ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಜೊತೆಗೆ ಕೊಂಚ ಕೊರತೆ

Last Updated 1 ಫೆಬ್ರುವರಿ 2011, 6:40 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ:  ‘ಸರ್ವಜನಾಂಗದ ಶಾಂತಿಯ ತೋಟ...’ ಎಂಬ ಸಾಲಿಗೆ ಪೂರಕವಾಗಿ ಇರುವಂತಹ ಪ್ರದೇಶ ಎ.ಡಿ.ಕಾಲೋನಿ ಕೋಟೆ ವಾರ್ಡ್. ವಾರ್ಡ್ ಸಂಖ್ಯೆ-12 ಎಂದು ಗುರುತಿಸಲ್ಪಡುವ ಈ ವಾರ್ಡ್‌ನಲ್ಲಿ ಹಿಂದುಳಿದವರು, ಅಲ್ಪಸಂಖ್ಯಾತರು, ಬಹುಸಂಖ್ಯಾತರು ಸೇರಿದಂತೆ ಎಲ್ಲ ಜಾತಿ-ಧರ್ಮದವರು ವಾಸವಿದ್ದಾರೆ. ಅದೇ ರೀತಿ ಈ ವಾರ್ಡ್‌ನ ಬಡಾವಣೆಗಳ ಹೆಸರು ವಿಶಿಷ್ಟತೆಯಿಂದ ಕೂಡಿವೆ. ಒಂದು ಬದಿಯಲ್ಲಿ ಇಸ್ಲಾಂಪುರವಿದ್ದರೆ, ಮತ್ತೊಂದು ಬದಿಯಲ್ಲಿ ಮದರ್ ಥೆರೇಸಾ ಕಾಲೋನಿ ಇದೆ. ಒಂದೆಡೆ ಬಡವರು, ಹಿಂದುಳಿದವರು ವಾಸಿಸುವ ಜೈಭೀಮ ನಗರವಿದ್ದರೆ, ಮತ್ತೊಂದೆಡೆ ಮಧ್ಯಮವರ್ಗದವರು-ಶ್ರೀಮಂತರು ವಾಸಿಸುವ ಬಡಾವಣೆಗಳು ಇವೆ.

ನಗರಸಭೆಯ ಇತರ ವಾರ್ಡ್‌ಗಳಿಗೆ ಹೋಲಿಕೆ ಮಾಡಿದ್ದಲ್ಲಿ, ಹೆಚ್ಚಿನ ವಿಸ್ತೀರ್ಣ-ವ್ಯಾಪ್ತಿಯನ್ನು ಹೊಂದಿರುವ ಈ ವಾರ್ಡ್‌ನಲ್ಲಿ ಹಂತಹಂತವಾಗಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ರಸ್ತೆ ನಿರ್ಮಾಣ, ಚರಂಡಿ ಕಾಮಗಾರಿ, ಸಮುದಾಯ ಭವನ ನಿರ್ಮಾಣ ಮುಂತಾದ ಕಾಮಗಾರಿ ಪ್ರಕ್ರಿಯೆಗಳು ನಡೆದಿದ್ದು, ಕೆಲವಡೆ ಸೌಕರ್ಯಗಳ ಕೊರತೆಯು ಅಷ್ಟೇ ಪ್ರಮಾಣದಲ್ಲಿದೆ.

ಕೆಲ ಕಡೆ ರಸ್ತೆಗಳ ಡಾಂಬರೀಕರಣ ಕಾರ್ಯ ಪೂರ್ಣಗೊಂಡಿಲ್ಲ, ಇನ್ನೂ ಕೆಲ ಕಡೆ ತ್ಯಾಜ್ಯವಸ್ತುಗಳ ವಿಲೇವಾರಿ ಸಮರ್ಪಕವಾಗಿ ನಡೆದಿಲ್ಲ. ಎ.ಡಿ.ಕಾಲೋನಿ, ಎ.ಕೆ.ಕಾಲೋನಿ ಬಡಾವಣೆಗಳಲ್ಲಿ ಚರಂಡಿ ವ್ಯವಸ್ಥೆ ಮಾಡಲಾಗಿದೆಯಾದರೂ ಚರಂಡಿ ನೀರು ಹರಿಯುವಿಕೆಗೆ ಸಮರ್ಪಕ ವ್ಯವಸ್ಥೆ ಮಾಡಲಾಗಿಲ್ಲ.

ವಾರ್ಡ್ ವ್ಯಾಪ್ತಿಯಲ್ಲಿ ಕೊಳೆಗೇರಿಯಿದ್ದು, ಅಲ್ಲಿ ಮಾಲಿನ್ಯವನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಾಗಿಲ್ಲ. ಇಕ್ಕಟ್ಟಾದ ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳು ಆಯಾ ದಿನದ ದುಡಿಮೆಯನ್ನು ಅವಲಂಬಿಸಿ ಜೀವನ ನಡೆಸುತ್ತಿವೆ. ಬೇರೆ ಸ್ಥಳದಲ್ಲಿ ನಿವೇಶನ ನೀಡುವ, ವಸತಿ ಸೌಕರ್ಯ ಕಲ್ಪಿಸಿಕೊಡುವ ಭರವಸೆ ನೀಡಲಾಗಿದೆಯಾದರೂ ಈವರೆಗೆ ಈಡೇರಿಲ್ಲ.

ಸಮಾಧಿ ಸ್ಥಳವಿದ್ದರೂ ಶವ ಸಾಗಿಸಲು ಉತ್ತಮ ರಸ್ತೆ ಕಲ್ಪಿಸಲಾಗಿಲ್ಲ. ಒಳಚರಂಡಿ ಕಾಮಗಾರಿಯಿಂದ ಕೆಲ ಕಡೆ ರಸ್ತೆ ಹದಗೆಟ್ಟಿದ್ದು, ರಸ್ತೆಗಳ ಡಾಂಬರೀಕರಣ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಉತ್ತಮ ರಸ್ತೆಗಳ ನಿರ್ಮಾಣ ಕಷ್ಟಸಾಧ್ಯ ಎಂಬ ಸ್ಥಿತಿಯಿದೆ.

‘ಹಲವು ವರ್ಷಗಳಿಂದ ನೀರಿನ ಪೂರೈಕೆಯಲ್ಲಿ ತುಂಬ ತೊಂದರೆಯಿತ್ತು. ಮೂರು ದಿನಕ್ಕೊಮ್ಮೆ ಅಥವಾ ವಾರಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತಿತ್ತು. ಆದರೆ ಕೆಲ ತಿಂಗಳುಗಳ ಹಿಂದೆ ಬೋರ್‌ವೆಲ್ ಸೌಕರ್ಯ ಕಲ್ಪಿಸುವ ಮೂಲಕ ಪ್ರತಿನಿತ್ಯವೂ ನೀರು ದೊರೆಯುವಂತಹ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ವೇಳೆ ಬೀದಿ ದೀಪಗಳು ಇಲ್ಲದ ಕಾರಣ ನಡೆದಾಡಲು ಕಷ್ಟವಾಗುತಿತ್ತು. ಆದರೆ ಈಗ ದೀಪದ ವ್ಯವಸ್ಥೆ ಮಾಡಲಾಗಿರುವ ಕಾರಣ ಸಮಸ್ಯೆ ಇಲ್ಲ. ತ್ಯಾಜ್ಯವಸ್ತುಗಳ ವಿಲೇವಾರಿಗೂ ವಾರ್ಡ್‌ನ ಪ್ರಮುಖ ರಸ್ತೆಬದಿಗಳಲ್ಲಿ ಕಸದ ತೊಟ್ಟಿಯ ಸೌಲಭ್ಯ ಕಲ್ಪಿಸಿದಲ್ಲಿ ಅನುಕೂಲವಾಗುತ್ತದೆ’ ಎಂದು ನಿವಾಸಿಗಳು ತಿಳಿಸಿದರು.

ಎ,ಡಿ.ಕಾಲೋನಿ ಬಳಿಯಿರುವ ಬೃಹತ್ ಮರದ ಸುತ್ತ ತಡೆಗೋಡೆ ನಿರ್ಮಿಸಲಾಗಿದ್ದು, ಸುತ್ತಮುತ್ತಲಿನ ವಾತಾವರಣ ಶುಚಿಗೊಳಿಸಬೇಕಿದೆ. ಜನರ ಅನುಕೂಲಕ್ಕಾಗಿ ಓವರ್‌ಹೆಡ್ ಟ್ಯಾಂಕ್ ಮತ್ತು ಸಮುದಾಯ ಭವನ ನಿರ್ಮಿಸಲಾಗುತ್ತಿದ್ದು, ಇನ್ನೂ ಕೆಲವೇ ದಿನಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.

ಕೊಳೆಗೇರಿ ನಿವಾಸಿಗಳು ಮತ್ತು ವಿದ್ಯಾರ್ಥಿಗಳಿಗೆಂದೇ ಪ್ರತ್ಯೇಕ ಗ್ರಂಥಾಲಯದ ಸೌಲಭ್ಯ ಕಲ್ಪಿಸಲಾಗಿದೆ. ಬಹುತೇಕ ಎಲ್ಲ ಪತ್ರಿಕೆಗಳು ಬರುವ ಈ ಗ್ರಂಥಾಲಯದ ಉಸ್ತುವಾರಿಯನ್ನು ಜಿಲ್ಲಾ ಕೇಂದ್ರ ಗ್ರಂಥಾಲಯದ ಸಿಬ್ಬಂದಿಯೊಬ್ಬರಿಗೆ ವಹಿಸಲಾಗಿದೆ.ಬೆಳಿಗ್ಗೆ ಮತ್ತು ಸಂಜೆ ವೇಳೆ ವಾರ್ಡ್‌ನ ನಿವಾಸಿಗಳು ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಳ್ಳುತ್ತಾರೆ. ಇದರೊಂದಿಗೆ ಅಂಗನವಾಡಿ ಕೇಂದ್ರದ ಸೌಲಭ್ಯ ಕೂಡ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT