ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಸುಳಿವಿಲ್ಲದ ಪಾಳ್ಯ

Last Updated 15 ಆಗಸ್ಟ್ 2012, 9:50 IST
ಅಕ್ಷರ ಗಾತ್ರ

ನಂಜನಗೂಡು: ತಾಲ್ಲೂಕು ಕೇಂದ್ರದಿಂದ ಕೇವಲ 5 ಕಿ.ಮೀ. ದೂರದಲ್ಲಿದ್ದರೂ ಪಾಳ್ಯ ಗ್ರಾಮ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಗ್ರಾಮದಲ್ಲಿ ಸುಮಾರು 150 ಕುಟುಂಬಗಳಿದ್ದು, ಎಲ್ಲರೂ ಭೋವಿ ಜನಾಂಗಕ್ಕೆ ಸೇರಿದ್ದಾರೆ.

ಗ್ರಾಮದ ಮುಖ್ಯರಸ್ತೆಯ ಒಂದು ಮಗ್ಗುಲಿಗೆ 150 ಅಡಿ ಉದ್ದದ ಚರಂಡಿ ನಿರ್ಮಿಸಿದ್ದನ್ನು ಬಿಟ್ಟರೆ ಇಡೀ ಗ್ರಾಮದಲ್ಲಿ ಮತ್ತೆ ಚರಂಡಿ ಮಾಡಿರುವ ಕುರುಹು ಕೂಡ ಇಲ್ಲ. ಈ ಚರಂಡಿ ಕೂಡ ಬಾಯ್ದೆರೆದುಕೊಂಡಿದ್ದು, ಕಳಪೆ ಕಾಮಗಾರಿಯಿಂದ ಕೂಡಿದೆ. ಹೀಗಾಗಿ ಮನೆಯ ತ್ಯಾಜ್ಯ ನೀರು, ಶೌಚಾಲಯದ ನೀರು ಹೊರ ಹೋಗಲು ಅನ್ಯಮಾರ್ಗವಿಲ್ಲದೆ ರಸ್ತೆಯಲ್ಲೇ ಸಂಗ್ರಹಗೊಳ್ಳುತ್ತಿದೆ. ಬಹುಪಾಲು ಜನ ಮನೆ ಮುಂದೆ ಗುಂಡಿ ತೋಡಿ ತ್ಯಾಜ್ಯವನ್ನು ಅಲ್ಲೇ ಸಂಗ್ರಹಿಸುತ್ತಿದ್ದಾರೆ. ಇದು ಸೊಳ್ಳೆ, ನೊಣ ಮತ್ತಿತರ ಕ್ರಿಮಿಗಳಿಗೆ ಆಶ್ರಯ ತಾಣವಾಗಿದೆ. ಇದೇ ಕಾರಣಕ್ಕೆ ಗ್ರಾಮದ ಜನ ಯಾವಾಗಲೂ ಒಂದಿಲ್ಲೊಂದು ಸಾಂಕ್ರಾಮಿಕ ರೋಗದಿಂದ ಬಳಲುತ್ತಾರೆ.

`ಗ್ರಾಮದಲ್ಲಿ ಚರಂಡಿ ಇಲ್ಲದ್ದರಿಂದ ಶೌಚಾಲಯ ಬಳಕೆಗೂ ತೊಂದರೆ ಯಾಗಿದೆ. ಸ್ವಚ್ಛತೆ ಕಾಪಾಡಿಕೊಳ್ಳಲು ಆಗುತ್ತಿಲ್ಲ. ದುಡಿದ ಹಣವನ್ನೆಲ್ಲ ಆಸ್ಪತ್ರೆಗೇ ಸುರಿಯುವಂತಾಗಿದೆ. ತಮ್ಮನ್ನು ಈ ನರಕದಿಂದ ಪಾರು ಮಾಡಲು ಯಾರೂ ಮನಸು ಮಾಡಿಲ್ಲ~ ಎಂಬುದು ತಿಮ್ಮಾ ಭೋವಿ ಅವರ ಗೋಳು.

ಪ್ರತಿದಿನ ನೂರಾರು ವಿದ್ಯಾರ್ಥಿಗಳು ಶಾಲೆ, ಕಾಲೇಜು ಅರಸಿ ಸರ್ಕಾರಿ ಬಸ್‌ಗಾಗಿ ಕಾಯುವುದು ಇಲ್ಲಿ ಕಂಡುಬರುವ ಸಾಮಾನ್ಯ ದೃಶ್ಯ. ಆದರೆ, ಗ್ರಾಮಕ್ಕೆ ಸರಿಯಾದ ಬಸ್ ಸೌಕರ್ಯವಿಲ್ಲ. ವಿದ್ಯಾರ್ಥಿಗಳು ನಂಜನಗೂಡು- ಗುಂಡ್ಲುಪೇಟೆ ಮುಖ್ಯರಸ್ತೆವರೆಗೆ ನಡೆದುಕೊಂಡೇ ಹೋಗಬೇಕು. ಮುಖ್ಯರಸ್ತೆಯಲ್ಲಿ ಸಂಚರಿಸುವ ಬಸ್‌ಗಳಲ್ಲಿ ಹೆಚ್ಚಿನವು ವೇಗದೂತ ಬಸ್‌ಗಳಾಗಿವೆ. ಹಾಗಾಗಿ ಪಟ್ಟಣಕ್ಕೆ ತೆರಳಲು ಇತರೆ ಖಾಸಗಿ ವಾಹನಗಳನ್ನು ಅವಲಂಬಿಸಬೇಕಾಗಿದೆ.

ವಿದ್ಯುತ್ ಅಭಾವದಿಂದ ಕುಡಿಯುವ ನೀರಿಗೂ ಅಡಚಣೆಯಾಗಿದೆ. ಕೆಲವರು ಮನೆ ಮುಂದೆ ಆಳುದ್ದ ಗುಂಡಿಗಳನ್ನು ತೋಡಿಕೊಂಡು ತಗ್ಗಿನಲ್ಲಿ ಬರುವ ನಲ್ಲಿ ನೀರನ್ನೇ ಸಂಗ್ರಹಿಸಿಕೊಳ್ಳುತ್ತಾರೆ. ಗ್ರಾಮದ ಬೀದಿ, ಚರಂಡಿಯನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿಲ್ಲ. ಅಪರೂಪಕ್ಕೆ ಕಸ ತೆಗೆದರೂ ಅಲ್ಲೆ ಗುಡ್ಡೆ ಹಾಕುವುದರಿಂದ ಮತ್ತೆ ಚರಂಡಿ ಸೇರುತ್ತದೆ.

ಉದ್ಯೋಗ ಖಾತ್ರಿ ಇಲ್ಲ: ಈ ಗ್ರಾಮದಲ್ಲಿ ಇದೂವರೆಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿ ಯಾವ ಕಾಮಗಾರಿಯೂ ನಡೆದಿಲ್ಲ. ಜಾಬ್ ಕಾರ್ಡ್ ಮಾಡಿಸಿದ್ದರೂ ಉದ್ಯೋಗ ನೀಡಿಲ್ಲ. ಬರಗಾಲದಿಂದಾಗಿ ದುಡಿಯುವವರಿಗೆ ಬೇರೆಡೆಯೂ ಕೆಲಸ ಸಿಗುತ್ತಿಲ್ಲ. ಇದರಿಂದ ಕುಟುಂಬ ನಿರ್ವಹಣೆ ದುಸ್ತರವಾಗಿದೆ ಎನ್ನುತ್ತಾರೆ ಗೌರಮ್ಮ.

ದೇವಿರಮ್ಮನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಈ ಗ್ರಾಮದ ಅಭಿವೃದ್ಧಿಗೆ ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ್ದಾರೆ. ತುರ್ತಾಗಿ ಬೇಕಿರುವ ಸ್ವಚ್ಛತೆ, ನೀರು, ರಸ್ತೆ, ಚರಂಡಿ ವ್ಯವಸ್ಥೆ ಮಾಡುವುದು ಅಧಿಕಾರಿಗಳ ಜವಾಬ್ದಾರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT