ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಅಳೆತೆಗೋಲಿಲ್ಲ...!

Last Updated 6 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಳಗಾವಿ: ಅಭಿವೃದ್ಧಿಯೇ ಮಂತ್ರ ಎನ್ನುತ್ತಾರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಅಭಿವೃದ್ಧಿ ಹೋಗಲಿ, ಅಭಿವೃದ್ಧಿ ಪರಿಶೀಲನೆಯ ತ್ರೈಮಾಸಿಕ ಸಭೆಗಳೂ ಸರಿಯಾಗಿ ನಡೆಯುತ್ತಿಲ್ಲ.
ವಿವಿಧ ಇಲಾಖೆಗಳು ಜಿಲ್ಲೆಯಲ್ಲಿ ಜಾರಿಗೊಳಿಸಿರುವ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಮೂರು ತಿಂಗಳಿಗೊಮ್ಮೆ  ನಡೆಯಬೇಕು. ಆದರೆ ಜಿಲ್ಲೆಯಲ್ಲಿ ಎರಡು ವರ್ಷಗಳಿಂದ ಈ ಸಭೆಗಳೂ ಸರಿಯಾಗಿ ನಡೆದಿಲ್ಲ.

ಬಿಜೆಪಿ ನೇತೃತ್ವದ ಸರ್ಕಾರ 2008ರಲ್ಲಿ ಅಸ್ವಿತ್ವಕ್ಕೆ ಬಂದಾಗ ಹಾವೇರಿ ಜಿಲ್ಲೆಯ ಶಿಗ್ಗಾಂವದಿಂದ ಆಯ್ಕೆಯಾಗಿರುವ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಈ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಹೀಗಾಗಿ ಅವರು ನಿಗದಿತ ಸಮಯದಲ್ಲಿ ಸಭೆ ನಡೆಸುತ್ತಿಲ್ಲ ಎಂಬ ಆರೋಪವಿತ್ತು.

ಆದರೆ ಒಂದು ವರ್ಷದಿಂದ ಜಿಲ್ಲಾ ಉಸ್ತುವಾರಿಯನ್ನು ಜಿಲ್ಲೆಯ ಜನಪ್ರತಿನಿಧಿಯೇ ಆಗಿರುವ ಕೃಷಿ ಸಚಿವ ಉಮೇಶ ಕತ್ತಿ ವಹಿಸಿಕೊಂಡಿದ್ದಾರೆ. ಈಗಲೂ ಸಭೆಗಳು ಸರಿಯಾಗಿ ನಡೆಯುತ್ತಿಲ್ಲ.

ಇದುವರೆಗೆ ಕೇವಲ ಮೂರು ಸಭೆಗಳು ಮಾತ್ರ ನಡೆದಿವೆ. ಅವೂ ಮೂರರಿಂದ ನಾಲ್ಕು ತಿಂಗಳು ವಿಳಂಬವಾಗಿ ನಡೆದಿವೆ. ಇಂತಹ ಸಭೆಗಳಲ್ಲಿ ಗುರಿ ಸಾಧನೆ ಬಗೆಗೆ ಪ್ರಶ್ನಿಸಿದರೆ, ~ಅದು ಮೂರು ತಿಂಗಳ ಹಿಂದಿನ ವರದಿ. ಈಗ ಗುರಿ ಸಾಧನೆ ಮಾಡಲಾಗಿದೆ~ ಎಂದು ಹೇಳಿ ಅಧಿಕಾರಿಗಳು ಕೈತೊಳೆದುಕೊಳ್ಳುತ್ತಾರೆ. ಅದರಲ್ಲೂ ಕಳೆದ ಆರ್ಥಿಕ ವರ್ಷಾಂತ್ಯದ ಮಾರ್ಚ್ ಹಾಗೂ ಪ್ರಸಕ್ತ ವರ್ಷದ ಮಾರ್ಚ್ ಅಂತ್ಯದ ಪರಿಶೀಲನಾ ಸಭೆಗಳು ನಡೆದಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ.

~ವಾರ್ಷಿಕ ಗುರಿ ಸಾಧನೆ, ಅನುದಾನ ಬಳಕೆಯ ಲೆಕ್ಕ ಇನ್ನೂ ಸಿಗಬೇಕಿದೆ. ಬಿಜೆಪಿ ಸರ್ಕಾರದ ಸಾಧನೆಗಳೆಲ್ಲ ಕಾಗದದಲ್ಲಿ ಆಗಿವೆ. ಸಭೆ ಕರೆದರೆ ಈ ಹುಳುಕುಗಳನ್ನು ಪ್ರತಿಪಕ್ಷಗಳು ಹೊರ ತರುತ್ತವೆ ಎಂಬ ಭಯದಿಂದ ಸಭೆಗಳನ್ನು ನಿಗದಿತವಾಗಿ ನಡೆಸುತ್ತಿಲ್ಲ. ಜಿಲ್ಲೆಯ ಆಡಳಿತದ ಮೇಲೂ ಹಿಡಿತ ತಪ್ಪಿದೆ~ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ಲಕ್ಷ್ಮಿ  ಹೆಬ್ಬಾಳಕರ ಆರೋಪಿಸುತ್ತಾರೆ.

`ನಿಯಮಿತವಾಗಿ ಸಭೆ ಕರೆಯದ್ದರಿಂದಾಗಿ ಪ್ರಗತಿ ಕುಂಠಿತಗೊಂಡಿದೆ. ಯೋಜನೆಗಳ ಜಾರಿಯಲ್ಲಿ ಎದುರಾಗಿರುವ ಸಮಸ್ಯೆಗಳ ಬಗೆಗೆ ಗೊತ್ತಾಗುತ್ತಿಲ್ಲ. ಅಭಿವೃದ್ಧಿಗೆ ವೇಗ ನೀಡಲು ಸಭೆ ನಡೆಸಬೇಕು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಭೆ ನಡೆಸುವಂತೆ ಆಗ್ರಹಿಸಲಾಗುವುದು ಎಂದು ಮಾಜಿ ಸಚಿವ ಪ್ರಕಾಶ ಹುಕ್ಕೇರಿ ~ಪ್ರಜಾವಾಣಿ~ಗೆ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಅವರ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದಾರೆ. ತಪ್ಪಿದರೆ ಬೆಳಗಾವಿ ನಗರಕ್ಕೆ ಸಂಬಂಧಿಸಿದ ಯೋಜನೆಗಳ ಬಗೆಗೆ ಸಭೆ ನಡೆಸುತ್ತಾರೆ. ಜಿಲ್ಲೆಯಲ್ಲಿ  ವಿವಿಧ ಇಲಾಖೆಗಳಿ ಕೈಗೆತ್ತಿಕೊಂಡಿರುವ ಯೋಜನೆಗಳ ಜಾರಿ ಬಗ್ಗೆ ಸಮಗ್ರವಾಗಿ ಪರಿಶೀಲನೆಯ ಗೋಜಿಗೆ ಹೋಗುವುದಿಲ್ಲ ಎಂಬ ಆರೋಪಗಳೂ ಇವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT