ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯಲ್ಲಿ ರಾಜಕೀಯ ಸಲ್ಲ: ಸುರೇಶ್ ಕುಮಾರ್

Last Updated 13 ಫೆಬ್ರುವರಿ 2011, 9:25 IST
ಅಕ್ಷರ ಗಾತ್ರ

ಸಾಗರ: ‘ರಾಜಕೀಯದಲ್ಲಿ ಅಭಿವೃದ್ಧಿ ಇರಲಿ, ಆದರೆ, ಅಭಿವೃದ್ಧಿಯಲ್ಲಿ ರಾಜಕೀಯ ಬೇಡ’ - ಇದು ಇಲ್ಲಿನ  ನಗರಸಭಾ ಸದಸ್ಯರಿಗೆ ನಗರಾಭಿವೃದ್ಧಿ ಸಚಿವ ಎಸ್. ಸುರೇಶ್‌ಕುಮಾರ್ ಹೇಳಿದ ಕಿವಿಮಾತು.

ಶನಿವಾರ ನಗರಸಭೆಗೆ ಭೇಟಿ ನೀಡಿ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದ ನಂತರ ಮಾತನಾಡಿದ ಅವರು, ‘ಊರು ನಮ್ಮದು ಎಂಬ ಭಾವನೆ ಸದಸ್ಯರಿಗೆ ಇದ್ದರೆ ಮಾತ್ರ ನಾಗರಿಕರು ಪ್ರತಿನಿಧಿಗಳ ಬಗ್ಗೆ ಮೆಚ್ಚುಗೆ ಸೂಚಿಸುತ್ತಾರೆ. ಕೈ-ಕೈ ಮಿಲಾಯಿಸುವುದಕ್ಕಿಂತ ಕೈ-ಕೈ ಜೋಡಿಸುವತ್ತ ಮನಸ್ಸು ಮಾಡಬೇಕು’ ಎಂದರು.

ಅಕ್ರಮ-ಸಕ್ರಮ ಕಾಯ್ದೆ ಜಾರಿಗೆ ತರುವಲ್ಲಿ  ಕಾನೂನಿನ ಕೆಲ ತೊಡಕುಗಳಿದ್ದು, ಅದನ್ನು ಶೀಘ್ರವಾಗಿ ನಿವಾರಿಸಲಾಗುವುದು. ಕುಡಿಯುವ ನೀರು ಪೂರೈಸುವ, ನೈರ್ಮಲ್ಯ ಕಾಪಾಡುವ ಜತೆಗೆ, ಊರಿನಲ್ಲಿ ನೆಮ್ಮದಿಯ ವಾತಾವರಣ ನಿರ್ಮಿಸುವುದು ಕೂಡ ನಗರಸಭೆಯ ಕರ್ತವ್ಯ ಎಂದು ಹೇಳಿದರು.

ಪ್ರತಿಪಕ್ಷ ನಾಯಕ ಮಹಮದ್ ಕೋಯಾ ಮಾತನಾಡಿ, ವಿರೋಧ ಪಕ್ಷಗಳನ್ನು ಕಡೆಗಣಿಸುವ ಪ್ರವೃತ್ತಿ ಸರಿಯಲ್ಲ. ಬಹುಮತ ಇದೆ ಎಂದ ಮಾತ್ರಕ್ಕೆ ವಿರೋಧ ಪಕ್ಷಗಳ ಸಲಹೆ ಕಡೆಗಣಿಸುವ ಪ್ರವೃತ್ತಿ ಕೊನೆಯಾಗಬೇಕು ಎಂದು ಹೇಳಿದರು.

ನಗರಸಭೆಗಾಗಿ ಭೂಸ್ವಾಧೀನ ಪ್ರಕ್ರಿಯೆ ಮೂಲಕ ವಶಪಡಿಸಿಕೊಂಡಿರುವ ಭೂಮಿಯ ಮಾಲೀಕರಿಗೆ ಪರಿಹಾರ ನೀಡಲು ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿಸಬೇಕು.ಶರಾವತಿ ಹಿನ್ನೀರಿನಿಂದ ನಗರಕ್ಕೆ ನೀರು ತರುವ ಯೋಜನೆ ಶೀಘ್ರವಾಗಿ ಜಾರಿಗೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷ ಎಸ್.ವಿ. ಕೃಷ್ಣಮೂರ್ತಿ ಸಚಿವರಲ್ಲಿ ಮನವಿ ಮಾಡಿದರು.
ನಗರಸಭೆ ಉಪಾಧ್ಯಕ್ಷೆ ಸುಮಾ ಸಂಜೀವ್, ಪೌರಾಯುಕ್ತ ಬಸವರಾಜ್ ಹಾಜರಿದ್ದರು.

ಬಾವಿ ಬಳಕೆ ಹೇಗಿದೆ?: ಸಭಾಭವನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಸುರೇಶ್‌ಕುಮಾರ್, ಪ್ರತಿಪಕ್ಷ ಸದಸ್ಯರತ್ತ ತಿರುಗಿ ಈ ಸದನದ ಬಾವಿಯನ್ನು ಎಷ್ಟು ಸಲ ಬಳಕೆ ಮಾಡಿಕೊಂಡಿದ್ದೀರಿ ಎಂದು ಚಟಾಕಿ ಹಾರಿಸಿದರು.

‘ನಾನೊಬ್ಬ ಮಂತ್ರಿಯಾಗಿ ಇಲ್ಲಿಗೆ ಬಂದಿಲ್ಲ, ನಗರಪಾಲಿಕಾ ಸದಸ್ಯನಾಗಿ ರಾಜಕೀಯ ಜೀವನ ಆರಂಭಿಸಿದ್ದರಿಂದ ನಿಮ್ಮೊಂದಿಗೆ ಬೆರೆಯುವ ಉದ್ದೇಶಕ್ಕೆ ಸಭೆಗೆ ಬಂದಿದ್ದೇನೆ. ಸ್ಥಳೀಯ ಸಂಸ್ಥೆ ಸದಸ್ಯರಾದವರಿಗೆ ನಾನೊಬ್ಬ ಜನತೆಯ ಸೇವಕ ಎಂಬ ವಿನಮ್ರತೆ ಇರಬೇಕು’ ಎಂದು ಸದಸ್ಯರಿಗೆ ಸಲಹೆ ನೀಡಿದರು.

ಮನವಿ
ಪಟ್ಟಣದ ರೈಲ್ವೆನಿಲ್ದಾಣ ಹಾಗೂ ಸರ್ಕಾರಿ ಬಸ್‌ನಿಲ್ದಾಣದ ಮಧ್ಯದಲ್ಲಿರುವ ನಗರಸಭೆಯ ಜಾಗದಲ್ಲೇ ಖಾಸಗಿ ಬಸ್‌ನಿಲ್ದಾಣ ನಿರ್ಮಿಸಬೇಕು ಎಂದು ಒತ್ತಾಯಿಸಿ ಖಾಸಗಿ ಬಸ್‌ನಿಲ್ದಾಣ ಹೋರಾಟ ಸಮಿತಿ ಪ್ರಮುಖರು ಸಚಿವ ಎಸ್. ಸುರೇಶ್‌ಕುಮಾರ್‌ಗೆ ಮನವಿ ಸಲ್ಲಿಸಿದರು.

ಗ್ರಾಮಾಂತರ ಹಾಗೂ ನಗರ ಪ್ರದೇಶದ ಜನರಿಗೆ ಹೆಚ್ಚಿನ ಅನುಕೂಲವಾಗುವ ನಿಟ್ಟಿನಲ್ಲಿ ರೈಲ್ವೆನಿಲ್ದಾಣ ಹಾಗೂ ಸರ್ಕಾರಿ ಬಸ್‌ನಿಲ್ದಾಣದ ಪಕ್ಕದಲ್ಲೇ ಖಾಸಗಿ ಬಸ್‌ನಿಲ್ದಾಣ ಇರುವುದು ಸೂಕ್ತ. ಇದಕ್ಕೆ ಎಲ್ಲಾ ಸಂಘ-ಸಂಸ್ಥೆಗಳು, ಪಕ್ಷಗಳ ಪ್ರತಿನಿಧಿಗಳು ಸಮ್ಮತಿಸಿದ್ದು, ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಸುರೇಶ್‌ಕುಮಾರ್ ಮಾತನಾಡಿ, ಸಾರಿಗೆ ಇಲಾಖೆಯೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಪ್ರಮುಖರಾದ ಸಿ. ಗೋಪಾಲಕೃಷ್ಣರಾವ್, ಮಹಮದ್ ಖಾಸಿಂ, ಯು.ಜೆ. ಮಲ್ಲಿಕಾರ್ಜುನ, ಎಚ್.ಬಿ. ರಾಘವೇಂದ್ರ, ಡಿ. ದಿನೇಶ್, ನಟರಾಜ್, ಗಣಪತಿ ಸುಳಗೋಡು, ಶಿವಾನಂದ ಕುಗ್ವೆ, ಕಬಸೆ ಅಶೋಕಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಪುಟ್ಟಸ್ವಾಮಿ, ಎಸ್.ಪಿ. ದೇವರಾಜ್, ಐ.ಎನ್. ಸುರೇಶ್‌ಬಾಬು, ಅಶ್ವಿನಿಕುಮಾರ್, ಪ್ರವೀಣ್‌ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT