ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಮಾನಿಗಳ ಉತ್ಸಾಹದ ತೋರಣ

Last Updated 27 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮುದ್ದಾದ ಮುಖದಲ್ಲಿ ತಿದ್ದಿ ತೀಡಿದ ತ್ರಿವರ್ಣ ಅಲಂಕಾರ. ಮೃದುವಾದ ಬೆರಳುಗಳ ಬಿಗಿ ಹಿಡಿತದ ಕೈಯಲ್ಲೊಂದು ಪುಟ್ಟ ಫಲಕ. ಮೇಣದ ಬಳಪದಿಂದ ಬರೆದ ಸಚಿನ್ ಚಿತ್ರ. ಜೊತೆಗೆ ಕಷ್ಟಪಟ್ಟು ಜೋಡಿಸಿಟ್ಟ ಅಕ್ಷರಗಳಲ್ಲಿ ಭಾರತ ತಂಡಕ್ಕೆ ಶುಭ ಸಂದೇಶ...! ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಕ್ಲಬ್ ಹೌಸ್ ಪಕ್ಕದ ಪ್ರವೇಶ ದ್ವಾರದ ಸಾಲಿನಲ್ಲಿ ನಿಂತಿದ್ದ ಆ ಪುಟ್ಟ ಬಾಲಕಿಯ ಕ್ರಿಕೆಟ್ ಪ್ರೀತಿ ಹಾಗೂ ಉತ್ಸಾಹ ಎಲ್ಲರ ಗಮನ ಸೆಳೆಯಿತು. ಅವಳತ್ತ ವಿದೇಶಿ ಛಾಯಾಗ್ರಾಹಕರು ಕೂಡ ಕ್ಯಾಮೆರಾ ಫೋಕಸ್ ಮಾಡಿದರು.

ಆಗ ತೊದಲು ನುಡಿಯಲ್ಲಿ ‘ಚೀತೆಗಾ ಭೈ ಚೀತೆಗೆ ಇಂಡಿಯಾ ಜೀತೆಗಾ’ (ಜೀತೇಗಾ ಭೈ ಜೀತೆಗಾ ಇಂಡಿಯಾ ಜೀತೇಗಾ) ಎಂದು ಹೇಳಿ ಕಣ್ಣು ಪಿಳುಕಿಸಿ ನಕ್ಕಳು ಅವಳು. ಇದು ಉದ್ಯಾನನಗರಿಯಲ್ಲಿ ಭಾನುವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್‌ನ ಭಾರತ ಹಾಗೂ ಇಂಗ್ಲೆಂಡ್ ನಡುವಣ ‘ಬಿ’ ಗುಂಪಿನ ಪಂದ್ಯಕ್ಕೂ ಮುನ್ನ ಕಂಡ ದೃಶ್ಯವಿದು. ಪುಟಾಣಿ ಬಾಲಕಿ ಮೇಘಾ ರೀತಿಯಲ್ಲಿಯೇ ಅದೆಷ್ಟೊಂದು ಮಕ್ಕಳು ಕ್ರೀಡಾಂಗಣದಲ್ಲಿ ಸಚಿನ್, ದೋನಿ, ಯುವರಾಜ್... ಆಟದ ಆರ್ಭಟ ನೋಡಲು ಸಂಭ್ರಮದಿಂದ ಬಂದಿದ್ದರು.

ಗಮನ ಸೆಳೆಯುವ ಬಯಕೆ: ಯುವಕರು ಗುಂಪು ಗುಂಪಾಗಿ ವಿಶಿಷ್ಟವಾದ ಹಾಗೂ ವಿಚಿತ್ರವಾದ ಪೋಷಾಕು ತೊಟ್ಟುಕೊಂಡು ಗ್ಯಾಲರಿಗಳಲ್ಲಿ ಕಾಣಿಸಿಕೊಂಡರು. ನೇರ ಪ್ರಸಾರದ ಕ್ಯಾಮೆರಾವನ್ನು ಹಾಗೂ ಪತ್ರಿಕಾ ಛಾಯಾಗ್ರಾಹಕರ ಗಮನವನ್ನು ತಮ್ಮ ಕಡೆಗೆ ಸೆಳೆಯುವ ಬಯಕೆ ಅವರದ್ದು. ವಿಶ್ವಕಪ್ ಫುಟ್‌ಬಾಲ್‌ನಲ್ಲಿ ಕಾಣುವಂಥ ವಿವಿಧ ವೇಷಗಳು ಕ್ರಿಕೆಟ್ ವಿಶ್ವಕಪ್‌ನಲ್ಲಿಯೂ ಈ ಬಾರಿ ಹೆಚ್ಚಾಗಿ ಕಾಣಿಸಿಕೊಂಡಿದ್ದು ವಿಶೇಷ. ಮೆದುವಾದ ಮಕಮಲ್ ಟೋಪಿ ತೊಟ್ಟು ಜೋಕರ್‌ಗಳಂತೆ ಮೂಗಿಗೆ ಕೆಂಪು ಗೋಲಿ ಅಂಟಿಸಿಕೊಂಡವರ ದಂಡಂತೂ ಅಪಾರ. ಭಾರತ ತಂಡಕ್ಕೆ ಈ ಪಂದ್ಯದಲ್ಲಿ ವಿಘ್ನಗಳು ಎದುರಾಗದಂತೆ ಮಾಡಲು ವಿಘ್ನನಿವಾರಕ ಗಣೇಶನನ್ನು ಕೂಡ ಕ್ರಿಕೆಟ್ ಪ್ರೇಮಿಗಳು ತಮ್ಮೊಂದಿಗೆ ಕರೆದುಕೊಂಡು ಬಂದಿದ್ದರು.
 
ಒಬ್ಬ ರಾಜನ ಪೊಷಾಕಿನಲ್ಲಿ ಇದ್ದರೆ, ಇನ್ನೊಬ್ಬ ಭೂತದ ರೂಪದಲ್ಲಿ, ಮತ್ತೊಬ್ಬನಿಗೆ ಸಚಿನ್ ಡುಬ್ಲಿಕೇಟ್ ಆಗಿ ಕಾಣಿಸಿಕೊಳ್ಳುವ ಆತುರ. ಹೀಗೆ ಕ್ರೀಡಾಂಗಣದ ಪ್ರತಿಯೊಂದು ಗ್ಯಾಲರಿಯಲ್ಲಿ ಛದ್ಮವೇಷಗಳ ಚಿತ್ತಾರ. ಬ್ಯಾಟಿಂಗ್ ಅಬ್ಬರ ನೋಡಿದ ಸಂಭ್ರಮ: ರೋಚಕ ಘಟ್ಟದಲ್ಲಿ ಅಂತ್ಯವಾದ ಪಂದ್ಯದಲ್ಲಿ ಬ್ಯಾಟಿಂಗ್ ಅಬ್ಬರವನ್ನು ಕಂಡು ಕ್ರೀಡಾಂಗಣದಲ್ಲಿದ್ದ ನಲ್ವತ್ತು ಸಾವಿರದಷ್ಟು ಪ್ರೇಕ್ಷಕರು ಸಂಭ್ರಮಿಸಿದರು. ಸಚಿನ್ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಸಾಧನೆಯ ಶ್ರೇಯ ಪಡೆಯಬೇಕೆಂದು ಹಾರೈಸಿದ ‘ಮಾಸ್ಟರ್ ಬ್ಲಾಸ್ಟರ್’ ಅಭಿಮಾನಿಗಳಂತೂ ಸಂತಸದ ಅಲೆಯ ಮೇಲೆ ತೇಲಿದರು.

ಉಭಯ ತಂಡದವರು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದು; ಕಾಸು ಕೊಟ್ಟು ಕಷ್ಟಪಟ್ಟು ಟಿಕೆಟ್ ಕೊಂಡು ಕ್ರೀಡಾಂಗಣದಲ್ಲಿ ಆಟ ನೋಡಲು ಬಂದವರಿಗಂತೂ ಭಾರಿ ಸಮಾಧಾನ ನೀಡಿತು.ಗಣ್ಯರ ಮೆರುಗು: ಕೋಲ್ಕತ್ತದಿಂದ ಸ್ಥಳಾಂತರವಾಗಿ ಇಲ್ಲಿಗೆ ಬಂದ ವಿಶ್ವಕಪ್‌ನ ಈ ಪ್ರಮುಖ ಪಂದ್ಯವನ್ನು ನೋಡಲು ವಿವಿಧ ಕ್ಷೇತ್ರದ ಗಣ್ಯರು ಕೂಡ ಆಸಕ್ತಿ ತೋರಿದರು. ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯಿಲಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಡೈಮಂಡ್ ಬಾಕ್ಸ್‌ನಲ್ಲಿ ಕಾಣಿಸಿಕೊಂಡರು.

ಸಿನಿಮಾ ತಾರೆಗಳಾದ ದೀಪಿಕಾ ಪಡುಕೋಣೆ, ರಮ್ಯಾ, ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್ ಹಾಗೂ ಸುದೀಪ್ ಅವರು ಪ್ರೇಕ್ಷಕರ ಗ್ಯಾಲರಿಯಲ್ಲಿ ನಿಂತು ಉತ್ಸಾಹದಿಂದ ಚಪ್ಪಾಳೆ ತಟ್ಟಿ ಆತಿಥೇಯ ತಂಡದ ಆಟಗಾರರನ್ನು ಹುರಿದುಂಬಿಸಿದರು. ದೀಪಿಕಾ ಜೊತೆಗೆ ಉದ್ಯಮಿ ವಿಜಯ್ ಮಲ್ಯ ಪುತ್ರ ಸಿದ್ದಾರ್ಥ್ ಅವರನ್ನು ಕಂಡಾಗ ಗಾಸಿಪ್‌ಗೆ ಅವಕಾಶವಾಗಿದ್ದ ಅಚ್ಚರಿಯೇನಲ್ಲ! 1983ರಲ್ಲಿ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಸಯ್ಯದ್ ಕಿರ್ಮಾನಿ, ರೋಜರ್ ಬಿನ್ನಿ, ಮಾಜಿ ಟೆಸ್ಟ್ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್, ಮಾಜಿ ನಾಯಕ ರಾಹುಲ್ ದ್ರಾವಿಡ್ ಸೇರಿದಂತೆ ಅನೇಕ ಕ್ರಿಕೆಟಿಗರು ಪಂದ್ಯಕ್ಕೆ ಸಾಕ್ಷಿಯಾದರು.

‘ಬರ್ಮಿ ಆರ್ಮಿ’ ಸದ್ದು: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ಟಿಕೆಟ್ ವಿತರಣೆಗೆ ರೂಪಿಸಿದ್ದ ಜಾಲತಾಣದಲ್ಲಿ ಈ ಪಂದ್ಯದ ನಾಲ್ಕು ಸಾವಿರ ಟಿಕೆಟ್‌ಗಳನ್ನು ಇಂಗ್ಲೆಂಡ್‌ನವರು ಕೊಂಡಿದ್ದರು. ಆದರೆ ಕ್ರೀಡಾಂಗಣಕ್ಕೆ ಬಂದವರು 1,200 ಮಾತ್ರ. ಆದರೂ ತಮ್ಮ ವಿಶಿಷ್ಟವಾದ ಗತ್ತಿನಿಂದ ಇಂಗ್ಲೆಂಡ್ ಕ್ರಿಕೆಟ್ ಪ್ರೇಮಿಗಳ ದಂಡು ‘ಬರ್ಮಿ ಆರ್ಮಿ’ ಗ್ಯಾಲರಿಯಲ್ಲಿ ಎದ್ದು ಕಾಣಿ ಸಿತು. ಕ್ರೀಡಾಂಗಣದಲ್ಲಿ ಧ್ವನಿ ಮಾರ್ದನಿಸುವಂತೆ ಸದ್ದು ಕೂಡ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT