ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಕಾದಿವೆ ಮುತ್ತಗಿ ದೇಗುಲ

Last Updated 1 ಜುಲೈ 2012, 9:15 IST
ಅಕ್ಷರ ಗಾತ್ರ

ಬಸವನಬಾಗೇವಾಡಿ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ  ಐತಿಹಾಸಿಕ  ಕಟ್ಟಡಗಳಿವೆ. ಪಟ್ಟಣದಿಂದ ಸುಮಾರು 12 ಕಿ.ಮೀ ದೂರದಲ್ಲಿ ಇರುವ ಮುತ್ತಗಿ ಗ್ರಾಮವು ಅಂಥ ಐತಿಹಾಸಿಕ ಕಟ್ಟಡಗಳನ್ನು ನೋಡಬಹುದು. ಈ ಗ್ರಾಮವು ಅಗ್ರಹಾರವಾಗಿತ್ತು ಎಂದು ಶಾಸನಗಳಿಂದ ತಿಳಿದು ಬರುತ್ತದೆ. ಈ  ಗ್ರಾಮದಲ್ಲಿ ಸಂಗಮೇಶ್ವರ, ಲಕ್ಷ್ಮಿನಾರಾಯಣ (ಲಕ್ಷ್ಮೀನರಸಿಂಹ), ಶಿವ (ರಾಮಲಿಂಗ), ಮಲ್ಲಿಕಾರ್ಜುನ, ಅಶ್ವತ್ಥನರಸಿಂಹ, ಮುಕ್ತೇಶ್ವರ, ಸಿದ್ಧರಾಮ ಮುಂತಾದ ದೇವಾಲಯಗಳಿವೆ.

ಗ್ರಾಮದ ಈಗಿನ ಅಗಸಿಗೆ ಹೊಂದಿಕೊಂಡು ಲಕ್ಷ್ಮಿನಾರಾಯಣ (ಲಕ್ಷ್ಮೀನರಸಿಂಹ), ಶಿವದೇವಾಲಯ (ರಾಮಲಿಂಗ)  ಮತ್ತು ಮುಕ್ತೇಶ್ವರ ದೇವಾಲಯಗಳಿವೆ. 

ಈ ದೇವಾಲಯಗಳ ಸಂಕೀರ್ಣದಲ್ಲಿ ಇರುವ ಮುಕ್ತೇಶ್ವರ ದೇವಾಲಯದಿಂದಲೇ ಗ್ರಾಮಕ್ಕೆ ಮುತ್ತಗಿ ಎಂಬ ಹೆಸರು ಬಂದಿತು ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ.

ಈ ದೇವಾಲಯವು ಆಕಾರದಲ್ಲಿ ಚಿಕ್ಕದಾಗಿದ್ದು ಗರ್ಭಗೃಹ ಮತ್ತು ಮುಖಮಂಟಪಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಶಿವಲಿಂಗವಿದೆ. ದೇವಾಲಯದಲ್ಲಿ ಇರುವ ಎರಡು ವೃತ್ತಾಕಾರದ ಕಂಬಗಳು ಅಲಂಕೃತವಾಗಿವೆ. ಗರ್ಭಗೃಹದ ಮೇಲಿನ ಶಿಖರ ಹಾಳಾದಂತೆ ಕಂಡುಬರುತ್ತದೆ.

ಲಕ್ಷ್ಮಿನಾರಾಯಣ ದೇವಾಲಯ: ದೇವಾಲಯಗಳ ಸಂಕೀರ್ಣದಲ್ಲಿ ಇರುವ ಮೂರು ದೇವಾಲಯಗಳಲ್ಲಿ ಲಕ್ಷ್ಮಿನಾರಾಯಣ (ಲಕ್ಷ್ಮೀನರಸಿಂಹ) ದೇವಾಲಯವು ಆಕಾರದಲ್ಲಿ ದೊಡ್ಡದಾಗಿದೆ. ಇಲ್ಲಿಯ  ಕ್ರಿ.ಶ 1189ರ ಶಾಸನದ ಪ್ರಕಾರ ಶಂಕರಸ್ವಾಮಿಯ ಅಜ್ಜ ಚೌಡಿಶೆಟ್ಟಿಯು ಲಕ್ಷ್ಮಿನರಸಿಂಹ ದೇವಾಲಯ ನಿರ್ಮಿಸಿದನೆಂದು ಉಲ್ಲೇಖವಿದೆ. ದೇವಾಲಯವು ಅಂತರಾಳ, ಸಭಾಮಂಟಪ, ಮುಖಮಂಟಪಗಳಿಂದ ಕೂಡಿದೆ.   ಈ ದೇವಾಲಯದಲ್ಲಿ ಇರುವ ವಿಶಾಲವಾದ ಸಭಾಮಂಟಪವು ಹದಿನಾರು ಕಂಬಗಳನ್ನು ಹೊಂದಿದ್ದು ಸುಂದರ ಕೆತ್ತನೆಗಳಿಂದ ಕೂಡಿವೆ.

ಈ ದೇವಾಲಯವು ಮೂರು ಗರ್ಭಗೃಹಗಳನ್ನು ಹೊಂದಿದೆ. ಇಲ್ಲಿಯ ಒಂದು ಗರ್ಭಗೃಹದಲ್ಲಿ ಚಿಕ್ಕದಾದ   ಲಕ್ಷ್ಮಿನಾರಾಯಣ ಮೂರ್ತಿ ಇದೆ.  ಈ ಗರ್ಭಗೃಹದ ಪಕ್ಕದಲ್ಲಿ ಇನ್ನೊಂದು ಗರ್ಭಗೃಹದಲ್ಲಿ ಇತ್ತೀಚೆಗೆ ಪ್ರತಿಷ್ಠಾಪಿಸಿದ ದತ್ತಾತ್ರೇಯನ ವಿಗ್ರಹ ಇದೆ. ಇಲ್ಲಿಯ ಮತ್ತೊಂದು  ಗರ್ಭಗೃಹದಲ್ಲಿ ವಿಠ್ಠಲ-ರುಕ್ಮಿಣಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಈ ದೇವಾಲಯಕ್ಕೆ ಕಾರ್ತಿಕ ಏಕಾದಶಿ ಮತ್ತು ಆಷಾಢ ಏಕಾದಶಿ ದಿನದಂದು ಭಕ್ತರು ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಭಜನೆ ಮಾಡುತ್ತಾರೆ.

ಈ ದೇವಾಲಯದ ಬಲಭಾಗದ ಗರ್ಭಗೃಹದ ಪ್ರವೇಶದ್ವಾರದಲ್ಲಿ ಗಜಲಕ್ಷ್ಮಿ, ಇಳಿಬಿದ್ದ ಪದ್ಮ, ಶಿಖರ ಪಟ್ಟಿಕೆಗಳಿವೆ. ಇಕ್ಕೆಲೆಗಳಲ್ಲಿ ಶಂಖ, ಗದಾ, ಚಕ್ರ ಹಿಡಿದು ನಿಂತಿರುವ ದ್ವಾರಪಾಲಕರು ಮತ್ತು ಚಾಮರಧಾರೆಯರ ಶಿಲ್ಪಗಳಿವೆ.
ಎಡಭಾಗದ ಗರ್ಭಗೃಹದ ಪ್ರವೇಶದ್ವಾರ ಬಲಭಾಗದ ಗರ್ಭಗೃಹದಂತಿದ್ದು ದ್ರಾವಿಡ ಶೈಲಿಯ ಶಿಖರ ಪಟ್ಟಿಕೆಗಳಿವೆ. ಈ ದೇವಾಲಯದಲ್ಲಿರುವ ಸರಪಳಿಯ ಸಾಲುಗಳು, ಘಂಟಾಕಾರದ ಮೇಲಿರುವ ಚಿಕ್ಕ ಶಿಲ್ಪಗಳು ನೋಡಲು ಆಕರ್ಷಣಿಯವಾಗಿವೆ. ಈ ದೇವಾಲಯದ ದಕ್ಷಿಣ ಭಾಗದಲ್ಲಿ ಚಿಕ್ಕ ಪ್ರವೇಶ ದ್ವಾರವಿದ್ದು, ಪೂರ್ವದಲ್ಲಿ ಎರಡು ಪ್ರವೇಶ ದ್ವಾರಗಳಿವೆ.

ಶಿವದೇವಾಲಯ: ಲಕ್ಷ್ಮಿನಾರಾಯಣ ದೇವಾಲಯದ ಉತ್ತರಕ್ಕೆ ಒಂದೇ ಜಗುಲಿಗೆ ಹೊಂದಿಕೊಂಡಂತೆ ಇರುವ ಶಿವ ದೇವಾಲಯವಿದೆ.  ದೇವಾಲಯವನ್ನು ಸ್ಥಳೀಯರು ರಾಮಲಿಂಗ ದೇವಾಲಯ ಎಂತಲೂ ಕರೆಯುತ್ತಾರೆ. ಈ ದೇವಾಲಯವು ಲಕ್ಷ್ಮಿನಾರಾಯಣ ದೇವಾಲಯಕ್ಕಿಂತ ಚಿಕ್ಕದಾಗಿದೆ. ಸುಂದರವಾದ ಶಿಲ್ಪಕಲೆಯಿಂದ ನಿರ್ಮಿಸಲಾಗಿರುವ ದೇವಾಲಯದ ಗರ್ಭಗೃಹದಲ್ಲಿ ಶಿವಲಿಂಗವಿದೆ.

ಈ ಮೂರು ದೇವಾಲಯಗಳ ಸಂಕೀರ್ಣಕ್ಕೆ ಹೊಂದಿಕೊಂಡು ವಿಶಾಲವಾದ ತೆರೆದ ಬಾವಿಯನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ.  ಈ ದೇವಾಲಗಳ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಈ ಬಾವಿಯ ನೀರನ್ನು ಬಳಸಲಾಗುತ್ತಿದ್ದರು ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ. ಅದಕ್ಕೆ ಇಂಬುಕೊಡುವಂತೆ ಇಲ್ಲಿರುವ ಶಿವ (ರಾಮಲಿಂಗ) ದೇವಾಲಯದ ಎದುರಿಗೆ ಪ್ರವೇಶ ದ್ವಾರಕ್ಕೆ ಹೊಂದಿಕೊಂಡು ಬಾವಿಗೆ ಹೋಗಲು ಮೆಟ್ಟಿಲುಗಳಿವೆ.

ಇಲ್ಲಿರುವ ಈ ಮೂರು ದೇವಾಲಯಗಳನ್ನು ಸುಮಾರು 20 ವರ್ಷಗಳಿಂದ  ಗ್ರಾಮದ ಮಹಾದೇವಪ್ಪ ಒಣರೋಟ್ಟಿ ಮತ್ತು ಕಾಶಿನಾಥ ಪತ್ತಾರ ಗ್ರಾಮಸ್ಥರ ಸಹಕಾರದೊಂದಿಗೆ  ದೇವಾಲಯಗಳನ್ನು ಸ್ವಚ್ಛಗೊಳಿಸಿ ದಿನನಿತ್ಯ ಪೂಜೆ ಸಲ್ಲಿಸುವುದರೊಂದಿಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.

ಈ ದೇವಾಲಯ ಸಂಕೀರ್ಣದಲ್ಲಿ ಇರುವ ಶಿವ ದೇವಾಲಯವನ್ನು  2007ರಲ್ಲಿ ಜೀರ್ಣೋದ್ಧಾರಗೊಳಿಸಲಾಗಿದೆ. ಇಲ್ಲಿರುವ ದೇವಾಲಯಗಳು ಪ್ರವಾಸಿಗರ ಆಕರ್ಷಣಿಯ ಸ್ಥಳಗಳಾಗಿದ್ದು ಅವುಗಳ ಮಹತ್ವ ತಿಳಿಸಬೇಕಾದರೆ ಇನ್ನಷ್ಟೂ ಅಭಿವೃದ್ಧಿಗೊಳಿಸಿ ಪ್ರವಾಸಿಗರನ್ನು ಆಕರ್ಷಿಸಬೇಕು. ಅಭಿವೃದ್ಧಿಗೊಳಿಸಿ ಪ್ರವಾಸಿಗರನ್ನು ಆಕರ್ಷಿಸಬೇಕಾದರೆ ಕೂಡಲಸಂಗಮ ಪ್ರಾಧಿಕಾರಕ್ಕೆ ಸೇರಿಸಬೇಕು ಎಂದು ಗ್ರಾಮಸ್ಥರು ಹಲವು ಬಾರಿ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ ಎಂದು  ಮಲ್ಲಿಕಾರ್ಜುನ ಚಿರಲದಿನ್ನಿ, ಶ್ರೀಶೈಲ ಮಾಳಜಿ, ಶ್ರೀಶೈಲ ಹಾದಿಮಾನಿ ಮುಂತಾದವರು ಹೇಳುತ್ತಾರೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT