೇಟಿ ನೀಡದೇ ಹೋಗುವುದಿಲ್ಲ. ವಾರಾಂತ್ಯದಲ್ಲಿ ಹಾಗೂ ಸರಣಿ ರಜೆಗಳು ಬಂದರಂತೂ ಜನಸಾಗರವೇ ಹರಿದುಬರುತ್ತದೆ. ಲಕ್ಷಾಂತರ ರೂಪಾಯಿ ಆದಾಯವಿದ್ದರೂ, ಗ್ರಾಮ ಪಂಚಾಯಿತಿಯವರು ಪ್ರವಾಸಿಗರಿಗೆ ಮೂಲಸೌಕರ್ಯ ನೀಡುತ್ತಿಲ್ಲವೆಂಬ ಆರೋಪಗಳು ಕೇಳಿಬಂದಿವೆ.

ಸುತ್ತಮುತ್ತಲು ದಟ್ಟವಾದ ಕಾಡು, ಕಾಫಿ ತೋಟದ ಮಧ್ಯೆ ಹಾಲಿನ ನೊರೆಯಂತೆ 30ರಿಂದ 40 ಅಡಿ ಎತ್ತರದ ಬೆಟ್ಟದಿಂದ ಧುಮ್ಮಿಕ್ಕುವ ನೀರನ್ನು ನೋಡುವುದೇ ಚೆಂದ. ನೋಡಿದಾಕ್ಷಣ.. ‘ಅಬ್ಬಾ’ ಎನ್ನುವಂತೆ ಉದ್ಘಾರ ತೆಗೆಯದವರೇ ಇಲ್ಲ ಎನ್ನಬಹುದು. ಇಷ್ಟೊಂದು ರಮಣೀಯವಾಗಿರುವ ಸ್ಥಳವು ಖಾಸಗಿ ಮಾಲೀಕರಿಗೆ ಸೇರಿದೆ ಎನ್ನುವುದು ಗಮನಾರ್ಹ.

ನೆರವಂಡ ಇಂದಿರಾ ಅವರಿಗೆ ಸೇರಿದ ಜಾಗದಲ್ಲಿ ಅಬ್ಬಿ ಜಲಪಾತವಿದೆ. ಜಲಪಾತದ ಸೌಂದರ್ಯವನ್ನು ಸವಿಯಲು ಬರುವ ಪ್ರವಾಸಿಗರಿಗೆ ನಿರಾಶೆಯಾಗಬಾರದು ಎನ್ನುವ ಉದಾರ ಮನಸ್ಸಿನಿಂದ ಅವರು ಜಲಪಾತದವರಿಗೆ ಹೋಗಲು ತಮ್ಮ ತೋಟದ ಮಧ್ಯೆ ಜಾಗವನ್ನು ಬಿಟ್ಟುಕೊಟ್ಟಿದ್ದಾರೆ.

ಆದರೆ, ಇದನ್ನು ವಹಿಸಿಕೊಂಡಿರುವ ಗ್ರಾಮ ಪಂಚಾಯಿತಿಯವರು ತೋಟಕ್ಕೆ ತೊಂದರೆಯಾಗದಂತೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಜಲಪಾತ ವೀಕ್ಷಣೆಗೆಂದು ತೆರಳುವ ಪ್ರವಾಸಿಗರು ಅಕ್ಕಪಕ್ಕದಲ್ಲಿರುವ ಕಾಫಿ ಗಿಡಗಳನ್ನು ಕೀಳುತ್ತಾರೆ. ಪ್ಲಾಸ್ಟಿಕ್‌ ಚೀಲಗಳನ್ನು ಎಸೆಯು­ತ್ತಾರೆ. ಸಿಗರೇಟ್‌, ಬೀಡಿ, ಗುಟ್ಕಾ, ಮದ್ಯದ ಬಾಟಲಿಗಳನ್ನು ತೋಟದ ಮಧ್ಯೆ ಎಸೆಯುತ್ತಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯವರು ಯಾವುದೇ ನಿಗಾ ವಹಿಸಿಲ್ಲ.

ಗಿಡ ನಾಶ: ಅಳಲು:  ತಮ್ಮ ತೋಟ ಹಾಳಾಗುತ್ತಿರುವುದನ್ನು ಕಂಡು ತುಂಬಾ ಬೇಸರ ವ್ಯಕ್ತಪಡಿಸಿದ ನೆರವಂಡ ಇಂದಿರಾ ಮಾತನಾಡಿ, ‘ತೋಟದೊಳಗೆ ಹಾದು ಹೋಗುವ ಕಾಲುದಾರಿಯ ಉದ್ದಕ್ಕೂ ಅಕ್ಕಪಕ್ಕದಲ್ಲಿ ಕಬ್ಬಿಣದ ಸರಳುಗಳನ್ನು ಹಾಕಿಕೊಡುವುದಾಗಿ ಪಂಚಾಯಿತಿಯವರು ಭರವಸೆ ನೀಡಿದ್ದರು. ಆದರೆ, ಇದುವರೆಗೆ ಹಾಕಿಕೊಟ್ಟಿಲ್ಲ. ಪ್ರವಾಸಿಗರು ತೋಟದೊಳಗೆ ಪ್ರವೇಶಿಸಿ, ಗಿಡಗಳನ್ನು ನಾಶಪಡಿಸುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು.

ನಂತರ ಅವರು, ಮುಖ್ಯ ಪ್ರವೇಶ ದ್ವಾರಕ್ಕೆ ಬೀಗ ಹಾಕಿ ಪ್ರತಿಭಟಿಸಿದರು. ಆದರೆ, ಪ್ರವಾಸಿಗರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಪಕ್ಕದ ಸಣ್ಣ ಗೇಟ್‌ ತೆರೆದಿಟ್ಟಿದ್ದರು. ಇಲ್ಲಿನ ಪಂಚಾಯಿತಿಗೆ ಲಕ್ಷಾಂತರ ರೂಪಾಯಿ ಆದಾಯ ತಂದುಕೊಡುವ ಅಬ್ಬಿ ಜಲಪಾತದ ಬಗ್ಗೆ ಪಂಚಾಯಿತಿ ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ.

ಕೇವಲ ಪಾರ್ಕಿಂಗ್‌ ಶುಲ್ಕವನ್ನು ಪಡೆಯುವುದರಲ್ಲಿ ಆಸಕ್ತಿ ತೋರುತ್ತಿದ್ದಾರೆ ವಿನಃ ಪ್ರವಾಸಿಗರಿಗೆ ಶೌಚಾಲಯ, ಕುಡಿಯುವ ನೀರು ಹಾಗೂ ಸ್ವಚ್ಛತೆ ಬಗ್ಗೆ ಎಳ್ಳಷ್ಟೂ ಕಾಳಜಿ ತೋರುತ್ತಿಲ್ಲ ಎಂದು ಶಿವಮೊಗ್ಗದ ಪ್ರವಾಸಿಗ ಸುಬ್ರಮಣ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT