ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾಣದ ಅಕ್ಕನ ಹೊಂಡ

Last Updated 21 ಫೆಬ್ರುವರಿ 2011, 8:45 IST
ಅಕ್ಷರ ಗಾತ್ರ

ಹಾವೇರಿ: ಸದಾ ದೂಳಿನಿಂದ ತುಂಬಿರುವ ನಗರದಲ್ಲಿ ಶುದ್ಧ ವಾಯುವಿಹಾರಕ್ಕೆ ಸ್ಥಳವೇ ಇಲ್ಲ. ನಗರದ ಮಧ್ಯವರ್ತಿ ಸ್ಥಳದಲ್ಲಿರುವ ಅಕ್ಕಮಹಾದೇವಿ ಹೊಂಡವನ್ನು ಸುಸಜ್ಜಿತ ವಾಯುವಿಹಾರಿ ತಾಣವನ್ನಾಗಿ ಮಾಡಬೇಕೆಂಬ ಜಿಲ್ಲಾಡಳಿತದ ಕನಸು ಇನ್ನೂ ನನಸಾಗಿಲ್ಲ.

ಕಳೆದ ಒಂದು ವರ್ಷದಿಂದ ಅದರ ಅಭಿವೃದ್ಧಿ ಕಾಮಗಾರಿಗಳಿಗೆ ಮರು ಚಾಲನೆ ದೊರೆತಿದೆ. ಆದರೆ, ಆ ಕಾಮಗಾರಿ ಮಾತ್ರ ಕುಂಟುತ್ತಾ, ತೆವಳುತ್ತಾ ಸಾಗಿದೆ. ಕಾಮಗಾರಿ ಕಾರ್ಯವೈಖರಿ ನೋಡಿದ ಜನರು ಪೂರ್ಣಗೊಂಡು ಜನತೆಯ ಉಪಯೋಗಕ್ಕೆ ಸಿಗಲಿದೆಯೇ ಅಥವಾ ಹಿಂದಿನಂತೆ ಅರ್ಧಕ್ಕೆ ಕಾಮಗಾರಿ ಸ್ಥಗಿತಗೊಳ್ಳಲಿದೆಯೋ ಎಂಬ ಸಂಶಯ ವ್ಯಕ್ತಪಡಿಸುವಂತಾಗಿದೆ.

ನಗರದ ಮಧ್ಯವರ್ತಿ ಸ್ಥಳದಲ್ಲಿರುವ ಪ್ರಾಚೀನ ಇತಿಹಾಸ ಹೊಂದಿರುವ ಅಕ್ಕಮಹಾದೇವಿ ಹೊಂಡದಲ್ಲಿ ದನಗಳನ್ನು ಬಿಡುವುದು, ಬಟ್ಟೆ ಹಾಗೂ ವಾಹನಗಳನ್ನು ತೊಳೆಯುವುದನ್ನು ಮಾಡಲಾಗುತ್ತಿತ್ತು. ಅಷ್ಟೇ ಅಲ್ಲದೇ ಕೆಲವಡೆ ಕೆರೆಯ ಒತ್ತುವರಿಯನ್ನು ಕೂಡಾ ಮಾಡಲಾಗಿತ್ತು. ಇದರಿಂದ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿತ್ತಲ್ಲದೇ ನಗರದ ಮಧ್ಯದಲ್ಲಿ ಇಂತಹದೊಂದು ಐತಿಹಾಸಿಕ ಕೆರೆ ಇದೆ ಎನ್ನುವುದು ಗೊತ್ತಾಗದ ಸ್ಥಿತಿ ನಿರ್ಮಾಣವಾಗಿತ್ತು.

2006ರಲ್ಲಿ ನಗರಸಭೆ ಹಾಗೂ ಜಿಲ್ಲಾಡಳಿತ ಈ ಕೆರೆಯನ್ನು ಅಭಿವೃದ್ಧಿ ಪಡಿಸಿ ಪ್ರಮುಖ ಪ್ರವಾಸಿ ತಾಣದಂತೆ ಮಾಡಲು ನಿರ್ಧರಿಸಿದವಲ್ಲದೇ, ಅದನ್ನೊಂದು ಪ್ರವಾಸಿ ತಾಣ ಮಾಡಬೇಕು. ಅಲ್ಲಿ ವಾಯುವಿಹಾರಕ್ಕಾಗಿ ಬೋಟಿಂಗ್ ವ್ಯವಸ್ಥೆ, ಕಾರಂಜಿ, ಪಕ್ಕದಲ್ಲಿ ಉದ್ಯಾನವನ, ಮಕ್ಕಳ ಆಟಿಕೆಗಳು, ಪಾದಚಾರಿಗಳು ನಡೆದಾಡಲು ವಾಕಿಂಗ್ ಪ್ಯಾಸೇಜ್ ಸೇರಿದಂತೆ ಅನೇಕ ಸೌಲಭ್ಯದ ನೀಲನಕ್ಷೆತಯಾರಿಸಿ ಕೇಂದ್ರದ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತು.

ಕೆರೆ ಅಭಿವೃದ್ಧಿ ಪ್ರಾಧಿಕಾರವೂ ಪ್ರಸ್ತಾವಣೆ ಒಪ್ಪಿಗೆ ಸೂಚಿಸಿ ಶೇ.50ರಷ್ಟು ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿತಲ್ಲದೇ, ಯೋಜನಾ ವೆಚ್ಚ 2.63 ಕೋಟಿ ರೂ.ಗಳಿಗೆ ನಿಗದಿ ಪಡಿಸಿತು.  ಉಳಿದ ಅರ್ಧ ಹಣವನ್ನು ರಾಜ್ಯ ಸರ್ಕಾರ ಭರಿಸಲು ತಿಳಿಸಿ ಯೋಜನೆಯ ಕಾಮಗಾರಿ ಉಸ್ತುವಾರಿಯನ್ನು ಭೂಸೇನಾ ನಿಗಮಕ್ಕೆ ನೀಡಿತು. ಭೂಸೇನಾ ನಿಗಮ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡು ಕೆಲವೇ ತಿಂಗಳಲ್ಲಿ ಕಾಮಗಾರಿ ಅರ್ಧಕ್ಕೆ  ನಿಲ್ಲಿಸಿಬಿಟ್ಟಿತು. ಹೀಗಾಗಿ ಯಾವಾಗಲೋ ಅಭಿವೃದ್ಧಿ ಕಾಣಬೇಕಾದ ಅಕ್ಕಮಹಾದೇವಿ ಹೊಂಡ ಹಾಗೆ ಉಳಿಯಿತು.

2009 ನವೆಂಬರ್‌ನಲ್ಲಿ ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ  ಆಸಕ್ತಿ ವಹಿಸಿದ ಪರಿಣಾಮ ಕಾಮಗಾರಿಗೆ ಮರು ಚಾಲನೆ ನೀಡಲಾಯಿತು. 2010 ಮಾರ್ಚ್‌ದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸಮಯ ನಿಗದಿ ಮಾಡಲಾಯಿತು. ಕಾಮಗಾರಿ ನಿಧಾನಗತಿಯಲ್ಲಿ ಸಾಗಿರುವುದರಿಂದ ನಿಗದಿ ಮಾಡಿದ ಸಮಯ ಮುಗಿದು ಒಂದು ವರ್ಷವಾದರೂ ಕಾಮಗಾರಿ ಮಾತ್ರ ಇನ್ನೂ ನಡೆಯುತ್ತಲೇ ಇದೆ.

ಇದು ಸಹಜವಾಗಿ ನಗರದ ನಾಗರಿಕರಿಗೆ ಬೇಸರವನ್ನುಂಟು ಮಾಡಿದ್ದು, ಈ ಬಾರಿಯಾದರೂ ಪೂರ್ಣಗೊಂಡು ಸಾರ್ವಜನಿಕರಿಗೆ ವಾಯುವಿಹಾರ ತಾಣವಾಗುವುದೋ ಅಥವಾ  ಅರ್ಧಕ್ಕೆ ನಿಂತು ಮತ್ತೆ ದನಕರುಗಳು ಈಜಾಡುವ, ಜನರು ಬಟ್ಟೆ ತೊಳೆಯುವ ಹೊಂಡವಾಗಿ ಉಳಿದುಕೊಳ್ಳಲಿದೆಯೋ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಹೊಂಡದ ಅಭಿವೃದ್ಧಿಗೆ ಸೂಕ್ತ ಕಾಲಮಿತಿಯನ್ನು ಹಾಕಿಕೊಂಡು ಪೂರ್ಣಗೊಳಿಸಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.

ಕಾಮಗಾರಿ ವಿಳಂಬ ಆಗಿದ್ದ ನಿಜ. ಆದರೆ, ಅದಕ್ಕಾಗಿ ಬಿಡುಗಡೆಯಾದ ಅನುದಾನ ಖರ್ಚಾಗಿದೆ. ಇನ್ನೂ ಹೆಚ್ಚುವರಿಯಾಗಿ 19 ಲಕ್ಷ ರೂ.ಗಳ ಅವಶ್ಯಕತೆಯಿದೆ. ಆ ಹಣದಲ್ಲಿ 12 ಲಕ್ಷ ರೂ. ನಗರಸಭೆ ಹಾಗೂ 7 ಲಕ್ಷ ರೂ. ಜಿಲ್ಲಾಡಳಿತ ನೀಡಿ ಅದನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT