ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಬಗ್ಗೆ ಚರ್ಚಿಸಲು ಕೆಡಿಪಿ ಸಭೆ ಕರೆಯಿರಿ

Last Updated 17 ಫೆಬ್ರುವರಿ 2011, 8:35 IST
ಅಕ್ಷರ ಗಾತ್ರ

ಹಾಸನ: ‘ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಯೋಚನೆ ಇಲ್ಲ. ಅಧಿಕಾರಿಗಳನ್ನು ಬೆದರಿಸಿ ಸ್ವಂತ ಅಭಿವೃದ್ಧಿ ಮಾಡುವಲ್ಲಿ ಅವರು ನಿರತರಾಗಿದ್ದಾರೆ’ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದ್ದಾರೆ. ಬುಧವಾರ ಪಕ್ಷದ ಜಿ.ಪಂ. ಸದಸ್ಯರ ಜತೆ ಸಭೆ ನಡೆಸಿದ ಬಳಿಕ ಪತ್ರಕರ್ತರೊಡನೆ ಮಾತನಾಡಿದ ಅವರು, ‘ಸೋಮಣ್ಣ ಇಷ್ಟು  ಬಾರಿ ಹಾಸನಕ್ಕೆ ಬಂದಿದ್ದರೂ ಜಿಲ್ಲೆಯ ಗಂಭೀರ ಸಮಸ್ಯೆಯತ್ತ ಗಮನವನ್ನೇ ಹರಿಸಿಲ್ಲ ಎಂದು ಆರೋಪಿಸಿದರು.

‘ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಬಗ್ಗೆ ಹಲವು ಬಾರಿ ಅವರ ಗಮನ ಸೆಳೆಯಲಾಗಿದೆ. ಕೆಡಿಪಿ ಸಭೆ ನಡೆಯದೆ ಹಲವು ತಿಂಗಳಾಗಿದೆ. ಒಂದುಬಾರಿ ಸಭೆ ಕರೆದು ಎಲ್ಲ ಇಲಾಖೆಗಳ ಅಭಿವೃದ್ಧಿ ಬಗ್ಗೆ ಚರ್ಚಿಸಬೇಕು. ಆದರೆ ಉಸ್ತುವಾರಿ ಸಚಿವರು ಇತ್ತ ಗಮನ ಹರಿಸುತ್ತಲೇ ಇಲ್ಲ. ಜಿಲ್ಲೆಯ ಸಾಮಾನ್ಯ ಜನರು ಅವರ ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ರೇವಣ್ಣ ಆರೋಪಿಸಿದರು. ‘ಮುಳುಗಡೆ ಪ್ರದೇಶ ಹಾಗೂ ಶೀತಪೀಡಿತ ಪ್ರದೇಶದ ಜನರ ಸ್ಥಳಾಂತರ ಆಗಿಲ್ಲ. ಆನೆಗಳ ಸಮಸ್ಯೆ ಇದೆ. ರಸ್ತೆಗಳ ಗುಂಡಿ ಮುಚ್ಚುವ ಕೆಲಸವೂ ಆಗಿಲ್ಲ. ಹೀಗೆ ಕೂಡಲೇ ಗಮನಹರಿಸಬೇಕಾದ ಅನೇಕ ವಿಚಾರಗಳಿವೆ. ಸಚಿವರು ಮೊದಲು ಇತ್ತ ಗಮನ ಹರಿಸಬೇಕು’ ಎಂದರು.

ಹಾಲಿನ ದರ ಹೆಚ್ಚಿಸಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದ ರೇವಣ್ಣ, ‘ನಾನು ಅಧ್ಯಕ್ಷನಾಗಿದ್ದ ಕಾಲದಲ್ಲಿ ಎರಡು ರೂಪಾಯಿ ಹೆಚ್ಚಿಸಿದಾಗ ಭಾರಿ ಗದ್ದಲ ಮಾಡಿದ್ದರು. ನನಗೆ ನೋಟಿಸ್ ಸಹ ನೀಡಿದ್ದರು. ಈಗ ಎರಡು ಬಾರಿ ದರ ಹೆಚ್ಚಳ ಮಾಡಿದ್ದಾರೆ. ವಿರೋಧ ಬರಬಾರದೆಂಬ ಉದ್ದೇಶದಿಂದ ರೈತರ ಹೆಸರು ಹೇಳುತ್ತಿದ್ದಾರೆ. ಬೆಲೆ ಹೆಚ್ಚಿಸುವುದಕ್ಕೂ ಮೊದಲು ಸಾರ್ವಜನಿಕರ ಮತ್ತು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು’ ಎಂದರು.

ಕಾಂಗ್ರೆಸ್ ಷಡ್ಯಂತ್ರ: ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ- ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಲು ಕಾಂಗ್ರೆಸ್ ಕಾರಣ. ನಾವಾಗಿ ಬಿಜೆಪಿ ಬೆಂಬಲ ಕೇಳಿರಲಿಲ್ಲ. ತಮ್ಮ ಕ್ಷೇತ್ರದಲ್ಲೇ ಸಿದ್ದರಾಮಯ್ಯ ಅವರ ವ್ಯಕ್ತಿತ್ವ ಕುಂದಿಸುವ ಉದ್ದೇಶದಿಂದ ಕಾಂಗ್ರೆಸ್‌ನವರೇ ಬಿಜೆಪಿ ಜತೆ ಸೇರಿ ತಂತ್ರ ಹೂಡಿದ್ದರಿಂದ ಈ ಒಪ್ಪಂದ ನಡೆದಿದೆ ಎಂದು ರೇವಣ್ಣ ನುಡಿದರು.‘ಕಾಂಗ್ರೆಸ್ ಎಲ್ಲ ಕಡೆ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದೆ. ಜೆಡಿಎಸ್ ಪಕ್ಷ ಮತ್ತು ಕಾಂಗ್ರೆಸ್‌ನ ಸಿದ್ದರಾಮಯ್ಯ ಮಾತ್ರ ಬಿಜೆಪಿಯ ಅಕ್ರಮಗಳ ವಿರುದ್ಧ ಧ್ವನಿ ಎತ್ತುತ್ತಿರುವುದರಿಂದ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಕುಂದಿಸಲು ಅವರ ಪಕ್ಷದವರೇ ಸಂಚು ರೂಪಿಸಿದ್ದಾರೆ ಎಂದರು. ಶಾಸಕ ಎಚ್.ಎಸ್. ಪ್ರಕಾಶ್, ಎಚ್.ಕೆ. ಕುಮಾರಸ್ವಾಮಿ, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಇತರರು ಇದ್ದರು.

ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಇಂದು
ಹಾಸನ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಗುರುವಾರ ಮಧ್ಯಾಹ್ನ ಚುನಾವಣೆ ನಡೆಯಲಿದೆ. ಜಿ.ಪಂ.ನ ಒಟ್ಟು 40 ಸ್ಥಾನಗಳಲ್ಲಿ 33 ಸ್ಥಾನ ಜೆಡಿಎಸ್, ಐದು ಬಿಜೆಪಿ ಹಾಗೂ ಎರಡು ಸ್ಥಾನಗಳನ್ನು ಕಾಂಗ್ರೆಸ್ ಪಡೆದಿದ್ದು, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳೆರಡೂ ಜೆಡಿಎಸ್‌ಗೆ ಸಲ್ಲುವುದು ಖಚಿತ. ಪಕ್ಷದೊಳಗೇ ಈ ಸ್ಥಾನಗಳಿಗೆ ತೀವ್ರ ಪೈಪೋಟಿ ನಡೆದಿದ್ದು, ಬಹುತೇಕ ರೇವಣ್ಣ ಅವರ ನಿರ್ಧಾರವೇ ಅಂತಿಮವೆನಿಸಲಿದೆ.

ಚುನಾವಣೆಯ ಹಿನ್ನೆಲೆಯಲ್ಲಿ ರೇವಣ್ಣ, ಶಾಸಕರಾದ ಎಚ್.ಎಸ್. ಪ್ರಕಾಶ್, ಎಚ್.ಕೆ. ಕುಮಾರಸ್ವಾಮಿ, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಮುಂತಾದವರು ಜಿ.ಪಂ. ಸದಸ್ಯರ ಜತೆ ಬುಧವಾರ ಚರ್ಚಿಸಿದ್ದಾರೆ. ಸಭೆಯ ಬಳಿಕ ರೇವಣ್ಣ ಪತ್ರಕರ್ತರೊಡನೆ ಮಾತನಾಡಿದರೂ ಸಭೆಯ ತೀರ್ಮಾನಗಳ ಬಗ್ಗೆ ವಿವರ ನೀಡಿಲ್ಲ. ಈ ಬಗ್ಗೆ ಕೇಳಿದರೆ ‘ನಾಳೆಯವರೆಗೆ ಕಾದು ನೋಡಿ’ ಎಂಬ ಉತ್ತರ ನೀಡಿದರು. ಆದರೆ ‘ಅತ್ಯಂತ ಸಣ್ಣ ಸಮುದಾಯದ ವ್ಯಕ್ತಿಗೆ ಉಪಾಧ್ಯಕ್ಷ ಸ್ಥಾನ ನೀಡಲಾಗುವುದು’ ಎಂಬ ಸೂಚನೆಯನ್ನು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT