ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಮಣೆ, ಹೋರಾಟಕ್ಕೆ ಮನ್ನಣೆ

ಆಂಧ್ರಪ್ರದೇಶ ವಿಭಜನೆಗೆ ಭಾರಿ ಬೆಲೆತೆತ್ತ ಕಾಂಗ್ರೆಸ್‌
Last Updated 16 ಮೇ 2014, 19:43 IST
ಅಕ್ಷರ ಗಾತ್ರ

ಪ್ರತ್ಯೇಕ ತೆಲಂಗಾಣಕ್ಕೆ ಹೋರಾಡಿ­ದವರಿಗೆ ಒಂದೆಡೆ ಪಟ್ಟ, ಇನ್ನೊಂದೆಡೆ ‘ಹೊಸ’ ನಾಡು ಕಟ್ಟುವ ಭರವಸೆ ಮೂಡಿಸಿದವರಿಗೆ ಅಧಿಕಾರ.  ಸರ್ಕಾರ ರಚನೆಗೆ ಸಂಖ್ಯಾ ಕೊರತೆ ಇಲ್ಲ. ಮೈತ್ರಿ ಕಸರತ್ತುಗಳ ಅಗತ್ಯವೂ ಇಲ್ಲ. ಇದು ಆಂಧ್ರಪ್ರದೇಶದ ಸ್ಫಟಿಕಸ್ಪಷ್ಟ ಜನಮತ.

ಕಾಂಗ್ರೆಸ್‌ಗೆ ಕಪಾಳಮೋಕ್ಷ: ರಾಜ್ಯ ವಿಭಜನೆ ವಿಚಾರ­ವನ್ನು  ವರ್ಷಾನುಗಟ್ಟಲೆ ಎಳೆದು, ಜನ­ರಲ್ಲೂ ರೇಜಿಗೆ ಮೂಡಿಸಿ ಚುನಾವಣೆ ಸಮೀಪಿಸಿ­ದಾಗ ವಿಭಜನೆ ತೀರ್ಮಾನ ಪ್ರಕಟಿಸಿದ ಕಾಂಗ್ರೆಸ್‌ಗೆ ಮತ­ದಾರರು ಕಪಾಳ ಮೋಕ್ಷ ಮಾಡಿದ್ದಾರೆ. ಸೀಮಾಂಧ್ರ­ದಿಂದ ಕಾಂಗ್ರೆಸ್ ಪಕ್ಷವನ್ನು  ಗುಡಿಸಿ­ಹಾಕಿದ್ದಾರೆ. ಆ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಹೆಸರು ಹೇಳಲು ಕೂಡ ಒಬ್ಬನೇ ಒಬ್ಬ ಶಾಸಕ ಇಲ್ಲ. ಆಂಧ್ರದ ಚುನಾವಣಾ ಚರಿತ್ರೆಯಲ್ಲಿ ಕಾಂಗ್ರೆಸ್ಸಿಗೆ ಇಂತಹ ಹೀನಾತಿ ಹೀನ ಸ್ಥಿತಿ ಎಂದೂ ಒದಗಿರ­ಲಿಲ್ಲ. ಅಲ್ಲಿ ಹೊಸ ಹುಟ್ಟು ಪಡೆಯಬೇಕಾದ ಸವಾಲು ಎದುರಾಗಿದೆ.

ತೆಲಂಗಾಣದಲ್ಲಿ ಆ ಪಕ್ಷ ಉಸಿರು ಉಳಿಸಿ ಕೊಂಡಿದೆ­­ಯಾದರೂ, ‘ತೆಲಂಗಾಣ ಕೊಟ್ಟಿದ್ದು ನಾವು’ ಎಂಬ ನಿನಾದದೊಂದಿಗೆ ರಾಜಕೀಯ ಲಾಭ ಪಡೆಯಲು ಮಾಡಿದ ಪ್ರಯತ್ನಗಳು ಹುಸಿಯಾಗಿವೆ. ತೆಲಂಗಾಣ ರಾಷ್ಟ್ರ ಸಮಿತಿಗೆ (ಟಿಆರ್ಎಸ್)  ಮತ-ದಾರರು ಸರಳ ಬಹುಮತ ನೀಡಿ, ನವ ತೆಲಂಗಾಣ ನಿರ್ಮಾಣದ ಮೊದಲ ಅವಕಾಶವನ್ನು,  ಪ್ರತ್ಯೇಕ ತೆಲಂಗಾಣ ಸಾಧನೆಗಾಗಿ ಹುಟ್ಟಿಕೊಂಡ ಮತ್ತು ಆ ಉದ್ದೇಶಕ್ಕೆ ಹೋರಾಡಿದ ಆ ಪಕ್ಷಕ್ಕೇ ನೀಡಿದ್ದಾರೆ.

ಜೂನ್ 2ರಿಂದ ವಿಧ್ಯುಕ್ತವಾಗಿ ಹೊಸ ರಾಜ್ಯ­ವಾ­ಗ­ಲಿರುವ ತೆಲಂಗಾಣ 119 ವಿಧಾನಸಭಾ ಕ್ಷೇತ್ರ­ಗಳನ್ನು ಒಳ­ಗೊಂಡಿದೆ. 63 ಸ್ಥಾನ ಪಡೆದಿರುವ ಟಿಆರ್ಎಸ್, ತೆಲಂಗಾಣ ರಾಜ್ಯದ ಮೊದಲ ಸರ್ಕಾರ ರಚಿಸಲಿದೆ. ಈ ಚುನಾವಣಾ ಫಲಿತಾಂಶದ  ದಿಕ್ಕು–ದೆಸೆಯಲ್ಲಿ ಭಾವನಾತ್ಮಕ ಅಂಶ ಹೆಚ್ಚಿನ ಮಟ್ಟಿಗೆ ಕೆಲಸ ಮಾಡಿದೆ. ಅದನ್ನು ಪರಿಣಾ­ಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಟಿಆರ್ಎಸ್ ಯಶಸ್ವಿಯಾಗಿದೆ.

ಕಾಂಗ್ರೆಸ್‌ಗೆ ಇಲ್ಲದ ಸಮರ್ಥ ನಾಯಕತ್ವ: ಇಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್‌ ಮತ್ತು ಟಿಆರ್ಎಸ್ ನಡುವೆ ಸಮಬಲದ ಸ್ಪರ್ಧೆ ಇದ್ದಂತೆ ಅನ್ನಿಸಿತ್ತು. ಆದರೆ, ಟಿಆರ್ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್ ಅದನ್ನು ತಮ್ಮ ಪಕ್ಷದ ಪರವಾಗಿ ತಿರುಗಿಸಿ­ಕೊಂಡರು. ಮೊನಚು ಮಾತು ಮತ್ತು ಚುರುಕಿನ ಪ್ರಚಾರ­ದಿಂದ ತೆಲಂಗಾಣ ಜನರಲ್ಲಿ ವಿಶ್ವಾಸ ಚಿಗುರಿಸಿ­ದರು.  ಅದನ್ನು  ಮತವಾಗಿ ಪರಿವರ್ತಿಸಿ­ದರು. ಕೆಸಿಆರ್‌ ಅವರಿಗೆ ಸಾಟಿಯಾಗಬಲ್ಲ ಒಬ್ಬ ನಾಯಕನೂ ಕಾಂಗ್ರೆಸ್ ಪಾಳೆಯದಲ್ಲಿ ಇಲ್ಲದ ಕಾರಣ  ಆ ಪಕ್ಷಕ್ಕೆ ಹಿನ್ನಡೆ­ಯಾಯಿತು. ಚೂರು­ಪಾರು ಪ್ರಭಾವ ಬೀರಬಲ್ಲಂಥ ಕಾಂಗ್ರೆಸ್ಸಿನ ಕೆಲವು  ಪ್ರಮುಖರನ್ನು  ಅವರ ಕ್ಷೇತ್ರಗಳಿಗೇ ಕಟ್ಟಿಹಾಕುವಲ್ಲಿ ಟಿಆರ್‌ಎಸ್ ಯಶಸ್ವಿ­ಯಾಗಿದ್ದೂ ಮತ್ತೊಂದು ತೊಡಕಾಗಿ ಪರಿಣಮಿಸಿತು.

ಕೈಕೊಟ್ಟ ಲೆಕ್ಕ: ರಾಜ್ಯ ವಿಭಜನೆಗೆ ಒಪ್ಪಿದರೆ ಸೀಮಾಂಧ್ರ­ದಲ್ಲಿ ರಾಜಕೀಯವಾಗಿ ಹಿನ್ನಡೆ ಅನು­ಭವಿಸ­ಬೇಕಾಗುತ್ತದೆ ಎಂಬ ಅರಿವು ಕಾಂಗ್ರೆಸ್ಸಿಗೆ ಮೊದಲೇ ಇತ್ತು.  ಆದರೆ, ಅಲ್ಲಿ ಕಳೆದುಕೊಳ್ಳು­ವುದನ್ನು ತೆಲಂಗಾಣದಲ್ಲಿ ಗಳಿಸಬಹುದು ಎಂಬ  ಲೆಕ್ಕಾ­ಚಾರ ಆ ಪಕ್ಷದ ಹಿರಿಯರ­ದಾಗಿತ್ತು. ತೆಲಂಗಾಣ ರಚಿಸಿದರೆ ಕಾಂಗ್ರೆಸ್ಸಿನಲ್ಲಿ ಟಿಆರ್‌ಎಸ್‌ ವಿಲೀನವಾಗಲಿದೆ ಎಂದೂ ನಂಬಿದ್ದರು. ಹಾಗಂತ ಒಂದು ಹಂತದಲ್ಲಿ ಕೆಸಿಆರ್‌ ವಚನ ನೀಡಿದ್ದರು. ಆದರೆ, ನಿರ್ಣಾಯಕ ಘಟ್ಟದಲ್ಲಿ ಉಲ್ಟಾ ಹೊಡೆ­ದರು. ‘ನಂಬಿಕೆ ದ್ರೋಹಿ’ ಎಂದು ಕೆಸಿಆರ್‌ ವಿರುದ್ಧ ಮಾಡಿದ ವಾಗ್ದಾಳಿ ಮತ ತರಲಿಲ್ಲ.

ಯುಪಿಎ–1 ಮತ್ತು ಯುಪಿಎ–2 ಸರ್ಕಾರ ರಚನೆಯಲ್ಲಿ ಆಂಧ್ರದ ಕೊಡುಗೆ ದೊಡ್ಡದು. ಮೂವತ್ತಕ್ಕೂ ಹೆಚ್ಚು ಸಂಸದರನ್ನು ಆರಿಸಿ ಕಳುಹಿಸಿದ್ದ ಕಾಂಗ್ರೆಸ್‌ಗೆ ಈ ಸಲ ದಕ್ಕಿರುವುದು ಬರೀ ಎರಡು ಸ್ಥಾನ.  ಅದೂ ತೆಲಂಗಾಣದಲ್ಲಿ. ಕರ್ನೂಲು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೇಂದ್ರ ಸಚಿವ ಕೋಟ್ಲ ಜಯಸೂರ್ಯಪ್ರಕಾಶ್‌ ರೆಡ್ಡಿ, ಪೆನುಕೊಂಡ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಪಕ್ಷದ ಸೀಮಾಂಧ್ರ ಘಟಕದ ಅಧ್ಯಕ್ಷ ಎನ್.ರಘುವೀರಾರೆಡ್ಡಿ ಸೇರಿದಂತೆ ಘಟಾನುಘಟಿ ಮುಖಂಡರೆಲ್ಲ ಮಣ್ಣು ಮುಕ್ಕಿದ್ದಾರೆ. ಕಾಂಗ್ರೆಸ್‌ ಬಗ್ಗೆ ಸೀಮಾಂಧ್ರದ ಜನರಲ್ಲಿ ಇರುವ ಸಿಟ್ಟನ್ನು ಗಮನಿಸಿದರೆ, ಆ ಪಕ್ಷಕ್ಕೆ ಸದ್ಯದ ಸನಿಹದಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆ­ಗಳೇ ಇಲ್ಲ ಎಂದು ಹೇಳಬೇಕಾಗುತ್ತದೆ.

ಪುಟಿದೆದ್ದ ಟಿಡಿಪಿ: ಹತ್ತು ವರ್ಷ ಅಧಿಕಾರದಿಂದ ಹೊರಗಿದ್ದು ಅಜ್ಞಾತವಾಸ ಅನುಭವಿ­ಸಿದ ತೆಲುಗು­ದೇಶಂ ಪಕ್ಷ (ಟಿಡಿಪಿ) ಪುಟಿದೆದ್ದಿದೆ.  ಸೀಮಾಂಧ್ರ­-ದಲ್ಲಿ ಟಿಡಿಪಿಗೆ ಸ್ಪಷ್ಟ ಬಹುಮತ ನೀಡುವ ಮೂಲಕ ಜನ ಅಭಿವೃದ್ಧಿ ಮಂತ್ರಕ್ಕೆ ಆರತಿ ಬೆಳಗಿದ್ದಾರೆ. ವಿಭಜನೆ ನಂತರ ಹೊಸ ರಾಜಧಾನಿ ಕಟ್ಟುವುದೂ ಸೇರಿದಂತೆ ಉದ್ಯೋಗ ಅವಕಾಶಗಳ ಸೃಷ್ಟಿ ಹಾಗೂ ಹಳಿ ತಪ್ಪಿರುವ ಆಡಳಿತ ವ್ಯವಸ್ಥೆಯನ್ನು ಸರಿದಾರಿಗೆ ತರಲು ನಾರಾ ಚಂದ್ರಬಾಬು ನಾಯ್ಡು ಅವರ ಆಡಳಿತ ಅನುಭವ ನೆರವಿಗೆ ಬರಲಿದೆ ಎಂಬ ಸದಾಶಯ ಇದರ ಹಿಂದೆ ಕೆಲಸ ಮಾಡಿರುವುದು ಸುಸ್ಪಷ್ಟ.

ಪೌರ ಸಂಸ್ಥೆಗಳು ಹಾಗೂ ಜಿಲ್ಲಾ ಮತ್ತು ಮಂಡಳ ಪರಿಷತ್‌ಗಳಿಗೆ ಎರಡು ತಿಂಗಳ ಹಿಂದೆ ನಡೆದ  ಚುನಾವಣೆಯಲ್ಲಿ ಟಿಡಿಪಿ ಮೇಲುಗೈ ಪಡೆ­ದಿತ್ತು. ಆಗ ಬಿಜೆಪಿ ಜತೆ ಮೈತ್ರಿ ಇರಲಿಲ್ಲ. ಅದೇ ‘ಟ್ರೆಂಡ್’ ವಿಧಾನಸಭೆ ಹಾಗೂ ಲೋಕಸಭಾ ಚುನಾ­ವಣೆ­ಯಲ್ಲೂ ಪುನರಾವರ್ತನೆ ಆಗಿರುವುದನ್ನು ಅವಲೋ­ಕಿಸಿದರೆ ತಮ್ಮನ್ನು ಮುನ್ನಡೆ­ಸುವ ಪಕ್ಷ ಯಾವುದಾಗಬೇಕು ಎಂಬುದನ್ನು ಜನ ಮೊದಲೇ ತೀರ್ಮಾನಿಸಿದ್ದರು ಅಂತ ಅನ್ನಿಸುತ್ತದೆ.

ಟಿಡಿಪಿಗೆ ಸ್ಪಷ್ಟ ಬಹುಮತ: ಸೀಮಾಂಧ್ರದ 175 ವಿಧಾನಸಭಾ ಕ್ಷೇತ್ರಗಳಲ್ಲಿ 102 ಸ್ಥಾನ ಪಡೆದು ಟಿಡಿಪಿ ಸ್ಪಷ್ಟ ಬಹುಮತ ಪಡೆದಿದೆ. ರಾಜ್ಯ ವಿಭಜನೆ­ಯಿಂದ ಘಾಸಿಕೊಂಡಿರುವ ಈ ಭಾಗದ  ಜನರು ನಾಯ್ಡು ಅವರಲ್ಲಿ ಭರವಸೆಯ ಬೆಳಕು ಕಂಡಿದ್ದಾರೆ. ಹೈದರಾಬಾದ್ ನಗರವನ್ನು ಹೈಟೆಕ್‌ ನಗರಿಯಾಗಿ ರೂಪಿಸಿದ ಅವರ ಸಾಮರ್ಥ್ಯ ಮತ್ತು ಆಡಳಿತ ದಕ್ಷತೆ ಟಿಡಿಪಿ ಪರ ಅಲೆ ಏಳಲು ಕಾರಣವಾದ ಅಂಶಗಳಲ್ಲಿ ಪ್ರಮುಖವಾಗಿವೆ.

‘ಜಾಬ್‌ ಬೇಕಾದರೆ ಬಾಬು ಬರಬೇಕು’ ಎಂಬ ಘೋಷವಾಕ್ಯ ಯುವ ಪೀಳಿಗೆ ಮೇಲೆ ಪರಿಣಾಮ ಬೀರಿದ್ದು, ಅವರಲ್ಲಿ ಹೆಚ್ಚಿನವರು ಟಿಡಿಪಿ ಕಡೆ ವಾಲಿದ್ದಾರೆ. ರೈತರ ಸಾಲ ಮನ್ನಾ ಅಂತಹ ಜನಪ್ರಿಯ  ಭರವಸೆಗಳೂ ಕೆಲಸ ಮಾಡಿವೆ. ಚುನಾವಣೆ ಘೋಷಣೆಯಾಗುತ್ತಲೇ ಕಾಂಗ್ರೆಸ್ ಮುಖಂಡರಲ್ಲಿ ಹಲವರು ಟಿಡಿಪಿಗೆ ಜಿಗಿದರು. ಸ್ಥಳೀಯ ಅಗತ್ಯಗಳನ್ನು ಪರಿಗಣಿಸಿ ಅವರನ್ನು ನಾಯ್ಡು ಬರಮಾಡಿಕೊಂಡರು. ನಾಯಕತ್ವ ಕೊರತೆ ಇರುವ ಕಡೆ ಇವರ ಮೂಲಕ ಅದನ್ನು ತುಂಬಿ­ಕೊಂಡರು.  ಇದರ ಅಗತ್ಯವನ್ನು ಕಾರ್ಯಕರ್ತರಿಗೆ ಮನದಟ್ಟು ಮಾಡಿಸುವಲ್ಲಿಯೂ ಯಶಸ್ವಿ­ಯಾಗಿದ್ದು ಬಹುಮತ ಗಳಿಕೆಗೆ ನೆರವಾಯಿತು.

ಮತ ವಿಭಜನೆಯಿಂದ ಕಳೆದ ಚುನಾವಣೆಯಲ್ಲಿ ಟಿಡಿಪಿ ಭಾರೀ ದಂಡ ತೆತ್ತಿತ್ತು. ಆ ಅನುಭವದ ಪಾಠ, ಬಿಜೆಪಿ ಜತೆ ಮೈತ್ರಿಗೆ ದಾರಿ ಮಾಡಿತು. ಸೀಮಾಂಧ್ರ ಜನರ ಭಾವಕೋಶದಲ್ಲಿ ಬಿಜೆಪಿ ಅಷ್ಟಾಗಿ ಬೆರೆತಿಲ್ಲ­ವಾದರೂ ಮತ ವಿಭಜನೆ ತಪ್ಪಿಸುವ ಉದ್ದೇಶದಿಂದ ಆ ಪಕ್ಷಕ್ಕೆ 13 ಕ್ಷೇತ್ರ ಬಿಟ್ಟುಕೊಟ್ಟರು. ಈ ಮೈತ್ರಿ ಕೂಟದ ಪರ ನರೇಂದ್ರ ಮೋದಿ ಹಾಗೂ ನಟ ಪವನ್ ಕಲ್ಯಾಣ್ ಪ್ರಚಾರ ನಡೆಸಿದ್ದು ಸ್ವಲ್ಪ­ಮಟ್ಟಿಗೆ ಅನು­ಕೂಲ­ವಾಗಿದೆ. ಕಮ್ಮ, ಕಾಪು ಮತ್ತು ಇತರ ಹಲವು ಹಿಂದುಳಿದ ವರ್ಗಗಳು ಟಿಡಿಪಿಗೆ ಬೆಂಬಲ­ವಾಗಿ ನಿಂತಿದ್ದವು. ಇಂತಹ­ದೊಂದು ಸಾಮಾಜಿಕ ಸಮೀಕರಣ ಟಿಡಿಪಿಗೆ ಭೀಮಬಲ ತುಂಬಿತು.

ತೆಲಂಗಾಣದಲ್ಲೂ ಟಿಡಿಪಿ ತನ್ನ ಶಕ್ತಿ ಪ್ರದರ್ಶಿಸಿದೆ. ಟಿಡಿಪಿ–ಬಿಜೆಪಿ ಮೈತ್ರಿ­ಕೂಟವು ಸರಿಸುಮಾರು ಕಾಂಗ್ರೆಸ್ ಪಡೆದಿರುವಷ್ಟೇ ಸ್ಥಾನಗಳನ್ನು ಪಡೆದಿದೆ. ತೆಲಂಗಾಣ­ದಲ್ಲಿ ಟಿಡಿಪಿ ಅಸ್ತಿತ್ವದ ಕುರಿತು ಎದ್ದಿದ್ದ ಅನುಮಾನಗಳಿಗೆ ಇದರಿಂದ ತೆರೆಬಿದ್ದಿದೆ.
ವಿಶ್ವಾಸ ಗಳಿಸದ ಜಗನ್‌: ವೈಎಸ್ಆರ್‌ ಕಾಂಗ್ರೆಸ್‌ ಪಕ್ಷದ ವೈ.ಎಸ್.ಜಗನ್ಮೋಹನ್ ರೆಡ್ಡಿ ಅವರು ಅಬ್ಬರದ ಪ್ರಚಾರ ನಡೆಸಿದರು. ‘ರಾಜಣ್ಣ ರಾಜ್ಯಂ’ (ತಮ್ಮ ತಂದೆ ವೈ.ಎಸ್.ರಾಜಶೇಖರ ರೆಡ್ಡಿ ಅವರ ಆಡಳಿತ) ತರುವ ಭರವಸೆಯನ್ನೂ ನೀಡಿದರು. ಆದರೆ ಜೈಲಿಗೆ ಹೋಗಿ ಬಂದದ್ದು ಹಾಗೂ ಅಕ್ರಮ ಆಸ್ತಿ ಗಳಿಕೆ ಸೇರಿದಂತೆ ವಿವಿಧ ಆರೋಪಗಳಿಂದ ಮುಕ್ತರಾಗದಿರುವುದರಿಂದ ಜಗನ್‌ ಅವರ ಬಗ್ಗೆ ಜನರಲ್ಲಿ ವಿಶ್ವಾಸ ಕುದುರಲಿಲ್ಲ.

ತಮ್ಮ ತಂದೆಯ ನೆನಪನ್ನು ಜನರ ಮನದಲ್ಲಿ ಜೀವಂತವಾಗಿರಿಸಿ, ಅನು­ಕಂಪದ ಅಲೆಯಲ್ಲಿ ಜಯ ಸಾಧಿಸುವ ಜಗನ್ ಲೆಕ್ಕಾಚಾರ ಕೈಕೊಟ್ಟಿದೆ. ತಮ್ಮ ತಾಯಿ ವಿಜಯಲಕ್ಷ್ಮಿ ಅವರನ್ನು ವಿಶಾಖಪಟ್ಟಣಂ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸಿ ಉತ್ತರಾಂಧ್ರದಲ್ಲಿ ನೆಲೆ ವಿಸ್ತರಿಸುವ ಪ್ರಯತ್ನವೂ ವಿಫಲವಾಗಿದೆ.

ಅಣ್ಣ–ತಮ್ಮಂದಿರು (ಸೀಮಾಂಧ್ರ,   ತೆಲಂಗಾಣ) ಬೇರಾಗಲಿದ್ದಾರೆ. ಹೊಸ ಬದುಕು ಕಟ್ಟಿಕೊಳ್ಳ­ಬೇಕಿದೆ. ಅಣ್ಣ ಅಭಿವೃದ್ಧಿಯ ಭರವಸೆಗೆ ಮನಸೋತಿ­ದ್ದಾನೆ. ತಮ್ಮ ಹೋರಾಟಗಾರನಿಗೆ ಮಣೆ ಹಾಕಿ­ದ್ದಾನೆ. ಆರಿಸಿ ಬಂದವರು ಜನರಿಗೆ ಎಷ್ಟರಮಟ್ಟಿಗೆ ಉತ್ತರದಾಯಿ ಆಗುತ್ತಾರೆ ಎಂಬುದಕ್ಕೆ ಕಾಲವೇ ಉತ್ತರ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT