ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಯೋಜನೆ: ಪಶ್ಚಿಮ ಘಟ್ಟಕ್ಕೆ ಧಕ್ಕೆ

ಪರಿಸರ ತಜ್ಞರ ಸಮಿತಿ ಅಧ್ಯಕ್ಷ ಮಾಧವ್ ಗಾಡ್ಗೀಳ್ ಕಳವಳ
Last Updated 11 ಡಿಸೆಂಬರ್ 2012, 11:03 IST
ಅಕ್ಷರ ಗಾತ್ರ

ಬೆಂಗಳೂರು: `ಅಭಿವೃದ್ಧಿಯ ಹೆಸರಿನಲ್ಲಿ ಅಧಿಕಾರಿ ವರ್ಗ ರೂಪಿಸುತ್ತಿರುವ ಅವೈಜ್ಞಾನಿಕ ಯೋಜನೆಗಳಿಂದ ಪಶ್ಚಿಮ ಘಟ್ಟದ ಜೀವವೈವಿಧ್ಯಕ್ಕೆ ಧಕ್ಕೆಯಾಗುತ್ತಿದೆ' ಎಂದು ಪಶ್ಚಿಮ ಘಟ್ಟ ಪರಿಸರ ತಜ್ಞರ ಸಮಿತಿಯ ಅಧ್ಯಕ್ಷ ಪ್ರೊ.ಮಾಧವ್ ಗಾಡ್ಗೀಳ್ ಕಳವಳ ವ್ಯಕ್ತಪಡಿಸಿದರು.ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಭಾನುವಾರ ನಡೆದ ಭಾರತೀಯ ಜೀವ ವೈವಿಧ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.

`ಪಶ್ಚಿಮ ಘಟ್ಟ ಸಾಲಿನಲ್ಲಿ ಸೂಕ್ಷ್ಮ ಜೈವಿಕ ವ್ಯವಸ್ಥೆಯಿದ್ದು, ವಿವಿಧ ಯೋಜನೆಗಳ ಕಾರಣದಿಂದ ಇಲ್ಲಿನ ಜೀವ ವೈವಿಧ್ಯ ಹಂತ ಹಂತವಾಗಿ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿದೆ. ಇದಕ್ಕೆ ಪ್ರಮುಖ ಕಾರಣ ಅಧಿಕಾರಿಗಳು ರೂಪಿಸುವ ಅವೈಜ್ಞಾನಿಕ ಯೋಜನೆಗಳು. ಪರಿಸರ ಕಾಳಜಿ ಇಲ್ಲದ ಯೋಜನೆಗಳಿಂದ ಜೀವ ವೈವಿಧ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅಧಿಕಾರಿಗಳಿಗೆ ಅರಿವಿಲ್ಲ' ಎಂದು ಅವರು ವಿಷಾದಿಸಿದರು.

`ಪಶ್ಚಿಮ ಘಟ್ಟ ಪ್ರದೇಶದಲ್ಲಿ ಯಾವುದೇ ಯೋಜನೆಗಳನ್ನುರೂಪಿಸುವ ಮುನ್ನ ಸ್ಥಳೀಯಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಈ ಪ್ರದೇಶದಲ್ಲಿ ಸ್ಥಳೀಯರ ಅಗತ್ಯಕ್ಕೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಸಮುದಾಯಗಳ ಸಹಭಾಗಿತ್ವವಿಲ್ಲದ ಅಭಿವೃದ್ಧಿಯಿಂದ ಯಾವುದೇ ಪ್ರಯೋಜನವಿಲ್ಲ' ಎಂದು ಅವರು ಹೇಳಿದರು.

ಕೇಂದ್ರ ಕಾರ್ಪೊರೇಟ್ ಹಾಗೂ ಪೆಟ್ರೋಲಿಯಂ ಮತ್ತ ನೈಸರ್ಗಿಕ ಅನಿಲ ಖಾತೆಯ ಸಚಿವ ಎಂ.ವೀರಪ್ಪ ಮೊಯಿಲಿ ಮಾತನಾಡಿ, `ಪಶ್ಚಿಮ ಘಟ್ಟಗಳ ಜೀವ ವೈವಿಧ್ಯತೆಗೆ ಯುನೆಸ್ಕೊ ಮಾನ್ಯತೆ ಸಿಕ್ಕಿರುವುದು ದೊಡ್ಡ ಹೆಗ್ಗಳಿಕೆ. ಪಶ್ಚಿಮ ಘಟ್ಟಗಳ ಜೀವ ವೈವಿಧ್ಯ ಸಂರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದೊಂದಿಗೆ ಕೆಲಸ ಮಾಡಬೇಕು. 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಪಶ್ಚಿಮ ಘಟ್ಟಗಳ ಜೀವ ವೈವಿಧ್ಯ ಸಂರಕ್ಷಣೆಗಾಗಿ ವಿಶೇಷ ಆದ್ಯತೆ ನೀಡಲಾಗಿದೆ' ಎಂದರು.

ಸಂಸದ ಅನಂತ ಕುಮಾರ್ ಮಾತನಾಡಿ, `ಜೀವ ವೈವಿಧ್ಯದ ಮಹತ್ವದ ಬಗ್ಗೆ ಮೊದಲು ಜನಪ್ರತಿನಿಧಿಗಳಲ್ಲಿ ಅರಿವು ಮೂಡಿಸಬೇಕಾದ್ದು ಅಗತ್ಯ. ಹೀಗಾಗಿ ಗ್ರಾಮ ಪಂಚಾಯ್ತಿಮಟ್ಟದಿಂದ ಸಂಸತ್ತಿನವರೆಗೆ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕಾದ ಅಗತ್ಯವಿದೆ.

ಸಂಸತ್ತಿನ ಉಭಯ ಸದನಗಳಲ್ಲಿ ಜೀವ ವೈವಿಧ್ಯದ ಮಹತ್ವದ ಬಗ್ಗೆ ವಿಚಾರ ಸಂಕಿರಣ ನಡೆಸಲು ತಜ್ಞರು ಮುಂದಾದರೆ, ಅದಕ್ಕೆ ಸ್ಪೀಕರ್ ಅವರಿಂದ ಅನುಮತಿ ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ' ಎಂದರು.
ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಮಾತನಾಡಿ, `ಜಗತ್ತಿನಲ್ಲೇ ಅಪರೂಪದ ಪ್ರಾಣಿ ಮತ್ತು ಸಸ್ಯ ಪ್ರಬೇಧಗಳನ್ನು ಪಶ್ಚಿಮ ಘಟ್ಟ ಪ್ರದೇಶ ಹೊಂದಿದೆ.

ಸುಮಾರು ಎರಡು ಸಾವಿರ ಅಪರೂಪದ ಸಸ್ಯ ಪ್ರಬೇಧಗಳು ಈ ಪ್ರದೇಶದಲ್ಲಿವೆ. ಸುಮಾರು 22 ನದಿಗಳು, 180 ಉಪನದಿಗಳು ಹುಟ್ಟುವ ತಾಣ ಪಶ್ಚಿಮ ಘಟ್ಟ. ಇಂತಹ ಅಪರೂಪದ ಜೀವ ವೈವಿಧ್ಯ ಪ್ರದೇಶವನ್ನು ಸಂರಕ್ಷಿಸಿಕೊಳ್ಳಬೇಕಾದ್ದು ನಮ್ಮೆಲ್ಲರ ಕರ್ತವ್ಯ' ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT