ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಮುನಿದ ಮುನಿಯೂರು

Last Updated 22 ಜನವರಿ 2011, 7:30 IST
ಅಕ್ಷರ ಗಾತ್ರ

ತುರುವೇಕೆರೆ: ಜಿ.ಪಂ ಚುನಾವಣೆಯಲ್ಲಿ ಜಿದ್ದಾಜಿದ್ದಿ ಹೋರಾಟದಿಂದ ಗಮನ ಸೆಳೆದಿದ್ದ ಮುನಿಯೂರು ಗ್ರಾಮ ಅಭಿವೃದ್ಧಿ ದೃಷ್ಟಿಯಿಂದ ಹಿಂದೆ ಬಿದ್ದಿದೆ.ಮುನಿಯೂರು ನೇಕಾರಿಕೆ ಹಾಗೂ ಮೂಡಲಪಾಯ ಯಕ್ಷಗಾನಕ್ಕೆ ಹೆಸರಾದ ಊರು. ಆದರೆ ಗ್ರಾಮದ ಚರಂಡಿಗಳು ಕೊಳಚೆಯಿಂದ ತುಂಬಿ ತುಳುಕುತ್ತಿವೆ. ಕಾಲಕಾಲಕ್ಕೆ ಶುಚಿಗೊಳಿಸದ ಕಾರಣ ಕೊಳಚೆ ಗ್ರಾಮದ ರಸ್ತೆ ರಸ್ತೆಗಳಲ್ಲೂ ಉಕ್ಕಿ ಹರಿಯುತ್ತಿದೆ. ಊರಿನ ಹಿರಿಯ ಪ್ರಾಥಮಿಕ ಶಾಲೆಯನ್ನು ಕೇಳುವವರೇ ಇಲ್ಲ. 12 ವರ್ಷದ ಹಿಂದೆ ಹೊಸದಾಗಿ ಕಟ್ಟಿದ ಕೊಠಡಿ ಒಂದು ದಿನವೂ ಉಪಯೋಗಕ್ಕೆ ಬಾರದೆ ಪಾಳು ಬಿದ್ದಿದೆ.

ನೀರು ಪೂರೈಕೆಗೆಂದು ಸುಮಾರು 15 ವರ್ಷಗಳ ಹಿಂದೆ ಕಟ್ಟಿದ ಟ್ಯಾಂಕ್‌ನಲ್ಲಿ ಕೊಳಾಯಿ ಕಾಮಗಾರಿ ಅಸ್ತವ್ಯಸ್ಥಗೊಂಡಿರುವುದರಿಂದ ಒಂದು ದಿನವೂ ನೀರು ತುಂಬಿಸಿಲ್ಲ. ಹಾಗೆಂದು ಗ್ರಾಮದಲ್ಲಿ ನೀರಿನ ಕೊರತೆಯೇನೂ ಇಲ್ಲ. ಗ್ರಾಮದ ಆಸು ಪಾಸಿನಲ್ಲಿರುವ ನಾಲ್ಕು ಬೋರ್‌ಗಳಿಗೆ ಮೋಟಾರ್ ಅಳವಡಿಸಲಾಗಿದೆ. ಇದರಿಂದ ಪಂಪ್ ಆಗುವ ನೀರು ದಿನಪೂರ್ತಿ ಗ್ರಾಮದ ನಲ್ಲಿ ನಲ್ಲಿಗಳಲ್ಲಿ ಯಥೇಚ್ಛವಾಗಿ ಹರಿದು ಹೋಗುತ್ತಿದೆ. 

ಮುನಿಯೂರಿನ ಬಡಾವಣೆಯಾದ ವಿವೇಕಾನಂದ ನಗರದಲ್ಲಿ ಕಳೆದ 8 ವರ್ಷಗಳ ಹಿಂದೆ ಪ್ರಾರಂಭವಾದ ಅಂಬೇಡ್ಕರ್ ಭವನ ಕಾಮಗಾರಿ ಚಾವಣಿ ಹಂತದಲ್ಲಿಯೇ ನೆನೆಗುದಿಗೆ ಬಿದ್ದಿದೆ. ಇದೇ ಗ್ರಾಮದಲ್ಲಿ ಒಂದು ವರುಷದ ಹಿಂದೆ ಕಟ್ಟಿದ ಅಂಗನವಾಡಿ ಕಟ್ಟಡ ಸಣ್ಣ ಮಳೆಗೂ ಧಾರಾಕಾರವಾಗಿ ಸೋರುತ್ತಿದೆ. ಒಳಗೆ ಮಕ್ಕಳನ್ನು ಕೂರಿಸುವುದು ಹೇಗೆ ಎಂಬ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಅನುದಾನದ ಕೊರತೆಯಿದೆ ಎನ್ನುತ್ತಾರೆ ಗ್ರಾ.ಪಂ ಸದಸ್ಯ ಕೀರ್ತಿ.

ಹಿಂದೊಮ್ಮೆ ಸ್ವಚ್ಛ ಗ್ರಾಮ ಯೋಜನೆಯಡಿ ಗುರುತಿಸಲ್ಪಟ್ಟಿದ್ದ ಮುನಿಯೂರಿನಲ್ಲಿ ಕಾಮಗಾರಿಗಳು ಅರ್ಧ ಆಗಿ ಸ್ಥಗಿತಗೊಂಡವು ಎನ್ನುತ್ತಾರೆ ತಾ.ಪಂ ಮಾಜಿ ಸದಸ್ಯ ಕರಿಬಸವಯ್ಯ. ಅಲ್ಲದೆ ಇದು ಮಾಜಿ ಶಾಸಕ ಮತ್ತು ಕೈಮಗ್ಗ ನಿಗಮದ ಅಧ್ಯಕ್ಷರಾದ ಎಂ.ಡಿ.ಲಕ್ಷ್ಮೀನಾರಾಯಣ ಅವರ ಸ್ವಂತ ಗ್ರಾಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT