ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಮತ ಕೊಡಿ: ಸಿಎಂ ಮನವಿ

Last Updated 3 ಏಪ್ರಿಲ್ 2011, 9:35 IST
ಅಕ್ಷರ ಗಾತ್ರ

ಬಂಗಾರಪೇಟೆ: ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ 80 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಬಂಗಾರಪೇಟೆಯನ್ನು ಮಾದರಿ ಕ್ಷೇತ್ರವನ್ನು ಮಾಡಲು ಅಗತ್ಯವಿರುವ ಎಲ್ಲ ಸೌಲಭ್ಯ ಕೊಡಲಾಗುವುದು. ಹೀಗಾಗಿ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮತ ಕೊಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದರು.

ಪಟ್ಟಣಕ್ಕೆ ಶನಿವಾರ ಭೇಟಿ ನೀಡಿ ಚುನಾವಣಾ ಪ್ರಚಾರದ ರೋಡ್ ಶೋನಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಭಿವೃದ್ಧಿಯನ್ನೆ ಆಡಳಿತ ಮಂತ್ರ ಮಾಡಿಕೊಂಡಿರುವ ಬಿಜೆಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಸಲ್ಲದ ಪ್ರಚಾರ ನಡೆಸುತ್ತಿವೆ. ಅದಕ್ಕೆ ಕಿವಿಗೊಡಬೇಡಿ ಎಂದು ಕರೆ ನೀಡಿದರು. ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ಅವರು ತಮ್ಮ ಮಾತಿನುದ್ದಕ್ಕೂ ಆಕ್ರೋಶ ವ್ಯಕ್ತಪಡಿಸಿದರು.

ಕಾಡಿದ ಕ್ರಿಕೆಟ್: ರೋಡ್‌ಶೋಗೆ ಬಂದ ಮುಖ್ಯಮಂತ್ರಿಯನ್ನು ವಿಶ್ವಕಪ್ ಕ್ರಿಕೆಟ್‌ನ ಅಂತಿಮ ಪಂದ್ಯವೂ ಹಿಮ್ಮೆಟ್ಟಿಸಿತು. ಪಟ್ಟಣ ಪೂರ್ತಿ ರೋಡ್ ಶೋ ಮಾಡುವುದು ಸದ್ಯಕ್ಕೆ ಬೇಡ. ಸಮಯಾವಕಾಶ ತುಂಬಾ ಕಡಿಮೆ ಇದೆ. ಎಲ್ಲ ರಸ್ತೆಗಳಲ್ಲಿ ರೋಡ್ ಶೋ ಮಾಡುವುದಕ್ಕಾಗಿಯೇ ಇನ್ನೊಮ್ಮೆ ಬರುತ್ತೇನೆ. ಆಗ ಪಟ್ಟಣದ ಬಸವೇಶ್ವರ ದೇವಸ್ಥಾನಕ್ಕೂ ಭೇಟಿ ನೀಡುತ್ತೇನೆ. ಮಧ್ಯಾಹ್ನ 2.30ಕ್ಕೆ ಕ್ರಿಕೆಟ್ ಪಂದ್ಯ ಶುರುವಾಗುವುದರಿಂದ ಎಲ್ಲರ ಗಮನ ಆ ಕಡೆಗೆ  ಇರುತ್ತದೆ. ಕಾರ್ಯಕ್ರಮಕ್ಕೆ ಜನ ಇಲ್ಲದಾಗುತ್ತದೆ. ಆದ್ದರಿಂದ 2.30 ಸಮೀಪಿಸುವ ಒಳಗೆ ಆದಷ್ಟೂ ಊರು ಸುತ್ತಾಡಬೇಕಿದೆ ಎಂದು  ಭಾಷಣದಲ್ಲಿ ಹೇಳಿದರು.

ಪೂರ್ವ ನಿಯೋಜಿತ ಕಾರ್ಯಕ್ರಮದ ಪಟ್ಟಿಯಂತೆ ಅವರು ಬೆಳಗ್ಗೆ 10.30ಕ್ಕೆ ಪಟ್ಟಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಾದ ನಂದಿ ವೃತ್ತ, ಬಜಾರ್ ರಸ್ತೆ ಮಾರ್ಗವಾಗಿ ಬಸ್ ನಿಲ್ದಾಣಕ್ಕೆ ತಲುಪಬೇಕಿತ್ತು. ಆದರೆ ಅವರು ಪಟ್ಟಣವನ್ನು ತಲುಪುವ ವೇಳೆಗಾಗಲೇ ಮಧ್ಯಾಹ್ನ 12.15 ಮೀರಿತ್ತು. ಹೀಗಾಗಿ ಕ್ಷೇತ್ರದ ಉಳಿದ ಸ್ಥಳಗಳಾದ ಬೂದಿಕೋಟೆ, ಕಾಮಸಮುದ್ರಕ್ಕೆ ಹೋಗಿ ಬರಲು ಸಮಯಾವಕಾಶ ಕೊರತೆ ಹಿನ್ನೆಲೆಯಲ್ಲಿ ಅವರು ಕುವೆಂಪು ವೃತ್ತಕ್ಕೆ ರೋಡ್ ಶೋ ಮೊಟಕುಗೊಳಿಸಿದರು. ನಂತರ ಬೂದಿಕೋಟೆಗೆ ತೆರಳಿದರು.

ಮೊದಲಿಗೆ ಪಟ್ಟಣದ ಪ್ರಸಿದ್ಧ ದರ್ಗಾಕ್ಕೆ ಭೇಟಿ ನೀಡಿದ ಅವರು ನಂತರ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಡು ಮಧ್ಯಾಹ್ನ ಸಮೀಪಿಸಿದ್ದರಿಂದ ಸುಡುಬಿಸಿಲು ಕಾರ್ಯಕರ್ತರನ್ನು ಕಾಡಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮುಖಂಡರೊಬ್ಬರು ಛತ್ರಿ ಹಿಡಿದರು.    ಸಚಿವರಾದ ಶೋಭಾ ಕರಂದ್ಲಾಜೆ,            ಆರ್.ಅಶೋಕ, ಎ.ನಾರಾಯಣಸ್ವಾಮಿ, ಶಾಸಕರಾದ ಎಸ್.ಎನ್.ಕೃಷ್ಣಯ್ಯಶೆಟ್ಟಿ, ಡಿ.ಎಸ್.ವೀರಯ್ಯ, ವಿಜಯಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಜುಳ, ತಾ.ಪಂ. ಅಧ್ಯಕ್ಷೆ ತೇಜಾ, ಉಪಾಧ್ಯಕ್ಷ ಅಮರೇಶ್, ಮಾಜಿ ಶಾಸಕ ಬಿ.ಪಿ.ವೆಂಕಟ ಮುನಿಯಪ್ಪ, ಅಭ್ಯರ್ಥಿ ಎಂ.ನಾರಾಯಣಸ್ವಾಮಿ, ಜಿಲ್ಲಾ ಘಟಕ ಅಧ್ಯಕ್ಷ ಎನ್.ಲಕ್ಷ್ಮಯ್ಯ, ತಾಲ್ಲೂಕು ಘಟಕ ಅಧ್ಯಕ್ಷ ಕೃಷ್ಣೇಗೌಡ, ಬುಲೆಟ್ ನಾಗರಾಜ್, ಪುರಸಭೆ ಸದಸ್ಯ ಶಶಿಕುಮಾರ್, ರಮೇಶ್ ಹಾಜರಿದ್ದರು.

ಅಸಮಾಧಾನ: ರೋಡ್ ಶೋ ಸಂದರ್ಭದಲ್ಲಿ ಕಾರ್ಯಕರ್ತರ ಸಂಖ್ಯೆ ತೀರಾ ಕಡಿಮೆ ಇರುವುದನ್ನು ಕಂಡು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.
ಹೀಗಾಗಿ ಅವರು ನೇರವಾಗಿ ಪಟ್ಟಣದ ಹೊರವಲಯದಲ್ಲಿನ ರೆಸಾರ್ಟ್‌ವೊಂದಕ್ಕೆ ಹೋಗಿ ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸುವಂತೆ ಸೂಚಿಸಿದರು.
 ರೆಸಾರ್ಟ್‌ನಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಳೆದ ಅವರು ಜನ ಸೇರಿದ್ದಾರೆ ಎಂದು ವರದಿ ಬಂದ ನಂತರ ಕಾರ್ಯಕ್ರಮದ ಸ್ಥಳಕ್ಕೆ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT