ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಉನ್ನತ ಶಿಕ್ಷಣ ಅನಿವಾರ್ಯ

Last Updated 24 ಸೆಪ್ಟೆಂಬರ್ 2011, 5:40 IST
ಅಕ್ಷರ ಗಾತ್ರ

ಚಿಕ್ಕೋಡಿ: ವಿಶ್ವದಲ್ಲಿಯೇ ಭಾರತ ಅತೀ ಹೆಚ್ಚು ಯುವ ಸಂಪನ್ಮೂಲವನ್ನು ಹೊಂದಿದೆ. ಆದರೆ ಶೇ 12ರಿಂದ 13ರಷ್ಟು ಯುವಕರು ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ದೇಶದ ಸಮಗ್ರ ಅಭಿವೃದ್ದಿಯ ಹಿತದೃಷ್ಟಿಯಿಂದ ಈ ಪ್ರಮಾಣವನ್ನು ಇನ್ನೂ ಹೆಚ್ಚಿಸಬೇಕಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಆರ್.ಎನ್. ಶೆಟ್ಟಿ ಹೇಳಿದರು.

ಪಟ್ಟಣದ ಕೆಎಲ್‌ಇ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ `ಫ್ರ್ಯಾಕ್ಸಿಸ್ 2ಕೆ11~ ತಾಂತ್ರಿಕ ಉತ್ಸವಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಉನ್ನತ ಶಿಕ್ಷಣದಲ್ಲಿ ಸಂಖ್ಯಾತ್ಮಕ ಸಾಧನೆಯೊಂದಿಗೆ ಗುಣಾತ್ಮಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಲಿಸುವ ಮತ್ತು ಕಲಿಯುವ ಪ್ರಕ್ರಿಯೆಯಲ್ಲಿ ಅಮೂಲಾಗ್ರ ಬದಲಾವಣೆ ತರಬೇಕಾಗಿದೆ. ಪ್ರತಿ ಅಧ್ಯಾಪಕರೂ ಸಂಶೋಧನಾ ಪ್ರವೃತಿಯನ್ನು ಮೈಗೂಡಿಸಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳ ಆಸಕ್ತಿಯನ್ನೂ ಸಂಶೋಧನಾತ್ಮಕ ಅಧ್ಯಯನದತ್ತ ಪರಿವರ್ತಿಸಲು ಗಮನ ಹರಿಸಬೇಕಿದೆ. ರಚನಾತ್ಮಕ ಬೋಧನೆಯಿಂದ ಮಕ್ಕಳ ಪ್ರತಿಭೆಯನ್ನು ಇಮ್ಮಡಿಗೊಳಿಸಲು ಪ್ರೇರಣೆ ನೀಡಬೇಕು ಎಂದು ಸಲಹೆ ನೀಡಿದರು.

ಮಾಹಿತಿ-ತಂತ್ರಜ್ಞಾನ ಕ್ಷೇತ್ರದ ವಿಸ್ಮಯಕಾರಿ ಬೆಳವಣಿಗೆಯೂ ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಿಸಲು ಸಹಕಾರಿಯಾಗಿದೆ. ಅಂತರ್ಜಾಲದಲ್ಲಿ ಮಾಹಿತಿಯ ಮಹಾಪೂರವೇ ಹರಿದು ಬರುತ್ತಿದೆ. ಆ ಮಾಹಿತಿಗಳಿಂದ ತಮ್ಮ ಜ್ಞಾನ ಪರಿಧಿಯನ್ನು ವಿಸ್ತರಿಸಿಕೊಂಡು ವಿಶೇಷ ಸಾಧನೆಯನ್ನು ಜಗತ್ತಿಗೆ ತೋರಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಪ್ರೊ. ಆರ್.ಎನ್. ಶೆಟ್ಟಿ ಮಾರ್ಗದರ್ಶನ ಮಾಡಿದರು.

ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಎಸ್.ಸಿ. ಮೆಟಗುಡ್ಡ ಅಧ್ಯಕ್ಷತೆ ವಹಿಸಿದ್ದರು. ಕೆಎಲ್‌ಇ ಸಂಸ್ಥೆಯು ಕೇವಲ ನಗರ ಪ್ರದೇಶಗಳ ಸ್ಥಿತಿವಂತ ಮಕ್ಕಳಿಗೆ ಮಾತ್ರ ಉನ್ನತ ಶಿಕ್ಷಣ ಸೌಕರ್ಯ ಕಲ್ಪಿಸದೇ ಗ್ರಾಮೀಣ ಪ್ರದೇಶಗಳಲ್ಲೂ ಎಂಜಿನಿಯರಿಂಗ್ ಕಾಲೇಜು ಆರಂಭಿಸಿ ಬಡ ಮಕ್ಕಳಿಗೂ ವೃತ್ತಿ ಶಿಕ್ಷಣ ದೊರಕುವಂತೆ ಮಾಡುತ್ತಿದೆ ಎಂದು ಹೇಳಿದರು.

ಪ್ರಾಚಾರ್ಯ ಡಾ. ಸಬವರಾಜ ಕಟಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೂಹಿ ವಾಲಿಯಾ ಸ್ವಾಗತಿಸಿದರು. ವಿನಯಾ ಕುಡತರಕರ ಮತ್ತು ರಾಮಕೃಷ್ಣನ್ ನಿರೂಪಿಸಿದರು. ಪ್ರೊ. ಬಿ.ಪಿ. ಹಲಗಲಿ ವಂದಿಸಿದರು. ತಾಂತ್ರಿಕ ಉತ್ಸವದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ  ದಕ್ಷಿಣ ರಾಜ್ಯಗಳ 32 ಕಾಲೇಜುಗಳ 250 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT