ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ವೆಚ್ಚ: ಪ್ರಯಾಣಿಕರಿಗೆ ಹೆಚ್ಚಿನ ಹೊರೆ

ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ನಾಡಪ್ರಭು’ ಛಾಪು
Last Updated 14 ಡಿಸೆಂಬರ್ 2013, 19:56 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಕೆದಾರರ ಅಭಿವೃದ್ಧಿ ಶುಲ್ಕ (ಯುಡಿ­ಎಫ್‌) ಶೀಘ್ರವೇ ಹೆಚ್ಚಲಿರು­ವುದು ಖಚಿತವಾಗಿದೆ.

ಶನಿವಾರವಷ್ಟೇ ಮರು ನಾಮಕರಣ ಪಡೆದ ವಿಮಾನ ನಿಲ್ದಾಣ, ಹೊಸ ಟರ್ಮಿ­ನಲ್‌ ಹೊಂದುವ ಮೂಲಕ ಪ್ರಯಾಣಿ­ಕರಿಗೆ ಉತ್ಕೃಷ್ಟ ಸೇವೆ ನೀಡಲು ಸನ್ನದ್ಧವಾಗಿದೆ. ಆದರೆ, ಅದರ ಹೊರೆ­ಯನ್ನೂ ಈಗ ಪ್ರಯಾಣಿಕರು ಹೊರು­ವುದು ಅನಿವಾರ್ಯ­ವಾಗಿದೆ.

‘ಯುಡಿಎಫ್‌ ಹೆಚ್ಚಿಸಲು ನಾವು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಿ­ದ್ದೇವೆ. ಇನ್ನು 2–3 ತಿಂಗಳಲ್ಲಿ ಅದಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ. ಪ್ರಯಾ­ಣಿಕರಿಗೆ ಸೌಲಭ್ಯ ಒದಗಿಸಲು ಮಾಡಿದ ವೆಚ್ಚವನ್ನು ಸರಿದೂಗಿಸಲು ಈ ಏರಿಕೆ ಅನಿವಾರ್ಯ­ವಾಗಿದೆ’ ಎಂದು ಬಿಐಎ­ಎಲ್‌ನ ವ್ಯವಸ್ಥಾಪಕ ನಿರ್ದೇಶಕ ಸಂಜಯ್‌ ರೆಡ್ಡಿ ತಿಳಿಸಿದರು.

ಸದ್ಯ ದೇಶೀಯ ಪ್ರಯಾಣಿಕರು ರೂ 262.32 ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರು ರೂ 1,049.27 ಯುಡಿಎಫ್‌ ತೆರುತ್ತಿದ್ದಾರೆ. ದೇಶೀಯ ಟಿಕೆಟ್‌ ಯುಡಿಎಫ್‌ ಮೊತ್ತವನ್ನು ಶೇ 240 ಮತ್ತು ಅಂತರರಾಷ್ಟ್ರೀಯ ಟಿಕೆಟ್‌ ಯುಡಿಎಫ್‌ ಮೊತ್ತವನ್ನು ಶೇ 70ರಷ್ಟು ಹೆಚ್ಚಿಸಲು ಪ್ರಸ್ತಾವ ಸಲ್ಲಿಸಲಾಗಿದೆ.

‘ಕಿಂಗ್‌ ಫಿಶರ್‌ ಸಂಸ್ಥೆ 2008ರಿಂದ ಇದುವರೆಗೆ ಸಂಗ್ರಹಿಸಿದ ಯುಡಿಎಫ್‌ ಮೊತ್ತದಲ್ಲಿ ಸುಮಾರು ರೂ 50 ಕೋಟಿ ಬಾಕಿ ಉಳಿಸಿಕೊಂಡಿದೆ’ ಎಂದು ರೆಡ್ಡಿ ಬಹಿರಂಗಪಡಿಸಿದರು. ‘ಯುಡಿಎಫ್‌ ಸಲ್ಲಿಸದ ಸಂಸ್ಥೆಗಳ ವಿರುದ್ಧ ಕಾನೂನು ಸಮರ ಆರಂಭವಾಗಿದ್ದು, ಕಿಂಗ್‌ ಫಿಶರ್‌ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ’ ಎಂದು ಹೇಳಿದರು.

ಪುತ್ಥಳಿ ಪ್ರತಿಷ್ಠಾಪನೆ: ‘ವಿಮಾನ ನಿಲ್ದಾಣದ ಮುಂದೆ ಶೀಘ್ರವೇ ಕೆಂಪೇ­ಗೌಡ ಅವರ ದೊಡ್ಡ ಪುತ್ಥಳಿ ಪ್ರತಿಷ್ಠಾಪಿ­ಸಲಾಗುವುದು’ ಎಂದು ನಾಮಫಲಕ ಅನಾವರಣ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ವಿಮಾನ ನಿಲ್ದಾಣದ ಮುಂದೆ ಕೆಂಪೇಗೌಡರ ದೊಡ್ಡ ಪುತ್ಥಳಿ­ಯೊಂದನ್ನು ಪ್ರತಿಷ್ಠಾಪನೆ ಮಾಡಬೇಕು ಎಂದು ಬಿಐಎಎಲ್‌ ಸಹ ಅಧ್ಯಕ್ಷ ಜಿವಿಕೆ ರೆಡ್ಡಿ ಅವರಿಗೆ ಕೇಳಿಕೊಂಡಿದ್ದೇನೆ. ಆದಷ್ಟು ಶೀಘ್ರ ಪುತ್ಥಳಿ ಸ್ಥಾಪನೆ ಮಾಡಲಾಗುವುದು ಎಂಬ ಭರವಸೆ­ಯನ್ನು ಅವರು ನೀಡಿದ್ದಾರೆ’ ಎಂದು ತಿಳಿಸಿದರು.
‘ವಿಮಾನ ನಿಲ್ದಾಣ ಮತ್ತು ಅದಕ್ಕೆ ಹೊಂದಿಕೊಂಡ ಉದ್ಯಮ­ಗಳಲ್ಲಿ ಸೃಷ್ಟಿ­ಯಾಗುವ ಉದ್ಯೋಗಗಳು ಕನ್ನಡಿಗರಿಗೇ ಸಿಗಬೇಕು. ಈ ನಿಟ್ಟಿನಲ್ಲಿ ಬಿಐಎಎಲ್‌ ಮುತುವರ್ಜಿ ವಹಿಸಬೇಕು’ ಎಂದು ಸೂಚಿಸಿದರು.

ಖಾಸಗಿ ಸಹಭಾಗಿತ್ವ: ‘ದೇಶದ 20 ಪ್ರಮುಖ ವಿಮಾನ ನಿಲ್ದಾಣ­ಗಳನ್ನು ಖಾಸಗಿ ಸಹಭಾಗಿತ್ವದ ಮೂಲಕ ಅಭಿ­ವೃದ್ಧಿಗೊಳಿಸಿ, ನಿರ್ವಹಣೆ ಮಾಡಲು ಯೋಜನೆ ರೂಪಿಸಲಾಗಿದೆ’ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಜಿತ್‌ ಸಿಂಗ್‌ ಘೋಷಿಸಿದರು.

ಟರ್ಮಿನಲ್‌ ‘1ಎ’ ಉದ್ಘಾಟಿಸಿ ಅವರು ಮಾತನಾಡಿದರು. ‘ಈಗಾಗಲೇ ಆರು ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಖಾಸಗಿ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದರು.

‘ವಿಮಾನಯಾನದಲ್ಲಿ ನಮ್ಮ ದೇಶ ಜಗತ್ತಿನಲ್ಲಿ 9ನೇ ಸ್ಥಾನದಲ್ಲಿದ್ದು, ವಾರ್ಷಿಕ 33.7 ಕೋಟಿ ಜನವಿಮಾನದಲ್ಲಿ ಪ್ರಯಾಣ ಮಾಡುತ್ತಾರೆ’ ಎಂದು ತಿಳಿಸಿದರು.
ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ.ಎನ್‌. ಶ್ರೀವಾತ್ಸವ, ‘ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯಮಗಳೆಲ್ಲವೂ ಬೆಂಗಳೂರಿನಲ್ಲಿಯೇ ತಳವೂ­ರಿವೆ. ಈ ಉದ್ಯಮಗಳ ಮಾರಾಟ ತೆರಿಗೆಯನ್ನು ಈಗಿರುವ ಶೇ 28ರಿಂದ ಶೇ 5ಕ್ಕೆ ಇಳಿಸಿದರೆ ಬಂಡವಾಳ ದೊಡ್ಡ ಪ್ರಮಾಣ­ದಲ್ಲಿ ಹರಿದು ಬರಲಿದ್ದು, ಉದ್ಯೋಗ­ಗಳೂ ಸೃಷ್ಟಿಯಾಗಲಿವೆ’ ಎಂದು ಅಭಿಪ್ರಾಯಪಟ್ಟರು.

‘ವಿಮಾನ ನಿಲ್ದಾಣಕ್ಕೆ ತಡೆಯಿಲ್ಲದೆ ತಲುಪಲು ನೇರವಾದ ಹೆದ್ದಾರಿ ಮತ್ತು ರೈಲು ಸಂಪರ್ಕ ಒದಗಿಸಲು ರಾಜ್ಯ ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳ­ಬೇಕು’ ಎಂದು ಸಲಹೆ ನೀಡಿದರು.

ಕೇಂದ್ರ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯಿಲಿ, ಕೇಂದ್ರ ಅಲ್ಪ­ಸಂಖ್ಯಾತ ವ್ಯವಹಾರಗಳ ಸಚಿವ ಕೆ.ರೆಹಮಾನ್‌ ಖಾನ್‌, ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಕೆ.ಸಿ. ವೇಣುಗೋಪಾಲ್‌, ಸಚಿವರಾದ ಆರ್‌.ವಿ. ದೇಶಪಾಂಡೆ, ರಾಮಲಿಂಗಾ­ರೆಡ್ಡಿ, ಕೆ.ಜೆ. ಜಾರ್ಜ್‌, ಎಸ್‌್.ಆರ್‌. ಪಾಟೀಲ್‌, ದಿನೇಶ್‌ ಗುಂಡೂರಾವ್‌, ಕೃಷ್ಣ ಬೈರೇಗೌಡ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ಮತ್ತು ಮೇಯರ್‌ ಬಿ.ಎಸ್‌. ಸತ್ಯನಾರಾಯಣ ಹಾಜರಿದ್ದರು.

ಕಿನ್ನರಲೋಕ ಸೃಷ್ಟಿಸಿದ ‘ಮಯೂರಿ’ ನೃತ್ಯ
‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ಶನಿವಾರ ನಗರದ ನೃತನೃತ್ಯ ತಂಡದ ಕಲಾವಿದರು ಕಿನ್ನರ ಲೋಕವನ್ನೇ ಸೃಷ್ಟಿ ಮಾಡಿದ್ದರು. ಮಯೂರಿ ಉಪಾಧ್ಯೆ ಅವರ ಮಾರ್ಗದರ್ಶನದಲ್ಲಿ ಹೆಜ್ಜೆ ಹಾಕಿದ ಕಲಾವಿದರು ಮೈಯಲ್ಲಿ ಮೂಳೆಗಳೇ ಇಲ್ಲದಂತೆ ಬಳಕುತ್ತಿದ್ದರು.
ಸಾಂಪ್ರದಾಯಿಕ ಭರತ ನಾಟ್ಯದಿಂದ ಆಧುನಿಕ ನೃತ್ಯದವರೆಗೆ ಎಲ್ಲ ಪ್ರಕಾರಗಳಲ್ಲೂ ಹೆಜ್ಜೆ ಹಾಕಿದ ಅವರು ಸೇರಿದ್ದ ಭಾರಿ ಸಂಖ್ಯೆಯ ಪ್ರೇಕ್ಷಕರ ಮನಸೂರೆಗೊಂಡರು.

ಭರತ ನಾಟ್ಯದ ವೈಭವದಲ್ಲಿ ಮೈಮರೆತಿದ್ದ ಸಭಿಕರನ್ನು ಇದ್ದಕ್ಕಿದ್ದಂತೆ ವೇದಿಕೆ ಮೇಲೆ ಮೊಳಗಿದ ಡೊಳ್ಳಿನ ನಾದ ಸೆಟೆದೆದ್ದು ಕೂರುವಂತೆ ಮಾಡಿತು. ಡೊಳ್ಳು ಕುಣಿತದ ನಿನಾದ ಕ್ಷೀಣಿಸುತ್ತಿದ್ದಂತೆ ಯುವಕ–ಯುವತಿಯರು ಕೋಲು ಹಾಕುತ್ತಾ ವೇದಿಕೆ ಮೇಲೆ ಕಾಣಿಸಿಕೊಂಡು ಕೋಲಾಟವಾಡಿದರು. ಅವರ ಕೋಲಾಟದ ವೇಗ ನೋಡುಗರನ್ನು ನಿಬ್ಬೆರಗಾಗಿಸಿತು.

ಯಕ್ಷಗಾನದ ತಂಡ ನೃತ್ಯ ಮಾಡುತ್ತಾ ಬಂದು, ಸಭಿಕರನ್ನು ಕರಾವಳಿಗೆ ಕರೆದೊಯ್ದಿತು. ನಡುವೆ ಪೂಜಾ ಕುಣಿತ, ಪಟ ಕುಣಿತ ಮತ್ತು ಕೀಲು ಕುದುರೆಗಳ ನೃತ್ಯ. ಸಾಹಸ ಮತ್ತು ನಾಟ್ಯದ ಹದವಾದ ಮಿಳಿತದಂತಿದ್ದ ಆಧುನಿಕ ನೃತ್ಯವಂತೂ ಮನೋಜ್ಞವಾಗಿತ್ತು. ಕೆಂಪೇಗೌಡ ಅವರ ಜೀವನ ಚರಿತ್ರೆ ಮೇಲೆ ಬೆಳಕು ಚೆಲ್ಲುವಂತಹ ಸಾಕ್ಷ್ಯ ಚಿತ್ರವನ್ನೂ ಸಮಾರಂಭದಲ್ಲಿ ಪ್ರದರ್ಶಿಸಲಾಯಿತು. ಐತಿಹಾಸಿಕ ಘಟನೆಗಳ ಈ ಮರುಸೃಷ್ಟಿ ಸಹ ಮುದ ನೀಡಿತು.

ಇನ್ನೊಂದು ರನ್‌ವೇ ನಿರ್ಮಾಣ
‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನೊಂದು ರನ್‌ವೇ ಹಾಗೂ ಟರ್ಮಿನಲ್‌ ನಿರ್ಮಾಣ ಕಾಮಗಾರಿ ಶೀಘ್ರವೇ ಆರಂಭವಾಗಲಿದ್ದು, ಆ ಸೌಲಭ್ಯಗಳು ಬಳಕೆಗೆ ಸಿದ್ಧವಾದಾಗ ಪ್ರಯಾಣಿಕರ ಸಂಖ್ಯೆ ಸಹ ದುಪ್ಪಟ್ಟಾ­ಗಲಿದೆ’ ಎಂದು ಬಿಐಎಎಲ್‌ನ ಸಹ ಅಧ್ಯಕ್ಷ ಜಿವಿಕೆ ರೆಡ್ಡಿ ಪ್ರಕಟಿಸಿದರು.

‘ಹೊಸ ಟರ್ಮಿನಲ್‌ ಕನಿಷ್ಠ 75 ವರ್ಷ ಈ ಕಟ್ಟಡ ಬಾಳಿಕೆ ಬರುತ್ತದೆ ಎಂಬ ಭರವಸೆಯನ್ನು ನಾನು ನೀಡುತ್ತೇನೆ. ನಿರ್ವಹಣೆ ಸರಿಯಾಗಿದ್ದರೆ ನೂರು ವರ್ಷಗಳ ಕಾಲ ಈ ಕಟ್ಟಡ ಬಾಳುವಲ್ಲಿ ಯಾವುದೇ ಸಂಶಯವಿಲ್ಲ’ ಎಂದು ರೆಡ್ಡಿ ಹೇಳಿದರು. ‘ಕಟ್ಟಡದ ನಿರ್ಮಾಣಕ್ಕೆ ರೂ 1500 ಕೋಟಿ ಖರ್ಚಾಗಿದೆ. ರೂ 350 ಕೋಟಿ ಷೇರು ಮೂಲಕ ಸಂಗ್ರಹವಾದರೆ, ಮಿಕ್ಕ ಹಣವನ್ನು ಸಾಲ ಪಡೆಯಲಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT