ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯ ಹರಿಕಾರ

Last Updated 11 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವ್ಯಕ್ತಿ
ಥಟ್ಟನೆ ನೋಡಿದರೆ ವಿಜ್ಞಾನಿ ಅಥವಾ ಬುದ್ಧಿಜೀವಿ ಇರಬೇಕು ಎಂಬಂತಹ ಭಾವ ಹುಟ್ಟಿಸುವ  69ರ ಹರಯದ ಸ್ಯಾಮ್ ಪಿತ್ರೋಡಾ ನಿಜವಾದ ಅರ್ಥದಲ್ಲಿ ಅಭಿವೃದ್ಧಿಯ ಹರಿಕಾರ. ಈಗ ಅವರು ಮತ್ತೊಂದು ಕ್ರಾಂತಿಯ ತವಕದಲ್ಲಿದ್ದಾರೆ.

ತಲೆತುಂಬಾ ನೆರೆಗೂದಲನ್ನು ಇಳಿಬಿಟ್ಟುಕೊಂಡು ಅದಕ್ಕೆ ತದ್ವಿರುದ್ಧ ಎಂಬಂತೆ ಕಡುಕಪ್ಪಿನ ಫ್ರೆಂಚ್ ಗಡ್ಡದಲ್ಲಿ ಕಂಗೊಳಿಸುವ ಸತ್ಯನಾರಾಯಣ ಗಂಗಾರಾಮ್ ಪಿತ್ರೋಡಾ ಆಧುನಿಕ ಭಾರತದ ಸಂವಹನ ಕ್ಷೇತ್ರದ ಸುಧಾರಣೆಯ ಹರಿಕಾರ. ಅಮೆರಿಕ ನಿವಾಸಿಯಾಗಿ ವಾಣಿಜ್ಯೋದ್ಯಮದಲ್ಲೂ ಛಾಪು ಮೂಡಿಸಿದ ಧೀಮಂತ.
 
ಕಾಂಗ್ರೆಸ್‌ನ ಪ್ರೀತಿಪಾತ್ರ ನೀತಿ ನಿರೂಪಕ. ಸದಾ ಹೊಸತನಗಳ ಹುಡುಕಾಟದಲ್ಲಿ ತನ್ನ ತಾಯ್ನೆಲಕ್ಕಾಗಿ, ಶ್ರೀಸಾಮಾನ್ಯರಿಗಾಗಿ ಏನಾದರೂ ಒಳಿತು ಮಾಡಬೇಕೆಂಬ ತಹತಹವುಳ್ಳ ಮೇಧಾವಿ ತಂತ್ರಜ್ಞ.

ದೂರವಾಣಿ ಸಂಪರ್ಕ ಕ್ಷೇತ್ರದಲ್ಲಿ ಭಾರತದ ರಾಜಕಾರಣಿಗಳು 50 ವರ್ಷಗಳಲ್ಲಿ ಮಾಡದಂತಹ ಕೆಲಸವನ್ನು ಕೇವಲ ಐದೇ ಐದು ವರ್ಷಗಳಲ್ಲಿ ಸಾಧಿಸಿ ತೋರಿಸಿದ ಛಲಗಾರ. ಇಂತಹ ಛಲದ ಪರಿಣಾಮವೇ ಭಾರತದ ಹಳ್ಳಿ ಹಳ್ಳಿಗಳ್ಲ್ಲಲ್ಲೂ ಇವತ್ತು ದೂರವಾಣಿ ಕೈಗೆಟಕುವ ದರದಲ್ಲಿ ರಿಂಗಣಿಸುತ್ತಿದೆ. ಅಷ್ಟೇ ಅಲ್ಲ ಭಾರತದ ವಿದೇಶಿ ದೂರಸಂಪರ್ಕ ನೀತಿ ಎಷ್ಟು ಜವಾಬ್ದಾರಿಯುತ ಆಗಿರಬೇಕು ಎಂಬುದಕ್ಕೂ ತನ್ನದೇ ಆದ ಭಾಷ್ಯವನ್ನು ಬೆನ್ನಿಗಿಟ್ಟುಕೊಂಡು ಬೆಳೆಯುತ್ತಿದೆ.

ಭಾರತಕ್ಕೆ ಧರ್ಮ ಶ್ರೇಷ್ಠವಲ್ಲ, ತಂತ್ರಜ್ಞಾನ ಮುಖ್ಯ ಎಂಬ ಅದಮ್ಯ ನಂಬಿಕೆ ಹೊಂದಿರುವ  ಪಿತ್ರೋಡಾ ಅವರ ವೃತ್ತಿ ದೂರಸಂಪರ್ಕ ಎಂಜಿನಿಯರಿಂಗ್. ಅನ್ವೇಷಣೆ, ಅಭಿವೃದ್ಧಿ ಹಾಗೂ ಉದ್ಯಮಶೀಲತಾ ವಲಯಗಳು ಅವರ ಆಸಕ್ತಿ.

ಭಾರತದಲ್ಲಿನ ದೂರವಾಣಿ ಮತ್ತು ಸಂವಹನ ಕ್ಷೇತ್ರದಲ್ಲಿ ಪಿತ್ರೋಡಾ ಸಾಧಿಸಿದ ಕ್ರಾಂತಿ ಈಗ ಹಳೆಯ ಮಾತು. ಅವರೀಗ ದೇಶದ ಮತ್ತೊಂದು ಪ್ರಭಾವಿ ವಲಯ ಎನಿಸಿರುವ ರೈಲ್ವೆ ಸುಧಾರಣೆಯತ್ತ ಕಣ್ಣು ನೆಟ್ಟಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರವೇ ಭಾರತದ ರೈಲ್ವೆ ಇಲಾಖೆಯನ್ನು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವಕ್ಕೆ ಒಳಪಡಿಸುವ ಕುರಿತ ಚಿಂತನೆ ಮತ್ತೊಂದು ಅಭಿವೃದ್ಧಿಯ ವಿಪ್ಲವಕ್ಕೆ ತಿದಿ ಒತ್ತಲಿದೆ.

ರೈಲ್ವೆ ಜಾಲದ ಆಧುನೀಕರಣ ಹೇಗಿರಬೇಕು ಎಂಬ ಬಗ್ಗೆ  ಸ್ಯಾಮ್ ಪಿತ್ರೋಡಾ ನೇತೃತ್ವದ ಸಮಿತಿ ಇನ್ನೊಂದೆರಡು ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ತನ್ನ ಶಿಫಾರಸುಗಳನ್ನು ಸಲ್ಲಿಸಲಿದೆ. ಈ ವರದಿಯ ಅನುಸಾರ ಮುಂದಿನ ಐದು ವರ್ಷಗಳಲ್ಲಿ ರೈಲ್ವೆ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆಗಳು ನಡೆಯಬೇಕೆಂಬ ಇರಾದೆಯಿದೆ.

ಇದಕ್ಕಾಗಿ ಮುಂದಿನ ಐದು ವರ್ಷಗಳಲ್ಲಿ 50 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಅವಶ್ಯಕತೆ ಇದೆ ಎಂದೂ ಸಮಿತಿ ಅಂದಾಜು ಮಾಡಿದೆ.
ಸಮಿತಿಯ ಪ್ರಸ್ತಾವದ ಅನುಸಾರ ಭಾರತೀಯ ರೈಲ್ವೆ ಇಲಾಖೆಯಲ್ಲಿ 3 ಲಕ್ಷದ 58 ಸಾವಿರ ಕೋಟಿ ರೂಪಾಯಿಗಳ ಬೃಹತ್ ಬಂಡವಾಳ ಹೂಡಿಕೆಗೆ ಅವಕಾಶವಿದೆ.

ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ರೈಲ್ವೆ ಇಲಾಖೆಯನ್ನು ಮುನ್ನಡೆಸಿದರೆ ದೇಶದ ಚಿತ್ರಣವೇ ಬದಲಾಗಲಿದೆ ಎಂಬ ಆಶಯ ಸರ್ಕಾರದ್ದು. ಹಾಗಾಗಿಯೇ 12ನೇ ಪಂಚವಾರ್ಷಿಕ ಯೋಜನೆಯ ಆರಂಭಕ್ಕೆ ಸರಿ ಹೊಂದುವಂತೆ ಮುಂದಿನ ಆರ್ಥಿಕ ವರ್ಷದಲ್ಲಿ ರೈಲ್ವೆ ಇಲಾಖೆಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಹೇಗಿರಬೇಕೆಂಬುದನ್ನು ಇದರಲ್ಲಿ ಸಮಗ್ರವಾಗಿ ಚಿತ್ರಿಸಲಾಗಿದೆ.

ಹೌದು ಈ ಎಲ್ಲಾ ಮಹತ್ವದ ಶಿಫಾರಸುಗಳ ಮೆದುಳು ಸ್ಯಾಮ್ ಪಿತ್ರೋಡಾ. ಒಡಿಶಾದ ತಿತ್ಲಾಗಡದಲ್ಲಿ 1942ರ ಮೇ 4ರಂದು ಇವರ ಜನನ. ಪಿತ್ರೋಡಾ ಅವರ ಪೂರ್ವಜರು ಮೂಲತಃ ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯವರು. ಇಡೀ ಕುಟುಂಬವೇ ಮಹಾತ್ಮ ಗಾಂಧೀಜಿ ಪ್ರಭಾವಕ್ಕೆ ಒಳಗಾಗಿ ಅದೇ ನಡೆನುಡಿಯನ್ನು ಪಾಲಿಸಿಕೊಂಡು ಬಂತು.

ಪಿತ್ರೋಡಾ ತಮ್ಮ ಶಾಲಾ ವಿದ್ಯಾಭ್ಯಾಸವನ್ನು ಗುಜರಾತ್‌ನ ವಲ್ಲಭ ವಿದ್ಯಾನಗರದಲ್ಲಿ ಪೂರೈಸಿದರು. ಮುಂದೆ ಭೌತಶಾಸ್ತ್ರ ವಿಷಯದಲ್ಲಿ ಬರೋಡದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು.
 
ತದನಂತರ ಅಮೆರಿಕಕ್ಕೆ ತೆರಳಿದ ಇವರು ಷಿಕಾಗೋದ ಇಲಿನಾಯ್ಸ ತಾಂತ್ರಿಕ ವಿಶ್ವವಿದ್ಯಾಲಯದಿಂದ ಇಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಸಂಪಾದಿಸಿದರು. ಇದೇ ವಿಶ್ವವಿದ್ಯಾಲಯದಿಂದ 2010ರಲ್ಲಿ ಗೌರವ ಡಾಕ್ಟರೇಟ್ ದೊರೆತದ್ದು ಇವರ ಸೈಂಧವ ಪ್ರತಿಭೆಯ ಹೆಗ್ಗಳಿಕೆ.

2005ರಿಂದ 2008ರಲ್ಲಿ ಜ್ಞಾನ ಆಯೋಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಸ್ಯಾಮ್ ಪಿತ್ರೋಡಾ ನಿಸ್ಸಂಶಯವಾಗಿ ಕಾಂಗ್ರೆಸ್ ಖಜಾನೆಯ ಅನರ್ಘ್ಯ ರತ್ನ. ಜ್ಞಾನ ಆಯೋಗದ ಅಧ್ಯಕ್ಷರಾಗಿದ್ದಾಗ ದೇಶದ ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತು ಇದಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಮೂಲ ಸೌಕರ್ಯ ಹೇಗಿರಬೇಕೆಂಬ ಬಗ್ಗೆ ವ್ಯಾಪಕ ಕಲ್ಪನೆಯನ್ನು ದಕ್ಕಿಸಿಕೊಟ್ಟರು.

ಹೊಸ ಹೊಸ ತಂತ್ರಜ್ಞಾನದ ಅನ್ವೇಷಣೆ ಮತ್ತು ಇವಕ್ಕೆ ತಕ್ಕ ಗ್ರಾಹಕರ ನಡುವಿನ ಅಭಿವೃದ್ಧಿ ಪಥ ಹೇಗಿರಬೇಕೆಂಬುದಕ್ಕೆ ಒತ್ತು ಕೊಟ್ಟು ಸ್ಥಾಪಿಸಲಾಗಿರುವ ಸ್ಯಾಮ್ ಪಿತ್ರೋಡಾ ಅವರ `ಸಿ-ಎಸ್‌ಎಎಮ್~ ಹೆಸರಿನ ಕಂಪೆನಿ ವಿಶ್ವದ ತಾಂತ್ರಿಕ ಅಭಿವೃದ್ಧಿ ಮತ್ತು ಅನ್ವೇಷಣಾ ಭೂಪಟದಲ್ಲಿ ತನ್ನದೇ ಆದ ಛಾಪು ಒತ್ತಿದೆ. ಷಿಕಾಗೋ, ಲಂಡನ್, ಟೋಕಿಯೊ, ಮುಂಬೈ ಮತ್ತು ಬರೋಡಗಳಲ್ಲಿ ಇದರ ಕಚೇರಿಯಿದೆ.

1992ಕ್ಕೂ ಮುನ್ನ 1960 ಮತ್ತು 70ರ ದಶಕದಲ್ಲಿ ಅಮೆರಿಕದಲ್ಲಿ ನೆಲೆಸಿದ್ದ ಪಿತ್ರೋಡಾ ದೂರವಾಣಿ ಕ್ಷೇತ್ರದಲ್ಲಿ ಅವ್ಯಾಹತ ಸಂಶೋಧನೆ ಕೈಗೊಂಡರು. 1975ರಲ್ಲಿ ಇವರು ಸ್ಥಾಪಿಸಿದ ವೆಸ್ಕಾಮ್ ಸ್ವಿಚ್ಚಿಂಗ್ ಕಂಪೆನಿ ವಿಶ್ವದಲ್ಲೇ ಮೊದಲ  ಡಿಜಿಟಲ್ ಸ್ವಿಚ್ಚಿಂಗ್ ಕಂಪೆನಿ ಎಂಬ ಖ್ಯಾತಿ ಪಡೆಯಿತು.

40 ವರ್ಷಗಳ ದೂರಸಂಪರ್ಕ ಕ್ಷೇತ್ರದಲ್ಲಿನ ಪಿತ್ರೋಡಾ ಅವರ ಸತತ ಅಧ್ಯಯನ, ಸಂಶೋಧನೆಗಳ ಮೂಟೆಯಲ್ಲಿ ಚಕ್ಕಳಮಕ್ಕಳ ಹಾಕಿ ಕೂತಿರುವ ಹಕ್ಕುಸ್ವಾಮ್ಯಗಳು ನೂರಾರು. ಪಿತ್ರೋಡಾ ಪರಿಶೋಧನೆಯ ಕೂಸಾಗಿರುವ `ಮೊಬೈಲ್ ಫೋನುಗಳ ವಹಿವಾಟು ತಂತಜ್ಞಾನ~ ಅಭಿವೃದ್ಧಿ ಹೊಂದುತ್ತಿರುವ ದೂರಸಂಪರ್ಕ ಮಾರುಕಟ್ಟೆಯ ಮಹತ್ವಾಕಾಂಕ್ಷೆಯ ಸಾಧನೆ. ಇದು ಇವರ ಇತ್ತೀಚಿನ ಹಕ್ಕುಸ್ವಾಮ್ಯ ವಲಯಕ್ಕೊಂದು ತಾಜಾ ಉದಾಹರಣೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಜ್ಞಾನದ ಅರವಟ್ಟಿಗೆಯನ್ನು ಬಿಡುಗೈಯ್ಯಲ್ಲಿ ಹಂಚಿರುವ ಪಿತ್ರೋಡಾ ಅವರ ಒಂದು ಕಾಲು ದೆಹಲಿಯಲ್ಲಿದ್ದರೆ ಮತ್ತೊಂದು ಷಿಕಾಗೋದಲ್ಲಿ. 1984ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಅಪೇಕ್ಷೆಯ ಮೇರೆಗೆ ಭಾರತಕ್ಕೆ ಆಗಮಿಸಿದರಲ್ಲದೆ ಸಿ-ಡಾಟ್ ಕೇಂದ್ರವನ್ನು ಆರಂಭಿಸಿದರು. ದೂರವಾಣಿ ಕ್ಷೇತ್ರದ ಸ್ವಾಯತ್ತ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯನ್ನು ಹುಟ್ಟು ಹಾಕಿದರು.
 
ಇದಕ್ಕೂ ಮುನ್ನ ಅವರು ಅಮೆರಿಕದ ನಾಗರಿಕತ್ವ ಪಡೆಯುವ ಮೂಲಕ ಅಲ್ಲಿಯೇ ಶಾಶ್ವತವಾಗಿ ನೆಲೆಯೂರುವ ಬಯಕೆಯಲ್ಲಿದ್ದರು. ಆದರೆ ಕಾಂಗ್ರೆಸ್ ಇವರ ಬೌದ್ಧಿಕ ಸಂಪತ್ತಿನ ಪ್ರಯೋಜನ ಸ್ವದೇಶಕ್ಕೆ ಸಲ್ಲಲೇಬೇಕೆಂಬ ಪಣ ತೊಟ್ಟು ಭಾರತದೆಡೆಗೆ ಆಕರ್ಷಣೆಯ ರುಚಿ ಹೆಚ್ಚಿಸಿತು. ಮೇಲಿಂದ ಮೇಲೆ ಇವರ ಹೆಗಲಿಗೆ ಹೊಸ ಹೊಸ ಜವಾಬ್ದಾರಿಗಳನ್ನು ನೀಡುತ್ತಲೇ ಬಂದಿತು.

ಪಿತ್ರೋಡಾ 1987ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ದೂರಸಂಪರ್ಕ ಕ್ಷೇತ್ರವನ್ನು ನೀರು, ಶಿಕ್ಷಣ, ಹಾಲಿನ ಡೈರಿ, ಬೀಜ ಹಾಗೂ ಪ್ರತಿರೋಧಕ ಶಕ್ತಿ ವೃದ್ಧಿಯ ಕ್ಷೇತ್ರಗಳ ಜೊತೆ ತಳಕು ಹಾಕಿ ಅಭಿವೃದ್ಧಿ ವಲಯದ ವಿಸ್ತರಣೆಗೆ ನಾಂದಿ ಹಾಡಿದರು. ನೈರ್ಮಲ್ಯ, ಕೃಷಿ, ಗೃಹ ನಿರ್ಮಾಣ ಕ್ಷೇತ್ರಗಳಲ್ಲೂ ಪರಿವರ್ತನೆಯ ಪಲಕುಗಳನ್ನು ಬಿಂಬಿಸಿದರು. ಟೆಲಿಕಾಂ ಆಯೋಗದ ಸಂಸ್ಥಾಪಕರೂ ಆದ ಇವರು ಈ ಆಯೋಗದ ಮೊದಲ ಅಧ್ಯಕ್ಷರೂ ಆಗಿ ಕಾರ್ಯ ನಿರ್ವಹಿಸಿದರು.
 

ಸದ್ಯ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರಿಗೆ ಸಲಹೆಗಾರರಾಗಿರುವ ಪಿತ್ರೋಡಾ ಸಂಪುಟ ದರ್ಜೆಸ್ಥಾನಮಾನದ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕ ಮಾಹಿತಿ ಮೂಲಸೌಕರ್ಯ ಮತ್ತು ಅನ್ವೇಷಣಾ ವಲಯ ಪ್ರಸ್ತುತ ಹುದ್ದೆಯ ಕಾರ್ಯ ವ್ಯಾಪ್ತಿ.

2009ರ ಅಕ್ಟೋಬರ್ ತಿಂಗಳಿನಲ್ಲಿ ಭಾರತ ಸರ್ಕಾರ ಇವರನ್ನು ಭಾರತೀಯ ರೈಲ್ವೆ ಇಲಾಖೆಯ ಮಾಹಿತಿ ಸಂಪರ್ಕ ತಂತ್ರಜ್ಞಾನ ಅಭಿವೃದ್ಧಿಯ ತಜ್ಞ ಸಮಿತಿಗೆ ಮುಖ್ಯಸ್ಥರನ್ನಾಗಿ ನೇಮಿಸಿತು. ಇದೀಗ ಈ ಸಮಿತಿ ತನ್ನ ವರದಿಯನ್ನು ಸರ್ಕಾರಕ್ಕೆ ನೀಡಲು ಕ್ಷಣಗಣನೆ ಮಾಡುತ್ತಿದೆ.

ಪಿತ್ರೋಡಾ ಅವರಿಗೆ ಸಂದಿರುವ ಪ್ರಶಸ್ತಿ, ಅಭಿದಾನ, ಪುರಸ್ಕಾರಗಳಿಗೆ ಲೆಕ್ಕವಿಲ್ಲ. ಇವುಗಳಲ್ಲಿ ಪ್ರಮುಖವಾದುದು 2011ರಲ್ಲಿ ಜಿನಿವಾದಲ್ಲಿ ನೀಡಲಾದ ಅಂತರರಾಷ್ಟ್ರೀಯ ದೂರಸಂಪರ್ಕ ಮತ್ತು ಮಾಹಿತಿ ಸಮುದಾಯದ ಪ್ರಶಸ್ತಿ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಇವರು. 

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ 2009ರಲ್ಲಿ ಪದ್ಮಭೂಷಣ, ರಾಜೀವ್ ಗಾಂಧಿ `ಗ್ಲೋಬಲ್ ಇಂಡಿಯನ್~ ಪ್ರಶಸ್ತಿ, 2008ರಲ್ಲಿ ಆಂಧ್ರಪ್ರದೇಶ ವಿಶ್ವವಿದ್ಯಾಲಯದಿಂದ ಮತ್ತು 2010ರಲ್ಲಿ ಸಂಭಾಲಪುರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಾಪ್ತಿ.

ಹೀಗೆ ಹತ್ತಾರು ಪ್ರಶಸ್ತಿಗಳ ಮಾಲೆಗಳನ್ನೇ ಬೆನ್ನಿಗೇರಿಸಿಕೊಂಡಿರುವ ಪಿತ್ರೋಡಾ ಅವರಿಗೆ ಇವುಗಳ ಬಗ್ಗೆ ಒಂದಿನಿತೂ ಲಕ್ಷ್ಯವಿಲ್ಲ. ಇವರ ಶ್ರಮ ಮತ್ತು ಶ್ರದ್ಧೆಯ ಗುರಿಯೆಲ್ಲಾ ಸತತ ಹುಡುಕಾಟದ ಕಡೆಗೆ. ಒಳಿತನ್ನು ಹಂಚುವ ಬಗೆಗೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT