ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯಾಗದ ಹಳ್ಳಿಗಳ ರಸ್ತೆ

Last Updated 17 ಅಕ್ಟೋಬರ್ 2011, 10:10 IST
ಅಕ್ಷರ ಗಾತ್ರ

ಆಲೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮಾಂತರ ರಸ್ತೆ ಅಭಿವೃದ್ಧಿಗೆ ಸಾಕಷ್ಟು ಹಣ ಬಿಡುಗಡೆ ಮಾಡುತ್ತಿವೆ. ಆದರೂ ಸಹ ಕೆಲವು ಗ್ರಾಮಾಂತರ ಪ್ರದೇಶದ ರಸ್ತೆ ದುರಸ್ತಿ ಕಾಣದಿರುವುದೇ ಹೆಚ್ಚು. ಇಂತಹ ಒಂದು ರಸ್ತೆ ಇಲ್ಲಿದೆ. ತಾಲ್ಲೂಕಿನ ಕಾಡ್ಲೂರು ಕೊಪ್ಪಲು ಚಿನ್ನಳ್ಳಿ ಮಧ್ಯೆ ಇರುವ ಮಲಗಳಲೆ, ಅಬ್ಬನ, ಬೋಸ್ಮಾನಹಳ್ಳಿ ರಸ್ತೆ ಹಾಗೂ ಊದೂರು ರಸ್ತೆ ಇದಕ್ಕೆ ತಾಜಾ ಉದಾಹರಣೆ.

ಈ ರಸ್ತೆಗಳು ದುರಸ್ತಿ ಕಂಡಿಲ್ಲ. ಅಲ್ಲಲ್ಲಿ ಜಾಲಿ ಬೆಳೆದು, ಗುಂಡಿಗಳು ಬಿದ್ದಿವೆ. ಎದುರಿನಿಂದ ಬರುವ ವಾಹನ ಗಳಾಗಲಿ, ದ್ವಿಚಕ್ರ ಸವಾರರಾಗಲಿ ಬರುವುದೇ ಕಾಣುವುದಿಲ್ಲ. ಅಲ್ಲದೇ ಪಾದಚಾರಿಗಳು ನಡೆದಾಡಲು ಆಗದಷ್ಟು ಹದಗೆಟ್ಟಿದೆ. ತಾಲ್ಲೂಕಿನ ಗಡಿಭಾಗದ ಗ್ರಾಮಗಳಿಂದ ತಾಲ್ಲೂಕು ಕೇಂದ್ರಕ್ಕೆ ನೇರವಾಗಿ ಬರಲು ಈ ರಸ್ತೆಯ ಮೂಲಕವೇ ಬರಬೇಕು.

ರಾಜಕಾರಣಿಗಳು ಚುನಾವಣೆ ಬಂದಾಗ ರಸ್ತೆ ಮಾಡಿಸುವ ಭರವಸೆ ನಿಡಿ ಹೋದವರು ತಿರುಗಿ ಇತ್ತ ಮುಖ ತೋರಿಸಿಲ್ಲ ಎನ್ನುವುದು ಈ ಭಾಗದ ಜನರು ಹೇಳುವ ಸಾಮಾನ್ಯ ಮಾತು. ರಸ್ತೆ ಎರಡು ಬದಿ 10ಕಿ.ಮೀ. ಆದರೆ, ಕಾಡ್ಲೂರು ಕೊಪ್ಪಲಿನಿಂದ ಚಿನ್ನಳ್ಳಿವರೆಗೆ ರಸ್ತೆ ಹಾಳು ಬಿದ್ದಿದೆ. ಸಂಜೆಯಾದರೆ ಆನೆಗಳ ಕಾಟ ಬೇರೆ ತೋಟ ಹೊಲ ಜಮೀನಿನಿಂದ ಬರುವ ರೈತರು ಮಹಿಳೆಯರು ಕಾಡ್ಲೂರು ಮಲಗಳಲೆ ಮತ್ತು ಬೋಸ್ಮಾನಹಳ್ಳಿ ಯಿಂದ ಆಲೂರು ಮತ್ತು ರಾಯರಕೊಪ್ಪಲು ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ಗೋಳು ಚಿಂತಾಜನಕವಾಗಿದೆ.

ಈ ಭಾಗದ ರಸ್ತೆಗಳು ಅಭಿವೃದ್ಧಿಯಾದರೆ ಇಲ್ಲಿಯ ಜನ ನೆಮ್ಮದಿಯಿಂದ ಬಾಳಿ ಬದುಕ ಬಹುದು. ಈ ರಸ್ತೆಗಳ ಅಭಿವೃದ್ಧಿ ಬಗ್ಗೆ ಹಲವಾರು ಬಾರಿ ಜನಪ್ರತಿ ನಿಧಿಗಳಿಗೆ ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಈ ಭಾಗದ ಜನರು ಹೇಳುತ್ತಾರೆ.

ಪ್ರತಿಭಾನ್ವೇಷಣೆ ಇಂದು
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿಭಾನ್ವೇಷಣ ಕಾರ್ಯಕ್ರಮ ಅ17ರ ಸೋಮವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ.

ಆಲೂರು ಸರ್ಕಾರಿ ಪ.ಪೂ. ಕಾಲೇಜಿನ ಆವರಣದಲ್ಲಿ ಹಮ್ಮಿ ಕೊಳ್ಳಲಾಗಿದ್ದು, ಅಧ್ಯಕ್ಷತೆಯನ್ನು ಸ.ಪ್ರ.ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೋ.ಸಿ.ಬಿ.ಚಂದ್ರಪ್ಪ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸ.ಪ.ಪೂ.ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ತಮ್ಮಯ್ಯ ಆಗಮಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT