ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಯಾರಣ್ಯಗಳಲ್ಲಿ ಪ್ರವಾಸೋದ್ಯಮ ನಿಷೇಧ : ಹುಲಿ ರಕ್ಷಣೆಗೆ ಸುಪ್ರೀಂ ಕ್ರಮ

Last Updated 24 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಳಿವಿನ ಅಂಚಿನಲ್ಲಿರುವ ಹುಲಿಗಳ ಸಂರಕ್ಷಣೆಗೆ ಮಹತ್ವದ ಹೆಜ್ಜೆ ಇಟ್ಟಿರುವ ಸುಪ್ರೀಂಕೋರ್ಟ್,  ಅಭಯಾರಣ್ಯಗಳಲ್ಲಿ ಹುಲಿಗಳು ಅತ್ಯಧಿಕ ಸಂಖ್ಯೆಯಲ್ಲಿರುವ ಕಡೆಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆ ನಡೆಸದಂತೆ ಮಂಗಳವಾರ ರಾಜ್ಯ ಸರ್ಕಾರಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಸ್ವತಂತ್ರಕುಮಾರ್ ಮತ್ತು ಇಬ್ರಾಹಿಂ ಖಲಿಫುಲ್ಲಾ ಅವರನ್ನೊಳಗೊಂಡ ನ್ಯಾಯಪೀಠವು, ಹುಲಿ ಅರಣ್ಯ ಸಂರಕ್ಷಿತ ಪ್ರದೇಶಗಳನ್ನೊಳಗೊಂಡ ರಾಜ್ಯ ಸರ್ಕಾರಗಳಿಗೆ ಈ ನಿರ್ದೇಶನ ನೀಡಿದ್ದು, ನ್ಯಾಯಾಲಯದ ಅಂತಿಮ ನಿರ್ದೇಶನ ಬರುವವರೆಗೂ, ಹುಲಿಗಳು ಅತ್ಯಧಿಕ ಸಂಖ್ಯೆಯಲ್ಲಿರುವ ಸಂರಕ್ಷಿತ ಪ್ರದೇಶಗಳನ್ನು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಬಳಸಬಾರದು~ ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

ಹುಲಿ ಸಂರಕ್ಷಿತ ಪ್ರದೇಶಗಳ ಸುತ್ತಲಿನ ಗಡಿ ಪ್ರದೇಶಗಳನ್ನು ಗುರುತಿಸುವಂತೆ ಇದೇ ವರ್ಷದ ಏಪ್ರಿಲ್ 4 ಮತ್ತು ಜುಲೈ10ರಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ನ್ಯಾಯಾಲಯದ ನಿರ್ದೇಶನವನ್ನು ನಿರ್ಲಕ್ಷಿಸಿರುವ ರಾಜ್ಯ ಸರ್ಕಾರಗಳ ವಿರುದ್ಧ `ಗರಂ~ ಆಗಿರುವ ಪೀಠ, `ಮೂರು ವಾರಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ,  ರಾಜ್ಯಗಳ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಂದ ರೂ 50,000 ದಂಡ ವಸೂಲಿ ಮಾಡಲಾಗುವುದು ಎಂದು   ತಿಳಿಸಿದೆ.

ನ್ಯಾಯಾಲಯದ ಈ ಆದೇಶ ಉಲ್ಲಂಘಿಸಿರುವ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ತಮಿಳುನಾಡು, ಬಿಹಾರ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳಿಗೆ  ರೂ 10,000 ದಂಡ ವಿಧಿಸಿದೆ.


ಈಗ ಸುಪ್ರೀಂ ಕೋರ್ಟ್ ಆದೇಶಕ್ಕೆ ತಲೆಬಾಗಿರುವ ಅರುಣಾಚಲ ಪ್ರದೇಶ ಮತ್ತು ಜಾರ್ಖಂಡ್ ಸರ್ಕಾರಗಳು, `ನಮ್ಮ ರಾಜ್ಯದಲ್ಲಿರುವ ಹುಲಿ ಸಂರಕ್ಷಿತ ಪ್ರದೇಶದ ಸುತ್ತಲಿನ ಗಡಿ ಪ್ರದೇಶವನ್ನು ಗುರುತಿಸಲಾಗಿದೆ.

ಸಂಬಂಧಪಟ್ಟ ವಿವರಗಳನ್ನು ಪ್ರಮಾಣಪತ್ರದೊಂದಿಗೆ ಶೀಘ್ರವೇ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು~ ಎಂದು ಹೇಳಿವೆ.

ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಪರಿಸರವಾದಿ ಅಜಯ್ ದುಬೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಮಹತ್ವದ ಆದೇಶ ನೀಡಿದೆ.

`ಅನೇಕ ರಾಜ್ಯಗಳು ಸಂರಕ್ಷಣಾ ನಿಯಮ ಉಲ್ಲಂಘಿಸಿ, ಸಂರಕ್ಷಿತ ಪ್ರದೇಶಗಳ ಗಡಿ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋಟೆಲ್‌ಗಳು, ರೆಸಾರ್ಟ್ ನಿರ್ಮಿಸಲು, ಜೊತೆಗೆ ಪ್ರವಾಸೋದ್ಯಮ ಯೋಜನೆಗಳ ಅನುಷ್ಠಾನಕ್ಕೂ ಅನುಮತಿ ನೀಡಿವೆ. ಇದರಿಂದ ವನ್ಯಜೀವಿ ಚಟುವಟಿಕೆಗೆ ತೊಂದರೆಯಾಗುತ್ತದೆ. ಹೀಗಾಗಿ ಪ್ರವಾಸೋದ್ಯಮ ಚಟುವಟಿಕೆ ನಿಷೇಧಿಸಬೇಕು~ ಎಂದು ದುಬೆ ಅರ್ಜಿಯಲ್ಲಿ ಒತ್ತಾಯಿಸ್ದ್ದಿದರು.

10 ಕಿ.ಮೀ ವ್ಯಾಪ್ತಿಯ ಗಡಿ ಪ್ರದೇಶ: 1972ರ ವನ್ಯಜೀವಿ (ರಕ್ಷಣೆ) ಕಾಯ್ದೆ ಪ್ರಕಾರ ರಾಜ್ಯ ಸರ್ಕಾರಗಳು ಹುಲಿ ಸಂರಕ್ಷಣಾ ಪ್ರದೇಶ  ಮತ್ತು ಗಡಿ ಪ್ರದೇಶಗಳನ್ನು ಗುರುತಿಸಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಬೇಕು.

ಹುಲಿ ಸಂರಕ್ಷಣಾ ಪ್ರದೇಶದ ಅಂಚಿನಲ್ಲಿ `ಗಡಿ ಪ್ರದೇಶ~ಗಳಿರುತ್ತವೆ. ಇವುಗಳನ್ನು `ಅಪಾಯದ ಹುಲಿ ಆವಾಸಸ್ಥಾನ~ ಎಂದು ಕರೆಯಲಾಗುತ್ತದೆ. ಇಂಥ ಪ್ರದೇಶಗಳಲ್ಲಿ ಹುಲಿಗಳು ಸಂತಾನೋತ್ಪತ್ತಿ ಕಾರ್ಯದಲ್ಲಿ ತೊಡಗುತ್ತವೆ.

ಆದ್ದರಿಂದ ಈ ಪ್ರದೇಶಗಳನ್ನು ಪ್ರವಾಸೋದ್ಯಮ ಸೇರಿದಂತೆ ಯಾವುದೇ ಗಲಭೆ, ಗದ್ದಲಗಳಿಂದ ಮುಕ್ತವಾಗಿಡಬೇಕು. ಆದ್ದರಿಂದ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ಹುಲಿ ಸಂರಕ್ಷಿತ ಪ್ರದೇಶದ 10 ಕಿ.ಮೀ ವ್ಯಾಪ್ತಿಯಲ್ಲಿ ಗಡಿ ಪ್ರದೇಶಗಳನ್ನು ಗುರುತು ಮಾಡಬೇಕೆಂದು ಹೇಳಲಾಗಿದೆ.
 

ಭಾರತದಲ್ಲಿ ಹುಲಿ ಅಭಯಾರಣ್ಯಗಳು

1.ಕಾರ್ಬೆಟ್,
2.ದುದ್ವಾ
3.ವಲ್ಮಿಕಿ
4.ಬುಕ್ಸಾ
5.ಮಾನಸ
6.ನಮೇರಿ
7.ಪಕ್‌ಹುಯಿ
8.ನಮ್ದಫಾ
9.ಕಾಂಜಿರಂಗ
10.ಡಂಪಾ
11.ಸುಂದರ್‌ಬನ್
12.ಸಿಮ್ಲಿಪಾಲ್
13.ಪಲಮವು
14.ಸಂಜಯ ದುಬ್ರಿ
15.ಬಾಂದವಗಡ್
16.ಪನ್ನಾ
17.ಸರಿಸ್ಕಾ
18.ರಣಥಂಬೋರ್
19.ಸತ್ಪುರ
20.ಪೆಂಚ್-ಎಂಎಚ್
21.ಕನ್ಹ
22.ಪೆಂಚ್ -ಎಂಪಿ
23.ಮೇಲ್‌ಘಾಟ್
24.ತಡೊಬಾ ಅಂಧೇರಿ
25.ಇಂದ್ರಾವತಿ
26.ಉದಂತಿ-ಸೀತಾನದಿ
27.ಸತ್ಕೋಸಿಯಾ
28.ನಾಗಾರ್ಜುನ ಸಾಗರ
29.ಸಹ್ಯಾದ್ರಿ
30.ದಾಂಡೇಲಿ-ಅಣಶಿ
31.ಭದ್ರಾ
32.ನಾಗರಹೊಳೆ
33.ಬಂಡೀಪುರ
34.ಮದುಮಲೆ
35.ಪರಂಬಿಕುಲಂ
36.ಅಣ್ಣಾಮಲೆ
37.ಪೆರಿಯಾರ್
38.ಕಲಕ್ಕಡ್-ಮುಂದಂತುರೈ
39.ಬಿಳಿಗಿರಿ ರಂಗನ ಬೆಟ್ಟ
40.ಅಚಾನಕ್‌ಮಾರ್

ಒಟ್ಟು ಹುಲಿ ಅಭಯಾರಣ್ಯ
ದೇಶದಲ್ಲಿ 40
ಕರ್ನಾಟಕದಲ್ಲಿ 5
ಒಟ್ಟು ಹುಲಿಗಳು
ದೇಶದಲ್ಲಿ 1700
ಕರ್ನಾಟಕದಲ್ಲಿ 300

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT