ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯಲ್ಲಿ ಮಾದರಿ ಜಿಲ್ಲೆಯನ್ನಾಗಿಸಿ: ಸಿದ್ದೇಶ್ವರ

Last Updated 4 ಅಕ್ಟೋಬರ್ 2012, 4:25 IST
ಅಕ್ಷರ ಗಾತ್ರ

ದಾವಣಗೆರೆ: ಸರ್ಕಾರದ ಯೋಜನೆಗಳನ್ನು ಜಿಲ್ಲಾ ಪಂಚಾಯ್ತಿ ಸದಸ್ಯರು ತಮ್ಮ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಆಗಿ ಅನುಷ್ಠಾನಗೊಳಿಸಿ ಅಭಿವೃದ್ಧಿಯಲ್ಲಿ ಜಿಲ್ಲೆಯನ್ನು ರಾಜ್ಯದ್ಲ್ಲಲೇ ಮೊದಲ ಸ್ಥಾನಕ್ಕೇರಿಸಬೇಕು ಎಂದು ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಹೇಳಿದರು.

ಜಿಲ್ಲಾ ಪಂಚಾಯ್ತಿ ಆವರಣದಲ್ಲಿ ಬುಧವಾರ ಹವಾನಿಯಂತ್ರಿತ ಎಸ್.ಎಸ್. ಮಲ್ಲಿಕಾರ್ಜುನ ಸಭಾಂಗಣ ಮತ್ತು ಮೇಲಂತಸ್ತಿನ ವಿಸ್ತರಿತ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂಸತ್ ಸದಸ್ಯರು, ಶಾಸಕರಿಗೆ ಇಲ್ಲದಂಥ ಅಧಿಕಾರ ಜಿಲ್ಲಾ ಪಂಚಾಯ್ತಿ ಸದಸ್ಯರಿಗೆ ಇದೆ. ಅನುದಾನವೂ ಅತಿಹೆಚ್ಚು ಬರುತ್ತಿದೆ. ಅದನ್ನು ಸದ್ಬಳಕೆ ಮಾಡಿ ಜನಪರ ಕೆಲಸ ಮಾಡಬೇಕು ಎಂದು ಹೇಳಿದರು.

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಬಂದ ಮೇಲೆ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಬಹುತೇಕ ಇಲಾಖೆಗಳು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಬರುತ್ತವೆ. ಪ್ರತಿ ಸದಸ್ಯರಿಗೆ  ರೂ.35 ಲಕ್ಷ ಅನುದಾನ ಬರುತ್ತದೆ. ಅದನ್ನು ಚುನಾಯಿತ ಪ್ರತಿನಿಧಿಗಳು ಪರಸ್ಪರ ಹೊಂದಾಣಿಕೆಯಿಂದ ಬಳಸಿ ಕೆಲಸ ಮಾಡಬೇಕು. ಜನರ ಒಳಿತಿಗಾಗಿ ಅಧಿಕಾರ ಬಳಸಬೇಕು ಎಂದರು.

ಜಿಲ್ಲಾಪಂಚಾಯ್ತಿ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಮಾತನಾಡಿ, ಜಿ.ಪಂ.ನ 34 ಸದಸ್ಯ ರಲ್ಲಿಯೂ ಪರಸ್ಪರ ಹೊಂದಾಣಿಕೆ ಇರುವುದರಿಂದಲೇ ಬರಗಾಲದ ಸಂದರ್ಭದಲ್ಲಿಯೂ ಯಾವುದೇ ಸಮಸ್ಯೆ ಉಂಟಾಗದಂತೆ ಕಾರ್ಯ ನಿರ್ವಹಿಸಲು ಸಾಧ್ಯವಾಯಿತು ಎಂದು ಸಮರ್ಥಿಸಿಕೊಂಡರು.

ಸದಸ್ಯ ಗುರುಮೂರ್ತಿ ಮಾತನಾಡಿ, ವಾಸ್ತವವಾಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷನಿಗಿರುವ ಅಧಿಕಾರವೂ ಜಿ.ಪಂ. ಸದಸ್ಯರಿಗೆ ಇಲ್ಲವಾಗಿದೆ. ಎಲ್ಲವನ್ನೂ ಶಾಸಕರೇ ನೋಡಿಕೊಳ್ಳುತ್ತಿದ್ದಾರೆ. ಹೀಗಾದರೆ ಜಿಲ್ಲಾ ಪಂಚಾಯ್ತಿಗೆ ಅಧಿಕಾರವಿದೆ ಎಂಬುದಕ್ಕೆ ಅರ್ಥವಿಲ್ಲ. ಆದ್ದರಿಂದ ಕನಿಷ್ಠ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಯನ್ನಾದರೂ ಜಿಲ್ಲಾ ಪಂಚಾಯ್ತಿ ಮೂಲಕವೇ ನಡೆಸುವಂತಾಗಬೇಕು ಎಂದು ಒತ್ತಾಯಿಸಿದರು.

ಸಚಿವ ಎಸ್.ಎ. ರವೀಂದ್ರನಾಥ್ ಮೇಲಂತಸ್ತಿನ ಕಟ್ಟಡ ಉದ್ಘಾಟಿಸಿದರು. ಶಾಸಕ ಎಂ. ಬಸವರಾಜ ನಾಯ್ಕ, ಅಧ್ಯಕ್ಷ ಮೆಳ್ಳೆಕಟ್ಟೆ ಚಿದಾನಂದ ಐಗೂರು, ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಜಿ.ಪಂ. ಸಿಇಒ ಎ.ಬಿ. ಹೇಮಚಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT