ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಓಘ; ಆಮೆ ವೇಗ

Last Updated 28 ಜನವರಿ 2013, 6:34 IST
ಅಕ್ಷರ ಗಾತ್ರ

ತುಮಕೂರು: ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದು. ನಿವೇಶನದ ಬೆಲೆ ಚದರಡಿಗೆ ಎರಡರಿಂದ ಎರಡೂವರೆ ಸಾವಿರ ರೂಪಾಯಿ. ಈ ಭಾಗದ ಬೆಳವಣಿಗೆಯ ಓಘ ನಾಗಾಲೋಟ... ಆದರೆ ಇದಕ್ಕೆ ಕಪ್ಪು ಚುಕ್ಕೆ ಎನ್ನುವಂತೆ ಅಭಿವೃದ್ಧಿಯ ವೇಗ ಆಮೆಗತಿ. ಹಳ್ಳಿಗೆ ಹಳ್ಳಿಯೂ ಅಲ್ಲ. ನಗರಕ್ಕೆ ನಗರವೂ ಅಲ್ಲ ಎಂಬಂಥ ವಿಚಿತ್ರ ಸ್ಥಿತಿ.

ಮರಳೂರು ಕೆರೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಕೆರೆಯ  ಹತ್ತಾರು ಎಕರೆ ಒತ್ತುವರಿಯಾಗಿದೆ. ಅದಾಗಲೇ ಮನೆಗಳು, ವಾಣಿಜ್ಯ ಸಂಕೀರ್ಣ ನಿರ್ಮಾಣಗೊಂಡ ನಂತರ ನಾಗರಿಕರ ಕೂಗಿಗೆ ಕೊನೆಗೂ ಎಚ್ಚೆತ್ತ ಇಲಾಖೆ ಅತಿಕ್ರಮಣ ತಡೆಗೆ ಮುಂದಾಗಿದೆ. 25 ವರ್ಷದ ಹಿಂದೆ 18 ಎಕರೆ ವಿಸ್ತಾರದಲ್ಲಿದ್ದ ಅಲಸೆಟ್ಟಿ ಪಾಳ್ಯದ ಕೆರೆಯ ಜಾಗ ಈಗ ಸರ್ಕಾರಿ ಕಚೇರಿಗಳ ತಾಣವಾಗಿದೆ. ಹಲವು ವಿದ್ಯಾರ್ಥಿ ನಿಲಯ, ದೇಗುಲ ನಿರ್ಮಾಣಗೊಂಡಿವೆ.

-ಇದು ನಿಕಟಪೂರ್ವ ಅಧ್ಯಕ್ಷೆ ದೇವಿಕಾ ಪ್ರತಿನಿಧಿಸುವ ನಗರಸಭೆ  28ನೇ ವಾರ್ಡ್‌ನ ಚಿತ್ರಣ. ಬೃಹತ್ ವಾರ್ಡ್. ಎಂಟು ಸಾವಿರ ಮತದಾರರು, ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇಲ್ಲಿ ಅಭಿವೃದ್ಧಿ ಕಾಮಗಾರಿಗಳು ಕಣ್ಣಿಗೆ ಕೋರೈಸಿದರೂ; ಹಲವು ಕಡೆ ಮೂಲ ಸೌಕರ್ಯಗಳೇ ಸಿಕ್ಕಿಲ್ಲ. ಅಭಿವೃದ್ಧಿಯಲ್ಲಿ ಪಕ್ಷಪಾತ ಧೋರಣೆಯೂ ಕೇಳಿ ಬಂತು.

ಪ್ರಮುಖ ಬಡಾವಣೆ ಸರಸ್ಪತಿಪುರಂನ 11ನೇ ಅಡ್ಡರಸ್ತೆಯ ಸಿ.ವಿ.ರಾಮನ್ ರಸ್ತೆಯ ನಿವಾಸಿಗಳು ಸದಸ್ಯೆ, ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. `ನೂತನ ಬಡಾವಣೆಗಳು ಡಾಂಬರು ರಸ್ತೆ ಕಂಡಿವೆ. ನಾವು ಇನ್ನೂ ಮಣ್ಣಿನ ರಸ್ತೆಯ ದೂಳಿನಲ್ಲೇ ನಿತ್ಯ ಜೀವನ ದೂಡುತ್ತಿದ್ದೇವೆ' ಎಂದು ಅಸಮಾಧಾನ ಹೊರ ಹಾಕಿದರು.

ವಾರ್ಡ್‌ನ ಕೆಲವೆಡೆ  ಕಸ ಸಂಗ್ರಹಿಸುವ ತೊಟ್ಟಿಯನ್ನೂ ಇಟ್ಟಿಲ್ಲ. ಖಾಲಿ ನಿವೇಶನಗಳೇ ಕಸದ ತೊಟ್ಟಿಗಳಾಗಿವೆ. ಅಧಿಕಾರಿಗಳು, ಪ್ರಭಾವಶಾಲಿಗಳು, ಗಣ್ಯರು ವಾಸಿಸುವ ಕಡೆ ಎಲ್ಲವೂ ಚೆನ್ನಾಗಿದೆ. ಮಧ್ಯಮ ವರ್ಗದವರ ಗೋಳು ಕೇಳುವರು ಯಾರೂ ಇಲ್ಲ. ಹದಿನೈದು ದಿನವಾದರೂ ಕಸ ಎತ್ತುವುದಿಲ್ಲ ಎನ್ನುತ್ತಾರೆ ಶ್ರೀನಿವಾಸ್.

ಈಚೆಗೆ ಕಾಮಗಾರಿ ವೇಗ ಪಡೆದಿದೆ. ಆದರೆ ಸಮಗ್ರ ಅಭಿವೃದ್ಧಿ ಕಾಣುತ್ತಿಲ್ಲ. ದೇವರಾಜ ಅರಸು ರಸ್ತೆಯ ದಕ್ಷಿಣ ಭಾಗದ ಜನತೆಗೆ ಇಂದಿಗೂ ಅಭಿವೃದ್ಧಿ ಕನಸಾಗಿದೆ. ಚರಂಡಿಗಳು ಕಟ್ಟಿಕೊಂಡು ಸೊಳ್ಳೆಗಳ ಉತ್ಪಾದನಾ ಕಾರ್ಖಾನೆಯಾಗಿವೆ. ದುರ್ನಾತ ಬೀರುತ್ತಿದ್ದರೂ; ಸ್ವಚ್ಛತೆ ಕೆಲಸ ಮಾಡುತ್ತಿಲ್ಲ ಎಂಬ ಆಕ್ರೋಶ ಆಶಾ ಅವರದ್ದು.

ನೀರಿಗಾಗಿ ಮೈಲಿ ದೂರ ಅಲೆಯಬೇಕಿದೆ. ಯುಜಿಡಿ ಸಂಪರ್ಕ ಕಲ್ಪಿಸಿ ಎಂಬ ಮನವಿಗೆ ಸ್ಪಂದಿಸಿಲ್ಲ. ಬೀದಿ ನಾಯಿ- ಹಂದಿ ಉಪಟಳ ಹೆಚ್ಚು. ದೇವರಾಜ ಅರಸು ರಸ್ತೆಯಲ್ಲಿ ವಾಹನ ಅಡ್ಡಾದಿಡ್ಡಿ ನಿಲುಗಡೆ ಪಾದಚಾರಿ ಮಾರ್ಗಕ್ಕೆ ಕುತ್ತು ತಂದಿದೆ. ಕಟ್ಟಡದ ಅನುಮತಿ ಹೆಸರಿನಲ್ಲಿ ಹಣ ವಸೂಲಿ ದಂಧೆಯಾಗಿ ಮಾರ್ಪಟ್ಟಿದೆ ಎಂಬ ದೂರು ಸಿದ್ದಯ್ಯ ಅವರದ್ದು.

ಭರವಸೆ ಈಡೇರಿಸಿದ ತೃಪ್ತಿ
ವಾರ್ಡ್‌ನಲ್ಲಿ ಉತ್ತಮ ರಸ್ತೆಗಳಿವೆ. ಇನ್ನೂ ಸಾಕಷ್ಟು ಅಭಿವೃದ್ಧಿಗೊಳ್ಳಬೇಕಿದೆ. ಹೇಮಾವತಿ ಕುಡಿಯುವ ನೀರಿನ ಎಲ್ಲ ಸಿದ್ಧತೆ ಆಗಿದೆ. ಮೋಟರ್ ಅಳವಡಿಸಿದ ತಕ್ಷಣವೇ ನೀರು ಸಿಗಲಿದೆ. ಅಮರಜ್ಯೋತಿ ನಗರ, ರಾಮಕೃಷ್ಣಾಶ್ರಮ ಬಡಾವಣೆಯಲ್ಲಿ ಸಮಸ್ಯೆ ಬಗೆಹರಿಸಿದ ತೃಪ್ತಿ ಇದೆ.

ಮರಳೂರು ದಿಣ್ಣೆ ಭಾಗದಲ್ಲಿ ರೂ. 3 ಕೋಟಿ ವೆಚ್ಚದ ಕಾಮಗಾರಿ, ಸರಸ್ವತಿಪುರಂನ  ಮುಖ್ಯರಸ್ತೆಗಳನ್ನು 60 ಅಡಿಗೆ ವಿಸ್ತರಣೆ, ಮರಳೂರು ಗ್ರಾಮದಲ್ಲಿ ರೂ. 2 ಕೋಟಿ ವೆಚ್ಚದ ಕೆಲಸ ಮಾಡಲಾಗಿದೆ. ಮುಖ್ಯರಸ್ತೆ ಅಭಿವೃದ್ಧಿಗೆ ರೂ.1.30 ಕೋಟಿ ಟೆಂಡರ್ ಕರೆಯಲಾಗಿದೆ. ಬಡಾವಣೆಯಲ್ಲಿ 3.5 ಸಾವಿರ ಗಿಡ ನೆಡಲಾಗಿದೆ. ರೂ. 8 ಕೋಟಿ ಹೆಚ್ಚು ಮೊತ್ತದ ಕಾಮಗಾರಿ ನಡೆಸಲಾಗಿದೆ.
-ದೇವಿಕಾ, ನಗರಸಭೆ ಸದಸ್ಯೆ

ಉತ್ತಮ
ಸದಸ್ಯರು ಉತ್ತಮವಾಗಿ ಸ್ಪಂದಿಸಿದ್ದಾರೆ. ರಸ್ತೆ, ಚರಂಡಿ ನಿರ್ವಹಣೆ ಉತ್ತಮವಾಗಿದೆ.
-ಪುರುಷೋತ್ತಮ್

ನಾಯಕರಿಲ್ಲ
ನಮ್ಮ ರಸ್ತೆಯಲ್ಲಿ ನಾಯಕರು-ಹಿಂಬಾಲಕರು ಯಾರೂ ಇಲ್ಲ. ಇದರಿಂದ ಅಭಿವೃದ್ಧಿ ಮರೀಚಿಕೆಯಾಗಿದೆ.
-ಡಾ.ಶಶಿಕಾಂತ್

ಓಟು ಹಾಕಿಲ್ಲ
ಅಭಿವೃದ್ಧಿ ಮಾಡಿಸಿ ಎಂದು ಸ್ಥಳೀಯ ಶಾಸಕರನ್ನು ಕೇಳಿದರೆ, ನೀನೇನು ನನಗೆ ಓಟ್ ಹಾಕಿದ್ದೀಯಾ ಎನ್ನುತ್ತಾರೆ. ನಗರಸಭೆ ಸದಸ್ಯೆ ಅಭಿವೃದ್ಧಿ ಕಾಮಗಾರಿಗಳಲ್ಲೂ ರಾಜಕಾರಣ ನಡೆಸುತ್ತಿದ್ದಾರೆ.
-ಎಚ್.ಸಿದ್ದಯ್ಯ

ನೀರು... ಗೋಳು
ನೀರಿನ ಸಮಸ್ಯೆ ಹೇಳಲಾಗದ್ದು. ವಾರದಿಂದ ನೀರು ಬಿಟ್ಟಿಲ್ಲ. ವಾಲ್ವ್‌ಮೆನ್ ಮಾತನಾಡಿಸುವುದು ಕಷ್ಟ ಎಂಬಂಥ ಸ್ಥಿತಿ. ಡಾಂಬರು ಬೇಡ, ಜಲ್ಲಿ ರಸ್ತೆ ಸಹ ಇಲ್ಲಿಲ್ಲ.
-ಉಮಾ

ದೂಳು
ನಿತ್ಯ ತಪ್ಪದ ದೂಳಿನ ಅಭಿಷೇಕ. ಹೆಸರಿಗೆ ಉದ್ಯಾನ ಇದೆ. ರಾಜ್‌ಕುಮಾರ್ ಹೆಸರಿನ ಉದ್ಯಾನದ ಸ್ಥಿತಿ ನೋಡಿದರೆ ಮರುಕ ಹುಟ್ಟುತ್ತದೆ.
-ರವಿ

ಬಿದ್ದವರೇ ಹೆಚ್ಚು
ಬೈಕ್ ಸಂಚರಿಸಲು ಸಾಧ್ಯವಿಲ್ಲದ ರಸ್ತೆಗಳು. ಮಳೆ ಬಂದಾಗ ಜಾರಿ ಬಿದ್ದವರೇ ಹೆಚ್ಚು. ಕುಡಿಯುವ ಶುದ್ಧ ನೀರು ಸಿಗುವುದೇ ದುರ್ಲಬ.
-ಪಾರ್ವತಮ್ಮ

ವಾರ್ಡ್ ವ್ಯಾಪ್ತಿ
ಅಮರಜ್ಯೋತಿ ನಗರ, ಸರಸ್ವತಿಪುರ, ರಾಮಕೃಷ್ಣ ಆಶ್ರಮ, ಸಾಯಿಬಾಬಾ ದೇಗುಲ ರಸ್ತೆಯಿಂದ ವರ್ತುಲ ರಸ್ತೆ ಅಶ್ವಿನಿ ಕಾಲೇಜು ತನಕ, ಮರಳೂರು ದಿಣ್ಣೆ 1ರಿಂದ 6ನೇ ಕ್ರಾಸ್, ಮರಳೂರು, ಪಿ ಅಂಡ್ ಟಿ    ಕ್ವಾರ್ಟ್‌ಸ್, ಎಸ್‌ಎಸ್‌ಐಟಿ ಹಿಂಭಾಗ.

ಸಂಪರ್ಕ ಸಂಖ್ಯೆ
ಸದಸ್ಯೆ- ದೇವಿಕಾ-9482117067
ನೀರು- ತಿಮ್ಮಯ್ಯ-9164997454
ಸ್ವಚ್ಛತೆ- ಉಮೇಶ್-9886732570
ವಿದ್ಯುತ್- ವಸಂತ್-9449872525
ಸಹಾಯವಾಣಿ- 2272200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT