ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಮಾನವೇ ಎಲ್ಲ, ಅಭಿವೃದ್ಧಿ ಇಲ್ಲ

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅಮೇಠಿ: ಮಾಯಾವತಿ ಸರ್ಕಾರದ ಸೇಡಿನ ರಾಜಕಾರಣವನ್ನು ಸಾಬೀತುಪಡಿಸಲು ಈ ಕ್ಷೇತ್ರದಲ್ಲಿ  ದಾಖಲೆಗಳ ನೆರವು ಬೇಕಾಗಿಲ್ಲ. ಈ ಪಟ್ಟಣಕ್ಕೆ ಕಾಲಿಟ್ಟೊಡನೆ ಸ್ವಾಗತಿಸುವ ಗುಂಡಿಬಿದ್ದ ರಸ್ತೆಗಳು,ಬೋರ್‌ವೆಲ್‌ಗಳ ಮುಂದೆ ನೀರಿನ ಕೊಡ ಹಿಡಿದು ಸಾಲು ನಿಂತ ಹೆಣ್ಣುಮಕ್ಕಳು,  ಕಣ್ಣುಮುಚ್ಚಾಲೆ ಆಡುತ್ತಲೇ ಇರುವ ವಿದ್ಯುತ್, ತೆರೆದ ಚರಂಡಿಯಿಂದ ಹರಿಯುತ್ತಿರುವ ಕೊಳಚೆ ನೀರು...ಇವೆಲ್ಲವೂ ಸೇಡಿನ ರಾಜಕಾರಣದ ಅರ್ಧ ಕತೆಯನ್ನು ಹೇಳಿದರೆ ಉಳಿದುದನ್ನು ನೆಹರೂ ಕುಟುಂಬದ ಸದಸ್ಯರು ಚುನಾವಣಾ ಪ್ರಚಾರ ಸಭೆಗಳಲ್ಲಿ ಹೇಳುತ್ತಾರೆ.

ರಾಯಬರೇಲಿಯಲ್ಲಿ ಇಂದು ನಡೆದ ಕಾಂಗ್ರೆಸ್ ರ‌್ಯಾಲಿಯಲ್ಲಿ ಸೋನಿಯಾಗಾಂಧಿ ಮಾಡುತ್ತಿದ್ದ ಭಾಷಣ ಕೇಳಲು ಇಲ್ಲಿನ ಚಹದಂಗಡಿಯ ಟಿವಿ ಮುಂದೆ ನೆರೆದಿದ್ದ ಜನ ಕೈಕೊಟ್ಟ ವಿದ್ಯುತ್‌ನಿಂದಾಗಿ ಕೇಳಲಾಗದೆ ಮಾಯಾವತಿ ಸರ್ಕಾರಕ್ಕೆ ಶಾಪ ಹಾಕುತ್ತಿದ್ದರು. ಅವರಲ್ಲಿ ಹೆಚ್ಚು ಸಿಟ್ಟಾಗಿದ್ದ ಯುವಕ ಕೀರ್ತಿಮಾನ್ ಚೌದರಿ `ಯೇ ಸಬ್ ಪ್ರತಿಕಾರ್ ಕಾ ರಾಜನೀತಿ ಹೈ~ ಎಂದು ನೇರವಾಗಿ ಆರೋಪಿಸಿ ಭಾಷಣ ಶುರು ಮಾಡಿಯೇ ಬಿಟ್ಟ. ಅವನ ಮಾತಿನಲ್ಲೇನು ಹೊಸತು ಇರಲಿಲ್ಲ. ಅವೆಲ್ಲವೂ ಚುನಾವಣಾ ಪ್ರಚಾರಕ್ಕಾಗಿ ಇಲ್ಲಿಗೆ ಬಂದಿದ್ದ ರಾಹುಲ್ ಮತ್ತು ಪ್ರಿಯಾಂಕ ಗಾಂಧಿ ಹೇಳಿದ್ದೇ ಆಗಿತ್ತು. ಅರ‌್ವತ್ತು ಕಿ.ಮೀ.ದೂರದ ರಾಯಬರೇಲಿಯಲ್ಲಿ ಸೋನಿಯಾಗಾಂಧಿ ಕೂಡಾ ತನ್ನ ಭಾಷಣದಲ್ಲಿ ಅದೇ ಆರೋಪ ಮಾಡುತ್ತಿದ್ದರು.

 ರಾಹುಲ್ ಗಾಂಧಿ ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವ ಅಮೇಠಿ ಲೋಕಸಭಾ ಕ್ಷೇತ್ರದುದ್ದಕ್ಕೂ ಎರಡು ಪಂಗಡಗಳಲ್ಲಿ ಹಂಚಿಹೋಗಿರುವ ಮತದಾರರು ಸಿಗುತ್ತಾರೆ. ಅವರಲ್ಲಿ  ಕಾಂಗ್ರೆಸ್ ನಿಷ್ಠ ಮತದಾರರು ಬಿಎಸ್‌ಪಿ ಸರ್ಕಾರವನ್ನು ದೂರುತ್ತಿದ್ದರೆ,  `ನೆಹರೂ ಕುಟುಂಬದ ಸದಸ್ಯರು ಇಲ್ಲದೆ ಇರುತ್ತಿದ್ದರೆ ರಾಜ್ಯ ಸರ್ಕಾರದಿಂದ ಒಂದಷ್ಟು ಅಭಿವೃದ್ದಿ ಕೆಲಸಗಳಾದರೂ ಆಗುತ್ತಿತ್ತು~ ಎಂದು ಕಾಂಗ್ರೆಸ್ ವಿರೋಧಿಗಳು ಸೇಡಿನ ರಾಜಕಾರಣ ನಡೆಯುತ್ತಿರುವುದನ್ನು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಾರೆ. ತೀರಾ ವೈಯಕ್ತಿಕ ಮಟ್ಟದ ಈ ರಾಜಕೀಯ ಸೆಣಸಾಟದಲ್ಲಿ ಬಡವಾಗಿ ಹೋಗಿರುವುದು ಛತ್ರಪತಿ ಶಾಹು ಮಹರಾಜ್ ನಗರ ಎಂಬ ಹೊಸ ಹೆಸರಿನ ಅಮೇಠಿ ಜಿಲ್ಲೆ. ನೆಹರೂ ಕುಟುಂಬದ ಮೇಲಿನ ಅಭಿಮಾನಕ್ಕಾಗಿ ಇಲ್ಲಿನ ಜನ ಕಳೆದುಕೊಂಡಿರುವುದು ಅಪಾರ.

 ಎರಡು ಚುನಾವಣೆಗಳನ್ನು (1967 ಮತ್ತು 1977) ಹೊರತುಪಡಿಸಿದರೆ ಅಮೇಠಿ ಲೋಕಸಭಾ ಕ್ಷೇತ್ರ ಸ್ವಾತಂತ್ರ್ಯ ಸಿಕ್ಕ ದಿನದಿಂದ ಕಾಂಗ್ರೆಸ್ ಪಕ್ಷದ ಕೈಯಲ್ಲಿಯೇ ಇದೆ. ನಡುವಿನ ಎರಡು ಅವಧಿಯನ್ನು ಬಿಟ್ಟರೆ ಉಳಿದಂತೆ 1980ರಿಂದ ಸಂಜಯ್‌ಗಾಂಧಿಯಿಂದ ಹಿಡಿದು ರಾಹುಲ್‌ಗಾಂಧಿ ವರೆಗೆ ನೆಹರೂ ಕುಟುಂಬದ ಸದಸ್ಯರೇ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಆದರೆ ವಿಧಾನಸಭಾ ಚುನಾವಣೆಯಲ್ಲಿ ಮಾತ್ರ ಮತದಾರರು ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಬೆಂಬಲಿಸಿಲ್ಲ. ಕಳೆದ ಚುನಾವಣೆಯಲ್ಲಿಯೂ ಅಮೇಠಿ ಲೋಕಸಭಾ ಕ್ಷೇತ್ರಕ್ಕೆ ಸೇರಿರುವ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರರಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿತ್ತು. 2007ರಲ್ಲಿ ಅಮೇಠಿ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಈ ಬಾರಿ ಮರು ಆಯ್ಕೆ ಬಯಸಿರುವ ಅಮಿತಾಸಿಂಗ್ 2002ರಲ್ಲಿ ಇದೇ ಕ್ಷೇತ್ರದಿಂದ ಬಿಜೆಪಿಯಿಂದ ಗೆದ್ದವರು. ಹತ್ಯೆಗೀಡಾದ ಒಂದು ಕಾಲದ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಸೈಯ್ಯದ್ ಮೋದಿ ಅವರ ಪತ್ನಿ ಅಮಿತಾ ಮೋದಿ ರಾಜ ಮನೆತನದ ಸಂಜಯ್‌ಸಿಂಗ್ ಅವರನ್ನು ಮರುಮದುವೆಯಾದ ನಂತರ ಅಮಿತಾಸಿಂಗ್ ಆಗಿದ್ದಾರೆ. ಗಂಡನ ಮೂಲಕ ಬಂದ `ರಾಣಿ~ ಪಟ್ಟ ಮತ್ತು ನೆಹರೂ ಕುಟುಂಬದ ನಾಮ ಬಲ ಈ ಬಾರಿಯೂ ಅವರನ್ನು ಗೆಲ್ಲಿಸಬಹುದು. ಆದರೆ ಇದೇ ಮಾತನ್ನು ಉಳಿದ ನಾಲ್ಕು ಕ್ಷೇತ್ರಗಳಾದ ತಿಲೋಯ್, ಸಲೋನ್, ಜಗದೀಶ್‌ಪುರ, ಗೌರಿಗಂಜ್ ಬಗ್ಗೆ ಹೇಳುವ ಹಾಗಿಲ್ಲ.

`ಅಲಹಾಬಾದ್ ಕೋ ಅಮೇಠಿ ಬನಾಯೆಂಗೆ ಎಂದು ಹೇಳಿಯೇ ಅಮಿತಾಬ್ ಬಚ್ಚನ್ ಅಲಹಾಬಾದ್ ಕ್ಷೇತ್ರವನ್ನು ಗೆದ್ದಿದ್ದರು. ಹಾಗಿತ್ತು ನಮ್ಮೂರು ಉಳಿದವರು ಅಸೂಯೆ ಪಡುವ ರೀತಿ~ ಎಂದು ಹಳೆಯ ನೆನೆಪನ್ನು ಮೆಲುಕುಹಾಕಿದವರು ಜಗದೀಶ್‌ಪುರದ ಉದ್ಯಮಿ ಬಬ್ಬನ್‌ಸಿಂಗ್.  ಮಾರುತಿ ಉದ್ಯೋಗ್‌ಗೆ ಬಿಡಿಭಾಗಗಳನ್ನು ಪೂರೈಸುತ್ತಿದ್ದ ಇವರ ಒಡೆತನದ ಕಿರುಕೈಗಾರಿಕಾ ಘಟಕ ಈಗ ಮುಚ್ಚಿದೆ. `ಇಸ್ ಕ್ಷೇತ್ರ್‌ಕೋ ವಿಕಾಸ್ ಕಾ ಪ್ರಯೋಗ್‌ಶಾಲಾ ಬನಾವುಂಗಾ~ ಎಂದು ರಾಜೀವ್‌ಗಾಂಧಿ ಹೇಳಿದ್ದರಂತೆ. ರಾಜೀವ್ ಕಾಲದಲ್ಲಿ ಆರಂಭಗೊಂಡಿದ್ದ ಎಲ್‌ಎಂಎಲ್-ವೆಸ್ಪಾ, ಸಾಮ್ರಾಟ್ ಬೈಸಿಕಲ್, ಉಷಾ ರೆಕ್ಟಿಪೈಸ್, ಮಾಳವಿಕಾ ಉಕ್ಕುಕಾರ್ಖಾನೆ, ಮಾರುತಿ ಉದ್ಯೋಗ್‌ಗೆ ಬಿಡಿಭಾಗಗಳನ್ನು ಪೂರೈಸುತ್ತಿದ್ದ ನೂರಾರು ಕಿರುಕೈಗಾರಿಕಾ ಘಟಕಗಳು ಈಗ ಮುಚ್ಚಿಹೋಗಿವೆ. 

ಜಗದೀಶ್‌ಪುರ ಕೈಗಾರಿಕಾ ಕ್ಷೇತ್ರ ಮುಚ್ಚಿಹೋಗಿರುವ ಕೈಗಾರಿಕಾ ಘಟಕಗಳ `ಮ್ಯೂಸಿಯಂ~ನಂತಿದೆ.
ಬಿಎಚ್‌ಇಎಲ್‌ನ ಒಂದು ಘಟಕ ಮತ್ತು ಒಂದೆರಡು ರಸಗೊಬ್ಬರದ ಕಾರ್ಖಾನೆಗಳನ್ನು ಹೊರತುಪಡಿಸಿದರೆ ಉಳಿದಿರುವುದು ರಾಜೀವ್‌ಗಾಂಧಿ ಕಾಲದಲ್ಲಿ ಮುನ್ಸಿಗಂಜ್‌ನಲ್ಲಿ ನಿರ್ಮಿಸಲಾಗಿದ್ದ ಸಂಜಯ್‌ಗಾಂಧಿ ಸ್ಮಾರಕ ಆಸ್ಪತ್ರೆ ಮಾತ್ರ. ಈ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಬಿಡಾರ ಹೂಡುವುದು ಈ ಆಸ್ಪತ್ರೆಯ ಅತಿಥಿಗೃಹದಲ್ಲಿ.

`ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ನಂತರದ 22 ವರ್ಷಗಳಲ್ಲಿ ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಒಂದೇ ಒಂದು ಹೊಸ ಕಾರ್ಖಾನೆ ಪ್ರಾರಂಭವಾಗಿಲ್ಲ. ಹಳೆಯ ಕಾರ್ಖಾನೆಗಳುಒಂದೊಂದಾಗಿ ಮುಚ್ಚುತ್ತಿವೆ. ಇದರಿಂದ ನಿರುದ್ಯೋಗ ಹೆಚ್ಚಾಗಿವೆ~ ಎಂದು ವರದಿ ಒಪ್ಪಿಸಿದರು ಬಬ್ಬನ್‌ಸಿಂಗ್.

ಅವರಿಂದ ಬೀಳ್ಕೊಂಡು ರಾಯಬರೇಲಿ ಕಡೆ ಹೊರಟರೆ ಅಮೇಠಿ- ರಾಯಬರೇಲಿ ರಾಜ್ಯ ಹೆದ್ದಾರಿಯಲ್ಲಿ ಹೊಂಡಗಳಿಲ್ಲದ ಒಂದು ಚದರ ಮೀಟರ್ ಜಾಗ ಕೂಡಾ ಕಾಣಲಿಲ್ಲ. `ಸಂಜಯ್‌ಗಾಂಧಿ ಕಾಲದಲ್ಲಿ ಮಾಡಿದ್ದ ಕಚ್ಚಾರಸ್ತೆಯನ್ನು ರಾಜೀವ್ ಪಕ್ಕಾ ಮಾಡಿದ್ದರು. ಕಳೆದ 22 ವರ್ಷಗಳಿಂದ ಮತ್ತೆ ದುರಸ್ತಿ ಆಗಿಲ್ಲ. ರಾಹುಲ್‌ಗಾಂಧಿ ಕೂಡಾ ಇದೇ ರಸ್ತೆಯಲ್ಲಿ ಅಡ್ಡಾಡುತ್ತಾರೆ. ಅವರೂ ಏನು ಮಾಡಿಲ್ಲ ~ ಎಂದು ಅಸಮಾಧಾನ ವ್ಯಕ್ತಪಡಿಸಿದವ ರಸ್ತೆಬದಿಯ ಚಹದಂಗಡಿಯ  ಬಾಬುಲಾಲ್ ಯಾದವ್. ಅಷ್ಟು ಹೇಳಿದವ `ನಮ್ಮ ಓಟು ಮಾತ್ರ ಕಾಂಗ್ರೆಸ್ ಪಕ್ಷಕ್ಕೆ~ ಎಂದು ಹೇಳಲು ಮರೆಯಲಿಲ್ಲ.  `ಹೀಗಿದ್ದರೂ ಮತ್ತೆ ಯಾಕೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಿ, ವಿರೋಧಿ ಸರ್ಕಾರ ಬಂದರೆ ಇನ್ನಷ್ಟು ಸೇಡಿನ ರಾಜಕಾರಣ ನಡೆದು ಯಾವ ಅಭಿವೃದ್ದಿಯೂ ಆಗುವುದಿಲ್ಲವಲ್ಲಾ?~ ಎಂದು ಆತನನ್ನು ಕೆಣಕಿದರೆ `ಈ ಬಾರಿ ಕಾಂಗ್ರೆಸ್‌ನದ್ದೇ ಸರ್ಕಾರ~ ಎಂದ. ಆತನನ್ನು ಸಂಪೂರ್ಣವಾಗಿ ರಾಹುಲ್ `ಭಯ್ಯಾ~ ಮತ್ತು ಪ್ರಿಯಾಂಕಾ `ದೀದಿ~ ಆವರಿಸಿಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT