ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಯಾರಣ್ಯ ಪ್ರವೇಶಿಸದ ನಕ್ಸಲ್ ಪ್ಯಾಕೇಜ್

ಅರಣ್ಯ ಇಲಾಖೆ ತಗಾದೆ
Last Updated 1 ಆಗಸ್ಟ್ 2013, 13:07 IST
ಅಕ್ಷರ ಗಾತ್ರ

ಮಂಗಳೂರು: ನಕ್ಸಲ್ ಬಾಧಿತ ಪ್ರದೇಶಾಭಿವೃದ್ಧಿ ಯೋಜನೆಯಡಿ ಬೆಳ್ತಂಗಡಿ ವ್ಯಾಪ್ತಿಯಲ್ಲಿ ಮೊದಲ ಹಂತದ ಕಾಮಗಾರಿಗಳು ಮುಕ್ತಾಯವಾಗಿದ್ದರೂ ವಾಸ್ತವವಾಗಿ ನಕ್ಸಲ್ ಸಮಸ್ಯೆ ಇರುವ ಕಡೆಗಳಲ್ಲಿ ಹಾಗೂ ರಾಷ್ಟ್ರೀಯ ಅಭಯಾರಣ್ಯದೊಳಗೆ ಅಗತ್ಯವಿರುವ ಕಾಮಗಾರಿಗಳು ನಡೆದಿಲ್ಲ ಎಂದು ಅಭಯಾರಣ್ಯದಲ್ಲಿ ವಾಸಿಸುವ ಕುಟುಂಬಗಳು ಬೇಸರ ವ್ಯಕ್ತಪಡಿಸಿವೆ.

ರಸ್ತೆ ಕಾಮಗಾರಿಗಳ ಹೆಸರು ನಕ್ಸಲ್ ಬಾಧಿತ ಪ್ರದೇಶದ ಹೆಸರನ್ನು ಒಳಗೊಂಡಿದ್ದರೂ ಅಭಯಾರಣ್ಯದ ಹೊರಗೆ ಮಾತ್ರ ಕಾಮಗಾರಿಗಳು ನಡೆದಿವೆ. ಇಂತಹ ಕಾಮಗಾರಿಗಳನ್ನು ಉದ್ಯೋಗ ಖಾತರಿ ಯೋಜನೆ ಅಥವಾ ಇತರ ಅನುದಾನಗಳ ಮೂಲಕ ನಿರ್ವಹಿಸಬಹುದು. ಅಭಯಾರಣ್ಯದ ಒಳಗೆ ಜನವಸತಿ ಇರುವ ಕಡೆಗಳಲ್ಲಿ ಅಗತ್ಯ ರಸ್ತೆಗಳ ದುರಸ್ತಿ, ನಿರ್ಮಾಣವಾಗಬೇಕು ಎಂಬುದು ಸ್ಥಳೀಯರ ಆಗ್ರಹ.

ಪ್ರಸ್ತುತ `ಬಹು ದೂರದ ಮತ್ತು ಒಳನಾಡು ಪ್ರದೇಶಾಭಿವೃದ್ಧಿ (ನಕ್ಸಲ್ ಬಾಧಿತ ಪ್ರದೇಶಾಭಿವೃದ್ಧಿ) ಯೋಜನೆ'ಯಡಿ ನಿಗದಿ ಪಡಿಸಲಾದ 5 ಕೋಟಿ ರೂಪಾಯಿ ಅನುದಾನದಲ್ಲಿ 1.06 ಕೋಟಿ ರೂಪಾಯಿ ವೆಚ್ಚದಲ್ಲಿ 25 ಕಾಮಗಾರಿಗಳನ್ನು ನಡೆಸಲಾಗಿದೆ. ಮೊದಲ ಹಂತದ ವರದಿಯ ಪ್ರಕಾರ ಕುತ್ಲೂರು ಕುಕ್ಕಾಜೆಯಿಂದ ಅಲಂಬದವರೆಗಿನ ರಸ್ತೆ ಡಾಂಬರೀಕರಣ, ನಡ ಗ್ರಾಮದ ಕಂಬುಜೆಯಲ್ಲಿ ಮೋರಿ ರಚನೆ ಮಾತ್ರ ಅರಣ್ಯ ವಿಭಾಗದೊಳಗೆ ಬರುತ್ತದೆ. ಮೋರಿ ನಿರ್ಮಿಸಲು ಅರಣ್ಯ ಇಲಾಖೆ ಅನುಮತಿ ಲಿಖಿತವಾಗಿ ಸಿಕ್ಕಿಲ್ಲ. ಎರ್ಮಲೆಯಲ್ಲಿ 5 ಕಿ.ವಾ. ಸಾಮರ್ಥ್ಯದ ಟರ್ಬೋ ರಚನೆ ಮಾಡಲಾಗಿದ್ದು ಅದಕ್ಕೆ ಬೇಸಿಗೆಯಲ್ಲಿ ನೀರು ಹರಿಸಲು ಚೆಕ್‌ಡ್ಯಾಂ ನಿರ್ಮಾಣ ಕಾಮಗಾರಿಯನ್ನು ಜಲಾನಯನ ವಿಭಾಗಕ್ಕೆ ವಹಿಸಲಾಗಿದೆ.

ಎರಡನೇ ಹಂತದ 9 ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿವೆ. ಅವುಗಳ ಪೈಕಿ ಮಲವಂತಿಗೆ ಎಳನೀರು ಗಡಿಯಲ್ಲಿ ಅಂಗನವಾಡಿ, ಸವಣಾಲು ಹೇಟ್ಲೋಟ್ಟು ಬಸದಿ ರಸ್ತೆ ಡಾಂಬರೀಕರಣದ ಹೊರತಾಗಿ ಉಳಿದೆಲ್ಲವೂ ಅಭಯಾರಣ್ಯದ ಹೊರಗಿನ ಕಾಮಗಾರಿಗಳು. ಮೂರನೇ ಹಂತದ ಕ್ರಿಯಾಯೋಜನೆ ಈಗಾಗಲೇ ಸಿದ್ಧವಾಗಿದೆ. ಆದರೆ ಅಭಯಾರಣ್ಯದೊಳಗೆ ಆಗಬೇಕಾದ ಕಾಮಗಾರಿಗಳತ್ತ ಜಿಲ್ಲಾಡಳಿತ ಗಮನ ಹರಿಸಬೇಕು ಎನ್ನುವ ಆಗ್ರಹ ಅಲ್ಲಿನ ನಿವಾಸಿಗಳದ್ದು.

ಆದಿವಾಸಿ ಸಮನ್ವಯ ಸಮಿತಿ ಅರಣ್ಯದೊಳಗೆ ನಡೆಯಬೇಕಾದ ರಸ್ತೆಗಳ ಬೇಡಿಕೆ ಪಟ್ಟಿ ಸಲ್ಲಿಸಿದೆ. ಅವುಗಳಲ್ಲಿ ಕೆಲವು ಕಾಮಗಾರಿಗಳನ್ನು ಗುರುತಿಸಿಕೊಂಡು ಮುಂದಿನ ಹಂತದಲ್ಲಿ ಸೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎನ್. ಪ್ರಕಾಶ್ `ಪ್ರಜಾವಾಣಿ'ಯೊಂದಿಗೆ ಮಾತನಾಡುತ್ತ ಹೇಳುತ್ತಾರೆ.

ಕುರಿಯಾಲು ಬೊಲ್ಲೆ ರಸ್ತೆ, ನಡ- ಮಂಜೊಟ್ಟಿ- ಜಮಲಾಬಾದ್ ಕೋಟೆ ಮಂಜಲವರೆಗಿನ ರಸ್ತೆ ಕಾಮಗಾರಿ ವಿಷಯವನ್ನು ಪರಿಶೀಲಿಸಲಾಗುವುದು. ಕುತ್ಲೂರಿನ ಅಲಂಬ-ಕುಕ್ಕಾಜೆ ರಯ ಅರಣ್ಯದೊಳಗೆ ಮುಂದುವರೆಸುವ ಪ್ರಸ್ತಾವನೆಯನ್ನು ಅರಣ್ಯ ಇಲಾಖೆ ತಿರಸ್ಕರಿಸಿದೆ. ಅಭಯಾರಣ್ಯದಲ್ಲಿ ಒಂದು ಹೆಕ್ಟೇರ್ ಒಳಗಿನ ಪ್ರದೇಶದಲ್ಲಿ 75 ಮರಗಳಿಗಿಂತ ಕಡಿಮೆ ಇದ್ದಾಗ ಅನುಮತಿ ಮೇರೆಗೆ ಕಾಮಗಾರಿ ಮಾಡಬಹುದು ಎಂದು ಅವರು ಹೇಳಿದರು.

ಕುತ್ಲೂರು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಗುರುತಿಸುವಂತೆ ನಕ್ಸಲ್ ಬಾಧಿತ ಪ್ರದೇಶದ ಜನರ ಅಗತ್ಯಗಳು:
ನಾರಾವಿ-ಮಾಪಳು ರಸ್ತೆ,
ಕುತ್ಲೂರಿನಿಂದ ಅಲಂಬ- ಕುಕ್ಕಾಜೆ- ಪಂಜಾಲು ರಸ್ತೆ,
ಅಳದಂಗಡಿಯಿಂದ ಸೂಲ್ಕೇರಿ- ನಾಯ್ದಗುರಿ ರಸ್ತೆ,
ಶಿರ್ಲಾಲು -ಮಲೆಕ್ಕಿಲ ರಸ್ತೆ,
ಗ್ರಾಮ ಪಂಚಾಯಿತಿಯಿಂದ ಪೇಲದವರೆಗಿನ ರಸ್ತೆ,
ನಾವೂರು ಕೈಕಂಬದಿಂದ ಕುಂದಡ್ಕ- ಮಲ್ಲ ರಸ್ತೆ,
ಮಂಜೊಟ್ಟಿ- ಜಮಾಲಾಬಾದ್ ಕೊಟೆ-ಮಂಜಲವರೆಗಿನ ರಸ್ತೆ,
ಮಿತ್ತಬಾಗಿಲು-ಕಿಲೂರು ರಸ್ತೆ
ಕರಿಯಾಲು-ಬೊಲ್ಲೆ ರಸ್ತೆ
ಮಲವಂತಿಗೆ-ದಿಡುಪೆ-ಗುತ್ಯಡ್ಕ ರಸ್ತೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT