ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಮಾನದ ನೂರೆಂಟು ನೆನಪು

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗ ಕಂಡ ಅದ್ಭುತ ನಟರಲ್ಲಿ ರಾಜಕುಮಾರ್ ಹಾಗೂ ವಿಷ್ಣುವರ್ಧನ್ ಪ್ರಮುಖರು. ನಟನೆಯ ಸೊಗಸಿನ ಜೊತೆಗೆ ತಮ್ಮ ವ್ಯಕ್ತಿತ್ವದ ಮಾದರಿಯಿಂದಲೂ ಈ ಕಲಾವಿದರು ಕನ್ನಡಿಗರ ಮೇಲೆ ಬೀರಿದ ಪ್ರಭಾವ ದೊಡ್ಡದು. ಅವರಿಬ್ಬರ ನಿಧನದ ನಂತರ, ಅವರ ಕುರಿತು ಪ್ರಕಟಗೊಳ್ಳುತ್ತಿರುವ ಸಾಲು ಸಾಲು ಪುಸ್ತಕಗಳೇ ಅವರ ಅನನ್ಯತೆಯನ್ನು ದೃಢೀಕರಿಸುವಂತಿವೆ.

ಈ ಸಾಲಿಗೆ ಹೊಸ ಸೇರ್ಪಡೆ- ವಿಷ್ಣುವರ್ಧನ್ ಕುರಿತು ಪ್ರಕಟಗೊಂಡಿರುವ ಎರಡು ಹೊಸ ಪುಸ್ತಕಗಳು. ಅವುಗಳೆಂದರೆ, ಬಾಬು ದಿನಕರ ಅವರು ಸಂಪಾದಿಸಿರುವ `ಅಣ್ಣಾ-ನಮ್ಮಣ್ಣ~ ಹಾಗೂ ಕೆ.ಆರ್. ಜನಾರ್ಧನ ರಾವ್ ಸಾಳಂಕೆ ಅವರ `ಕರುಣಾಮಯಿ ಡಾ. ವಿಷ್ಣುವರ್ಧನ್~.

ಈ ಎರಡೂ ಕೃತಿಗಳು ನಟರಾಗಿ ವಿಷ್ಣುವರ್ಧನ್ ಅವರ ಅನನ್ಯತೆಯನ್ನು ಹಾಗೂ ಅವರ ವ್ಯಕ್ತಿತ್ವದೊಳಗಿನ ಉದಾತ್ತ ಅಂಶಗಳನ್ನು ಚಿತ್ರಿಸಲು ಪ್ರಯತ್ನಿಸುತ್ತವೆ. ಎರಡೂ ಕೃತಿಗಳಲ್ಲಿ ವಿಷ್ಣು ಕುರಿತ ಮೆಚ್ಚುಗೆಯೇ ಮುನ್ನೆಲೆಯಲ್ಲಿ ಇದೆ.
 
ಹಾಗಾಗಿ, ವಿಷ್ಣುವರ್ಧನ್‌ರ ಸಾಧನೆಯನ್ನು ವಿಮರ್ಶೆ ಮತ್ತು ವಿವೇಕದ ಬೆಳಕಿನಲ್ಲಿ ನೋಡುವ ಪ್ರಯತ್ನವನ್ನು ಇಲ್ಲಿ ನಿರೀಕ್ಷಿಸುವಂತಿಲ್ಲ. ಆದರೆ, ಮಾಹಿತಿಯ ಸಮೃದ್ಧಿ ಹಾಗೂ ನಿರೂಪಣೆಯ ಭಿನ್ನ ವಿಧಾನಗಳಿಂದಾಗಿ ಈ ಪುಸ್ತಕಗಳು ಗಮನಸೆಳೆಯುತ್ತವೆ.

ಬಾಬು ದಿನಕರ ಅವರು ಸಂಪಾದಿಸಿರುವ `ಅಣ್ಣಾ-ನಮ್ಮಣ್ಣ~ ಕೃತಿಯಲ್ಲಿ ಅಭಿಮಾನಿಗಳ ಮೂಲಕವೇ ವಿಷ್ಣು ವ್ಯಕ್ತಿತ್ವವನ್ನು ಕಾಣಿಸುವ ಪ್ರಯತ್ನವಿದೆ. ಈ ಅಭಿಮಾನಿಗಳದು, `ಅಣ್ಣಾ ಎಂದರೆ ಏನೋ ಹರುಷವು ನಮ್ಮಾ ಪಾಲಿಗೆ ಅವರೇ ದೈವವು~ ಎನ್ನುವ ವಿನೀತ ಭಾವ.

ಈ ಪುಸ್ತಕದಲ್ಲಿ ವಿಷ್ಣುವರ್ಧನ್ ಅವರ ಎಂಬತ್ತೊಂದು ಅಭಿಮಾನಿಗಳು ತಮ್ಮ ಮನಸ್ಸಿನ ಆರ್ದ್ರ ಭಾವಗಳನ್ನು ಹಂಚಿಕೊಂಡಿದ್ದಾರೆ. ನೆಚ್ಚಿನ ನಟನನ್ನು ರಾಮಾಚಾರಿಯಾಗಿ, ಸಾಹಸ ಸಿಂಹನಾಗಿ, ಯಜಮಾನನಾಗಿ, ಹೃದಯವಂತನಾಗಿ ನೋಡುವ ಭಾವುಕ ಚಿತ್ರಗಳಿವು.

ಅನೇಕ ಅಭಿಮಾನಿಗಳು ನೆಚ್ಚಿನ ನಟನೊಂದಿಗಿನ ತಮ್ಮ ಸಂಪರ್ಕವನ್ನು, ಅವರೊಂದಿಗೆ ಕಳೆದ ಅವಿಸ್ಮರಣೀಯ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಈ `ಭಾವಚಿತ್ರ~ಗಳು ಹಾಗೂ ನೆನಪುಗಳು ವಿಷ್ಣು ಅವರ ವ್ಯಕ್ತಿತ್ವದ ಭಿನ್ನ ಆಯಾಮಗಳನ್ನು ಕಟ್ಟಿಕೊಡುವಂತಿವೆ.

ಅಭಿಮಾನಿಗಳ ಅನಿಸಿಕೆಗಳನ್ನು ದಾಖಲಿಸುವಲ್ಲಿ ಬಾಬು ದಿನಕರ ಅವರ ಶ್ರಮ ಎದ್ದುಕಾಣುತ್ತದೆ. ಈ ಪ್ರತಿಕ್ರಿಯೆಗಳು ಸಂಗ್ರಹರೂಪದಲ್ಲೂ ಭಿನ್ನವಾಗಿಯೂ ಇರುವಂತೆ ಅವರು ಎಚ್ಚರಿಕೆ ವಹಿಸಿದ್ದಾರೆ. ಜನಸಾಮಾನ್ಯರ ಮೇಲೆ ನಟನೊಬ್ಬ ಎಷ್ಟರ ಮಟ್ಟಿಗೆ ಗಾಢ ಪ್ರಭಾವ ಬೀರಬಹುದು ಎನ್ನುವುದಕ್ಕೆ ಉದಾಹರಣೆಯನ್ನಾಗಿ ಈ ಕೃತಿಯನ್ನು ಗಮನಿಸಬಹುದು. ಜನಸಾಮಾನ್ಯರ ಅಭಿವ್ಯಕ್ತಿ ಎನ್ನುವುದು ಈ ಪುಸ್ತಕದ ವಿಶೇಷ ಕೂಡ.

ಕೆ.ಆರ್. ಜನಾರ್ಧನ ರಾವ್ ಸಾಳಂಕೆ ಅವರು ಈ ಮೊದಲು `ಮರೆಯ ಮಾಣಿಕ್ಯ~ ಹಾಗೂ `ಸಿಂಹ ಘರ್ಜನೆ~ ಎನ್ನುವ ಎರಡು ಪುಸ್ತಕಗಳನ್ನು ವಿಷ್ಣುವರ್ಧನ್ ಕುರಿತಂತೆ ಪ್ರಕಟಿಸಿದ್ದಾರೆ. ಆ ಪುಸ್ತಕಗಳಿಗೆ ದೊರೆತ ಉತ್ತೇಜನದ ಫಲವೇ ಅವರ ಮೂರನೇ ಕೃತಿ- `ಕರುಣಾಮಯಿ ಡಾ. ವಿಷ್ಣುವರ್ಧನ್~.

ಸಾಳಂಕೆ ಅವರ ಹೊಸ ಕೃತಿ ಕೂಡ ಸಂಪಾದಿತ ಪುಸ್ತಕವೇ ಆಗಿದೆ. ಐದು ಭಾಗಗಳಲ್ಲಿ ವಿಷ್ಣು ಅವರ ಬದುಕು-ವ್ಯಕ್ತಿತ್ವವನ್ನು ವಿವಿಧ ನೆಲೆಗಳಲ್ಲಿ ಚಿತ್ರಿಸುವ ಪ್ರಯತ್ನ ಇಲ್ಲಿದೆ. ವಿಷ್ಣು ವಿಶ್ಲೇಷಣೆಯ ಈ ಭಾಗಗಳನ್ನು- ಗಣ್ಯರು, ಪತ್ರಕರ್ತರು, ಸಂಪಾದಕರು, ಲೇಖನಗಳು ಹಾಗೂ ಅಭಿಮಾನಿಗಳು ಎಂದು ಸಂಪಾದಕರು ವಿಂಗಡಿಸಿದ್ದಾರೆ.
 
ವಿವಿಧ ಸಂದರ್ಭಗಳಲ್ಲಿ ವಿಷ್ಣುವರ್ಧನ್ ಕುರಿತಂತೆ ಪ್ರಕಟಗೊಂಡ ಬರಹಗಳು ಹಾಗೂ ವಿವಿಧ ಕ್ಷೇತ್ರಗಳ ವ್ಯಕ್ತಿಗಳ ಅನಿಸಿಕೆಗಳು ಇಲ್ಲಿ ಸಂಕಲಿತಗೊಂಡಿವೆ. ದೊಡ್ಡರಂಗೇಗೌಡ, ಬಾಬು ಕೃಷ್ಣಮೂರ್ತಿ, ವಿ. ನಾಗೇಂದ್ರಪ್ರಸಾದ್, ಪ್ರಕಾಶ್ ಬೆಳವಾಡಿ, ಲಕ್ಷ್ಮೀ ಗೋಪಾಲಸ್ವಾಮಿ ಸೇರಿದಂತೆ ಅನೇಕರು ವಿಷ್ಣು ವ್ಯಕ್ತಿಚಿತ್ರದ ಮುಖಗಳನ್ನು ಕಾಣಿಸಲು ಪ್ರಯತ್ನಿಸಿದ್ದಾರೆ.

ವಿಷ್ಣು ಅವರ ಅಂತಿಮ ಸಂದರ್ಶನ, ಅವರಿಗೆ ದೊರೆತ ಪ್ರಶಸ್ತಿಗಳು, ಅವರ ಸಿನಿಮಾಗಳ ಪಟ್ಟಿ- ಈ ಬಗೆಯ ಮಾಹಿತಿ ವಿಶೇಷಗಳ ಬರಹಗಳೇ ಪುಸ್ತಕದಲ್ಲಿ ಹೆಚ್ಚು ಗಮನಸೆಳೆಯುತ್ತವೆ.

ಅಂತಿಮವಾಗಿ ಎರಡೂ ಪುಸ್ತಕಗಳ ಚೌಕಟ್ಟು ವಿಷ್ಣುವರ್ಧನ್ ಅವರನ್ನು ಆರಾಧನಾ ಭಾವದಿಂದ ನೋಡುವುದೇ ಆಗಿದೆ. ಇದರಿಂದಾಗಿ ಮೇರು ನಟನೊಬ್ಬನ ವಿಮರ್ಶಾತ್ಮಕ ಮೌಲ್ಯಮಾಪನದ ಸಾಧ್ಯತೆಗಳಿಂದ ಇವು ಹೊರಗೇ ಉಳಿದಿವೆ.

ಅಲ್ಲದೆ, ವಿಷ್ಣುವರ್ಧನ್ ಅವರ ಅಭಿಮಾನಿಗಳ ಭಾವುಕತೆಯನ್ನೇ ಕೇಂದ್ರದಲ್ಲಿಟ್ಟುಕೊಂಡು ರೂಪುಗೊಂಡಿರುವ ಕೃತಿಗಳಿವು. ಪುಸ್ತಕಗಳ ದುಬಾರಿ ಬೆಲೆಯನ್ನು ನೋಡಿದರೆ ಈ ವಿಷಯ ಸ್ಪಷ್ಟವಾಗುತ್ತದೆ. ವಿಮರ್ಶೆ-ವಿವೇಕದ ಧೋರಣೆಯೂ ಸೇರಿಕೊಂಡಿದ್ದಲ್ಲಿ ಪುಸ್ತಕಗಳ ಸೊಗಸು ಹೆಚ್ಚುತ್ತಿತ್ತು. 
...........

ಅಣ್ಣಾ-ನಮ್ಮಣ್ಣ
ಸಂ: ಬಾಬು ದಿನಕರ
ಪು: 300; ಬೆ: ರೂ. 270
ಪ್ರ: ವಿಷ್ಣು ಪ್ರಕಾಶನ, 540, 14ನೇ ಮುಖ್ಯರಸ್ತೆ, 1ನೇ ವಿಭಾಗ, ಮಂಜುನಾಥ ನಗರ, ರಾಜಾಜಿನಗರ, ಬೆಂಗಳೂರು-10

ಕರುಣಾಮಯಿ ಡಾ. ವಿಷ್ಣುವರ್ಧನ್
ಸಂ: ಕೆ.ಆರ್. ಜನಾರ್ಧನ್ ರಾವ್ ಸಾಳಂಕೆ
ಪು: 306; ಬೆ: ರೂ. 190
ಪ್ರ: ಅನ್ನಪೂರ್ಣ ಪಬ್ಲಿಷಿಂಗ್ ಹೌಸ್, ನಂ. 176, 12ನೇ ಕ್ರಾಸ್, ನೆಲಮಹಡಿ, ಮಾಗಡಿ ಮುಖ್ಯರಸ್ತೆ, ಅಗ್ರಹಾರ ದಾಸರಹಳ್ಳಿ, ಬೆಂಗಳೂರು-79.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT