ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯೇ ಪರಿಹಾರ

Last Updated 28 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಒಡಿಶಾದ ಮಾಲ್ಕನ್‌ಗಿರಿ ಜಿಲ್ಲಾಧಿಕಾರಿ ಆರ್.ವಿ.ಕೃಷ್ಣ ಅವರ ಅಪಹರಣ ಪ್ರಕರಣ ಸುಖಾಂತ ಕಂಡಿದೆ. ಮುಳುಗಡೆ ರೈತರಿಗೆ ಪರಿಹಾರ, ಜೈಲುಗಳಲ್ಲಿರುವ ಮಾವೋವಾದಿಗಳು ಹಾಗೂ ಆದಿವಾಸಿಗಳ ವಿರುದ್ಧ ಹೂಡಲಾಗಿದ್ದ ಮೊಕದ್ದಮೆಗಳ ವಾಪಸಾತಿ ಮತ್ತು ಮಾವೋವಾದಿಗಳ ಪ್ರದೇಶಗಳಲ್ಲಿ ಭದ್ರತಾಪಡೆಗಳ ಕಾರ್ಯಾಚರಣೆಗೆ ನಿಲುಗಡೆ ಸೇರಿದಂತೆ ಹಲವು ಬೇಡಿಕೆಗಳಿಗೆ ಒಡಿಶಾ ಸರ್ಕಾರ ಸಮ್ಮತಿಸಿದ್ದು ಜಿಲ್ಲಾಧಿಕಾರಿ ಮತ್ತು ಅವರೊಂದಿಗೆ ಅಪಹರಣಕ್ಕೆಒಳಗಾಗಿದ್ದ ಕಿರಿಯ ಎಂಜಿನಿಯರ್ ಪವಿತ್ರ ಮಝಿ ಅವರ ಸುರಕ್ಷಿತ ಬಿಡುಗಡೆ ಸಾಧ್ಯವಾಗಿದೆ. ಇದರ ಪರಿಣಾಮ ಆದಿವಾಸಿಗಳ ವಿರುದ್ಧ ಹೂಡಲಾಗಿದ್ದ ಒಂಬತ್ತು ಸಾವಿರಕ್ಕೂ ಹೆಚ್ಚಿನ ಮೊಕದ್ದಮೆಗಳನ್ನು ಮರು ಪರಿಶೀಲನೆಯ ನಂತರ ಸರ್ಕಾರ ಕೈಬಿಡಬೇಕಿದೆ.

ಮಾವೋವಾದಿಗಳದು ಸಾಮಾಜಿಕ ಸಮಸ್ಯೆಗಿಂತಲೂ ಕಾನೂನು ಸಮಸ್ಯೆ ಎಂದೇ ಎಲ್ಲ ಸರ್ಕಾರಗಳು ಭಾವಿಸಿವೆ. ಸಾಮಾಜಿಕ ಅಸಮಾನತೆ ವಿರುದ್ಧದ ತಮ್ಮ ಹೋರಾಟದ ಬದ್ಧತೆಯ ಕಾರಣ ಉತ್ತರದ ನೇಪಾಳದಿಂದ ದಕ್ಷಿಣದ ಆಂಧ್ರಪ್ರದೇಶದವರೆಗೆ ತಮ್ಮ ಪ್ರಭಾವವನ್ನು ಮಾವೋವಾದಿಗಳು ವಿಸ್ತರಿಸಿಕೊಂಡಿದ್ದಾರೆ.

ಆದಿವಾಸಿ, ಭೂರಹಿತ ದುರ್ಬಲ ಶ್ರಮಿಕ ವರ್ಗದಲ್ಲಿ ವಿಶ್ವಾಸ ಗಳಿಸಿರುವ ಮಾವೋವಾದಿಗಳನ್ನು ಬಂದೂಕಿನಿಂದ ನಿಗ್ರಹಿಸುವುದು ಸಾಧ್ಯವಿಲ್ಲ ಎಂಬುದು ಕೇಂದ್ರ ಸರ್ಕಾರಕ್ಕೂ, ಮಾವೋವಾದಿಗಳ ಪ್ರಭಾವ ಇರುವ ರಾಜ್ಯ ಸರ್ಕಾರಗಳಿಗೂ ಈಗಾಗಲೇ ಮನವರಿಕೆಯಾಗಿದೆ. ಸ್ವಾರ್ಥ ರಾಜಕಾರಣಿಗಳು, ಭ್ರಷ್ಟ ನೌಕರಶಾಹಿ, ಹಣ ಮಾಡುವುದೇ ದಂಧೆಯಾದ ದುಷ್ಟ ಗುತ್ತಿಗೆದಾರರ ಮಧ್ಯೆ ಅಪವಿತ್ರ ಮೈತ್ರಿ ಏರ್ಪಟ್ಟರೆ ಜನ ಕಲ್ಯಾಣದ ಯೋಜನೆಗಳು ಎಷ್ಟು ವರ್ಷಗಳಾದರೂ ಉದ್ದೇಶಿತ ಗುರಿಯನ್ನು ಮುಟ್ಟಲಾರವು. ಈ ಸ್ಥಿತಿಯನ್ನು ಬದಲಿಸುವುದಕ್ಕೆ ಸಶಸ್ತ್ರ ಹೋರಾಟ ಪರಿಹಾರವಲ್ಲ ಎಂಬುದನ್ನು ಮಾವೋವಾದಿಗಳು ಅರ್ಥ ಮಾಡಿಕೊಳ್ಳಬೇಕು. ಮಾವೋವಾದಿಗಳು ಎತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಸರ್ಕಾರಗಳು ಅವರನ್ನು ಮಣಿಸಲು ಯತ್ನಿಸಬೇಕೇ ಹೊರತು ಹೀಗೆ ಅವರ ಬೇಡಿಕೆಗಳಿಗೆ ಶರಣಾಗುವುದರಿಂದಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT