ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಚಿಂತನೆ; ಕ್ಷೇತ್ರ, ರಾಜ್ಯದ ಸಮರ್ಥ ಪ್ರತಿಪಾದನೆ

Last Updated 5 ಏಪ್ರಿಲ್ 2014, 10:41 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿ­ಗಳು ಪ್ರಚಾರದಲ್ಲಿ ಮಗ್ನರಾಗಿದ್ದಾರೆ. ಮತದಾರರನ್ನು ಸೆಳೆಯಲು ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಸಹ ಯುಗಾದಿ ನಂತರ ಪ್ರಚಾರ ಬಿರುಸುಗೊಳಿಸಿದ್ದಾರೆ.

ನ್ಯಾಯಾಧೀಶರ ಹುದ್ದೆ ತೊರೆದು ರಾಜಕೀಯದ ಮೂಲಕ ಜನ ಸೇವೆಯಲ್ಲಿ ತೊಡಗಿಸಿಕೊಂಡವರು. ಮೊದಲಿಗೆ ಕಾಂಗ್ರೆಸ್‌ನಲ್ಲಿ ತಮ್ಮ ರಾಜಕೀಯ ನಡೆ ಕಂಡುಕೊಂಡವರು.

ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. ವಿಧಾನಸಭೆಗೆ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗದೆ ಜೆಡಿಎಸ್‌ಗೆ ವಲಸೆ ಬಂದರು. 2009ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಕಡಿಮೆ ಮತಗಳ ಅಂತರದಿಂದ ಸೋಲು ಕಂಡರು. 2013ರ ವಿಧಾನಸಭೆ ಚುನಾವಣೆಗೆ ಕುಣಿಗಲ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿ ಅಂತಿಮ ಕ್ಷಣದಲ್ಲಿ ಟಿಕೆಟ್ ವಂಚಿತರಾದರು. ಇದರಿಂದ ಬೇಸರಗೊಂಡು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದರು. ಈಗ ಅದೇ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿದ್ದಾರೆ.

ಮುದ್ದಹನುಮೇಗೌಡರ ಜತೆ ‘ಪ್ರಜಾವಾಣಿ’ ನಡೆಸಿದ ಸಂದರ್ಶದ ವಿವರ ಇಲ್ಲಿದೆ.

* ಪ್ರಚಾರ ಹೇಗೆ ನಡೆದಿದೆ?
ಭಾರತ ನಿರ್ಮಾಣ ಯಾತ್ರೆ ಮೂಲಕ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಜತೆಗೆ ನಾನೂ ಸಹ ಕಾರ್ಯಕರ್ತರನ್ನು ಭೇಟಿಯಾಗಲು, ತಲುಪಲು ಸಾಧ್ಯವಾಯಿತು. ಪಕ್ಷದ ವಿವಿಧ ಘಟಕಗಳ ಸಭೆ, ತಾಲ್ಲೂಕು ಮಟ್ಟದಲ್ಲಿ ಕಾರ್ಯಕರ್ತರ ಸಭೆ ಮಾಡಲಾಗಿದೆ. ಮುಂದೆ ಪಂಚಾಯತಿವಾರು ಭೇಟಿ, ಪ್ರಚಾರ ನಡೆಯಲಿದೆ.

* ಗೆಲುವಿಗೆ ಪೂರಕ ಅಂಶಗಳು?

ಕೇಂದ್ರ, ರಾಜ್ಯ ಸರ್ಕಾರ ಕೈಗೊಂಡ ಕ್ರಾಂತಿಕಾರಕ ಜನೋಪಯೋಗಿ ನಿರ್ಧಾರಗಳು ಸಹಕಾರಿಯಾಗಲಿವೆ. ಮಾಹಿತಿ ಹಕ್ಕು ಕಾಯಿದೆ, ಶಿಕ್ಷಣ ಹಕ್ಕು, ರೈತ ಪರವಾದ ಭೂ ಸ್ವಾಧೀನ ಕಾನೂನು, ಪ್ರಧಾನಿಯನ್ನೂ ಒಳಗೊಳ್ಳಬಲ್ಲ ಜನಲೋಕಪಾಲ್ ಮಸೂದೆ, 1 ರೂಪಾಯಿಗೆ 1ಕೆ.ಜಿ. ಅಕ್ಕಿ, ಸಾಲ ಮನ್ನಾ, ಬಡ್ಡಿ ರಹಿತ ಸಾಲ, ಹಾಲಿಗೆ ಪ್ರೋತ್ಸಾಹ ಧನ ಹೆಚ್ಚಳ ಮತ್ತಿತರ ಕಾರ್ಯಕ್ರಮಗಳು ಜನರ ಮನಸ್ಸಿನಲ್ಲಿ ಉಳಿದಿವೆ. ಇಂಥ ಜನಪರ ಕೆಲಸಗಳು ಗೆಲುವಿಗೆ ಸಹಕಾರಿಯಾಗುತ್ತವೆ. ಸರ್ಕಾರದ ಕಾರ್ಯಕ್ರಮ ನೋಡಿ ಪಕ್ಷದ ಅಭ್ಯರ್ಥಿಗೆ ಜನ ಮತ ನೀಡುತ್ತಾರೆ.

* ಅಭಿವೃದ್ಧಿ ಕನಸುಗಳೇನು?
ಸಂಸತ್‌ನಲ್ಲಿ ಜಿಲ್ಲೆ, ರಾಜ್ಯವನ್ನು ಸಮರ್ಥವಾಗಿ ಪ್ರತಿನಿಧಿ­ಸುವ ಅಭ್ಯರ್ಥಿಯನ್ನು ಜನರು ಬಯಸುತ್ತಿದ್ದಾರೆ. ನೀರಾವರಿ ಯೋಜನೆ ಜಾರಿ, ಕೈಗಾರಿಕೆ ತಂದು ಉದ್ಯೋಗಾವಕಾಶ ಕಲ್ಪಿಸುವುದು. ಕೇಂದ್ರದಿಂದಲೂ ಹೆಚ್ಚು ಅನುದಾನ ತರ­ಲಾಗು­ವುದು. ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರ ಇರುವುದ­ರಿಂದ ಅನುದಾನ ತರುವುದು ಸುಲಭವಾಗುತ್ತದೆ. ಇಂತಹ ಅವಕಾಶ ಬಳಸಿಕೊಂಡು ಕೆಲಸ ಮಾಡಲಾಗುವುದು. ಕೇಂದ್ರ– ರಾಜ್ಯದ ನಡುವೆ ಕೊಂಡಿಯಾಗಿ ಅನುದಾನ ತಂದು ಕೆಲಸಮಾಡಿ ತೋರಿಸುತ್ತೇನೆ.

ಶಾಸಕನಾಗಿದ್ದಾಗಲೂ ಸದನದಲ್ಲಿ ಜಿಲ್ಲೆಯ ಬಗ್ಗೆ ಧ್ವನಿಯೆತ್ತಿದ್ದೇನೆ. ಅವಕಾಶ ನೀಡಿದರೆ ಮುಂದೆಯೂ ಜನರ ಪರವಾಗಿ ಕೆಲಸ ಮಾಡಿ ತೋರಿಸುತ್ತೇನೆ.

ಈಗಿನ ಸಂಸದರು ಗುರುತಿಸುವಂಥ ಕೆಲಸ ಮಾಡಿಲ್ಲ. ಯೋಜನೆಗಳು ಮಂಜೂರಾ­ಗಿವೆ ಎಂದು ಹೇಳಿಕೊಳ್ಳುವುದರಲ್ಲಿ ಅರ್ಥವಿಲ್ಲ. ಜೆಡಿಎಸ್ ಅಭ್ಯರ್ಥಿಗೆ ಜಿಲ್ಲೆಯ ಭೌಗೋಳಿಕ ಚಿತ್ರಣವೇ ತಿಳಿದಿಲ್ಲ. ಸಮಸ್ಯೆಗಳ ಅರಿವಿಲ್ಲ, ಜಿಲ್ಲೆ ಜತೆಗೆ ಸಂಪರ್ಕವನ್ನೇ ಇಟ್ಟುಕೊಂಡಿಲ್ಲ.

* ಕೇಂದ್ರ ಸರ್ಕಾರದ ಭ್ರಷ್ಟಾಚಾರ ಆರೋಪ?
ಮಾಹಿತಿ ಹಕ್ಕು ಕಾಯಿದೆ ಜಾರಿಗೆ ತಂದಿದ್ದರಿಂದ ಭ್ರಷ್ಟಾಚಾರ ಹೊರ ಬರುವಂತಾ­ಯಿತು. ಆ ಮೂಲಕ ನಾವು ಭ್ರಷ್ಟಾಚಾರ, ಹಗರಣಗಳ ವಿರುದ್ಧ ಇದ್ದೇವೆ ಎಂಬುದನ್ನು ತೋರಿಸಿದ್ದೇವೆ. ಭ್ರಷ್ಟಾಚಾರ ಆರೋಪ ಕೇಳಿಬಂದ ಮುಖಂಡರ ಮೇಲೆ ಕ್ರಮ ಕೈಗೊಂಡು ಇತರ ಪಕ್ಷದವರಿಗೆ ಮಾದರಿಯಾಗಿದ್ದೇವೆ. ಜನರಿಗೆ ಅಕ್ರಮ ತಿಳಿದುಕೊಳ್ಳುವ ಅಧಿಕಾರವನ್ನು ಮಾಹಿತಿ ಹಕ್ಕು ಕಾಯಿದೆ ಮೂಲಕ ನೀಡಿದ್ದೇವೆ. ತಪ್ಪು ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂಬುದನ್ನು ಪಕ್ಷ ತೋರಿಸಿಕೊಟ್ಟಿದೆ.

* ನರೇಂದ್ರ ಮೋದಿ ಅಲೆ ?
ರಾಜ್ಯದಲ್ಲಿ ಮೋದಿಯ ಯಾವ ಅಲೆಯೂ ಕಾಣಿಸುತ್ತಿಲ್ಲ. ಗುಜರಾತ್ ರಾಜ್ಯದಲ್ಲಿ ಎಷ್ಟು ಮಕ್ಕಳು ಶಾಲೆ ಬಿಟ್ಟಿದ್ದಾರೆ, ವಿದ್ಯುತ್ ಸಂಪರ್ಕ ನೀಡಲು ಎಷ್ಟು ಅರ್ಜಿ ಬಾಕಿ ಉಳಿದಿವೆ. ಬಡವರು, ಮಧ್ಯಮ ವರ್ಗದವರು, ರೈತರು, ಅಲ್ಪಸಂಖ್ಯಾತ ಸಮುದಾಯದವರಿಗೆ ಮೋದಿ ಏನು ಕಾರ್ಯಕ್ರಮ ನೀಡಿ­ದ್ದಾರೆ ಎಂಬುದನ್ನು ತಿಳಿಸಲಿ. ರಸ್ತೆಯೊಂದನ್ನು ನಿರ್ಮಿಸುವುದ­ರಿಂದ ಎಲ್ಲ ರೀತಿಯಲ್ಲೂ ರಾಜ್ಯದ ಅಭಿವೃದ್ಧಿ ಸಾಧ್ಯವಾಗದು.

* ಜಿಲ್ಲಾ ಸಚಿವರು, ಶಾಸಕರು ಪ್ರಚಾರದಲ್ಲಿ ತೊಡಗಿಲ್ಲ?
ಜಿಲ್ಲಾ ಉಸ್ತುವಾರಿ ಸಚಿವರು, ಕಾಂಗ್ರೆಸ್ ಶಾಸಕರು ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದಾರೆ. ತಮಗೆ ಟಿಕೆಟ್ ನೀಡಿರುವುದಕ್ಕೆ ಯಾರೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದ ಕ್ಷೇತ್ರಗಳಲ್ಲಿ ಈ ಬಾರಿ 60 ಸಾವಿರಕ್ಕೂ ಹೆಚ್ಚು ಮತಗಳು ಬರುತ್ತವೆ.

* ನೀವು ಪಕ್ಷಾಂತರಿಗಳಲ್ಲವೆ?
ಪಕ್ಷಾಂತರ ಮಾಡಿದ್ದಕ್ಕೆ ನೋವಿದೆ. ಆ ಪಕ್ಷದಲ್ಲಿ ಮಾಡಿದ ಸೇವೆ ಗುರುತಿಸಿ ಈಗ ಕಾಂಗ್ರೆಸ್‌ನಲ್ಲಿ ಅವಕಾಶ ನೀಡಲಾಗಿದೆ.

* ನಿಮ್ಮ ಪ್ರತಿಸ್ಪರ್ಧಿ?
ಜಿಲ್ಲೆಯಲ್ಲಿ ಕಾಂಗ್ರೆಸ್ ಸದೃಢವಾಗಿದೆ. ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಸಮಾನ ಪ್ರತಿಸ್ಪರ್ಧಿ. ಒಬ್ಬರನ್ನು ಪ್ರತಿಸ್ಪರ್ಧಿ ಎನ್ನಲಾಗದು. ಇಬ್ಬರೂ ಸ್ಪರ್ಧಿಗಳೇ.

* ಅಭ್ಯರ್ಥಿಗಳ ನಡುವೆ ವೈಯಕ್ತಿಕ ಟೀಕೆ?
ನಾನು ಯಾರನ್ನೂ ವೈಯಕ್ತಿಕವಾಗಿ ಟೀಕಿಸುತ್ತಿಲ್ಲ. ಇಂಥ ಟೀಕೆ ರಾಜಕೀಯ ಮೌಲ್ಯ ಕಾಪಾಡುವುದಿಲ್ಲ, ಇದು ಒಳ್ಳೆಯ ಬೆಳವಣಿಗೆಯಲ್ಲ. ರಾಜಕೀಯ ಶಕ್ತಿ, ಅಭಿವೃದ್ಧಿ ವಿಚಾರದ ಮೇಲೆ ಟೀಕಿಸಬೇಕು. ಬೇರೊಬ್ಬರನ್ನು ವೈಯಕ್ತಿಕವಾಗಿ ನಾನೂ ಟೀಕಿಸಿಲ್ಲ, ಬೇರೆಯವರೂ ನನ್ನನ್ನು ಟೀಕಿಸಬಾರದು.

* ಹಿಂದಿನ ಚುನಾವಣೆಗೂ, ಇಂದಿನ ಚುನಾವಣೆಗೂ ವ್ಯತ್ಯಾಸ?
ಚುನಾವಣೆ ದುಬಾರಿಯಾಗಿದೆ. ಜಾತಿ, ಹಣ ಪ್ರಮುಖವಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಅಭ್ಯರ್ಥಿಯ ಯೋಗ್ಯತೆ, ಶಕ್ತಿ, ಸಾಮರ್ಥ್ಯ, ಚಾರಿತ್ರ್ಯ, ಒಳ್ಳೆಯ ಗುಣಗಳು ಮಾನದಂಡವಾಗಬೇಕು. ಆಯ್ಕೆ ಮಾಡಿದ ಜನಪ್ರತಿನಿಧಿ ಜನರಿಗೆ ನ್ಯಾಯ ಕೊಡಿಸಬಲ್ಲನೆ, ಗೌರವ ತರಬಲ್ಲನೆ ಎಂಬುದು ಮುಖ್ಯವಾಗಬೇಕು.

* ಕೊನೆಯ ಮಾತು?
ಜನಪ್ರತಿನಿಧಿಗಳು ಜನರ ನಿರೀಕ್ಷೆ ಮೀರಿ ಕ್ಷೇತ್ರ ಹಾಗೂ ಸದನದಲ್ಲಿ ಕೆಲಸ ಮಾಡಬೇಕು. ಅಂತಹವರನ್ನು ಆಯ್ಕೆ ಮಾಡ­ಬೇಕು ಎಂಬುದು ನನ್ನ ಭಾವನೆ. ಯೋಗ್ಯರು, ಸಮರ್ಥರು ಸಂಸತ್‌ಗೆ ಹೋಗಬೇಕು. ಜನರು ಅಂಥ ತೀರ್ಪು ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT