ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಚಟುವಟಿಕೆ ಅರ್ಥವತ್ತಾಗಿರಬೇಕು

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ಸುಸ್ಥಿರ ಅಭಿವೃದ್ಧಿಯ ಹೆಸರಿನಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ 100 ಗಣಿ ಕಂಪೆನಿಗಳಿಗೆ ಗಣಿಗಾರಿಕೆಗೆ ಅನುಮತಿ ನೀಡಿ ಪರಿಸರದ ಮೇಲೆ ಅವ್ಯಾಹತವಾಗಿ ದಾಳಿ ನಡೆಸಲಾಗಿದೆ.

ಅಭಿವೃದ್ಧಿ ಚಟುವಟಿಕೆಗಳು ಯಾವಾಗಲೂ ಅರ್ಥವತ್ತಾಗಿರಬೇಕು ಹಾಗೂ ಸ್ಥಳೀಯ ಅಗತ್ಯಗಳನ್ನು ಪೂರೈಸಲು ಮೊದಲ ಆದ್ಯತೆ ನೀಡಬೇಕು~ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಅಭಿಪ್ರಾಯಪಟ್ಟರು.

ನಗರದಲ್ಲಿ ಗುರುವಾರ ನಡೆದ `ಸೆಂಟರ್ ಫಾರ್ ಸಸ್ಟೈನೆಬಲ್ ಡೆವಲಪ್‌ವೆುಂಟ್ (ಸಿಎಸ್‌ಡಿ)~ ಸ್ವಯಂಸೇವಾ ಸಂಸ್ಥೆಯ 9ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
`ಮೂವತ್ತು ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆಯಲ್ಲಿ ರಾಷ್ಟ್ರೀಯ ಖನಿಜ ಅಭಿವೃದ್ಧಿ ಸಂಸ್ಥೆ ಗಣಿಗಾರಿಕೆ ನಡೆಸುತ್ತಿತ್ತು. ಅವರು ನಮ್ಮ ಅಗತ್ಯಕ್ಕೆ ಬೇಕಾಗುವಷ್ಟು ಗಣಿಗಾರಿಕೆ ನಡೆಸುತ್ತಿದ್ದರು.

ಪರಿಸರಕ್ಕೆ ಹಾನಿಯಾಗದಂತೆಯೂ ಕಾಳಜಿ ವಹಿಸುತ್ತಿದ್ದರು. ಆದರೆ, ಕೆಲವು ವರ್ಷಗಳ ಹಿಂದೆ ಸರ್ಕಾರ, ಆರ್ಥಿಕ ಅಭಿವೃದ್ಧಿಯ ಹೆಸರಿನಲ್ಲಿ ನೂರು ಗಣಿ ಕಂಪೆನಿಗಳಿಗೆ ಅನುಮತಿ ನೀಡಿತು. ಇಲ್ಲಿನ ಗಣಿ ಸಂಪತ್ತನ್ನು ವಿದೇಶಕ್ಕೆ ರಫ್ತು ಮಾಡಲಾಯಿತು. ಗಣಿ ಉದ್ಯಮಿಗಳು ಶ್ರೀಮಂತರಾದರೆ ಹೊರತು ಸರ್ಕಾರಕ್ಕೆ ಯಾವುದೇ ಲಾಭವಾಗಲಿಲ್ಲ. ಪರಿಸರವೂ ನಾಶವಾಯಿತು~ ಎಂದು ಅವರು ಬೇಸರ ವ್ಯಕ್ತಪಡಿಸಿದರು.

`ಲಕ್ಷದ್ವೀಪದ ಅಭಿವೃದ್ಧಿಗೆ ಸರ್ಕಾರ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ 50 ಹಿರಿಯ ಅಧಿಕಾರಿಗಳನ್ನು ಅಲ್ಲಿಗೆ ಕಳುಹಿಸಿಕೊಡಲಾಯಿತು. ಪ್ರತಿಯೊಬ್ಬರಿಗೂ ಒಂದೊಂದು ಕಾರು ನೀಡಲಾಯಿತು. ಇವರ ಐಶಾರಾಮಿ ಜೀವನ ನೋಡಿದ ದ್ವೀಪವಾಸಿಗಳಿಗೂ ಕಾರು ಕೊಳ್ಳುವ ಮನಸ್ಸಾಯಿತು.

ಆ ಸಣ್ಣ ದ್ವೀಪದಲ್ಲಿ ಆರು ವರ್ಷಗಳಲ್ಲಿ ಕಾರುಗಳ ಸಂಖ್ಯೆ 300ಕ್ಕೆ ಹಾಗೂ ದ್ವಿಚಕ್ರ ವಾಹನಗಳ ಸಂಖ್ಯೆ ಮೂರು ಸಾವಿರಕ್ಕೆ ಏರಿತು. ಯೋಜಿತವಲ್ಲದ ಇಂತಹ ಅಭಿವೃದ್ಧಿ ಚಟುವಟಿಕೆಗಳಿಂದ ಲಾಭಕ್ಕಿಂತ ನಕಾರಾತ್ಮಕ ಪರಿಣಾಮಗಳೇ ಹೆಚ್ಚು~ ಎಂದರು.

`ಉದ್ಯಾನ ನಗರಿ ಎಂಬ ಹೆಸರು ಪಡೆದಿದ್ದ ಬೆಂಗಳೂರು ಇಂದು `ಗಾರ್ಬೆಜ್ ಸಿಟಿ~ ಎಂಬ ಕುಖ್ಯಾತಿಗೆ ಪಾತ್ರವಾಗುತ್ತಿದೆ. 2004-05ರಲ್ಲಿ ನಗರದಲ್ಲಿದ್ದ ಕಸದ ತೊಟ್ಟಿಗಳನ್ನು ತೆಗೆದು ಮನೆ ಮನೆಯಿಂದ ಕಸ ವಿಲೇವಾರಿ ಆರಂಭಿಸಲಾಯಿತು. ಆರಂಭದಲ್ಲಿ ಈ ವ್ಯವಸ್ಥೆ ಚೆನ್ನಾಗಿತ್ತು.

ಪಾಲಿಕೆ ಸದಸ್ಯರ `ವಿಶೇಷ ಆಸಕ್ತಿ~ಯಿಂದಾಗಿ ಈ ವ್ಯವಸ್ಥೆ ಹಾದಿ ತಪ್ಪಿತು. ಕಸದ ವೈಜ್ಞಾನಿಕ ವಿಲೇವಾರಿಗೂ ಹೆಚ್ಚಿನ ಗಮನ ಹರಿಸಲಿಲ್ಲ. ನಾಗರಿಕರ ಬೇಜವಾಬ್ದಾರಿಯುತ ವರ್ತನೆಯಿಂದ ಸಹ ಈ ಸಮಸ್ಯೆ ಬಿಗಡಾಯಿಸಿದೆ. ಪ್ರತಿ ಮನೆಯವರೂ ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಿದಾಗ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ~ ಎಂದು ಅವರು ಅಭಿಪ್ರಾಯಪಟ್ಟರು.

ಕೇಂದ್ರ ಯೋಜನಾ ಆಯೋಗದ ಸದಸ್ಯ ಡಾ.ಕೆ.ಕಸ್ತೂರಿ ರಂಗನ್ ಕಾರ್ಯಕ್ರಮ ಉದ್ಘಾಟಿಸಿ, `ದೇಶದ ಅಭಿವೃದ್ಧಿಗೆ ಬಡತನ ದೊಡ್ಡ ಸವಾಲಾಗಿದೆ. ಬಡತನ ನಿರ್ಮೂಲನೆಗೆ ಇನ್ನಷ್ಟು ಪರಿಣಾಮಕಾರಿ ಯೋಜನೆಗಳನ್ನು ರೂಪಿಸುವುದು ಅಗತ್ಯ~ ಎಂದರು.

`ಹಿಮಾಲಯದ ಪರಿಸರ ವ್ಯವಸ್ಥೆ, ಪಶ್ಚಿಮ ಘಟ್ಟಗಳ ಸುಸ್ಥಿರ ನಿರ್ವಹಣೆಗೆ ಗಮನ ಹರಿಸಬೇಕಿದೆ. ಅಭಿವೃದ್ಧಿ ಚಟುವಟಿಕೆಗಳಿಂದ ಜೀವ ವೈವಿಧ್ಯಕ್ಕೆ ಹಾನಿಯಾಗದಂತೆ ಎಚ್ಚರ ವಹಿಸಬೇಕಿದೆ~ ಎಂದು ಅವರು ಸಲಹೆ ನೀಡಿದರು. ಸಿಎಸ್‌ಡಿ ಮುಖ್ಯಸ್ಥ ಡಾ.ಎ.ರವೀಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT